ADVERTISEMENT

ಇ.ವಿ ಅವತಾರದಲ್ಲಿ ಬರಲಿದೆ ಕೈನೆಟಿಕ್‌ ಲೂನಾ

ಜಯಸಿಂಹ ಆರ್.
Published 27 ಡಿಸೆಂಬರ್ 2022, 0:15 IST
Last Updated 27 ಡಿಸೆಂಬರ್ 2022, 0:15 IST
1973ರಲ್ಲಿ ಬೆಂಗಳೂರಿನ ಮುತ್ತು ಆಟೊಮೊಬೈಲ್ಸ್‌ನಲ್ಲಿ ಸಾಲಾಗಿ ಇರಿಸಲಾಗಿದ್ದ ಲೂನಾ
1973ರಲ್ಲಿ ಬೆಂಗಳೂರಿನ ಮುತ್ತು ಆಟೊಮೊಬೈಲ್ಸ್‌ನಲ್ಲಿ ಸಾಲಾಗಿ ಇರಿಸಲಾಗಿದ್ದ ಲೂನಾ   

ದೇಶದಲ್ಲಿ ಒಂದು ಕಾಲದಲ್ಲಿ ಜನಪ್ರಿಯವಾಗಿದ್ದ ಮೊಪೆಡ್‌ ‘ಲೂನಾ’ ಮತ್ತೆ ರಸ್ತೆಗೆ ಇಳಿಯಲಿದೆ, ಅದೂ ಇ.ವಿ (ವಿದ್ಯುತ್ ಚಾಲಿತ ವಾಹನ) ಅವತಾರದಲ್ಲಿ. ‘ವಿದ್ಯುತ್ ಚಾಲಿತ ಲೂನಾವನ್ನು ಶೀಘ್ರವೇ ಮಾರುಕಟ್ಟೆಗೆ ಬಿಡುಗಡೆ ಮಾಡಲಿದ್ದೇವೆ’ ಎಂದು ಕೈನೆಟಿಕ್‌ ಎಂಜಿನಿಯರಿಂಗ್ ಲಿಮಿಟೆಡ್‌ ಸೋಮವಾರ ಹೇಳಿದೆ. ಲೂನಾ ಯಾವಾಗ ಮಾರುಕಟ್ಟೆಗೆ ಬಿಡುಗಡೆಯಾಗಲಿದೆ ಎಂಬುದನ್ನು ಕಂಪನಿ ಇನ್ನೂ ಬಹಿರಂಗಪಡಿಸಿಲ್ಲ.

ಕೈನೆಟಿಕ್‌ ಲೂನಾ... 2000ನೇ ಇಸವಿಯ ನಂತರ ಹುಟ್ಟಿದವರು ಈ ಹೆಸರು ಕೇಳಿರುವ ಸಾಧ್ಯತೆ ತೀರಾ ಕಡಿಮೆ. 80 ಮತ್ತು 90ರದ ದಶಕದಲ್ಲಿ ಜನಿಸಿದವರಿಗೆ ಈ ಹೆಸರು ಈಗ ಹಳೆಯ ನೆನಪುಗಳನ್ನು ತರಿಸಬಹುದು. ಲೂನಾ ಜತೆಗೆ ಬೆಳೆದ ಹಲವು ತಲೆಮಾರು ಇಂದಿಗೂ ಅದನ್ನು ಮರೆತಿರಲಾರದು. ಪುಣೆಯ ಉದ್ಯಮ ಕುಟುಂಬ ಫಿರೋದಿಯಾ, ಕೈನೆಟಿಕ್‌ ಎಂಜಿನಿಯರಿಂಗ್ ಕಂಪನಿಯನ್ನು ಆರಂಭಿಸಿತ್ತು. ಭಾರತದಲ್ಲಿ ಕೆಳಮಧ್ಯಮ ವರ್ಗವೂ ದ್ವಿಚಕ್ರವಾಹನಗಳಲ್ಲಿ ಓಡಾಡುವುದನ್ನು ಸಾಧ್ಯವಾಗಿಸಿದ ಶ್ರೇಯ ಈ ಕುಟುಂಬಕ್ಕೆ ಮತ್ತು ಕೈನೆಟಿಕ್‌ ಕಂಪನಿಗೆ ಸಲ್ಲುತ್ತದೆ.

ಭಾರತದಲ್ಲಿ ಮಧ್ಯಮ ವರ್ಗವು ಕಾರಿನಲ್ಲಿ ಓಡಾಡುವುದನ್ನು ಸಾಧ್ಯವಾಗಿಸುವಲ್ಲಿ ಮಾರುತಿ 800ರ ಪಾತ್ರ ಎಷ್ಟಿದೆಯೋ, ಕೆಳಮಧ್ಯಮ ವರ್ಗವು ಸೈಕಲ್‌ ಬಿಟ್ಟು ಮೋಟರ್‌ ಮೊಪೆಡ್‌ ಹತ್ತುವಲ್ಲಿ ಲೂನಾದ ಪಾತ್ರವೂ ಅಷ್ಟೇ ಇದೆ. ಸೈಕಲ್‌ ಅನ್ನೇ ಬಹುಪಾಲು ನೆಚ್ಚಿಕೊಂಡಿದ್ದ ಭಾರತದ ಕಾರ್ಮಿಕ ವರ್ಗವೂ ದ್ವಿಚಕ್ರ ವಾಹನದಲ್ಲಿ ಓಡಾಡಬೇಕು ಎಂಬ ಕನಸನ್ನು ಉದ್ಯಮಿ ಮತ್ತು ಆಟೊಮೊಬೈಲ್‌ ಎಂಜಿನಿಯರ್ ಅರುಣ್ ಫಿರೋದಿಯಾ ಕಂಡಿದ್ದರು. ಕಾರ್ಮಿಕ ವರ್ಗವೂ ಸುಲಭವಾಗಿ ಖರೀದಿಸಬಹುದಾದ ಮತ್ತು ಜೇಬಿಗೆ ಭಾರವಲ್ಲದ ನಿರ್ವಹಣಾ ವೆಚ್ಚದ ಒಂದು ದ್ವಿಚಕ್ರ ವಾಹನವನ್ನು ಸಂಪೂರ್ಣವಾಗಿ ಹೊಸದಾಗಿ ಅಭಿವೃದ್ಧಿ ಪಡಿಸಲು ಸಾಧ್ಯವಿರಲಿಲ್ಲ. ಹೀಗಾಗಿ ಅಂತಹ ವಾಹನವೊಂದರ ತಾಂತ್ರಿಕತೆಗಳನ್ನು ಬಳಸಿಕೊಳ್ಳಲು ಇಟಲಿಯ ಪಿಯಾಗ್ಯೊ ಕಂಪನಿಯಿಂದ ಅರುಣ್ ಫಿರೋದಿಯಾ ಪರವಾನಗಿ ಪಡೆದರು.

ADVERTISEMENT

ಇತ್ತ ಮೋಟರ್‌ಸೈಕಲ್‌ ಅಲ್ಲದ ಮತ್ತು ಅತ್ತ ಬೈಸಿಕಲ್‌ ಸಹ ಅಲ್ಲದ ಹಾಗೂ ಅವೆರಡರ ಮಿಶ್ರರೂಪದಂತಿದ್ದ ಮೊಪೆಡ್‌ ಅನ್ನು ಸ್ವತಃ ಅರುಣ್ ಫಿರೋದಿಯಾ ವಿನ್ಯಾಸ ಮಾಡಿದ್ದರು. ಅದಕ್ಕೆ ಲೂನಾ ಎಂದು ಹೆಸರಿಡಲಾಯಿತು. ಮಾರುಕಟ್ಟೆಗೆ ಲೂನಾವನ್ನು 1972ರಲ್ಲಿ ಬಿಡುಗಡೆ ಮಾಡಲಾಯಿತು. ಲೂನಾ ಅಭಿವೃದ್ಧಿ, ಮಾರಾಟದ ತಂತ್ರ ಮತ್ತು ಜನಪ್ರಿಯತೆಯನ್ನು ಅರುಣ್ ತಮ್ಮ ಪುಸ್ತಕ ‘ಇನ್ನೋವೇಷನ್ಸ್ ಆನ್‌ ಟು ವೀಲ್ಸ್‌’ ಪುಸ್ತಕದಲ್ಲಿ ದಾಖಲಿಸಿದ್ದಾರೆ.

‘1970ರ ದಶಕದಲ್ಲಿ ಬಹುತೇಕ ಎಲ್ಲಾ ವಾಹನಗಳ ಜಾಹೀರಾತಿನ ಪಾತ್ರಗಳು ಇಂಗ್ಲಿಷ್ ಮಾತನಾಡುವ ಮತ್ತು ಪಾಶ್ಚಾತ್ಯ ಸಂಸ್ಕೃತಿಯನ್ನು ಬಿಂಬಿಸುವ ‘ಎಲೈಟ್‌’ ವರ್ಗದ್ದಾಗಿರುತ್ತಿದ್ದವು. ಲೂನಾ ಜನಸಾಮಾನ್ಯರ ವಾಹನವಾಗಿತ್ತು. ಸಾಮಾನ್ಯ ಜನರೂ ಅದನ್ನು ತೆಗೆದುಕೊಳ್ಳಬಹುದು ಮತ್ತು ಬಳಸಬಹುದು ಎಂಬುದನ್ನು ಬಿಂಬಿಸುವುದು ನಮ್ಮ ಉದ್ದೇಶವಾಗಿತ್ತು. ಹೀಗಾಗಿ ಸರ್ಕಾರಿ ಕಚೇರಿಯಲ್ಲಿ ಕೆಲಸ ಮಾಡುವ ನೌಕರ, ವಿದ್ಯಾರ್ಥಿ, ಕಾರ್ಮಿಕರು ನಮ್ಮ ಲೂನಾ ಜಾಹಿರಾತಿನ ಪಾತ್ರಗಳಾಗಿದ್ದವು. ಸೈಕಲ್‌ ಏರಿ
ಶ್ರಮಪಡುವುದನ್ನು ಲೂನಾ ತಪ್ಪಿಸುತ್ತದೆ ಮತ್ತು ಅದರಿಂದ ಬದುಕು ಸುಲಭವಾಗುತ್ತದೆ ಎಂಬುದನ್ನು ಜಾಹೀರಾತಿನಲ್ಲಿ ತೋರಿಸಿದೆವು. ಲೂನಾ ಭಾರತದ ಮನೆ–ಮನೆ ತಲುಪಿತು’ ಎಂದು ಅರುಣ್ ತಮ್ಮ ಪುಸ್ತಕದಲ್ಲಿ ಬರೆದುಕೊಂಡಿದ್ದಾರೆ. ‘ಚಲ್‌ ಮೇರಿ ಲೂನಾ’ ಘೋಷಣೆಯೊಂದಿಗೆ ಬರುತ್ತಿದ್ದ ಈ ಜಾಹೀರಾತುಗಳನ್ನು ಅಂದಿನ ಜನರು ಇಂದಿಗೂ ಮರೆತಿರಲಾರರು.

ಆರಂಭದಲ್ಲಿ ಎಲ್ಲರನ್ನೂ ಗುರಿಯಾಗಿಸಿಕೊಂಡು ಲೂನಾವನ್ನು ವಿನ್ಯಾಸ ಮಾಡಲಾಗಿತ್ತಾದರೂ, 80ರ ದಶಕದಲ್ಲಿ ಯುವತಿಯರು ಲೂನಾ ಖರೀದಿಸಿದ್ದು ಹೆಚ್ಚು. ಒಂದು ಸಂದರ್ಭದಲ್ಲಿ ಬಿಕರಿಯಾದ ಲೂನಾಗಳಲ್ಲಿ ಶೇ 90ರಷ್ಟು ಲೂನಾಗಳು ಮಹಿಳೆಯರ ಹೆಸರಿನಲ್ಲಿ ನೋಂದಣಿಯಾಗಿದ್ದವು ಎಂದು ಅರುಣ್ ತಮ್ಮ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ.

ತನ್ನ ಉತ್ತುಂಗದ ಕಾಲದಲ್ಲಿ, ಪ್ರತಿ ದಿನವೂ 2,000ಕ್ಕಿಂತ ಹೆಚ್ಚು ಲೂನಾ ಬಿಕರಿಯಾಗುತ್ತಿತ್ತು. 90ರ ದಶಕದಲ್ಲಿ ವಿದೇಶಿ ಕಂಪನಿಗಳ ಪ್ರವೇಶ ಮತ್ತು ಶಕ್ತಿಶಾಲಿ ಬೈಕ್‌ಗಳ ಪ್ರವೇಶದಿಂದಾಗಿ ಮೊಪೆಡ್‌ನ ಜನಪ್ರಿಯತೆ ಇಳಿಯಿತು. ಲೂನಾವು ಇದಕ್ಕೆ ಹೊರತಾಗಿರಲಿಲ್ಲ. 20ಕ್ಕೂ ಹೆಚ್ಚು ವರ್ಷಗಳ ನಂತರ ಲೂನಾವನ್ನು ಮತ್ತೆ ಇವಿ ಅವತಾರದಲ್ಲಿ ಮಾರುಕಟ್ಟೆಗೆ ತರಲು ಕೈನೆಟಿಕ್‌ ಸಿದ್ಧತೆ ನಡೆಸಿದೆ. ಒಂದು ಕಾಲದಲ್ಲಿ ಭಾರತದ ರಸ್ತೆಗಳಲ್ಲಿ ರಾರಾಜಿಸಿದ್ದ ಲೂನಾ ಮತ್ತೆ ಆ ವೈಭವವನ್ನು ಕಾಣುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.

lಕೈನೆಟಿಕ್‌ ಗ್ರೀನ್‌ ಅಂಡ್ ಪವರ್ ಸಲ್ಯೂಷನ್ಸ್‌ ಕಂಪನಿ ಇ–ಲೂನಾವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ

lನೋಂದಣಿ ಮತ್ತು ಚಾಲನಾ ಪರವಾನಗಿ ಅವಶ್ಯಕತೆ ಇಲ್ಲದ ಅವತರಣಿಕೆಯಲ್ಲಿ ಇ–ಲೂನಾ ಮಾರುಕಟ್ಟೆಗೆ ಬರಲಿದೆ

lಮಹಾರಾಷ್ಟ್ರದ ಅಹಮದ್‌ನಗರದಲ್ಲಿನ ಘಟಕದಲ್ಲಿ
ಇ–ಲೂನಾ ತಯಾರಿಕೆ ನಡೆಯಲಿದೆ. ಈಗಾಗಲೇ ಪ್ಲಾಟ್‌ಫಾರಂ, ವೆಲ್ಡಿಂಗ್‌ ಮತ್ತು ಪೇಂಟ್‌ ಲೇನ್‌ಗಳು ಸಿದ್ಧವಾಗಿವೆ

ಆಧಾರ: ಪಿಟಿಐ, ಕೈನೆಟಿಕ್‌ ಎಂಜಿನಿಯರಿಂಗ್ ಲಿಮಿಟೆಡ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.