2004ರವರೆಗೂ ಭಾರತದಲ್ಲಿ ಗರಿಷ್ಠ ಮಾರಾಟ ಆಗುತ್ತಿದ್ದ ಜನಸಾಮಾನ್ಯರ ಕಾರು 'ಮಾರುತಿ-800'. ಭಾರತ-ಜಪಾನ್ ಸಹಯೋಗದೊಂದಿಗೆ ಭಾರತದಲ್ಲಿ ತಯಾರಾಗಿ ಮೊದಲ ಬಾರಿಗೆ ಮಾರುಕಟ್ಟೆಗೆ ಬಂದಿದ್ದು 1983ರಲ್ಲಿ. ಭಾರತದ ಮಾರುತಿ ಉದ್ಯೋಗ್ ಲಿಮಿಟೆಡ್ ಹಾಗೂ ಜಪಾನಿನ ಸುಜುಕಿ ಮೋಟಾರ್ ಕಂಪನಿ ಲಿಮಿಟೆಡ್ - ಎರಡರ ಸಂಯೋಗದ ಫಲವಾಗಿ ಹರಿಯಾಣದ ಗುರುಗ್ರಾಮ (ಅಂದಿನ ಗುರ್ಗಾಂವ್) ಸ್ಥಾವರದಿಂದ ಮಾರುತಿ ಕಾರುಗಳು ಭಾರತೀಯ ಮಾರುಕಟ್ಟೆ ಪ್ರವೇಶಿಸಿದ್ದವು.
ಮಾರುತಿ-800 ಕಾರು ಮಾರುತಿ ಉದ್ಯೋಗ್ ಲಿಮಿಟೆಡ್ ಎಂಬ ಸಾರ್ವಜನಿಕ ವಲಯದ ಉದ್ದಿಮೆಯ ಮೂಲಕ ಮಾರುಕಟ್ಟೆಗೆ ಬಂದಿತು.
14 ಡಿಸೆಂಬರ್ 1983ರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರ ಕೈಯಿಂದ ಮೊದಲ ಮಾರುತಿ-800 ಕಾರಿನ ಕೀಲಿಯನ್ನು ಪಡೆದವರು ನವದೆಹಲಿಯ ಇಂಡಿಯನ್ ಏರ್‌ಲೈನ್ಸ್ ಉದ್ಯೋಗಿ ಹರಪಾಲ್ ಸಿಂಗ್.
ಮಾರುತಿ-800 ಕಾರಿನ ಅಂದಿನ ಬೆಲೆ ₹47,500. ಅಂದಿನಿಂದ ಭಾರತದಲ್ಲಿ ಕಾರಿನ ಕ್ರಾಂತಿಯೇ ನಡೆಯಿತು. ಮಧ್ಯಮವರ್ಗದವರ ಪ್ರತಿಷ್ಠೆಯಾಗಿ ಮಾರುತಿ-800 ಬೆಳೆಯಿತು.
ಮೊದಲ ಮಾರುತಿ-800 ಕಾರಿನ ನೋಂದಣಿ ಸಂಖ್ಯೆ DIA 6479
ಹರಪಾಲ್ ಸಿಂಗ್ ಅವರು ಮಾರುತಿ-800 ಕಾರನ್ನು ಮಗನಂತೆಯೇ ನೋಡಿಕೊಳ್ಳುತ್ತಿದ್ದರು ಮತ್ತು ಜೀವಮಾನಪೂರ್ತಿ ಓಡಿಸಿದ್ದರು.
ಹರಪಾಲ್ ಸಿಂಗ್ ಅವರು 2010ರಲ್ಲಿ ನಿಧನರಾದರು. ಎರಡು ವರ್ಷಗಳ ಬಳಿಕ ಅವರ ಪತ್ನಿ ಗುಲ್ಷನ್‌ಬೀರ್ ಕೌರ್ ಕೂಡ ನಿಧನರಾದರು.
ಆ ಬಳಿಕ ಕಾರು ಮೂಲೆಗೆ ಬಿತ್ತು. ಅದರಲ್ಲಿ ಮೂಲ ಬಿಡಿಭಾಗಗಳೇ ಇದ್ದವು ಮತ್ತು ಹೊಸ ನಿಯಮದಂತೆ ಆಗ ಅಷ್ಟೊಂದು ಹಳೆಯ ಕಾರುಗಳು ರಸ್ತೆಗಿಳಿಯುವಂತಿಲ್ಲ.
ಇದೀಗ ಮಾರುತಿ ಸಂಸ್ಥೆಯೇ ಆ ಕಾರನ್ನು ಹರಪಾಲ್ ಕುಟುಂಬಿಕರಿಂದ ಮರಳಿ ಪಡೆದುಕೊಂಡಿದೆ ಮತ್ತು ನವೀಕರಿಸಿದೆ.
ಮಾರುತಿ ಸುಜುಕಿ ಸಂಸ್ಥೆಯ ಮಾರಾಟ ವಿಭಾಗದ ಹಿರಿಯ ಕಾರ್ಯಕಾರಿ ನಿರ್ದೇಶಕ ಶಶಾಂಕ ಶ್ರೀವಾಸ್ತವ ಅವರ ಪ್ರಯತ್ನದ ಫಲವಿದು.
ಮೊದಲ ಮಾರುತಿ-800 ಕಾರಿಗೆ ಎಲ್ಲ ರೀತಿಯ ಹೊಸ ಬಿಡಿಭಾಗಗಳನ್ನು ಜೋಡಿಸಿ, ಅದನ್ನು ಸಂಪೂರ್ಣವಾಗಿ ನವೀಕರಿಸಲಾಗಿದ್ದು, ಅದನ್ನೀಗ ಗುರುಗ್ರಾಮದ ಮಾರುತಿ ಸ್ಥಾವರದಲ್ಲಿ ಸಾಲಂಕೃತವಾಗಿ ಪ್ರದರ್ಶನಕ್ಕಿಡಲಾಗಿದೆ.
ದೇಶದಲ್ಲಿ ಮಾರುತಿ ಕಾರುಗಳ ಯಶಸ್ಸಿನ ಅಭಿಯಾನದ ಹೆಮ್ಮೆಯ ಪ್ರತೀಕವಾಗಿ ಈ ಕಾರು ಇದೀಗ ಮಾರುತಿ ಕಾರುಗಳ ಮುಖ್ಯಾಲಯದ ಆಕರ್ಷಣೆಯ ವಸ್ತುವಾಗಿದೆ.
ಮಧ್ಯಮವರ್ಗದ ಕನಸಿನ ಹ್ಯಾಚ್‌ಬ್ಯಾಕ್ ಕಾರು ಈಗಲೂ ಭಾರತೀಯ ರಸ್ತೆಗಳಲ್ಲಿ ಓಡಾಡುತ್ತಿದೆ. ಗ್ರಾಮೀಣ ಭಾಗದಲ್ಲಿ ಈಗಲೂ ಜನಪ್ರಿಯವಾಗಿದೆ.
ಇದುವರೆಗೆ ಸುಮಾರು 27 ಲಕ್ಷ ಸಂಖ್ಯೆಯ ಮಾರುತಿ-800 ಕಾರುಗಳು ಮಾರಾಟವಾಗಿವೆ ಎಂದು ಹೇಳಲಾಗುತ್ತಿದೆ.
2010ರಲ್ಲಿ ಮಾರುತಿ-800 ಕಾರಿನ ತಯಾರಿಕೆಯನ್ನು ಸ್ಥಗಿತಗೊಳಿಸಲಾಯಿತು. ಅದರ ಸ್ಥಾನದಲ್ಲಿ ಮಾರುತಿ ಆಲ್ಟೊ ಬಂದಿತು.
2014ರಲ್ಲಿ ಮಾರುತಿ-800 ಕಾರುಗಳ ಮಾರಾಟವನ್ನು ಪೂರ್ಣವಾಗಿ ಸ್ಥಗಿತಗೊಳಿಸಲಾಯಿತು.
ಮಾರುತಿ-800 ಕಾರು ಲೀಟರಿಗೆ 25ಕ್ಕೂ ಹೆಚ್ಚು ಕಿಲೋಮೀಟರ್‌ನಷ್ಟು ಭರ್ಜರಿ ಮೈಲೇಜ್ ನೀಡುತ್ತಿತ್ತು.
ಮಾರುತಿ-800 ಬೇಸ್ ಮಾದರಿಯ ಬೆಲೆ ₹47,500 ಇದ್ದರೆ, 1984ರಲ್ಲಿ ಮಾರುಕಟ್ಟೆಗೆ ಬಂದ ಎಸಿ ಸೌಕರ್ಯವಿರುವ ಡಿಲಕ್ಸ್ ಕಾರುಗಳ ಬೆಲೆ ₹70,000.
ಮಾರುಕಟ್ಟೆಗೆ ಬಿಡುಗಡೆಯಾದ ದಿನದವರೆಗೆ ಸುಮಾರು 70 ಕಾರುಗಳನ್ನು ಅಸೆಂಬಲ್ ಮಾಡಲಾಗಿತ್ತು. ಮರುವರ್ಷ (1984) 20,000 ಕಾರುಗಳು, 1985ರಲ್ಲಿ 40 ಸಾವಿರ ಹಾಗೂ 1988ರ ವೇಳೆಗೆ 1 ಲಕ್ಷ ಕಾರುಗಳನ್ನು ಮಾರುಕಟ್ಟೆಗೆ ಬಿಡುತ್ತೇವೆ ಎಂದು ಮಾರುತಿ ಉದ್ಯೋಗ್ ಲಿ. ಅಂದಿನ ಅಧ್ಯಕ್ಷ ವಿ.ಕೃಷ್ಣಮೂರ್ತಿ ಹೇಳಿದ್ದರು.
ಮಾರುತಿ ಉದ್ಯೋಗ್ ಲಿ. ಕಂಪನಿಯಲ್ಲಿ ಕಾರ್ಮಿಕರು, ಆಡಳಿತ ಮಂಡಳಿ ಎಲ್ಲರೂ ಏಕರೀತಿಯ ಯುನಿಫಾರ್ಮ್ (ಸಮವಸ್ತ್ರ) ಧರಿಸುತ್ತಿದ್ದರು. ಮುಕ್ತವಾದ ಕಚೇರಿಯಲ್ಲಿ ಕೂರುತ್ತಿದ್ದರು ಮತ್ತು ಒಂದೇ ಕ್ಯಾಂಟೀನಿನಲ್ಲೇ ಅದೇ ಆಹಾರವನ್ನು ತಿನ್ನುತ್ತಿದ್ದರು. ಮೇಲಧಿಕಾರಿ - ಕಾರ್ಮಿಕರ ನಡುವೆ ಯಾವುದೇ ಭೇದಭಾವ ಇಲ್ಲ ಎಂದಿದ್ದರು ಕೃಷ್ಣಮೂರ್ತಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.