ಬೆಂಗಳೂರು: ಮುಂದಿನ ವರ್ಷಾಂತ್ಯಕ್ಕೆ ಹಾರುವ ಎಲೆಕ್ಟ್ರಿಕ್ ಕಾರನ್ನು ತಯಾರಿಸುವ ಯೋಜನೆಯನ್ನು ಮದ್ರಾಸ್ ಐಐಟಿ ಹಾಕಿಕೊಂಡಿದೆ.
ಉದ್ಯಮಿ ಆನಂದ ಮಹೀಂದ್ರಾ ಅವರು eplane ಎಂಬ ಈ ಎಲೆಕ್ಟ್ರಿಕ್ ಕಾರಿನ ಮಾದರಿಯನ್ನು ಎಕ್ಸ್ ತಾಣದಲ್ಲಿ ಹಂಚಿಕೊಂಡು ಮದ್ರಾಸ್ ಐಐಟಿಯನ್ನು ಅಭಿನಂದಿಸಿದ್ದಾರೆ.
ಜಗತ್ತಿನ ಅತ್ಯಂತ ಕ್ರಿಯಾಶೀಲ ಹಾಗೂ ಅದ್ಭುತವೆನಿಸುವ ಇನ್ಕ್ಯುಬೇಟರ್ ಆಗಿ ಮದ್ರಾಸ್ ಐಐಟಿ ದಾಪುಗಾಲಿಡುತ್ತಿದೆ. ನಿಜಕ್ಕೂ ಅವರಿಗೆ ಧನ್ಯವಾದಗಳನ್ನು ಸಮರ್ಪಿಸಬೇಕಿದೆ. ಏಕೆಂದರೆ, ಇವರು ದೇಶದ ಬೇರೆ ಬೇರೆ ಇನ್ಕ್ಯುಬೇಟರ್, ಸ್ಟಾರ್ಟ್‌ಅಫ್‌ಗಳಿಗೆ ಮಾದರಿಯಾಗುತ್ತಿದ್ದಾರೆ. ಹೊಸ ಹೊಸ ಆವಿಷ್ಕಾರಗಳನ್ನು ಪರಿಚಯಿಸುತ್ತಿದ್ದಾರೆ ಎಂದು ಕೊಂಡಾಡಿದ್ದಾರೆ.
ನಮಗೆ ದೊಡ್ಡದಾದ ಗುರಿಗಳೇ ಮುಖ್ಯ ಎಂದು ಆನಂದ್ ಅವರು, ಈ ಎಲೆಕ್ಟ್ರಿಕ್ ಕಾರಿನ ಗುಣಲಕ್ಷಣಗಳ ಮತ್ತೊಂದು ಫೋಟೊವನ್ನೂ ಹಂಚಿಕೊಂಡಿದ್ದಾರೆ.
ಅದರ ಪ್ರಕಾರ ಈ ಎಲೆಕ್ಟ್ರಿಕ್ ಕಾರು, 5.5 ಮೀಟರ್ ಸುತ್ತಳತೆ ಹೊಂದಿರುತ್ತದೆ. ಒಮ್ಮೆ ಚಾರ್ಜ್ ಮಾಡಿದರೆ ಗರಿಷ್ಠ 200 ಕಿಲೋ ಮೀಟರ್‌ವರೆಗೆ ಪ್ರಯಾಣಿಸಬಹುದು. ವರ್ಟಿಕಲ್ ಆಗಿಯೂ ಟೇಕ್ ಆಫ್ ಆಗುತ್ತದೆ. ಮಾನವ ಪೈಲಟ್ ಹೊಂದಿರಲಿದೆ ಹಾಗೂ ಸಂಪೂರ್ಣ ಎಲೆಕ್ಟ್ರಿಕ್ ಕಾರು ಇದಾಗಿರುತ್ತದೆ. ಅಲ್ಲದೇ ಕಡಿಮೆ ಬೆಲೆಯಲ್ಲಿ ದೊರೆಯುತ್ತದೆ. ಗರಿಷ್ಠ ವೇಗ ಮತ್ತು ಸುಲಭವಾಗಿ ಪಾರ್ಕ್ ಮಾಡಬಹುದಾಗಿದೆ ಎಂದು ಹಾರುವ ಎಲೆಕ್ಟ್ರಿಕ್ ಕಾರಿನ ಪೀಚರ್‌ಗಳ ಬಗ್ಗೆ ವಿವರಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.