ನವದೆಹಲಿ: ದೇಶದ ಅತಿದೊಡ್ಡ ಕಾರು ತಯಾರಕ ಕಂಪನಿ ಮಾರುತಿ ಸುಜುಕಿ ಇಂಡಿಯಾ (ಎಂಎಸ್‌ಐ)ವು ದೋಷಪೂರಿತ ಮೋಟಾರ್ ಜನರೇಟರ್ ಬದಲಿಸಲು ಸಿಯಾಜ್, ವಿಟಾರಾ ಬ್ರೆಝಾ ಮತ್ತು ಎಕ್ಸ್‌ಎಲ್ 6 ಸೇರಿದಂತೆ ವಿವಿಧ ಮಾದರಿಗಳ 1,81,754 ಯೂನಿಟ್ ಪೆಟ್ರೋಲ್ ಕಾರುಗಳನ್ನು ಹಿಂಪಡೆಯುತ್ತಿರುವುದಾಗಿ ಹೇಳಿದೆ.
ಜವಾಬ್ದಾರಿಯುತ ಕಾರ್ಪೊರೇಟ್ ಕಂಪನಿಯಾಗಿ ಗ್ರಾಹಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು, ಸಿಯಾಜ್, ಎರ್ಟಿಗಾ, ವಿಟಾರಾ ಬ್ರೆಝಾ, ಎಸ್-ಕ್ರಾಸ್ ಮತ್ತು ಎಕ್ಸ್‌ಎಲ್ 6 ಸೇರಿ ಕೆಲವು ಪೆಟ್ರೋಲ್ ಇಂಧನ ಬಳಕೆಯ ವಾಹನಗಳನ್ನು ಮರುಪಡೆಯುವುದಾಗಿ ಕಂಪನಿ ಘೋಷಿಸಿದೆ ಎಂದು ಎಂಎಸ್‌ಐ ರೆಗ್ಯುಲೇಟರಿ ಫೈಲಿಂಗ್‌ನಲ್ಲಿ ತಿಳಿಸಿದೆ.
ಮೇ 4,2018 ರಿಂದ ಅಕ್ಟೋಬರ್ 27,2020ರ ನಡುವೆ ತಯಾರಾದ ಈ ಮಾದರಿಗಳ 1,81,754 ಯುನಿಟ್‌ಗಳಲ್ಲಿ ನ್ಯೂನತೆ ಇರುವುದನ್ನು ಪರಿಶೀಲಿಸುವುದು ಇದರ ಉದ್ದೇಶವಾಗಿದೆ.
ವಾಹನಗಳಲ್ಲಿನ ದೋಷಗಳನ್ನು ಸರಿಪಡಿಸಲು ಜಾಗತಿಕವಾಗಿ ಹಿಂಪಡೆಯುವ ಪ್ರಕ್ರಿಯೆಯನ್ನು ಆರಂಭಿಸಲಾಗಿದೆ ಎಂದು ಎಂಎಸ್ಐ ಹೇಳಿದೆ.
‘ಗ್ರಾಹಕರ ಹಿತದೃಷ್ಟಿಯಿಂದ, ಮಾರುತಿ ಸುಜುಕಿ ಸ್ವಯಂಚಾಲಿತವಾಗಿ ದೋಷಪೂರಿತ ವಾಹನಗಳ ಮೋಟಾರ್ ಜನರೇಟರ್ ಘಟಕದ ತಪಾಸಣೆ/ಬದಲಿಗಾಗಿ ಉಚಿತವಾಗಿ ಹಿಂಪಡೆಯಲು ನಿರ್ಧರಿಸಿದೆ’ಎಂದು ಅದು ಹೇಳಿದೆ.
ವಾಹನಗಳ ಮಾಲೀಕರಿಗೆ ಕಂಪನಿಯ ಕಡೆಯಿಂದ ಈ ಬಗ್ಗೆ ಅಧಿಕೃತ ಕರೆ ಬರಲಿದೆ ಎಂದು ಕಂಪನಿ ತಿಳಿಸಿದೆ.
ವಾಹನಗಳ ದೋಷಯುಕ್ತ ಭಾಗವನ್ನು ಬದಲಾಯಿಸುವ ಪ್ರಕ್ರಿಯೆ ನವೆಂಬರ್ ಮೊದಲ ವಾರದಿಂದ ಪ್ರಾರಂಭವಾಗುತ್ತದೆ ಎಂದು ಅದು ಹೇಳಿದೆ.
ಅಲ್ಲಿಯವರೆಗೆ, ಗ್ರಾಹಕರು ನೀರು ತುಂಬಿರುವ ಪ್ರದೇಶಗಳಲ್ಲಿ ವಾಹನವನ್ನು ಚಾಲನೆ ಮತ್ತು ವಾಹನಗಳಲ್ಲಿ ವಿದ್ಯುತ್/ಎಲೆಕ್ಟ್ರಾನಿಕ್ ಭಾಗಗಳ ಮೇಲೆ ನೇರ ನೀರಿನ ಸಿಂಪಡಣೆಯನ್ನು ತಪ್ಪಿಸಲು ವಿನಂತಿಸಲಾಗಿದೆ ಎಂದು ವಾಹನ ತಯಾರಕ ಸಂಸ್ಥೆಯು ತನ್ನ ಗ್ರಾಹಕರಿಗೆ ಸಲಹೆ ನೀಡಿದೆ.
ಕಾರಿನ ಮೋಟಾರ್ ಜನರೇಟರ್ ಘಟಕವು ಎಂಜಿನ್‌ಗೆ ಹೆಚ್ಚಿನ ಶಕ್ತಿಯನ್ನು ನೀಡಲು ಸಹಾಯ ಮಾಡುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.