ಉದಯಪುರ (ರಾಜಸ್ಥಾನ): ಮಾರುತಿ ಸುಜುಕಿ ಇಂಡಿಯಾ ಕಂಪನಿಯು ತನ್ನ ಎಲ್ಲ ಮಾದರಿ ಕಾರುಗಳಲ್ಲಿ ಸಿಎನ್‌ಜಿ ಆಯ್ಕೆಯನ್ನು ನೀಡುವ ಪ್ರಯತ್ನದಲ್ಲಿದೆ ಎಂದು ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಶಶಾಂಕ್ ಶ್ರೀವಾಸ್ತವ ಹೇಳಿದ್ದಾರೆ.
ಪೆಟ್ರೋಲ್, ಡೀಸೆಲ್ ದರ ಹೆಚ್ಚಳದಿಂದಾಗಿ ಸಿಎನ್‌ಜಿ ಚಾಲಿತ ವಾಹನಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ.ಡೀಸೆಲ್ ಕಾರುಗಳ ಮಾರಾಟದಲ್ಲಿ ಇಳಿಕೆ ಕೂಡ ಆಗುತ್ತಿದೆ. ಹೀಗಾಗಿ ಕಂಪನಿಯು ಸಿಎನ್‌ಜಿ ಚಾಲಿತ ವಾಹನಗಳ ಬಗ್ಗೆ ಹೆಚ್ಚು ಗಮನ ಹರಿಸಿದೆ ಎಂದು ಹೇಳಿದ್ದಾರೆ.
ಹಿಂದಿನ ಹಣಕಾಸು ವರ್ಷದಲ್ಲಿ ಕಂಪನಿಯು ಸಿಎನ್‌ಜಿ ಚಾಲಿತ 1.62 ಲಕ್ಷ ಕಾರುಗಳನ್ನು ಮಾರಾಟ ಮಾಡಿದ್ದು, ದೇಶದಲ್ಲಿ ಹೆಚ್ಚಿನ ಸಿಎನ್‌ಜಿ ಕಾರುಗಳನ್ನು ತರುವ ಉದ್ದೇಶದಿಂದ ಸಿಎನ್‌ಜಿ ಪೂರೈಕೆ ಮಾಡುವ ಮಳಿಗೆಗಳನ್ನು ತೆರೆಯುವ ಕೆಲಸಕ್ಕೂ ವೇಗ ನೀಡಿದೆ.
‘2021–22ರಲ್ಲಿ ಒಟ್ಟಾರೆ 3 ಲಕ್ಷ ಸಿಎನ್‌ಜಿ ವಾಹನ ಮಾರಾಟ ಮಾಡುವ ನಿರೀಕ್ಷೆ ಇಟ್ಟುಕೊಂಡಿದ್ದೇವೆ. ಸದ್ಯ ನಾವು 15 ಬ್ರ್ಯಾಂಡ್‌ಗಳನ್ನು ಮಾರಾಟ ಮಾಡುತ್ತಿದ್ದು ಅವುಗಳ ಪೈಕಿ ಏಳರಲ್ಲಿ ಮಾತ್ರವೇ ಸಿಎನ್‌ಜಿ ಆಯ್ಕೆ ಇದೆ. ಇನ್ನುಳಿದ ಕಾರುಗಳಲ್ಲಿಯೂ ಸಿಎನ್‌ಜಿ ಆಯ್ಕೆ ನೀಡುವ ಪ್ರಯತ್ನ ನಡೆದಿದೆ’ ಎಂದು ಅವರು ತಿಳಿಸಿದ್ದಾರೆ.
ದೇಶಿ ಮಾರುಕಟ್ಟೆಯಲ್ಲಿ ಕಂಪನಿಯು ಸಿಎನ್‌ಜಿ ವಿಭಾಗದಲ್ಲಿ ಶೇಕಡ 85ರಷ್ಟು ಮಾರುಕಟ್ಟೆ ಪಾಲನ್ನು ಹೊಂದಿದೆ. ಕಂಪನಿಯು ಸದ್ಯ ಆಲ್ಟೊ, ಎಸ್–ಪ್ರೆಸೊ, ವ್ಯಾಗನ್‌ಆರ್, ಇಕೊ, ಟೂರ್–ಎಸ್, ಎರ್ಟಿಗಾ ಮತ್ತು ಸೂಪರ್ ಕ್ಯಾರಿ ಮಾದರಿಗಳಲ್ಲಿ ಸಿಎನ್‌ಜಿ ಆಯ್ಕೆಯನ್ನು ನೀಡುತ್ತಿದೆ. ಈಚೆಗಷ್ಟೇ ಬಿಡುಗಡೆ ಮಾಡಿರುವ ಹೊಸ ಸೆಲೆರಿಯೊ ಕಾರಿನಲ್ಲಿಯೂ ಸಿಎನ್‌ಜಿ ಆಯ್ಕೆ ನೀಡಲು ಮುಂದಾಗಿದೆ.
ಅಂಕಿ–ಅಂಶ
1.9 ಲಕ್ಷ
2019–20ರಲ್ಲಿ ಮಾರಾಟ ಆಗಿರುವ ಸಿಎನ್‌ಜಿ ಕಾರುಗಳು
1.6 ಲಕ್ಷ
2019–20ರಲ್ಲಿ ಮಾರಾಟ ಆಗಿರುವ ಸಿಎನ್‌ಜಿ ಕಾರುಗಳಲ್ಲಿ ಮಾರುತಿಯ ಕಾರುಗಳ ಸಂಖ್ಯೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.