ನವದೆಹಲಿ: ದೇಶದ ಅತಿ ದೊಡ್ಡ ಕಾರು ತಯಾರಿಕಾ ಕಂಪನಿ 'ಮಾರುತಿ ಸುಜುಕಿ ಇಂಡಿಯಾ' ತನ್ನ ತಯಾರಿಕಾ ವಾಹನಗಳ ಬೆಲೆ ಹೆಚ್ಚಳ ಮಾಡುವುದಾಗಿ ಮಂಗಳವಾರ ತಿಳಿಸಿದೆ.
ಏರಿಕೆಯಾಗಿರುವ ತಯಾರಿಕಾ ವೆಚ್ಚ ಸರಿದೂಗಿಸುವ ನಿಟ್ಟಿನಲ್ಲಿ 2020ರ ಜನವರಿಯಿಂದ ಕಾರುಗಳ ಬೆಲೆ ಹೆಚ್ಚಳ ಮಾಡುವ ನಿರ್ಧಾರ ಪ್ರಕಟಿಸಿದೆ.ವೆಚ್ಚ ಹೆಚ್ಚಳದಿಂದ ಕಾರು ತಯಾರಿಕೆಗೆ ಆಗುತ್ತಿರುವ ಖರ್ಚು ಕಳೆದ ವರ್ಷದಿಂದ ಕಂಪನಿಯ ಮೇಲೆ ಹೊರೆಯಾಗಿ ಪರಿಣಮಿಸುತ್ತಿರುವುದಾಗಿ ಮಾರುತಿ ಸುಜುಕಿ ಇಂಡಿಯಾ ಹೇಳಿದೆ.
ಇದನ್ನೂ ಓದಿ:ಮಾರುತಿ ಸುಜುಕಿ: ವಾಹನಗಳ ಮಾರಾಟ ಹೆಚ್ಚಳ
ಮಾರುತಿಯ ಕೆಲವು ಮಾದರಿಯ ಕಾರುಗಳ ಬೆಲೆ ಏರಿಕೆ ಮಾಡುವ ಮೂಲಕ ಹೆಚ್ಚುವರಿ ವೆಚ್ಚವನ್ನು ಗ್ರಾಹಕರಿಗೆ ವರ್ಗಾಯಿಸುವುದು ಅನಿವಾರ್ಯವಾಗಿದೆ. ಕಾರು ಮಾದರಿಗೆ ಅನುಗುಣವಾಗಿ ಜನವರಿಯಿಂದ ಬೆಲೆಯಲ್ಲಿ ವ್ಯತ್ಯಾಸವಾಗಲಿದೆ ಎಂದಿದೆ.
ಪ್ರಸ್ತುತ ಕಂಪನಿ ಆರಂಭಿಕ ಹಂತದ ಪುಟ್ಟ ಆಲ್ಟೊ ಕಾರಿನಿಂದ ಹಿಡಿದು ಪ್ರೀಮಿಯಂ, ಬಹುಪಯೋಗಿ ಮಾದರಿ ಕಾರುಗಳನ್ನು ಮಾರಾಟ ಮಾಡುತ್ತಿದೆ. ₹2.89 ಲಕ್ಷದಿಂದ ₹11.47 ಲಕ್ಷ (ದೆಹಲಿ ಎಕ್ಸ್–ಷೋರೂಂ ಬೆಲೆ) ವರೆಗಿನ ಹಲವು ಮಾದರಿಯ ಕಾರುಗಳನ್ನು ಕಂಪನಿ ತಯಾರಿಸುತ್ತಿದೆ.
ಮಾರುತಿ ಸುಜುಕಿ ಇಂಡಿಯಾ ಕಂಪನಿ ನವೆಂಬರ್ ವರೆಗೂ 2 ಕೋಟಿಗೂ ಅಧಿಕ ಪ್ರಯಾಣಿಕ ವಾಹನಗಳನ್ನು ಮಾರಾಟ ಮಾಡಿದೆ. 1983ರ ಡಿಸೆಂಬರ್ 14ರಂದು ಮೊದಲ ಕಾರು 'ಮಾರುತಿ 800' ಮಾರಾಟ ಮಾಡಲಾಗಿತ್ತು. 37 ವರ್ಷಗಳಿಗಿಂತಲೂ ಕಡಿಮೆ ಅವಧಿಯಲ್ಲಿ 2 ಕೋಟಿಗೂ ಅಧಿಕ ವಾಹನಗಳನ್ನು ಮಾರಾಟದ ಸಾಧನೆ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.