ವಿವಿಧ ಬ್ರ್ಯಾಂಡ್‌ಗಳ ಐಷಾರಾಮಿ ಕಾರುಗಳ ಬೆಲೆ ಕೇಳಿಯೇ ಕೆಲವರಿಗೆ ಬೆವರು... ಅಂಥ ಕಾರುಗಳನ್ನು ಕಣ್ತುಂಬಿಕೊಂಡರೆ ಸಾಕು ಎನ್ನುವವರೂ ಇದ್ದಾರೆ. ಈ ಕಾರುಗಳನ್ನು ಓಡಿಸಲು ಅವಕಾಶ ಸಿಕ್ಕರೆ ಹೇಗೆ?
ಅದಕ್ಕಾಗಿ ಈ ಕಾರುಗಳನ್ನು ಖರೀದಿಸಬೇಕಿಲ್ಲ. ಬಾಡಿಗೆ ಅಥವಾ ಲೀಸ್ ಪಡೆದು ‘ಐಷಾರಾಮಿ’ ಕಾರು ಚಲಾಯಿಸುವ ಖುಷಿ ಪಡೆಯಬಹುದು. ಸಿಲಿಕಾನ್ ಸಿಟಿಯಲ್ಲಿ ಇಲ್ಲಿಯವರೆಗೂ ಬಾಡಿಗೆಗೆ ಸಿಗದಿದ್ದಕೋಟ್ಯಂತರ ರೂಪಾಯಿ ಮೌಲ್ಯದ ಕೆಲ ಐಷಾರಾಮಿ ಕಾರುಗಳು ಇನ್ನು ಮುಂದೆ ಲೀಸ್ ಅಥವಾ ಬಾಡಿಗೆಗೆ ಪಡೆದು ಓಡಿಸಬಹುದು. ಐಷಾರಾಮಿ ಕಾರುಗಳಷ್ಟೆ ಅಲ್ಲ ಐಷಾರಾಮಿ ಬೈಕ್‌ಗಳೂ ಬಾಡಿಗೆಗೆ ದೊರೆಯಲಿವೆ.
‘ಕಾರ್2ಡ್ರೈವ್’ ಕಂಪನಿ ನಗರದ ಕಾರು ಪ್ರಿಯರಿಗೆ ಈ ಅವಕಾಶ ಒದಗಿಸಿಕೊಟ್ಟಿದೆ. ಇದು ಶ್ರೀಮಂತರು, ಗಣ್ಯರಿಗಷ್ಟೇ ಅಲ್ಲ ಸಾಮಾನ್ಯ ಉದ್ಯೋಗಿಗಳೂ ಈ ಕಾರುಗಳನ್ನು ಬಾಡಿಗೆ ಪಡೆದು ಚಲಾಯಿಸಬಹುದು.
ಯಾವ ಕಾರುಗಳು ಲಭ್ಯ: ರೋಲ್ಸ್ ರಾಯ್, ಪೋರ್ಷೆ, ಬೆಂಜ್, ಔಡಿ, ಸ್ಕೋಡಾ, ಲುಂಬಾರ್ಗಿನಿ, ಜಾಗ್ವಾರ್ ಸೇರಿದಂತೆ ವಿಶ್ವದಲ್ಲಿ ಲಭ್ಯವಿರುವ ಬಹುತೇಕ ಐಷಾರಾಮಿ ಕಾರುಗಳು ಹಾಗೂ ಡುಕಾಟಿ, ಹ್ಯಾರ್ಲೆ ಡೇವಿಡ್ಸನ್ ರೀತಿಯ ದುಬಾರಿ ಬೆಲೆಯ ಬೈಕ್‌ಗಳು ಇಲ್ಲಿ ಲಭ್ಯ. ವಿದೇಶಿ ಮೂಲದ ಕಂಪನಿಯಾದ ಎಕ್ಸಲಾನ್ ಸಂಸ್ಥೆಯ ಅಂಗಸಂಸ್ಥೆಯಾಗಿ ಹೈದರಾಬಾದ್‌ನಲ್ಲಿ ತಲೆಯೆತ್ತಿರುವ ‘ಕಾರ್2ಡ್ರೈವ್’ ತನ್ನ ಎರಡನೇ ಶಾಖೆಯನ್ನು ಬೆಂಗಳೂರಿನ ರೆಸಿಡೆನ್ಸಿ ರಸ್ತೆಯಲ್ಲಿ ಪ್ರಾರಂಭಿಸಿದೆ. ‘ಕಾರ್2ಡ್ರೈವ್’ನ ಸಹ ಸಂಸ್ಥಾಪಕ ಮೊಹಮ್ಮದ್ ಆಸಿಫ್, ಎಕ್ಸಲಾನ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಮೊಹಮ್ಮದ್ ಮನ್ಸೂರ್ ಹಾಗೂ ಕಾರ್2ಡ್ರೈವ್‌ನ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕೇವಲ ಶ್ರೀಮಂತರು ಮಾತ್ರ ಖರೀದಿಸಬಹುದಾದ ಐಷಾರಾಮಿ ಕಾರುಗಳು ಮಧ್ಯಮವರ್ಗದವರು ಮತ್ತು ಆಸಕ್ತರ ಬಳಕೆಗೂ ಸಿಗುವಂತಾಗಲಿ ಎಂಬುದು ಕಂಪನಿಯ ಉದ್ದೇಶ ಎನ್ನುತ್ತಾರೆ ಸಂಸ್ಥೆಯ ಮಾರುಕಟ್ಟೆ ನಿರ್ದೇಶಕ ಸೈಯದ್.
ಲೀಸ್ ಪಡೆಯವುದು ಹೇಗೆ?: ‘ಕಾರ್2ಡ್ರೈವ್’ನಲ್ಲಿ 135 ಐಷಾರಾಮಿ ಕಾರುಗಳಿವೆ (₹ 50 ಲಕ್ಷದಿಂದ ₹ 5 ಕೋಟಿ). ಮನೆಯನ್ನು ಲೀಸ್‌ಗೆ ಪಡೆಯುವ ಮಾದರಿಯಲ್ಲಿಯೇ ಈ ಕಾರುಗಳನ್ನು ಲೀಸ್ ಪಡೆಯಬಹುದು. ಅದಕ್ಕೆ ಕಂಪನಿಯೊಂದಿಗೆ ಗ್ರಾಹಕರು ಒಪ್ಪಂದ ಮಾಡಿಕೊಳ್ಳಬೇಕಷ್ಟೆ.
ಉದಾಹರಣೆಗೆ ₹ 1 ಕೋಟಿ ರೂಪಾಯಿ ಮೌಲ್ಯದ ಕಾರೊಂದನ್ನು ಕಂಪನಿ ನಿಗದಿಪಡಿಸಿದ ಮೊತ್ತ ಪಾವತಿಸಿ 36 ತಿಂಗಳವರೆಗೆ ಲೀಸ್ ಪಡೆದು ಉಪಯೋಗಿಸಬಹುದು. ಬಳಿಕ ಗ್ರಾಹಕರು ಆ ಕಾರನ್ನು ಕಂಪನಿಗೆ ಹಿಂತಿರುಗಿಸಿದರೆ ಲೀಸ್‌ಗೆ ನೀಡಿದ ಮೊತ್ತವನ್ನು ಕಂಪನಿಯು ಗ್ರಾಹಕರಿಗೆ ಹಿಂತಿರುಗಿಸುತ್ತದೆ.
36 ತಿಂಗಳು ಕಾರು ಉಪಯೋಗಿಸಿದ ಬಳಿಕ ಗ್ರಾಹಕರೇನಾದರೂ ಅದನ್ನು ಇಷ್ಟಪಟ್ಟರೆ ಅದೇ ಕಾರನ್ನು ಖರೀದಿಸಲೂ ಅವಕಾಶವಿದೆ. ಉದಾಹರಣೆ ಕಾರಿನ ಮೊತ್ತ ₹ 1 ಕೋಟಿ ಎಂದುಕೊಳ್ಳೋಣ. ಆ ಕಾರನ್ನು ಲೀಸ್‌ಗೆ ಪಡೆಯಲು ಕೊಟ್ಟಿದ್ದು ₹ 25 ಲಕ್ಷ. ಬಾಕಿ ₹ 75 ಲಕ್ಷ ಗ್ರಾಹಕ ಕಂಪನಿಗೆ ಪಾವತಿಸಿ ಆ ಕಾರನ್ನು ಖರೀದಿಸಬಹುದು. ಅಂತೆಯೇ ಮಾಸಿಕ ಬಾಡಿಗೆ ಆಧಾರದ ಮೇಲೂ ಕಾರು ಪಡೆಯಬಹುದು.
ರಿಪೇರಿ, ವಿಮೆಯೂ ಉಚಿತ: ಕಂಪನಿಯಲ್ಲಿ ಲಭ್ಯವಿರುವ ಎಲ್ಲ ಕಾರುಗಳು ಹಾಗೂ ಬೈಕ್‌ಗಳಿಗೂ ವಿಮೆ ಸೌಲಭ್ಯ ಕಲ್ಪಿಸಲಾಗಿದೆ. ಲೀಸ್ ಅಥವಾ ಬಾಡಿಗೆ ಆಧಾರದ ಮೇಲೆ ಕಾರುಗಳನ್ನು ಪಡೆದು ಗ್ರಾಹಕರು ಬಳಸುವಾಗ ಅಪಘಾತ ಸಂಭವಿಸಬಹುದು. ಅಂತಹ ಸಮಯದಲ್ಲಿ ಈ ವಿಮೆ ಸೌಲಭ್ಯವು ಅನುಕೂಲಕ್ಕೆ ಬರುತ್ತದೆ. ವಿಮೆಯನ್ನು ಕಂಪನಿಯು ಕ್ಲೈಮ್ ಮಾಡುವ ಮೂಲಕ ಕಾರಿನ ಅಥವಾ ಬೈಕ್‌ನ ರಿಪೇರಿಯ ಖರ್ಚು ಸರಿದೂಗಿಸುತ್ತದೆ. ಒಂದು ವೇಳೆ ಅಪಘಾತದಲ್ಲಿ ಗ್ರಾಹಕ (ಕಾರು ಅಥವಾ ಬೈಕ್ ಪಡೆದ ವ್ಯಕ್ತಿ) ಮೃತಪಟ್ಟರೆ ಅವರ ನಾಮಿನಿಗೆ ವಿಮೆ ಸೌಲಭ್ಯ ಲಭಿಸುತ್ತದೆ.
ಮಾಹಿತಿಗೆ ವೆಬ್‌ಸೈಟ್: www.car2drive.in
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.