‘ಜ ನರ ಕಾರು’, ‘₹1 ಲಕ್ಷದ ಕಾರು’, ‘ರತನ್ ಟಾಟಾ ಅವರ ಕನಸಿನ ಕಾರು’ ಎಂಬೆಲ್ಲ ವಿಶೇಷಣಗಳ ಗರಿಗಳನ್ನು ಮುಕುಟದಲ್ಲಿ ಹೊತ್ತುಕೊಂಡಿದ್ದ ಟಾಟಾ ಮೋಟರ್ಸ್‌ನ ‘ನ್ಯಾನೊ’ ಕಾರು ಸಂಪೂರ್ಣವಾಗಿ ತೆರೆಮರೆಗೆ ಸರಿಯುವ ಲಕ್ಷಣ ಕಾಣಿಸುತ್ತಿದೆ. ಈ ವರ್ಷದ ಮೊದಲ ಆರು ತಿಂಗಳಲ್ಲಿ ಒಂದು ನ್ಯಾನೊ ಮಾತ್ರ ಮಾರಾಟವಾಗಿದೆ. ಸಂಸ್ಥೆಯ ಮಹತ್ವಾಕಾಂಕ್ಷೆಯ ಈ ಕಾರನ್ನು ತಯಾರಿಸುವುದಕ್ಕಾಗಿಯೇ ಗುಜರಾತ್‌ನ ಸಾನಂದ್‌ನಲ್ಲಿ ಸ್ಥಾಪಿಸಲಾಗಿದ್ದ ಘಟಕದಿಂದ ಜನವರಿ ತಿಂಗಳಿನಿಂದಾಚೆಗೆ ಒಂದೂ ಕಾರು ಹೊರ ಬಂದಿಲ್ಲ. 2018ರ ಡಿಸೆಂಬರ್‌ನಲ್ಲಿ ತಯಾರಿಸಲಾಗಿದ್ದ 82 ಕಾರುಗಳೇ ಕೊನೆಯದಾಗಿವೆ.
2020ರ ಏಪ್ರಿಲ್‌ನಿಂದ ನ್ಯಾನೊ ತಯಾರಿಕೆ ನಿಲ್ಲಿಸುವುದಾಗಿ ಕಂಪನಿ ಈ ವರ್ಷಾರಂಭದಲ್ಲಿ ಹೇಳಿತ್ತು. ಬಿಎಸ್–6 ಮಾನದಂಡ ಹಾಗೂ ಕೇಂದ್ರ ಸರ್ಕಾರ ರೂಪಿಸಿರುವ ಹೊಸ ಸುರಕ್ಷತಾ ನಿಯಮಗಳಿಗೆ ಅನುಗುಣವಾಗಿ ನ್ಯಾನೊ ಸೇರಿದಂತೆ ಸಂಸ್ಥೆಯ ಇನ್ನಿತರ ಕೆಲವು ಪ್ರಯಾಣಿಕ ವಾಹನಗಳ ತಯಾರಿಕೆ ಸ್ಥಗಿತಕ್ಕೆ ನಿರ್ಧಾರ ಕೈಗೊಳ್ಳಲಾಗಿದೆ ಎಂದೂ ಹೇಳಿತ್ತು. ಆದರೆ, 2009ರಲ್ಲಿ ಮೊದಲ ಬಾರಿಗೆ ರಸ್ತೆಗಿಳಿದಿದ್ದ ನ್ಯಾನೊ ಕಾರು,ಅಧಿಕೃತವಾಗಿ ತಯಾರಿಕೆ ಸ್ಥಗಿತಗೊಳ್ಳುವ ಒಂದೂವರೆ ವರ್ಷಕ್ಕೆ ಮುಂಚಿತವಾಗಿಯೇ ಇತಿಹಾಸದ ಪುಟಕ್ಕೆ ಸೇರುವ ಲಕ್ಷಣ ಕಾಣಿಸುತ್ತಿದೆ.ಆ ಮೂಲಕ, ಟಾಟಾ ಸಮೂಹದ ಹಿಂದಿನ ಶಕ್ತಿಯಾಗಿರುವ ರತನ್ ಟಾಟಾ ಅವರ ಮಹಾ ಕನಸೊಂದು ಕೇವಲ ಒಂದು ದಶಕದಲ್ಲಿ ಕರಗಿದಂತೆ ಭಾಸವಾಗುತ್ತಿದೆ.
ಆರಂಭದಿಂದಲೂ ಹಿನ್ನಡೆ
ದ್ವಿಚಕ್ರವಾಹನದಲ್ಲಿ ಸಂಚರಿಸುವ ಕುಟುಂಬಕ್ಕೆ ಕೈಗೆಟುಕುವ ದರದಲ್ಲಿ ಕಾರು ಲಭ್ಯವಾಗುವಂತೆ ಮಾಡಬೇಕು ಎಂಬುದು ರತನ್ ಟಾಟಾ ಅವರ ಕನಸಾಗಿತ್ತು. ಅದನ್ನು ನನಸು ಮಾಡಿದ್ದು ನ್ಯಾನೊ. ಈ ಕಾರಿನೊಂದಿಗೆ ಅವರಿಗೆ ಭಾವನಾತ್ಮಕ ಸಂಬಂಧವೂ ಇತ್ತು. ಅವರು ತೋರಿದ ಮುತುವರ್ಜಿಯಿಂದಾಗಿಯೇ ಈ ಪುಟ್ಟ ಕಾರು ಹತ್ತು ವರ್ಷಗಳ ಕಾಲ ಭಾರತದ ರಸ್ತೆಯಲ್ಲಿ ಸಂಚರಿಸಿದೆ.
ಹಾಗೆ ನೋಡಿದರೆ, ಕಡಿಮೆ ಬೆಲೆಯ ಕಾರನ್ನು ತಯಾರಿಸುವುದಾಗಿ ಟಾಟಾ ಮೋಟರ್ಸ್ ಹೇಳಿದ ದಿನದಿಂದ ಒಂದಿಲ್ಲೊಂದು ರೀತಿಯ ಹಿನ್ನಡೆ ಸಂಸ್ಥೆಯನ್ನು ಹಿಂಬಾಲಿಸುತ್ತಲೇ ಬಂದಿತ್ತು. ನ್ಯಾನೊ ಮಾರುಕಟ್ಟೆಗೆ ಲಗ್ಗೆ ಇಡುವ ಸಂದರ್ಭದಲ್ಲಿ ಸಕಾರಾತ್ಮಕ ಕಾರಣಕ್ಕೆ ಸುದ್ದಿಯಾಗಿದ್ದು ಬಿಟ್ಟರೆ, ಉಳಿದೆಲ್ಲ ಸಮಯದಲ್ಲಿ ಈ ಕಾರು ನಕಾರಾತ್ಮಕ ವಿಷಯಗಳಿಂದಲೇ ಪ್ರಚಲಿತದಲ್ಲಿತ್ತು.
ಕಾರು ತಯಾರಿಕಾ ಘಟಕ ನಿರ್ಮಿಸಲು ಪಶ್ಚಿಮ ಬಂಗಾಳದ ಸಿಂಗೂರನ್ನು ಆಯ್ಕೆ ಮಾಡಿದಾಗಲೇ ಟಾಟಾಗೆ ವಿರೋಧದ ಬಿಸಿ ಮುಟ್ಟಿತ್ತು. ಘಟಕ ನಿರ್ಮಾಣ ಕಾಮಗಾರಿ ಆರಂಭವಾದ ನಂತರ ಹಿಂಸಾಚಾರ ಭುಗಿಲೆದ್ದು ಸಿಂಗೂರಿನಲ್ಲಿ ಯೋಜನೆ ಕೈಬಿಟ್ಟು ಗುಜರಾತ್‌ನ ಸಾನಂದ್‌ಗೆ ಘಟಕ ಸ್ಥಳಾಂತರಿಸಬೇಕಾಯಿತು. ಇದರಿಂದ ನ್ಯಾನೊ ರಸ್ತೆಗಿಳಿಯುವುದು ಕೊಂಚ ತಡವಾಯಿತು. ಕೊನೆಗೂ 2009ರ ಮಾರ್ಚ್ ತಿಂಗಳಲ್ಲಿ ಪಾಟ್ನಾನಗರದಲ್ಲಿರುವ ಸಂಸ್ಥೆಯ ಘಟಕದಲ್ಲಿ ‘ನ್ಯಾನೊ’ ತಯಾರಿಸಲಾಯಿತು. ಅದೇ ವರ್ಷದ ಜುಲೈನಲ್ಲಿ ಮೊದಲ ನ್ಯಾನೊ ಗ್ರಾಹಕರ ಕೈ ಸೇರಿತು.
ಅಧಿಕೃತವಾಗಿ ಮಾರಾಟ ಆರಂಭವಾದ ಮೂರು ತಿಂಗಳಲ್ಲಿ ನ್ಯಾನೊ ಕಾರಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡ ಪ್ರಕರಣಗಳು ದೇಶದ ವಿವಿಧ ಭಾಗಗಳಲ್ಲಿ ನಡೆದವು. ಇದು ಕಾರಿನ ಸುರಕ್ಷತೆಯ ಬಗ್ಗೆ ಸಂದೇಹ ಹುಟ್ಟುಹಾಕಿತು. ಸಂಸ್ಥೆಯು ಆ ವರೆಗೆ ಮಾರಾಟವಾಗಿದ್ದ ಏಳು ಸಾವಿರ ಕಾರುಗಳನ್ನು ವಾಪಸ್ ಕರೆಸಿಕೊಂಡು ಪರಿಶೀಲನೆ ನಡೆಸಬೇಕಾಯಿತು.
ಕುಸಿದ ಮಾರಾಟ
ಪ್ರತಿ ವರ್ಷ 2,50,000 ನ್ಯಾನೊ ಕಾರುಗಳು ಮಾರಾಟ ಆಗಬಹುದು ಎಂಬ ನಿರೀಕ್ಷೆ ಕಂಪನಿಗಿತ್ತು. ಆದರೆ, ಅದು ಮೊದಲ ಎರಡು ವರ್ಷಗಳಲ್ಲೇ ಹುಸಿಯಾಯಿತು. ನಿರೀಕ್ಷಿತ ಮಟ್ಟದಲ್ಲಿ ಕಾರು ಮಾರಾಟವಾಗದಿದ್ದರೂ ಮೊದಲ ಎರಡು ವರ್ಷಗಳಲ್ಲಿ ವಾರ್ಷಿಕವಾಗಿ 70 ಸಾವಿರದಷ್ಟು ಕಾರುಗಳು ಗ್ರಾಹಕರ ಕೈ ಸೇರಿದ್ದವು. ಆದರೆ ನಾಲ್ಕನೇ ವರ್ಷದಿಂದ ಕುಸಿತ ಆರಂಭವಾಯಿತು.
ತಂತ್ರಜ್ಞಾನವನ್ನು ಪರಿಷ್ಕರಿಸಿ ಹೊಸ ನ್ಯಾನೊ ಅಭಿವೃದ್ಧಿ ಪಡಿಸಿದರೂ ಪ್ರಯೋಜನವಾಗಲಿಲ್ಲ. 2015ರಲ್ಲಿ ನ್ಯಾನೊ ಜೆನ್‌ಎಕ್ಸ್ ಎಂಬ ಸುಧಾರಿತ ಮಾಡೆಲ್ ಮಾರುಕಟ್ಟೆಗೆ ಬಿಟ್ಟ ನಂತರ ಆ ವರ್ಷ ಮಾರಾಟ ಹೆಚ್ಚಾಯಿತು. ಇದಕ್ಕಾಗಿ ಕಂಪನಿ ₹ 400 ಕೋಟಿ ವ್ಯಯಿಸಿತ್ತು ಎಂದು ಹೇಳಲಾಗುತ್ತಿದೆ.ಮುಂದಿನ ವರ್ಷ ಮತ್ತೆ ಅದೇ ಹಾಡು, ಅದೇ ಪಾಡು ಎಂಬಂತಾಯಿತು. ಕಳೆದ ವರ್ಷ (2018–19)ರಲ್ಲಿ ಮಾರಾಟ ತಳಮಟ್ಟಕ್ಕೆ ಕುಸಿಯಿತು. ಇಡೀ ವರ್ಷ ದೇಶದಾದ್ಯಂತ 376 ಮಂದಿ ಮಾತ್ರ ನ್ಯಾನೊ ಖರೀದಿಸಿದ್ದರು. ಈ ವರ್ಷ ಅದು ಇನ್ನೂ ಕುಸಿತ ಕಂಡಿದೆ.
ವಿದ್ಯುತ್ ಚಾಲಿತ ನ್ಯಾನೊ ತಯಾರಿಸುವ ಯೋಚನೆಯಲ್ಲಿ ಕಂಪನಿ ಇದ್ದಂತೆ ಕಾಣಿಸುತ್ತಿದೆ. 2010ರ ಜಿನೀವಾ ಮೋಟಾರ್ ಷೋನಲ್ಲಿ ಎಲೆಕ್ಟ್ರಿಕ್ ನ್ಯಾನೊ ಅನ್ನು ಪ್ರದರ್ಶನ ಮಾಡಲಾಗಿತ್ತು. ಆದರೆ, ಇದುವರೆಗೆ ಮಾರುಕಟ್ಟೆಗೆ ಬಂದಿಲ್ಲ.ಸದ್ಯ ದೇಶದ ಆಟೊಮೊಬೈಲ್ ಕ್ಷೇತ್ರದ ಚಿತ್ರಣ ನೋಡಿದರೆ, ನ್ಯಾನೊ ಕಾರು ಮತ್ತೆ ಪುಟಿದೇಳುವ ಸಾಧ್ಯತೆ ಕ್ಷೀಣ.
ಹಿನ್ನಡೆಗೆ ಪ್ರಮುಖ ಕಾರಣ ಏನು?
* ಬಡವರ ಕಾರು/ಕಡಿಮೆ ಬೆಲೆಯ ಕಾರು ಎಂಬ ವಿಶ್ಲೇಷಣೆ: ನ್ಯಾನೊ ಬಡವರ ಕಾರು ಎಂಬ ಅರ್ಥದಲ್ಲಿ ಬಿಂಬಿಸಲಾಯಿತು. ಹೀಗಾಗಿ, ಸಾಮಾಜಿಕ ಸ್ಥಾನಮಾನದ ಬಗ್ಗೆ ಆಸ್ಥೆ ವಹಿಸುವ ಭಾರತೀಯರು ಕಾರಿನತ್ತ ಆಕರ್ಷಿತರಾಗಿಲಿಲ್ಲ ಎಂಬುದು ವಾಹನ ತಜ್ಞರ ಅಭಿಮತ.
* 624 ಸಿಸಿ ಎಂಜಿನ್ ಸಾಮರ್ಥ್ಯದ ಈ ಕಾರು ದ್ವಿಚಕ್ರ ವಾಹನಕ್ಕೆ ಪರ್ಯಾಯ ಎಂದು ಬಿಂಬಿಸಲಾಗಿತ್ತು. ಆದರೆ, ಸಂಸ್ಥೆ ಅದನ್ನು ಮಾರ್ಕೆಟಿಂಗ್ ಮಾಡುವಲ್ಲಿ ಎಡವಿತು.
* ಸುರಕ್ಷತೆ ತಂತ್ರಜ್ಞಾನಗಳ ಕೊರತೆ: ನ್ಯಾನೊದಲ್ಲಿ ಸುರಕ್ಷಿತ ತಂತ್ರಜ್ಞಾನಗಳಿರಲಿಲ್ಲ. ಸೌಲಭ್ಯಗಳಿರಲಿಲ್ಲ. ಆರಂಭದಲ್ಲಿ ಜಾಗತಿಕ ಸುರಕ್ಷಿತಾ ಪರೀಕ್ಷೆಯಲ್ಲಿ (ಎನ್ ಸಿಎಒಪಿ) ಈ ಕಾರಿಗೆ ಸಿಕ್ಕಿದ್ದು ಸೊನ್ನೆ ಅಂಕ.ಏಕಾಏಕಿ ಬೆಂಕಿ ಕಾಣಿಸಿಕೊಂಡ ಪ್ರಕರಣಗಳು ಗ್ರಾಹಕರಲ್ಲಿ ಆತಂಕ ಮೂಡಿಸಿದ್ದುಸುಳ್ಳಲ್ಲ.
* ಹೆಚ್ಚಾದ ಬೆಲೆ: ₹1 ಲಕ್ಷಕ್ಕೆ ಕಾರು ಕೊಡುವುದಾಗಿ ರತನ್ ಟಾಟಾ ಅವರು ನೀಡಿದ ಭರವಸೆಯಂತೆ ಆರಂಭದಲ್ಲಿ ಅದೇ ಮೊತ್ತಕ್ಕೆ (ವ್ಯಾಟ್ ಮತ್ತು ಸಾಗಣೆ ವೆಚ್ಚ ಪ್ರತ್ಯೇಕ) ಮಾರಾಟ ಮಾಡಲಾಯಿತು. ಅದು ಮೂಲ (ಸ್ಟ್ಯಾಂಟರ್ಡ್) ಮಾಡೆಲ್ ಆಗಿತ್ತು. ಹೆಚ್ಚಿನ ಸೌಲಭ್ಯಗಳು ಇರಲಿಲ್ಲ. ನಂತರದ ಮಾಡೆಲ್‌ಗಳಲ್ಲಿ ಸೌಲಭ್ಯಗಳು ಹೆಚ್ಚಿದಂತೆ ಬೆಲೆಯೂ ಹೆಚ್ಚಾಯಿತು. ಲಕ್ಷದ ಕಾರು ಎಂಬ ಒಕ್ಕಣೆ ಕಾಗದದ ಮೇಲಿನ ಬರಹ ಆಯಿತು. ಸದ್ಯ ನ್ಯಾನೊ ಕಾರಿನ ಎಕ್ಸ್‌ರೂಂ ಬೆಲೆ ₹2.25 ಲಕ್ಷದಿಂದ ₹2.50 ಲಕ್ಷದವರೆ ಇದೆ.
ರತನ್ ಟಾಟಾ ಕನಸಿನ ಕಾರು
‘2003ರ ಮಳೆಗಾಲದಲ್ಲಿ ಒಂದು ದಿನ ಕಾರಿನಲ್ಲಿ ಸಾಗುತ್ತಿದ್ದಾಗ ಇಬ್ಬರು ಮಕ್ಕಳನ್ನು ಹೊಂದಿದ್ದ ಕುಟುಂಬವೊಂದು ಮಳೆಯಲ್ಲಿ ದ್ವಿಚಕ್ರವಾಹನದಲ್ಲಿ ಸಾಗುತ್ತಿದ್ದಾಗ ನಾವ್ಯಾಕೆ, ಕೈಗೆಟುಕುವ ದರದಲ್ಲಿ ಕಾರನ್ನು ಗ್ರಾಹಕರಿಗೆ ಕೊಡಬಾರದು ಎಂಬ ಆಲೋಚನೆ ಬಂತು’ ಎಂದು ಟಾಟಾ ಸನ್ಸ್ ಅಧ್ಯಕ್ಷರಾಗಿದ್ದ ರತನ್ ಟಾಟಾ ಅವರು 2008ರಲ್ಲಿ ವಾಹನ ಮೇಳದಲ್ಲಿ ಕಾರನ್ನು ಪ್ರದರ್ಶಿಸಿದ ಸಂದರ್ಭದಲ್ಲಿ ಹೇಳಿದ್ದರು.
ನ್ಯಾನೊ ಯೋಜನೆ ಬಗ್ಗೆ ಅವರು ಹೆಚ್ಚು ಕಾಳಜಿ ವಹಿಸಿದ್ದರು. ಅವರ ಆಸೆಯಂತೆ ನ್ಯಾನೊ ರೂಪುಗೊಂಡಿತ್ತು.ಕಾರಿನಿಂದ ಸಂಸ್ಥೆಗೆ ನಷ್ಟವಾಗುತ್ತಿದ್ದರೂ, ಯೋಜನೆಯನ್ನು ಮುಂದುವರಿಸಿದ್ದರು.
‘ಅತ್ಯಂತ ಕಡಿಮೆ ಬೆಲೆಯ ಕಾರು ಎಂದು ಬಿಂಬಿಸಿದ್ದೇ ಮಾರುಕಟ್ಟೆಯಲ್ಲಿ ಕಾರಿನ ವೈಫಲ್ಯಕ್ಕೆ ಕಾರಣ’ ಎಂದು ಅವರು ಒಪ್ಪಿಕೊಂಡಿದ್ದರು.
ರತನ್ ಟಾಟಾ ನಂತರ ಟಾಟಾ ಸನ್ಸ್ ಅಧ್ಯಕ್ಷರಾಗಿದ್ದ ಸೈರಸ್ ಮಿಸ್ತ್ರಿ ಅವರು ನ್ಯಾನೊ ಕಾರಿನ ಪ್ರಗತಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಸಂಸ್ಥೆಗೆ ನಷ್ಟ ಉಂಟು ಮಾಡುತ್ತಿರುವ ಯೋಜನೆಯನ್ನು ಮುಂದುವರೆಸಬಾರದು ಎಂಬ ನಿಲುವು ಅವರದ್ದಾಗಿತ್ತು. ಅವರು ಸಂಸ್ಥೆಯಿಂದ ಹೊರ ನಡೆಯಲು ಇದೂ ಒಂದು ಕಾರಣ ಎಂದು ಉದ್ಯಮ ವಲಯದಲ್ಲಿ ಚರ್ಚೆ ನಡೆದಿತ್ತು.
‘ನ್ಯಾನೊ ಯೋಜನೆಯಿಂದಾಗಿ ಸಂಸ್ಥೆಗೆ ₹ 1,000 ಕೋಟಿ ನಷ್ಟವಾಗಿದೆ. ಭಾವನಾತ್ಮಕ ಕಾರಣಗಳಿಗಾಗಿ ಯೋಜನೆಯನ್ನು ಇನ್ನೂ ಮುಂದುವರಿಸಲಾಗುತ್ತಿದೆ’ ಎಂದು ಮಿಸ್ತ್ರಿ ಹೇಳಿದ್ದು ಮಾಧ್ಯಮಗಳಲ್ಲಿ ವರದಿಯಾಗಿತ್ತು.
ನ್ಯಾನೊ ಸಾಗಿ ಬಂದ ಹಾದಿ
* 2003: ಮೊಳಕೆಯೊಡೆದ ನ್ಯಾನೊ ಕಾರಿನ ಪರಿಕಲ್ಪನೆ
* 2006 ಮೇ 18: ₹ 1 ಲಕ್ಷ ಬೆಲೆಯ ನ್ಯಾನೊ ಕಾರು ತಯಾರಿಸುವುದಾಗಿ ರತನ್ ಟಾಟಾ ಘೋಷಣೆ
* 2007 ಜನವರಿ: ಪಶ್ಚಿಮ ಬಂಗಾಳದ ಸಿಂಗೂರಿನಲ್ಲಿ ನ್ಯಾನೊ ತಯಾರಿಕಾ ಘಟಕ ನಿರ್ಮಾಣ ಆರಂಭ
* 2007 ಜೂನ್: ಸಿಂಗೂರಿನಲ್ಲಿ ಘಟಕ ಸ್ಥಾಪನೆಗೆ ರೈತರು ಹಾಗೂ ಟಿಎಂಸಿ ವಿರೋಧ
* 2007 ಡಿಸೆಂಬರ್: ಯೋಜನೆ ವಿರುದ್ಧ ಸಿಂಗೂರಿನಲ್ಲಿ ಹಿಂಸಾಚಾರ
* 2008, ಜನವರಿ: ನವದೆಹಲಿಯಲ್ಲಿ ನಡೆದ ವಾಹನ ಮೇಳದಲ್ಲಿ ನ್ಯಾನೊ ಪ್ರದರ್ಶಿಸಿದ ರತನ್ ಟಾಟಾ
* 2008 ಮಾರ್ಚ್: ಜಿನೀವಾ ಮೋಟಾರ್ ಷೋನಲ್ಲಿ ನ್ಯಾನೊ ಪ್ರದರ್ಶನ
* 2008 ಅಕ್ಟೋಬರ್: ಸ್ಥಳೀಯರ ವಿರೋಧದ ಕಾರಣಕ್ಕೆ ಸಿಂಗೂರ್‌ನಲ್ಲಿ ನ್ಯಾನೊ ಘಟಕ ಸ್ಥಗಿತ, ಗುಜರಾತ್‌ನ ಸಾನಂದ್‌ಗೆ ಸ್ಥಳಾಂತರದ ಘೋಷಣೆ
* 2009 ಮಾರ್ಚ್: ಪಾಟ್ನಾ ನಗರದ ಟಾಟಾ ಘಟಕದಲ್ಲಿ ನ್ಯಾನೊ ತಯಾರಿಕೆ ಆರಂಭ
* 2009 ಜುಲೈ: ನ್ಯಾನೊ ಕಾರು ಮಾರುಕಟ್ಟೆಗೆ ಲಗ್ಗೆ
* 2009 ಅಕ್ಟೋಬರ್: ಕಾರಿನಲ್ಲಿ ಏಕಾಏಕಿ ಬೆಂಕಿ ಕಂಡು ಬಂದ ಪ್ರಕರಣಗಳು ಬೆಳಕಿಗೆ. ಎಲ್ಲ ಕಾರುಗಳ ತಪಾಸಣೆಗೆ ಟಾಟಾ ನಿರ್ಧಾರ
* 2010 ಜೂನ್: ಸಾನಂದ್ ಘಟಕದಲ್ಲಿ ತಯಾರಿಕೆ ಆರಂಭ
* 2011 ಮಾರ್ಚ್: ಶ್ರೀಲಂಕಾ, ನೇಪಾಳಗಳಿಗೆ ರಫ್ತು ಆರಂಭಿಸಿದ ಟಾಟಾ ಮೋಟಾರ್ಸ್
* 2013 ಅಕ್ಟೋಬರ್: ಸಿಎನ್‌ಜಿ ನ್ಯಾನೊ ಮಾರುಕಟ್ಟೆಗೆ
* 2014 ಜನವರಿ: ನ್ಯಾನೊ ಟ್ವಿಸ್ಟ್ ಲೋಕಾರ್ಪಣೆ
* 2015 ಮೇ: ಜೆನ್ಎಕ್ಸ್ ನ್ಯಾನೊ ಮಾರುಕಟ್ಟೆಗೆ
* 2017 ಮಾರ್ಚ್: ಮಾರಾಟ ಭಾರಿ ಪ್ರಮಾಣದಲ್ಲಿ ಕುಸಿತ
* 2019 ಜನವರಿ: ಬೇಡಿಕೆ ಇಲ್ಲದೆ ಕಾರು ತಯಾರಿಕೆ ಸ್ಥಗಿತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.