ನವದೆಹಲಿ: ಪ್ರಯಾಣಿಕ ವಾಹನಗಳ ರಿಟೇಲ್ ಮಾರಾಟ ಡಿಸೆಂಬರ್‌ನಲ್ಲಿ ಶೇಕಡ 24ರಷ್ಟು ಏರಿಕೆ ಕಂಡಿದ್ದು 2.71 ಲಕ್ಷಕ್ಕೆ ತಲುಪಿದೆ. ಹಬ್ಬದ ಋತುವಿನಲ್ಲಿ ಸೃಷ್ಟಿಯಾದ ಬೇಡಿಕೆಯಿಂದಾಗಿ ರಿಟೇಲ್ ಮಾರಾಟದಲ್ಲಿ ಈ ಪ್ರಮಾಣದ ಏರಿಕೆ ಕಂಡುಬಂದಿದೆ ಎಂದು ಭಾರತೀಯ ವಾಹನ ವಿತರಕರ ಸಂಘಟನೆಗಳ ಒಕ್ಕೂಟ (ಎಫ್‌ಎಡಿಎ) ಹೇಳಿದೆ.
2019ರ ಡಿಸೆಂಬರ್‌ನಲ್ಲಿ 2.18 ಲಕ್ಷ ಪ್ರಯಾಣಿಕ ವಾಹನಗಳು ಮಾರಾಟವಾಗಿದ್ದವು. ದ್ವಿಚಕ್ರ ವಾಹನಗಳ ಮಾರಾಟ ಶೇ 11.88ರಷ್ಟು ಹೆಚ್ಚಾಗಿ 14.24 ಲಕ್ಷಕ್ಕೆ ಏರಿಕೆಯಾಗಿದೆ. ವಾಣಿಜ್ಯ ವಾಹನಗಳ ಮಾರಾಟ ಶೇ 13.22ರಷ್ಟು ಕಡಿಮೆ ಆಗಿದ್ದು, 59,497ರಿಂದ 51,454ಕ್ಕೆ ಇಳಿಕೆಯಾಗಿದೆ. ತ್ರಿಚಕ್ರ ವಾಹನಗಳ ಮಾರಾಟ ಶೇ 52.75ರಷ್ಟು ಕುಸಿತ ಕಂಡಿದ್ದು, 27,715 ವಾಹನಗಳು ಮಾರಾಟವಾಗಿವೆ.
ಟ್ರ್ಯಾಕ್ಟರ್ ಮರಾಟ ಶೇ 35.49ರಷ್ಟು ಹೆಚ್ಚಾಗಿದೆ. ಎಲ್ಲಾ ಮಾದರಿಗಳನ್ನು ಒಳಗೊಂಡ ವಾಹನಗಳ ಮಾರಾಟವು ಶೇ 11ರಷ್ಟು ಹೆಚ್ಚಾಗಿದೆ ಎಂದು ಒಕ್ಕೂಟವು ತಿಳಿಸಿದೆ.
ಪ್ರಸಕ್ತ ಹಣಕಾಸು ವರ್ಷದಲ್ಲಿ ಇದೇ ಮೊದಲ ಬಾರಿಗೆ ಡಿಸೆಂಬರ್‌ನಲ್ಲಿ ವಾಹನಗಳ ನೋಂದಣಿಯಲ್ಲಿ ಏರಿಕೆ ಕಂಡುಬಂದಿದೆ ಎಂದು ಒಕ್ಕೂಟದ ಅಧ್ಯಕ್ಷ ವಿಂಕೇಶ್ ಗುಲಾಟಿ ತಿಳಿಸಿದ್ದಾರೆ.
ಉತ್ತಮ ಇಳುವರಿ, ದ್ವಿಚಕ್ರ ವಾಹನ ವಿಭಾಗದಲ್ಲಿ ಉತ್ತಮ ಕೊಡುಗೆಗಳು, ಪ್ರಯಾಣಿಕ ವಾಹನ ಮತ್ತು ದ್ವಿಚಕ್ರ ವಿಭಾಗದಲ್ಲಿ ಹೊಸ ವಾಹನಗಳ ಬಿಡುಗಡೆ ಹಾಗೂ ಜನವರಿಯಿಂದ ಬೆಲೆ ಹೆಚ್ಚಾಗುವ ಆತಂಕದಿಂದಾಗಿಯೂ ಜನರು ಹೆಚ್ಚಿನ ಖರೀದಿ ನಡೆಸಿದ್ದಾರೆ ಎಂದು ಅವರು ವಿವರಿಸಿದ್ದಾರೆ.
ಪ್ರಯಾಣಿಕ ವಾಹನ ಮಾರಾಟದ ಮೇಲೆ ಪೂರೈಕೆಗೆ ಸಂಬಂಧಿಸಿದ ಸಮಸ್ಯೆಗಳು ಇನ್ನೂ ಪರಿಣಾಮ ಬೀರುತ್ತಿವೆ. ಕೆಲವು ಆಯ್ದ ಮಾದರಿಗಳನ್ನು ಪಡೆಯಲು ಗರಿಷ್ಠ ಎಂಟು ತಿಂಗಳವರೆಗೂ ಕಾಯುವಂತಾಗಿದೆ ಎಂದು ತಿಳಿಸಿದ್ದಾರೆ.
ಬೇಡಿಕೆ ಮತ್ತು ಪೂರೈಕೆ ನಡುವಿನ ಅಸಮತೋಲನ ನಿವಾರಣೆಯಾದರೆ ಪ್ರಯಾಣಿಕ ವಾಹನ ವಿಭಾಗವು ಬೆಳವಣಿಗೆ ಕಾಣಲಿದೆ. ಶಾಲೆ ಕಾಲೇಜುಗಳು ಮತ್ತೆ ಆರಂಭವಾಗುತ್ತಿರುವುದರಿಂದ ದ್ವಿಚಕ್ರ ವಾಹನಗಳ ಬೇಡಿಕೆಯಲ್ಲಿಯೂ ನಿಧಾನಗತಿಯ ಚೇತರಿಕೆ ಇರಲಿದೆ.
₹ 12 ಸಾವಿರ ಕೋಟಿ ಮೌಲ್ಯದ ಮೂಲಸೌಕರ್ಯ ಯೋಜನೆಗಳಿಗೆ ಕೇಂದ್ರ ಸರ್ಕಾರ ಅನುಮತಿ ನೀಡಿರುವುದರಿಂದ ವಾಣಿಜ್ಯ ವಾಹನ ವಿಭಾಗಕ್ಕೆ ನೆರವಾಗಲಿದೆ.2021ರ ಏಪ್ರಿಲ್ ನಂತರವೇ ಎಲ್ಲ ವಿಭಾಗಗಳಲ್ಲಿನ ಬೇಡಿಕೆಯು ಚೇತರಿಕೆ ಕಂಡುಕೊಳ್ಳಲಿವೆ ಎಂದೂ ಅವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.