ಬೆಂಗಳೂರು: ಕಳೆದ ತಿಂಗಳು ದೇಶೀಯ ಮಾರುಕಟ್ಟೆಯಲ್ಲಿ ಒಟ್ಟು ಪ್ರಯಾಣಿಕ ವಾಹನ ಮಾರಾಟ ಶೇ 0.28ರಷ್ಟು ಹೆಚ್ಚಳ ಕಂಡಿರುವುದಾಗಿ ಭಾರತೀಯ ವಾಹನ ತಯಾರಿಕಾ ಕಂಪೆನಿಗಳ ಒಕ್ಕೂಟ(ಎಸ್ಐಎಎಂ) ಹೇಳಿದೆ.
2019ರ ಅಕ್ಟೋಬರ್‌ನಲ್ಲಿ 2,85,027 ಪ್ರಯಾಣಿಕ ವಾಹನಗಳು ಮಾರಾಟಗೊಂಡಿವೆ ಎಂದುಎಸ್ಐಎಎಂ ತನ್ನ ವರದಿಯಲ್ಲಿ ತಿಳಿಸಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಮಾರಾಟಗೊಂಡ ಒಟ್ಟು ಪ್ರಯಾಣಿಕ ವಾಹನಗಳ ಸಂಖ್ಯೆ 2,84,223.
ಆದರೆ, ಅಕ್ಟೋಬರ್‌ನಲ್ಲಿ ಪ್ರಯಾಣಿಕ ವಾಹನಗಳ ಉತ್ಪಾದನೆ ಶೇ 21.14ರಷ್ಟು ಇಳಿಕೆಯಾಗಿದ್ದು, ರಫ್ತು ವಹಿವಾಟು ಸಹ ಶೇ 2.18ರಷ್ಟು ಕುಸಿದಿದೆ. ಕಳೆದ ತಿಂಗಳು ಒಟ್ಟು 2,69,186 ಪ್ರಯಾಣಿಕ ವಾಹನಗಳನ್ನು ತಯಾರಿಸಲಾಗಿದೆ.
ಕಳೆದ ತಿಂಗಳು ಮಾರಾಟಗೊಂಡಿರುವ ಒಟ್ಟು ವಾಹನಗಳ ಪೈಕಿ ಪ್ರಯಾಣಿಕ ಕಾರುಗಳ ಪ್ರಮಾಣ1,73,549. ಕಾರುಗಳ ಮಾರಾಟವನ್ನೇ ಪ್ರತ್ಯೇಕವಾಗಿ ಗ್ರಹಿಸಿದರೆ, ಶೇ 6.34ರಷ್ಟು ಮಾರಾಟ ಕುಸಿದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ1,62,343 ಕಾರುಗಳ ಉತ್ಪಾದನೆಯೊಂದಿಗೆ ಶೇ 30.22ರಷ್ಟು ಉತ್ಪಾದನೆ ಇಳಿಕೆಯಾಗಿದೆ.
ಇದನ್ನೂ ಓದಿ:ವಾಹನ ಮಾರಾಟ ಭಾರಿ ಕುಸಿತ
ಪ್ರಯಾಣಿಕ ವಾಹನಗಳು, ವಾಣಿಜ್ಯ ವಾಹನಗಳು ಹಾಗೂ ದ್ವಿಚಕ್ರ ವಾಹನಗಳನ್ನು ಒಳಗೊಂಡಂತೆ ಸ್ಥಳೀಯ ಮಾರುಕಟ್ಟೆಯಲ್ಲಿ ಮಾರಾಟ ಪ್ರಮಾಣಕಳೆದ ವರ್ಷಕ್ಕೆ ಹೋಲಿಸಿದರೆ ಶೇ 12.76ರಷ್ಟು ಇಳಿಕೆಯಾಗಿದೆ. ದ್ವಿಚಕ್ರ ವಾಹನಗಳ ರಫ್ತು ವಹಿವಾಟು ಶೇ 8.03ರಷ್ಟು ಪ್ರಗತಿ ಕಂಡಿದ್ದು, ಉತ್ಪಾದನೆ ಶೇ 26.57ರಷ್ಟು ಕುಸಿದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.