ನವದೆಹಲಿ: ಪ್ರಯಾಣಿಕ ವಾಹನಗಳ ಸಗಟು ಮಾರಾಟ ಪ್ರಮಾಣವು ದೇಶದಲ್ಲಿ ನವೆಂಬರ್ ತಿಂಗಳಿನಲ್ಲಿ ಶೇಕಡ 19ರಷ್ಟು ಇಳಿಕೆ ಆಗಿದೆ. ಸೆಮಿಕಂಡಕ್ಟರ್ ಕೊರತೆಯು ವಾಹನ ಉತ್ಪಾದನೆ ಮೇಲೆ ಪರಿಣಾಮ ಉಂಟುಮಾಡಿದೆ ಎಂದು ಭಾರತೀಯ ಆಟೊಮೊಬೈಲ್ ತಯಾರಕರ ಒಕ್ಕೂಟ (ಎಸ್‌ಐಎಎಂ) ಹೇಳಿದೆ.
ನವೆಂಬರ್ ತಿಂಗಳಿನಲ್ಲಿ ತಯಾರಿಕಾ ಘಟಕಗಳಿಂದ ಡೀಲರ್‌ಗಳಿಗೆ ರವಾನೆ ಆದ ಪ್ರಯಾಣಿಕ ವಾಹನಗಳ ಒಟ್ಟು ಸಂಖ್ಯೆ 2.15 ಲಕ್ಷ. ಇದು ಹಿಂದಿನ ವರ್ಷದ ನವೆಂಬರ್‌ನಲ್ಲಿ 2.64 ಲಕ್ಷ ಆಗಿತ್ತು. ಅದೇ ರೀತಿ, ದ್ವಿಚಕ್ರ ವಾಹನಗಳ ಮಾರಾಟವು ನವೆಂಬರ್‌ನಲ್ಲಿ ಶೇ 34ರಷ್ಟು ಕುಸಿತ ದಾಖಲಿಸಿದೆ.
ಹಿಂದಿನ ವರ್ಷದ ನವೆಂಬರ್‌ನಲ್ಲಿ ಒಟ್ಟು 16 ಲಕ್ಷ ದ್ವಿಚಕ್ರ ವಾಹನಗಳ ಮಾರಾಟ ಆಗಿತ್ತು. ಆದರೆ ಈ ವರ್ಷದ ನವೆಂಬರ್‌ನಲ್ಲಿ ಒಟ್ಟು 10.50 ಲಕ್ಷ ದ್ವಿಚಕ್ರ ವಾಹನಗಳು ಮಾತ್ರ ಮಾರಾಟ ಆಗಿವೆ. ತ್ರಿಚಕ್ರ ವಾಹನಗಳ ಮಾರಾಟವು ಹಿಂದಿನ ವರ್ಷದ ನವೆಂಬರ್‌ಗೆ ಹೋಲಿಸಿದರೆ ಈ ವರ್ಷದ ನವೆಂಬರ್‌ನಲ್ಲಿ ಶೇ 7ರಷ್ಟು ಇಳಿಕೆಯಾಗಿದೆ.
‘ಜಾಗತಿಕ ಮಟ್ಟದಲ್ಲಿ ಸೃಷ್ಟಿಯಾಗಿರುವ ಸೆಮಿಕಂಡಕ್ಟರ್ ಕೊರತೆಯು ಉದ್ಯಮಕ್ಕೆ ಸವಾಲಾಗಿದೆ. ಹಬ್ಬಗಳ ಋತುವಿನಲ್ಲಿ ಒಳ್ಳೆಯ ವಹಿವಾಟು ನಡೆಸುವ ನಿರೀಕ್ಷೆಯನ್ನು ಆಟೊಮೊಬೈಲ್ ಉದ್ಯಮ ಹೊಂದಿತ್ತು. ಆದರೆ, ಈ ವರ್ಷದ ನವೆಂಬರ್ ತಿಂಗಳ ಪ್ರಯಾಣಿಕ ವಾಹನಗಳ ಮಾರಾಟ ಪ್ರಮಾಣವು ಏಳು ವರ್ಷಗಳ ಕನಿಷ್ಠ ಮಟ್ಟಕ್ಕೆ ಇಳಿದಿದೆ. ದ್ವಿಚಕ್ರ ವಾಹನಗಳ ಮಾರಾಟ ಪ್ರಮಾಣವು 11 ವರ್ಷಗಳ ಕನಿಷ್ಠ ಮಟ್ಟವನ್ನು ತಲುಪಿದೆ. ತ್ರಿಚಕ್ರ ವಾಹನಗಳ ಮಾರಾಟವು 19 ವರ್ಷಗಳ ಕನಿಷ್ಠ ಮಟ್ಟದಲ್ಲಿ ಇದೆ’ ಎಂದು ಎಸ್‌ಐಎಎಂ ಮಹಾನಿರ್ದೇಶಕ ರಾಜೇಶ್ ಮೆನನ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.