ADVERTISEMENT

ಭಾರತಕ್ಕೆ ಮರಳಿದ ಫೋರ್ಡ್‌: ಚೆನ್ನೈನ ತಯಾರಿಕಾ ಘಟಕದ ಕಾರ್ಯಾಚರಣೆಗೆ ಪ್ರಸ್ತಾವ

ಪಿಟಿಐ
Published 13 ಸೆಪ್ಟೆಂಬರ್ 2024, 9:30 IST
Last Updated 13 ಸೆಪ್ಟೆಂಬರ್ 2024, 9:30 IST
<div class="paragraphs"><p>ಫೋರ್ಡ್</p></div>

ಫೋರ್ಡ್

   

ನವದೆಹಲಿ: ದೇಶ ತೊರೆದಿದ್ದ ಅಮೆರಿಕ ಮೂಲದ ಕಾರು ತಯಾರಿಕಾ ಕಂಪನಿ ಫೋರ್ಡ್‌, ಭಾರತಕ್ಕೆ ಮರಳುತ್ತಿರುವುದಾಗಿ ಘೋಷಿಸಿದೆ. ರಫ್ತು ಉದ್ದೇಶದೊಂದಿಗೆ ಚೆನ್ನೈನಲ್ಲಿರುವ ತನ್ನ ತಯಾರಿಕಾ ಘಟಕದಲ್ಲಿ ಮರು ಕಾರ್ಯಾಚರಣೆ ನಡೆಸುವುದಾಗಿ ಉದ್ದೇಶ ಪತ್ರವನ್ನು ತಮಿಳುನಾಡು ಸರ್ಕಾರಕ್ಕೆ ಕಂಪನಿ ಸಲ್ಲಿಸಿದೆ.

ಭಾರತದ ಮಾರುಕಟ್ಟೆಗೆ ಕಾರುಗಳನ್ನು ತಯಾರಿಸುವುದನ್ನು ಸ್ಥಗಿತಗೊಳಿಸುವುದಾಗಿ ಫೋರ್ಡ್‌ ಕಂಪನಿಯು 2021ರಲ್ಲಿ ಘೋಷಿಸಿತ್ತು. ಆದರೆ ಇದೀಗ ತಮಿಳುನಾಡು ಸರ್ಕಾರಕ್ಕೆ ಪತ್ರ ಬರೆದಿರುವ ಫೋರ್ಡ್‌, ಚೆನ್ನೈನಲ್ಲಿರುವ ತನ್ನ ತಯಾರಿಕಾ ಘಟಕದ ಮೂಲಕ ಕಾರುಗಳ ಉತ್ಪಾದನೆ ಮತ್ತು ರಫ್ತು ಕಾರ್ಯಾಚರಣೆ ನಡೆಸುವುದಾಗಿ ಉದ್ದೇಶ ಪತ್ರ (LOI)ದಲ್ಲಿ ಹೇಳಿದೆ.

ADVERTISEMENT

ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರ ಇತ್ತೀಚಿನ ಅಮೆರಿಕ ಪ್ರವಾಸದ ಸಂದರ್ಭದಲ್ಲಿ ಫೋರ್ಡ್‌ ಕಂಪನಿಯ ಹಿರಿಯ ಅಧಿಕಾರಿಗಳು ಮಾತುಕತೆ ನಡೆಸಿ, ತಮ್ಮ ಪ್ರಸ್ತಾವವನ್ನು ಸಲ್ಲಿಸಿದ್ದಾರೆ.

‘ಈ ನೂತನ ಪ್ರಸ್ತಾವದ ಮೂಲಕ ಭಾರತದಲ್ಲಿನ ನುರಿತ ತಂತ್ರಜ್ಞರ ನೆರವಿನಿಂದ ಕಾರುಗಳ ತಯಾರಿಕೆಯನ್ನು ಮುಂದುವರಿಸುವುದು ಹಾಗೂ ಆ ಮೂಲಕ ಜಾಗತಿಕ ಮಾರುಕಟ್ಟೆಗೆ ಹೊಸ ಮಾದರಿಯ ಕಾರುಗಳನ್ನು ನೀಡುವ ಕಂಪನಿಯ ಉದ್ದೇಶ ಮುಂದುವರಿಯಲಿದೆ’ ಎಂದು ಫೋರ್ಡ್ ಅಂತರರಾಷ್ಟ್ರೀಯ ಮಾರುಕಟ್ಟೆಯ ಸಮೂಹ ಅಧ್ಯಕ್ಷ ಕೇ ಹಾರ್ಡ್‌ ತಿಳಿಸಿದ್ದಾರೆ.

‘ತಮಿಳುನಾಡಿನಲ್ಲಿರುವ ಜಾಗತಿಕ ಕಾರ್ಯಾಚರಣೆ ಘಟಕದಲ್ಲಿ ಸದ್ಯ 12 ಸಾವಿರ ಉದ್ಯೋಗಿಗಳನ್ನು ಫೋರ್ಡ್‌ ಹೊಂದಿದೆ. ಇದು ಮುಂದಿನ ಮೂರು ವರ್ಷಗಳಲ್ಲಿ 2,500ರಿಂದ 3 ಸಾವಿರದಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಫೋರ್ಡ್‌ ಕಂಪನಿಯಿಂದ ನೇರ ವೇತನ ಪಡೆಯುವ ಅತಿ ಹೆಚ್ಚು ನೌಕರರ ಸಂಖ್ಯೆ ಈ ಘಟಕದಲ್ಲಿದೆ’ ಎಂದಿದ್ದಾರೆ.

ಸುಮಾರು ಮೂರು ದಶಕಗಳ ಕಾಲ ಭಾರತದಲ್ಲಿದ್ದ ಫೋರ್ಡ್‌ 2021ರಲ್ಲಿ ದೇಶವನ್ನು ತೊರೆಯುವ ನಿರ್ಣಯ ಕೈಗೊಂಡಿತ್ತು. ದೇಶದಲ್ಲಿರುವ ಫೋರ್ಡ್‌ನ ಎರಡು ತಯಾರಿಕಾ ಘಟಕದಲ್ಲಿನ ಉತ್ಪಾದನೆಯನ್ನು ಸ್ಥಗಿತಗೊಳಿಸುತ್ತಿರುವುದಾಗಿ ಘೋಷಿಸಿತ್ತು. ಭಾರತದಲ್ಲಿನ ತನ್ನ ಕಾರ್ಯಾಚರಣೆಯ ಪುನರ್‌ರಚನೆಯ ಭಾಗವಾಗಿ ಆಮದು ಮಾಡಿಕೊಳ್ಳುವ ಕಾರುಗಳನ್ನು ಮಾತ್ರ ಮಾರಾಟ ಮಾಡುವುದಾಗಿ ಕಂಪನಿ ಘೋಷಿಸಿತ್ತು.

ಈ ನಿಟ್ಟಿನಲ್ಲಿ ಗುಜರಾತ್‌ನ ಸನಾಂದ್‌ನಲ್ಲಿರುವ ತನ್ನ ತಯಾರಿಕಾ ಘಟಕವನ್ನು ಟಾಟಾ ಮೋಟರ್ಸ್‌ಗೆ ಮಾರಾಟ ಮಾಡಿತು. ಆದರೆ ಚೆನ್ನೈನ ತಯಾರಿಕಾ ಘಟಕವನ್ನು ತಾನು ಹೊಂದಿದ್ದ ಗುರಿಯಂತೆ 2022ರ ದ್ವಿತೀಯ ತ್ರೈಮಾಸಿಕದೊಳಗೆ ಮಾರಲು ಫೋರ್ಡ್‌ಗೆ ಸಾಧ್ಯವಾಗಿರಲಿಲ್ಲ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.