ADVERTISEMENT

ರಸ್ತೆ ಅಪಘಾತಗಳಿಗೆ ಚಾಲಕರು ಪ್ರಮುಖ ಕಾರಣ ಅಲ್ಲ, ಎಂಜಿನಿಯರ್‌ಗಳು: ನಿತಿನ್ ಗಡ್ಕರಿ

ಎಫ್‌ಐಸಿಸಿಐನಿಂದ ಬುಧವಾರ ಹಮ್ಮಿಕೊಂಡಿದ್ದ 6ನೇ ವರ್ಷದ ರಸ್ತೆ ಸುರಕ್ಷತೆ ಪ್ರಶಸ್ತಿ ಪ್ರದಾನ ಮತ್ತು ಸಮಾವೇಶದಲ್ಲಿ ಅವರು ಮಾತನಾಡಿದರು.

ಪಿಟಿಐ
Published 28 ಆಗಸ್ಟ್ 2024, 14:10 IST
Last Updated 28 ಆಗಸ್ಟ್ 2024, 14:10 IST
ನಿತಿನ್‌ ಗಡ್ಕರಿ –ಪಿಟಿಐ ಚಿತ್ರ
ನಿತಿನ್‌ ಗಡ್ಕರಿ –ಪಿಟಿಐ ಚಿತ್ರ   

ನವದೆಹಲಿ: ‘ಯುದ್ಧ, ಭಯೋತ್ಪಾದನೆ ಮತ್ತು ನಕ್ಸಲೀಯರ ವಿಧ್ವಂಸಕ ಕೃತ್ಯದಿಂದ ಸಂಭವಿಸುವ ಸಾವುಗಳಿಗಿಂತಲೂ ದೇಶದಲ್ಲಿ ರಸ್ತೆ ಅಪಘಾತಗಳಲ್ಲಿ ಮೃತಪಡುವವರ ಸಂಖ್ಯೆ ಹೆಚ್ಚಿದೆ’ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್‌ ಗಡ್ಕರಿ ಹೇಳಿದ್ದಾರೆ. 

ಎಫ್‌ಐಸಿಸಿಐನಿಂದ ಬುಧವಾರ ಹಮ್ಮಿಕೊಂಡಿದ್ದ 6ನೇ ವರ್ಷದ ರಸ್ತೆ ಸುರಕ್ಷತೆ ಪ್ರಶಸ್ತಿ ಪ್ರದಾನ ಮತ್ತು ಸಮಾವೇಶದಲ್ಲಿ ಅವರು ಮಾತನಾಡಿದರು. 

ಹೆದ್ದಾರಿ ಅಭಿವೃದ್ಧಿಗೆ ಸಂಬಂಧಿಸಿದಂತೆ ಅವೈಜ್ಞಾನಿಕವಾಗಿ ಸಿದ್ಧಪಡಿಸುವ ವಿಸ್ತೃತ ಯೋಜನಾ ವರದಿಗಳಿಂದ ಹೆದ್ದಾರಿಗಳಲ್ಲಿ ಬ್ಲಾಕ್‌ ಸ್ಪಾಟ್‌ (ಅಪಘಾತ ವಲಯ) ಸಂಖ್ಯೆ ಹೆಚ್ಚುತ್ತಿದೆ. ಇದರಿಂದ ಅಪಘಾತಗಳ ಸಂಖ್ಯೆಯೂ ಏರಿಕೆಯಾಗುತ್ತಿದೆ ಎಂದರು.

ADVERTISEMENT

ದೇಶದಲ್ಲಿ ವಾರ್ಷಿಕವಾಗಿ 5 ಲಕ್ಷ ರಸ್ತೆ ಅಪಘಾತಗಳು ಸಂಭವಿಸುತ್ತಿದ್ದು, 1.5 ಲಕ್ಷ ಜನರು ಮೃತಪಡುತ್ತಿದ್ದಾರೆ. 3 ಲಕ್ಷ ಜನರು ಗಾಯಗೊಳ್ಳುತ್ತಿದ್ದಾರೆ. ಇದರಿಂದ ದೇಶದ ಜಿಡಿಪಿಗೆ ಶೇ 3ರಷ್ಟು ನಷ್ಟವಾಗುತ್ತಿದೆ ಎಂದು ಹೇಳಿದರು.

‘ಪ್ರತಿ ರಸ್ತೆ ಅಪಘಾತಕ್ಕೂ ಚಾಲಕರನ್ನು ಹರಕೆಯು ಕುರಿ ಮಾಡುತ್ತೇವೆ. ಈ ಬಗ್ಗೆ ನಾನು ಸೂಕ್ಷ್ಮವಾಗಿ ಗಮನಿಸಿದ್ದು, ರಸ್ತೆ ಎಂಜಿನಿಯರ್‌ಗಳ ತ‍ಪ್ಪು ಎದ್ದು ಕಾಣುತ್ತದೆ’ ಎಂದು ಹೇಳಿದರು.

ಸುರಕ್ಷತೆಗೆ ಸಂಬಂಧಿಸಿದಂತೆ ಎಲ್ಲಾ ಹೆದ್ದಾರಿಗಳ ಬಗ್ಗೆ ಪರಿಶೀಲನೆ ನಡೆಸುವ ಅಗತ್ಯವಿದೆ. ರಸ್ತೆ ಸಂಚಾರ ನಿಯಮ ಪಾಲಿಸುವ ಮೂಲಕ ಅಪಘಾತಗಳ ಸಂಖ್ಯೆಯನ್ನು ಕಡಿಮೆ ಮಾಡಬೇಕಿದೆ ಎಂದು ಸಲಹೆ ನೀಡಿದರು.

ಅಪಘಾತದಲ್ಲಿ ಗಾಯಗೊಂಡವರ ಜೀವ ಉಳಿಸುವುದಕ್ಕೆ ಸಂಬಂಧಿಸಿದಂತೆ ಆಂಬುಲೆನ್ಸ್‌ ಚಾಲಕರಿಗೆ ಸೂಕ್ತ ತರಬೇತಿ ನೀಡಲಾಗುವುದು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.