ADVERTISEMENT

ಎಲೆಕ್ಟ್ರಿಕ್ ವಾಹನಗಳ ಸಬ್ಸಿಡಿಗೆ ಕತ್ತರಿ: ಗ್ರಾಹಕ, ತಯಾರಕರು ಕಂಗಾಲು

ಇ.ಎಸ್.ಸುಧೀಂದ್ರ ಪ್ರಸಾದ್
Published 20 ಜೂನ್ 2023, 7:56 IST
Last Updated 20 ಜೂನ್ 2023, 7:56 IST
Little electric car
Little electric car   

ಬೆಂಗಳೂರು: 2030ರ ಹೊತ್ತಿಗೆ ದೇಶದ ರಸ್ತೆಗಳಲ್ಲಿ ಸಂಚರಿಸುವ ಶೇ 40ರಷ್ಟು ವಾಹನಗಳು ಬ್ಯಾಟರಿ ಚಾಲಿತವೇ ಆಗಿರಬೇಕು ಎಂಬ ಉದ್ದೇಶ ಹೊಂದಿದ್ದ ಕೇಂದ್ರ ಸರ್ಕಾರ ಆ ನಿಟ್ಟಿನಲ್ಲಿ ಇವಿ ವಾಹನಗಳ ಖರೀದಿಗೆ ಸಬ್ಸಿಡಿ ಘೋಷಿಸಿ ಐದು ವರ್ಷಗಳು ಪೂರ್ಣಗೊಳ್ಳುವುದರೊಳಗಾಗಿ, ಅದನ್ನು ಕಡಿತಗೊಳಿಸಿರುವುದು ವಾಹನ ಕ್ಷೇತ್ರದಲ್ಲಿ ತಲ್ಲಣ ಮೂಡಿಸಿದೆ.

ಜೂನ್ 1ಕ್ಕೆ ಅನ್ವಯವಾಗುವಂತೆ ದ್ವಿಚಕ್ರ ವಾಹನಗಳಲ್ಲಿ ಪ್ರತಿ ಕಿಲೋ ವ್ಯಾಟ್‌ಗೆ ₹10 ಸಾವಿರದಂತೆ ಹಾಗೂ ಗರಿಷ್ಠ ₹15 ಸಾವಿರ ಸಬ್ಸಿಡಿ ಮಾತ್ರ ನೀಡುವುದಾಗಿ ಕೇಂದ್ರ ಹೇಳಿದೆ. ಬ್ಯಾಟರಿ ಚಾಲಿತ ವಾಹನಗಳ ತಯಾರಿಕೆ ಹಾಗೂ ವೇಗದ ಅಳವಡಿಕೆ (ಫೇಮ್‌)ಯ ಭಾಗವಾಗಿ ನೀಡಲಾಗುತ್ತಿರುವ ಈ ಸಬ್ಸಿಡಿ ದರ ಕಡಿತ ಗ್ರಾಹಕರಿಗೆ ಮಾತ್ರವಲ್ಲದೇ, ವಾಹನ ಸವಾರರನ್ನೂ ತಬ್ಬಿಬ್ಬಾಗಿಸಿದೆ.

ಅಂದರೆ ಒಂದು ವಾಹನದ ಎಕ್ಸ್ ಶೋರೂಂ ಬೆಲೆ ₹1 ಲಕ್ಷ ಇದ್ದರೆ, ₹40 ಸಾವಿರ ಸಬ್ಸಿಡಿ ಮೊದಲು ಸಿಗುತ್ತಿತ್ತು. ಆದರೆ ಜೂನ್ 1ರಿಂದ ಇದು ₹1 5ಸಾವಿರವಾಗಿದೆ. ಶೇ 25ರಷ್ಟು ಸಬ್ಸಿಡಿ ತಗ್ಗಿದೆ. 

ADVERTISEMENT

ಏರುತ್ತಿರುವ ಇಂಧನ ಬೆಲೆ ಹಾಗೂ ಸರ್ಕಾರ ನೀಡುತ್ತಿರುವ ಸಬ್ಸಿಡಿಯಿಂದ ಬಹಳಷ್ಟು ವಾಹನ ಸವಾರರು ಪೆಟ್ರೋಲ್ ಎಂಜಿನ್ ಹೊಂದಿರುವ ವಾಹನ ತ್ಯಜಿಸಿ, ಇವಿ ವಾಹನಗಳನ್ನು ಖರೀದಿಸುತ್ತಿದ್ದಾರೆ. ಕಳೆದ ಒಂದು ವರ್ಷದಲ್ಲಿ ಇವಿ ವಾಹನಗಳ ಖರೀದಿ ಸಂಖ್ಯೆ ಹೆಚ್ಚಳವಾಗಿದೆ. 2022ರಿಂದ 2023ರ ಏಪ್ರಿಲ್‌ವರೆಗೆ ದೇಶದಲ್ಲಿ ಒಟ್ಟು 12.14 ಲಕ್ಷ ಇವಿ ವಾಹನಗಳು ಮಾರಾಟವಾಗಿವೆ. 

ವಾಹನ್ ಡ್ಯಾಶ್‌ ಬೋರ್ಡ್‌ನ ದಾಖಲೆ ಪ್ರಕಾರ 2022ರ ಏಪ್ರಿಲ್‌ನಲ್ಲಿ ಅಧಿಕ ವೇಗ ಸಾಮರ್ಥ್ಯದ ಇವಿ ದ್ವಿಚಕ್ರ ವಾಹನಗಳ ಮಾರಾಟ 33 ಸಾವಿರ ಇತ್ತು. ಆದರೆ 2023ರ ಏಪ್ರಿಲ್ ತಿಂಗಳಿನಲ್ಲಿ ಈ ಸಂಖ್ಯೆ 53ಸಾವಿರಕ್ಕೆ ಹೆಚ್ಚಳವಾಗಿದೆ. ಅದರಂತೆಯೇ ಸಾಮಾನು ಸರಂಜಾಮು ಸಾಗಿಸುವ ಇವಿ ವಾಹನಗಳ ಮಾರಾಟವೂ ದ್ವಿಗುಣಗೊಂಡಿದೆ.

ಒಲಾ ಎಲೆಕ್ಟ್ರಿಕ್‌ ಶೇ 72ರಷ್ಟು, ಟಿವಿಎಸ್ ಮೋಟಾರ್ಸ್ ಶೇ 483ರಷ್ಟು, ಆ್ಯಂಪರ್ ಶೇ 21, ಏಥರ್ ಶೇ 216 ಹಾಗೂ ಬಜಾಜ್ ಶೇ 198ರಷ್ಟು ಮಾರಾಟ ಪ್ರಗತಿ ಕಂಡಿದೆ. ಭವಿಷ್ಯದ ವಾಹನ ಎಂದೇ ಪರಿಗಣಿಸಲಾದ ಇವಿ ವಾಹನಗಳ ಕ್ಷೇತ್ರದಲ್ಲಿ ಸಾಕಷ್ಟು ಸಂಶೋಧನೆಗಳು ನಡೆಯುತ್ತಿವೆ. ಜತೆಗೆ ಹೊಸ ತಯಾರಕರೂ ಕಂಪನಿಗಳನ್ನು ಆರಂಭಿಸಿದ್ದಾರೆ. ಇದಕ್ಕೆ ಹೊಸ ಸೇರ್ಪಡೆ ಸಿಂಪಲ್ ಎನರ್ಜಿ. 

ಆದರೆ ಸಬ್ಸಿಡಿ ಕಡಿತದಿಂದಾಗಿ ಇವಿ ವಾಹನ ಕ್ಷೇತ್ರಕ್ಕೆ ಹೊರೆಯಾಗಲಿದೆ ಎಂಬುದನ್ನು ಈಗಾಗಲೇ ಹಲವು ಕಂಪನಿಗಳು ತಮ್ಮ ಅಸಮಾಧಾನ ಹೊರಹಾಕಿವೆ. ಅದರಲ್ಲೂ ದರ ಕೇಂದ್ರಿತ ಮಾರುಕಟ್ಟೆಯಾದ ಭಾರತದಲ್ಲಿ ಸಬ್ಸಿಡಿ ಕಡಿತ ಅಥವಾ ಬೆಲೆ ಏರಿಕೆ ದೊಡ್ಡ ವಿಷಯವಾಗಿರುವುದರಿಂದ, ಸರ್ಕಾರ ತನ್ನ ನಿರ್ಧಾರವನ್ನು ಪುನರ್‌ ಪರಿಶೀಲಿಸಬೇಕು ಎಂಬ ಬೇಡಿಕೆ ವ್ಯಾಪಕವಾಗಿದೆ.

ಇವಿ ವಾಹನಗಳಿಗೆ ಸರ್ಕಾರದ ಸಬ್ಸಿಡಿ

ಕೇಂದ್ರ ಸರ್ಕಾರ ಫೇಮ್‌–2 ಯೋಜನೆಯಡಿಯಲ್ಲಿ ಮೊದಲಿಗೆ ಪ್ರತಿ ಕಿಲೋ ವ್ಯಾಟ್‌ಗೆ ₹10 ಸಾವಿರದಂತೆ ಶೇ 20ರಷ್ಟು ಸಬ್ಸಿಡಿ ಘೋಷಿತ್ತು. ನಂತರ ಇದನ್ನು ಪ್ರತಿ ಕಿಲೋವ್ಯಾಟ್‌ಗೆ ₹15 ಸಾವಿರದಂತೆ ಗರಿಷ್ಠ ಶೇ 40ಕ್ಕೆ ಹೆಚ್ಚಳ ಮಾಡಿತು. ಇದು ವಾಹನ ಖರೀದಿದಾರರಿಗೆ ಸಾಕಷ್ಟು ಪ್ರಯೋಜನವಾಗಿತ್ತು. ವಾಹನಗಳ ಮಾರಾಟದಲ್ಲೂ ಪ್ರಗತಿ ಕಂಡಿತ್ತು. ಸಬ್ಸಿಡಿ ನೀಡಲು ಕೇಂದ್ರ ಸರ್ಕಾರ 2016ರಿಂದ 2019ರವರೆಗೆ ₹795 ಕೋಟಿ ಮೀಸಲಿಟ್ಟಿತ್ತು. ಆದರೆ ಬಳಕೆಯಾಗಿದ್ದು ₹529 ಕೋಟಿ ಮಾತ್ರ. ಸಬ್ಸಿಡಿ ನೀಡಲು ಸದ್ಯ ಕೇಂದ್ರ ಸರ್ಕಾರ ₹10ಸಾವಿರ ಕೋಟಿ ಬಜೆಟ್‌ನಲ್ಲಿ ಮೀಸಲಿಟ್ಟಿದೆ. ಇದರೊಂದಿಗೆ ಆಯಾ ರಾಜ್ಯ ಸರ್ಕಾರಗಳೂ ಇವಿ ವಾಹನಗಳಿಗೆ ಪ್ರತ್ಯೇಕ ನೆರವಿನ ಘೋಷಣೆಗಳನ್ನೂ ಮಾಡಿವೆ. ಇದರೊಂದಿಗೆ ರಾಜ್ಯ ಸರ್ಕಾರ ಗರಿಷ್ಠ 200 ಯೂನಿಟ್‌ವರೆಗೆ (ಬಳಕೆಯ ಸರಾಸರಿ ಆಧರಿಸಿ) ಉಚಿತ ವಿದ್ಯುತ್ ಘೋಷಣೆ ನಂತರ ಇವಿ ಖರೀದಿದಾರರ ಸಂಖ್ಯೆ ಮತ್ತಷ್ಟು ಹೆಚ್ಚಳ ಕಂಡಿದೆ.

ಹಾಗೆ ನೋಡಿದರೆ, ರಾಷ್ಟ್ರೀಯ ವಿದ್ಯುತ್ ವಾಹನಗಳ ಮಿಷನ್ 2020 ಎಂಬ ಯೋಜನೆ ಆರಂಭವಾಗಿದ್ದು 2013ರಲ್ಲಿ. ಇದರ ಭಾಗವಾಗಿ ಇವಿ ವಾಹನಗಳಿಗೆ ಸಬ್ಸಿಡಿ ನೀಡುವ ಕುರಿತು ಕೇಂದ್ರ ಚಿಂತನೆ ನಡೆಸಿತ್ತು. ಈ ಯೋಜನೆ 2015ರಲ್ಲಿ ಅನುಷ್ಠಾನಕ್ಕೆ ಬಂದರೂ, ಹಣ ಬಿಡುಗಡೆಯಾಗಿದ್ದು 2019ರಲ್ಲಿ. 

ಫೇಮ್–2ರ ಸಬ್ಸಿಡಿ ಘೋಷಣೆಯಲ್ಲಿ 7000 ಇ–ಬಸ್‌, 5 ಲಕ್ಷ ತ್ರಿಚಕ್ರ ವಾಹನ, 55 ಲಕ್ಷ ಇತರ ವಾಹನಗಳು ಹಾಗೂ 10ಲಕ್ಷ ದ್ವಿಚಕ್ರ ವಾಹನಗಳು ಸದ್ಯ ಈ ಯೋಜನೆಯ ಲಾಭ ಪಡೆಯಲಿವೆ. 2024ರ ಮಾರ್ಚ್‌ವರೆಗೂ ಈ ಯೋಜನೆ ಮುಂದುವರಿಯಲಿದೆ. 

ಕೇರಳ ಮತ್ತು ಗುಜರಾತ್ ಸರ್ಕಾರಗಳು ಇವಿ ಕಾರುಗಳಿಗೆ ರಸ್ತೆ ತೆರಿಗೆಯಲ್ಲಿ ಶೇ 50ರಷ್ಟು ರಿಯಾಯಿತಿ ಘೋಷಿಸಿದ್ದರೆ, ಉತ್ತರ ಪ್ರದೇಶ ಸರ್ಕಾರ ಶೇ 70ರಷ್ಟು ರಿಯಾಯಿತಿ ನೀಡುತ್ತಿದೆ. ನೋಂದಣಿ ಶುಲ್ಕದಲ್ಲಿ ದೇಶದ ಬಹಳಷ್ಟು ರಾಜ್ಯಗಳು ಒಂದಲ್ಲಾ ಒಂದು ರೂಪದಲ್ಲಿ ರಿಯಾಯಿತಿ ನೀಡುತ್ತಿವೆ. 

ಗುಜರಾತ್‌: ದ್ವಿಚಕ್ರ ವಾಹನಕ್ಕೆ ಗರಿಷ್ಠ ₹20ಸಾವಿರ, ತ್ರಿಚಕ್ರ ವಾಹನಕ್ಕೆ ಗರಿಷ್ಠ ₹50ಸಾವಿರ, ಕಾರುಗಳಿಗೆ ಗರಿಷ್ಠ ₹1.5ಲಕ್ಷ

ಮಹಾರಾಷ್ಟ್ರ: ದ್ವಿಚಕ್ರ ವಾಹನಕ್ಕೆ ಗರಿಷ್ಠ ₹25ಸಾವಿರ, ತ್ರಿಚಕ್ರ ವಾಹನಕ್ಕೆ ಗರಿಷ್ಠ ₹30ಸಾವಿರ, ಕಾರುಗಳಿಗೆ ಗರಿಷ್ಠ ₹2.5ಲಕ್ಷ

ಮೇಘಾಲಯ: ದ್ವಿಚಕ್ರ ವಾಹನ– ₹20ಸಾವಿರ, ಕಾರು– ಗರಿಷ್ಠ ₹60ಸಾವಿರ

ಕರ್ನಾಟಕ: ಸರ್ಕಾರ ಇವಿ ಕಾರುಗಳಲ್ಲಿ ತಯಾರಕರಿಗೆ ನೆರವು ನೀಡುತ್ತಿದೆ

ಆಂಧ್ರ ಪ್ರದೇಶದಲ್ಲಿ: ವಾಹನ ನೋಂದಣಿ ಹಾಗೂ ರಸ್ತೆ ಸುಂಕದಲ್ಲಿ ರಿಯಾಯಿತಿ ಘೊಷಿಸಿವೆ

ತಮಿಳುನಾಡು: ಶೇ 100ರಷ್ಟು ತೆರಿಗೆ ರಿಯಾಯಿತಿ

ನೆರವಿನಿಂದಲೇ ಹೆಚ್ಚು ದಿನ ತಳ್ಳಲಾಗದು

ಇವಿ ಕ್ಷೇತ್ರ ಬಹಳ ದೂರ ಸಾಗಬೇಕಿರುವುದರಿಂದ, ಸರ್ಕಾರ ನೀಡುವ ಸಬ್ಸಿಡಿಯನ್ನು ಹೆಚ್ಚು ದಿನ ನೆಚ್ಚಿಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ ಸಬ್ಸಿಡಿ ರಹಿತ ಮಾರುಕಟ್ಟೆ ಸೃಷ್ಟಿಗೆ ಒತ್ತು ನೀಡಬೇಕಿದೆ ಎಂದು ಎಥರ್‌ ಹೇಳಿದೆ. ಇತರ ವಾಹನ ತಯಾರಕರೂ ಸಬ್ಸಿಡಿ ಕಡಿತಗೊಂಡರೆ ಮಾರಾಟಕ್ಕೆ ಧಕ್ಕೆಯಾಗದು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸದ್ಯ ಒಟ್ಟು ವಾಹನ ಕ್ಷೇತ್ರದ ಶೇ 6ರಷ್ಟಿರುವ ಇವಿ ಕ್ಷೇತ್ರದ ಗಾತ್ರ ಸಬ್ಸಿಡಿ ಹಿಂದಿನಂತೆಯೇ ಮುಂದುವರಿಸಿದರೆ ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ ಎಂಬ ಅಭಿಪ್ರಾಯವನ್ನು ಸ್ಟಾರ್ಟ್ಅಪ್‌ಗಳು ವ್ಯಕ್ತಪಡಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.