ADVERTISEMENT

ಆಟೊಮೊಬೈಲ್‌ ಲೋಕದ ದಿಕ್ಕು ಬದಲಿಸಬಲ್ಲ 6 ಸ್ಟ್ರೋಕ್‌ ಎಂಜಿನ್‌

ಜಯಸಿಂಹ ಆರ್.
Published 25 ಸೆಪ್ಟೆಂಬರ್ 2024, 0:12 IST
Last Updated 25 ಸೆಪ್ಟೆಂಬರ್ 2024, 0:12 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ವಿಶ್ವದ ಬಹುತೇಕ ದೇಶಗಳು ಮತ್ತು ವಾಹನ ತಯಾರಕಾ ಕಂಪನಿಗಳು ವಿದ್ಯುತ್ ಚಾಲಿತ ವಾಹನಗಳತ್ತ (ಇವಿ) ಹೊರಳುತ್ತಿವೆ. ಕಡಿಮೆ ನಿರ್ವಹಣಾ ವೆಚ್ಚ, ಪ್ರತ್ಯಕ್ಷವಾಗಿ ಶೂನ್ಯ ವಾಯುಮಾಲಿನ್ಯದ ಕಾರಣದಿಂದ ಇವಿಗಳಿಗೆ ಒತ್ತು ನೀಡಲಾಗುತ್ತಿದೆ. ಹೀಗೆ ಇಡೀ ಜಗತ್ತು ಇವಿ ಮತ್ತು ಇವಿ ತಂತ್ರಜ್ಞಾನವನ್ನು ಸುಧಾರಿಸುವುದರತ್ತ ಗಮನ ಹರಿಸುತ್ತಿದ್ದರೆ, ಅಲ್ಲೊಂದು–ಇಲ್ಲೊಂದು ಕಂಪನಿಗಳು ಪೆಟ್ರೋಲ್‌–ಡೀಸೆಲ್‌ ಎಂಜಿನ್‌ಗಳ ಕಾರ್ಯಕ್ಷಮತೆಯನ್ನು ಸುಧಾರಿಸಲು ಗಮನ ಹರಿಸುತ್ತಿವೆ. ಇದರ ಮಧ್ಯೆ ಇಡೀ ಇವಿ ಲೋಕಕ್ಕೆ ಸೆಡ್ಡು ಹೊಡೆಯಬಲ್ಲಂಥ ಎಂಜಿನ್‌ ತಂತ್ರಜ್ಞಾನವನ್ನು ಪೋರ್ಶೆ ಕಂಪನಿ ರೂಪಿಸಿದೆ.

ತಾನು ಅಭಿವೃದ್ಧಿಪಡಿಸಿರುವ ‘6 ಸ್ಟ್ರೋಕ್‌’ ಎಂಜಿನ್‌ನ ತಂತ್ರಜ್ಞಾನಕ್ಕೆ ಹಕ್ಕು ಸ್ವಾಮ್ಯ ಪಡೆಯಲು ಕಂಪನಿಯು ಅಮೆರಿಕದಲ್ಲಿ ಈಚೆಗೆ ಅರ್ಜಿ ಸಲ್ಲಿಸಿದೆ. ಈ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ ಕಂಪನಿ ಪೋರ್ಶೆ ಎಂದಾಕ್ಷಣ, ‘ಇದು ಅತಿ ಶ್ರೀಮಂತರ ಕಾರು ಕಂಪನಿ. ಸಾಮಾನ್ಯರಿಗೆ ಇದರಿಂದ ಉಪಯೋಗವೇನು’ ಎಂದು ಮೂಗು ಮುರಿಯುವ ಪ್ರತಿಕ್ರಿಯೆ ವ್ಯಕ್ತವಾಗಿದ್ದೇ ಹೆಚ್ಚು. ಈ ತಂತ್ರಜ್ಞಾನದ ಹೆಗ್ಗಳಿಕೆಗಳನ್ನು ನೋಡುವುದರ ಜತೆಗೆ, ಅದು ಸಿರಿವಂತರ ಕಾರು ಕಂಪನಿ ಎಂಬ ಆಕ್ಷೇಪಕ್ಕೂ ಉತ್ತರ ಕಂಡುಕೊಳ್ಳುವುದು ಹೆಚ್ಚು ಸಮಂಜಸವಾದೀತು.

ADVERTISEMENT

ಪೆಟ್ರೋಲ್‌ ಮತ್ತು ಡೀಸೆಲ್‌ ಎಂಜಿನ್‌ಗಳ ಕಾರ್ಯವಿಧಾನದಲ್ಲಿ ಎರಡು ಪ್ರಮುಖ ಮೂಲ ಮಾದರಿಗಳಿವೆ. ಒಂದು ‘2 ಸ್ಟ್ರೋಕ್‌’ ಮತ್ತು ಇನ್ನೊಂದು ‘4 ಸ್ಟ್ರೋಕ್‌’. ಈ ಎರಡೂ ತಂತ್ರಜ್ಞಾನಗಳು ಅಭಿವೃದ್ಧಿಯಾಗಿದ್ದು 1870–1880ರ ಮಧ್ಯೆ. ಅಂದರೆ ಸುಮಾರು 150 ವರ್ಷಗಳ ಹಿಂದೆ. ಅಲ್ಲಿಂದ ಇಲ್ಲಿಯವರೆಗೆ ಈ ತಂತ್ರಜ್ಞಾನಗಳನ್ನು ಹಲವು ಹಂತಗಳಲ್ಲಿ ಸುಧಾರಿಸಲಾಗಿದೆ. ಅವುಗಳ ಶಕ್ತಿ, ಕಾರ್ಯಕ್ಷಮತೆ ಮತ್ತು ವಾಯುಮಾಲಿನ್ಯ ಕುಗ್ಗಿಸಲು ಟರ್ಬೊಚಾರ್ಜಿಂಗ್‌, ಸೂಪರ್‌ಚಾರ್ಜಿಂಗ್‌, ಡೈರೆಕ್ಟ್‌ ಇಂಜೆಕ್ಷನ್‌ ಮೊದಲಾದ ಅತ್ಯಾಧುನಿಕ ತಾಂತ್ರಿಕತೆಗಳನ್ನು ಬಳಸಿಕೊಳ್ಳಲಾಗಿದೆ. ಈಗ 2 ಸ್ಟ್ರೋಕ್ ಮತ್ತು 4 ಸ್ಟ್ರೋಕ್‌ ಎಂಜಿನ್‌ ತಂತ್ರಜ್ಞಾನದಲ್ಲಿ ಮತ್ತಷ್ಟು ಸುಧಾರಣೆ ಸಾಧ್ಯವೇ ಇಲ್ಲ ಎಂಬ ಹಂತಕ್ಕೆ ಬಂದು ನಿಂತಿದ್ದೇವೆ. ಇದರ ಮಧ್ಯೆಯೇ 4 ಸ್ಟ್ರೋಕ್‌ ಎಂಜಿನ್‌ ಅನ್ನೇ ಸಂಪೂರ್ಣವಾಗಿ ಜಲಜನಕದಿಂದ ಕೆಲಸ ಮಾಡುವಂತೆ ಮಾರ್ಪಡಿಸಲು ವಾಹನ ತಯಾರಕಾ ಕಂಪನಿಗಳು ಸಾವಿರಾರು ಕೋಟಿ ವಿನಿಯೋಗಿಸಿವೆ.

ಇವೆಲ್ಲವುಗಳ ಮಧ್ಯೆ ಆಟೊಮೊಬೈಲ್‌ ಉದ್ಯಮದ ದಿಕ್ಕನ್ನೇ ಬದಲಿಸಬಲ್ಲ ‘6 ಸ್ಟ್ರೋಕ್‌’ ತಂತ್ರಜ್ಞಾನವನ್ನು ಪೋರ್ಶೆ ಅಭಿವೃದ್ಧಿಪಡಿಸಿದೆ.  2 ಸ್ಟ್ರೋಕ್‌ ಎಂಜಿನ್‌ ಒಂದು ಸುತ್ತು ತಿರುಗಲು ಅದರ ಪಿಸ್ಟನ್‌ ಮೇಲಕ್ಕೆ ಒಂದು ಬಾರಿ, ಕೆಳಕ್ಕೆ ಒಂದು ಬಾರಿ ಓಡಾಡುತ್ತದೆ. 4 ಸ್ಟ್ರೋಕ್‌ ಎಂಜಿನ್‌ ಒಂದು ಸುತ್ತು ತಿರುಗಲು ಅದರ ಪಿಸ್ಟನ್‌ ಮೇಲಕ್ಕೆ ಎರಡು ಬಾರಿ, ಕೆಳಕ್ಕೆ ಎರಡು ಬಾರಿ ಓಡಾಡುತ್ತದೆ. 2 ಸ್ಟ್ರೋಕ್‌ಗಿಂತ, 4 ಸ್ಟ್ರೋಕ್‌ ಎಂಜಿನ್‌ ಕಾರ್ಯಕ್ಷಮತೆ ಹೆಚ್ಚು. ಇದೇ ರೀತಿ 6 ಸ್ಟ್ರೋಕ್‌ ಎಂಜಿನ್‌ ಒಂದು ಸುತ್ತು ತಿರುಗಲು ಅದರ ಪಿಸ್ಟನ್‌ ಮೇಲಕ್ಕೆ ಮೂರು ಬಾರಿ, ಕೆಳಕ್ಕೆ ಮೂರು ಬಾರಿ ಓಡಾಡುತ್ತದೆ. ಹೀಗಾಗಿ 2 ಸ್ಟ್ರೋಕ್‌ ಮತ್ತು 4 ಸ್ಟ್ರೋಕ್‌ ಎಂಜಿನ್‌ಗಳಿಗಿಂತ 6 ಸ್ಟ್ರೋಕ್‌ ಎಂಜಿನ್‌ನ ಕಾರ್ಯಕ್ಷಮತೆ ಹೆಚ್ಚು ಇರಲಿದೆ.

ಮೇಲಿನ ವಿವರಣೆ ತೀರಾ ತಾಂತ್ರಿಕಮಟ್ಟದ್ದಾಯಿತು. ಇದನ್ನೇ ಸರಳ ಭಾಷೆಯಲ್ಲಿ, ಉದಾಹರಣೆಗಳ ಮೂಲಕ ಗಮನಿಸೋಣ. 80–90ರ ದಶಕದವರಿಗೆ ಯಮಾಹ ಆರ್‌ಎಕ್ಸ್‌ 100 ಬೈಕ್‌ ಗೊತ್ತಿರಲೇಬೇಕು. ಕಿವಿಗಡಚಿಕ್ಕುವಂತಹ ಶಬ್ದ, ಮೈನವಿರೇಳಿಸುವಂತಹ ವೇಗದ ಈ ಬೈಕ್‌ನಲ್ಲಿ ಇದ್ದದ್ದು 2 ಸ್ಟ್ರೋಕ್‌ 98 ಸಿ.ಸಿಯ ಎಂಜಿನ್‌. ಈ ಎಂಜಿನ್‌ 11–12 ಬಿಎಚ್‌ಪಿ ಶಕ್ತಿ ಉತ್ಪಾದಿಸುತ್ತಿತ್ತು. ಆದರೆ ಪ್ರತಿ ಲೀಟರ್‌ ಪೆಟ್ರೋಲ್‌ಗೆ 40 ಕಿ.ಮೀ.ನ ಆಸುಪಾಸಿನಷ್ಟು ಮೈಲೇಜ್‌ ನೀಡುತ್ತಿತ್ತು. ಆದರಿಂದಾಗುತ್ತಿದ್ದ ವಾಯುಮಾಲಿನ್ಯವೂ ಹೆಚ್ಚು.

ಅದೇ 90ರ ದಶಕದಲ್ಲಿ ಹೀರೊ ಹೊಂಡಾ ಕಂಪನಿಯ ಸಿಡಿ 100, ನಂತರದಲ್ಲಿ ಸ್ಪ್ಲೆಂಡರ್‌ ಬೈಕ್‌ಗಳು ಮಾರುಕಟ್ಟೆಗೆ ಬಂದವು. ಈ ಬೈಕ್‌ಗಳಲ್ಲಿ ಇದ್ದದ್ದು 4 ಸ್ಟ್ರೋಕ್‌ ತಂತ್ರಜ್ಞಾನದ 99 ಸಿ.ಸಿ.ಯ ಎಂಜಿನ್‌. ಈ ಎಂಜಿನ್‌ 7 ಬಿಎಚ್‌ಪಿಯಷ್ಟು ಶಕ್ತಿ ಉತ್ಪಾದಿಸಿದರೂ, ಪ್ರತಿ ಲೀಟರ್‌ ಪೆಟ್ರೋಲ್‌ಗೆ 70–80 ಕಿ.ಮೀ.ನಷ್ಟು ದೂರ ಕ್ರಮಿಸುತ್ತಿದ್ದವು. ಜತೆಗೆ ಇವುಗಳಿಂದಾಗುತ್ತಿದ್ದ ಶಬ್ದ ಮಾಲಿನ್ಯ ಮತ್ತು ವಾಯುಮಾಲಿನ್ಯದ ಪ್ರಮಾಣವೂ ಕಡಿಮೆ.

ಒಂದೇ ಅಳತೆಯ ಸಿಲಿಂಡರ್ ಹೊಂದಿದ್ದರೂ 4 ಸ್ಟ್ರೋಕ್‌ ಎಂಜಿನ್‌ ಉತ್ಪಾದಿಸುವ ಶಕ್ತಿಗಿಂತ ದುಪ್ಪಟ್ಟು ಶಕ್ತಿಯನ್ನು 2 ಸ್ಟ್ರೋಕ್‌ ಎಂಜಿನ್‌ ಉತ್ಪಾದಿಸುತ್ತದೆ. ಆದರೆ 2 ಸ್ಟ್ರೋಕ್‌ ಎಂಜಿನ್‌ ನೀಡುವ ಇಂಧನ ದಕ್ಷತೆಗಿಂತ 4 ಸ್ಟ್ರೋಕ್‌ ಎಂಜಿನ್‌ನ ಇಂಧನ ದಕ್ಷತೆ ದುಪ್ಪಟ್ಟು. ಶಕ್ತಿಯಲ್ಲಿ ಕುಂದಿತು ಎನ್ನುವುದನ್ನು ಬಿಟ್ಟರೆ ಇಂಧನ ದಕ್ಷತೆ, ಶಬ್ದ ಮಾಲಿನ್ಯ, ವಾಯು ಮಾಲಿನ್ಯ, ನಿರ್ವಹಣಾ ವೆಚ್ಚ ಎಲ್ಲದರಲ್ಲೂ 4 ಸ್ಟ್ರೋಕ್‌ ಎಂಜಿನ್‌ನ ಕ್ಷಮತೆಯೇ ಹೆಚ್ಚು. 2 ಸ್ಟ್ರೋಕ್‌ ಮತ್ತು 4 ಸ್ಟ್ರೋಕ್‌ ತಂತ್ರಜ್ಞಾನದ ಎಂಜಿನ್‌ಗಳಲ್ಲಿ ಇಷ್ಟೊಂದು ವ್ಯತ್ಯಾಸವಿದೆಯೆಂದರೆ, 4 ಸ್ಟ್ರೋಕ್‌ ಮತ್ತು 6 ಸ್ಟ್ರೋಕ್‌ ಎಂಜಿನ್‌ಗಳ ನಡುವೆ ಕ್ಷಮತೆಯ ವ್ಯತ್ಯಾಸ ಎಷ್ಟಿರಬಹುದು ಎಂಬುದನ್ನು ಯಾರು ಬೇಕಾದರೂ ಊಹಿಸಬಹುದು. 4 ಸ್ಟ್ರೋಕ್‌ ಎಂಜಿನ್‌ನ ಇಂಧನ ದಕ್ಷತೆಗಿಂತ, 6 ಸ್ಟ್ರೋಕ್‌ ಎಂಜಿನ್‌ನ ಇಂಧನ ದಕ್ಷತೆ ಒಂದು ಪಟ್ಟಿನಷ್ಟಾದರೂ ಹಿಗ್ಗಲಿದೆ. ಪರಿಣಾಮವಾಗಿ ಅದರ ಶಬ್ದ ಮಾಲಿನ್ಯ ಮತ್ತು ವಾಯುಮಾಲಿನ್ಯ ಗಣನೀಯ ಮಟ್ಟದಲ್ಲಿ ಕುಗ್ಗಲಿದೆ. ಹೀಗಾಗಿಯೇ ಇದನ್ನು ಆಟೊಮೊಬೈಲ್‌ ಉದ್ಯಮದ ದಿಕ್ಕು ಬದಲಿಸಬಲ್ಲ ಅನ್ವೇಷಣೆ/ತಂತ್ರಜ್ಞಾನ ಎಂದಿದ್ದು.

ಇನ್ನು ಪೋರ್ಶೆ ಕೇವಲ ಐಷಾರಾಮಿ ಸ್ಪೋರ್ಟ್ಸ್‌ ಕಾರುಗಳಿಗಾಗಿ ಮಾತ್ರ ಎಂಜಿನ್‌ ತಯಾರಿಸುವುದಿಲ್ಲ. ಯೂರೋಪ್‌ನ ಸಣ್ಣ–ಪುಟ್ಟ ಕಾರು ತಯಾರಕಾ ಕಂಪನಿಗಳ ಚಿಕ್ಕ ಕಾರುಗಳಿಗೆ (ಟಾಟಾ ಟಿಯಾಗೊ, ಮಾರುತಿ ಸ್ವಿಫ್ಟ್‌ನಂತಹ) 1,000 ಸಿ.ಸಿಯ, 1,200 ಸಿ.ಸಿಯ ಎಂಜಿನ್‌ಗಳನ್ನು ತಯಾರಿಸಿಕೊಡುತ್ತದೆ. ತನ್ನ ಎಂಜಿನ್‌ ತಂತ್ರಜ್ಞಾನವನ್ನು ಇತರ ಕಂಪನಿಗಳಿಗೂ ಮಾರಾಟ ಮಾಡುತ್ತದೆ. ಹೀಗಾಗಿ ಕೆಲವೇ ವರ್ಷಗಳಲ್ಲಿ 6 ಸ್ಟ್ರೋಕ್‌ ಎಂಜಿನ್‌ ಜನ ಸಾಮಾನ್ಯರ ಕಾರುಗಳಿಗೂ ಬರಲಿದೆ ಎಂದು ನಿರೀಕ್ಷಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.