ನವದೆಹಲಿ: ದೇಶದ ಪ್ರಮುಖ ವಾಹನ ತಯಾರಿಕಾ ಕಂಪನಿಗಳಾದ ಟೊಯೊಟ, ಜೆಎಸ್‌ಡಬ್ಲ್ಯು ಎಂ.ಜಿ. ಮೋಟರ್ ಇಂಡಿಯಾ, ಕಿಯಾ, ಟಿವಿಎಸ್ ವಾಹನಗಳ ಸಗಟು ಮಾರಾಟವು ಆಗಸ್ಟ್‌ನಲ್ಲಿ ಏರಿಕೆಯಾಗಿದೆ. ಆದರೆ ಟಾಟಾ, ಮಾರುತಿ ಸುಜುಕಿ ವಾಹನಗಳ ಮಾರಾಟ ಇಳಿಕೆ ಕಂಡಿದೆ.
‘ಮುಂಬರುವ ಹಬ್ಬದ ಋತುವಿನಲ್ಲಿ ವಾಹನಗಳ ಮಾರಾಟ ಮತ್ತಷ್ಟು ಹೆಚ್ಚಳವಾಗುವ ನಿರೀಕ್ಷೆ ಇದೆ’ ಎಂದು ಟೊಯೊಟ ಕಿರ್ಲೋಸ್ಕರ್ ಮೋಟರ್‌ನ ಮಾರಾಟ ಸೇವಾ ವಿಭಾಗದ ಉಪಾಧ್ಯಕ್ಷ ಶಬರಿ ಮನೋಹರ್ ಭಾನುವಾರ ತಿಳಿಸಿದ್ದಾರೆ.
ಟೊಯೊಟ: ಟೊಯೊಟ ಕಿರ್ಲೋಸ್ಕರ್ ಮೋಟರ್‌ನ ವಾಹನಗಳ ಮಾರಾಟದಲ್ಲಿ ಶೇ 35ರಷ್ಟು ಏರಿಕೆಯಾಗಿದ್ದು, 30,879 ವಾಹನಗಳು ಮಾರಾಟವಾಗಿವೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ 22,910 ವಾಹನಗಳು ಮಾರಾಟವಾಗಿದ್ದವು.
ಕಿಯಾ ಇಂಡಿಯಾ: ಕಿಯಾ ಇಂಡಿಯಾದ 22,523 ವಾಹನಗಳು ಮಾರಾಟವಾಗಿದ್ದು, ಶೇ 17ರಷ್ಟು ಏರಿಕೆ ಕಂಡಿದೆ. ಕಳೆದ ವರ್ಷದ ಆಗಸ್ಟ್‌ನಲ್ಲಿ 19,219 ವಾಹನಗಳು ಮಾರಾಟವಾಗಿದ್ದವು.
ಟಿವಿಎಸ್:
ಟಿವಿಎಸ್ ಮೋಟರ್‌ನ 3.91 ಲಕ್ಷ ವಾಹನಗಳು ಮಾರಾಟವಾಗಿದ್ದು, ಶೇ 13ರಷ್ಟು ಹೆಚ್ಚಳವಾಗಿದೆ. ದೇಶೀಯವಾಗಿ 2.89 ಲಕ್ಷ ದ್ವಿಚಕ್ರ ವಾಹನಗಳು ಮಾರಾಟವಾಗಿದ್ದರೆ, 99,976 ವಾಹನಗಳು ರಫ್ತಾಗಿವೆ.
ಜೆಎಸ್‌ಡಬ್ಲ್ಯು:
ಜೆಎಸ್‌ಡಬ್ಲ್ಯು ಎಂ.ಜಿ. ಮೋಟರ್ ಇಂಡಿಯಾದ ಚಿಲ್ಲರೆ ವಾಹನಗಳ ಮಾರಾಟದಲ್ಲಿ ಶೇ 9ರಷ್ಟು ಏರಿಕೆಯಾಗಿದ್ದು, 4,185 ವಾಹನಗಳು ಮಾರಾಟವಾಗಿವೆ.
ಹುಂಡೈ:
ಹುಂಡೈ ಮೋಟರ್ ಇಂಡಿಯಾದ 63,175 ವಾಹನಗಳು ಮಾರಾಟವಾಗಿವೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ 12ರಷ್ಟು ಇಳಿಕೆಯಾಗಿದೆ. ದೇಶೀಯ ವಾಹನ ಮಾರಾಟದಲ್ಲಿ ಶೇ 8ರಷ್ಟು ಇಳಿಕೆಯಾಗಿದ್ದರೆ, ರಫ್ತು ಪ್ರಮಾಣ ಶೇ 22ರಷ್ಟು ಕುಸಿದಿದೆ.
ಟಾಟಾ ಮೋಟರ್ಸ್:
ಟಾಟಾ ಮೋಟರ್ಸ್‌ನ 71,693 ವಾಹನಗಳು ಮಾರಾಟವಾಗಿವೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ 78,010 ವಾಹನಗಳು ಮಾರಾಟವಾಗಿದ್ದವು. ಈ ಮಾರಾಟ ಪ್ರಮಾಣಕ್ಕೆ ಹೋಲಿಸಿದರೆ ಶೇ 8ರಷ್ಟು ಇಳಿಕೆ ಕಂಡಿದೆ.
ಮಾರುತಿ ಸುಜುಕಿ:
ಮಾರುತಿ ಸುಜುಕಿ ಇಂಡಿಯಾದ ವಾಹನಗಳ ಮಾರಾಟದಲ್ಲಿ ಶೇ 4ರಷ್ಟು ಇಳಿಕೆಯಾಗಿದೆ. ಒಟ್ಟು 1.81 ಲಕ್ಷ ವಾಹನಗಳು ಮಾರಾಟವಾಗಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.