ADVERTISEMENT

ಏನಿದು ‘ಬಿಎಸ್‌–6?’: ವಾಹನ ಖರೀದಿಗೂ ಮುನ್ನ ನಿಮಗಿದು ತಿಳಿದಿರಲಿ

2020ರ ಏಪ್ರಿಲ್‌ನಿಂದ ಜಾರಿಯಾಗಲಿದೆ ಭಾರತ್ ಸ್ಟೇಜ್–6 ವಾಯುಮಾಲಿನ್ಯ ಪರಿಮಾಣ

ಪ್ರಜಾವಾಣಿ ವಿಶೇಷ
Published 16 ಸೆಪ್ಟೆಂಬರ್ 2019, 11:41 IST
Last Updated 16 ಸೆಪ್ಟೆಂಬರ್ 2019, 11:41 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಭಾರತದಲ್ಲಿ 2020ರ ಏಪ್ರಿಲ್‌ 1ರಿಂದ ಭಾರತ್ ಸ್ಟೇಜ್–6 (ಬಿಎಸ್‌–6) ವಾಯುಮಾಲಿನ್ಯ ಪರಿಮಾಣ ಜಾರಿಯಾಗುತ್ತದೆ. ಇದು ವಾಹನಗಳಿಂದಾಗುವ ವಾಯುಮಾಲಿನ್ಯದ ಇಳಿಕೆಗೆ ಕಾರಣವಾಗುತ್ತದೆ ಎನ್ನುವುದರಲ್ಲಿ ಎರಡನೇ ಮಾತಿಲ್ಲ. ಆದರೆ ಕಾರುಗಳ ಮಾರಟ ಕುಸಿತಕ್ಕೆ ಬಿಎಸ್‌–6 ವಾಹನಗಳು ಮಾರುಕಟ್ಟೆಗೆ ಬರಲಿ ಎಂದು ಕಾಯುತ್ತಿರುವುದೂ ಒಂದು ಕಾರಣ ಎಂದು ಕೇಂದ್ರ ಹಣಕಾಸು ಸಚಿವರು ಹೇಳಿದ್ದಾರೆ. ಹಾಗಿದ್ದರೆ ಏನಿದು ಬಿಎಸ್‌–6? ಇಲ್ಲಿದೆ ಸಂಪೂರ್ಣ ಮಾಹಿತಿ.

ಏನಿದು ಬಿಎಸ್‌–6?

ಬಿಎಸ್‌–6 ಎಂಬುದು ಭಾರತ್ ಸ್ಟೇಜ್‌–6 ಎಂಬುದರ ಸಂಕ್ಷಿಪ್ತ ರೂಪ. ವಾಹನಗಳು ಉಗುಳುವ ಹೊಗೆಯಲ್ಲಿರುವ ಮಾಲಿನ್ಯಕಾರಕಗಳ ಪ್ರಮಾಣಕ್ಕೆ ಮಿತಿ ಹೇರುವ ಪರಿಮಾಣವಿದು. ಜಾಗತಿಕ ಮಟ್ಟದಲ್ಲಿ ಇದನ್ನು ಯೂರೋ ಸ್ಟೇಜ್‌ ಎನ್ನಲಾಗುತ್ತದೆ. ಭಾರತದಲ್ಲಿ ಇದನ್ನು ಭಾರತ್ ಸ್ಟೇಜ್ ಎಂದು ಪರಿವರ್ತಿಸಿಕೊಳ್ಳಲಾಗಿದೆ. ಭಾರತ್ ಸ್ಟೇಜ್‌ ಪರಿಕಲ್ಪನೆ ನಮ್ಮ ದೇಶದಲ್ಲಿ 2000ರಲ್ಲಿ (ಬಿಎಸ್‌–1) ಜಾರಿಗೆ ಬಂದಿತು. ಹಂತ–ಹಂತವಾಗಿ ಬಿಎಸ್‌–2, ಬಿಎಸ್‌–3 ಮತ್ತು ಬಿಎಸ್‌–4 ಜಾರಿಗೆ ಬಂದವು. ಈಗ ಬಿಎಸ್‌–4 ಜಾರಿಯಲ್ಲಿದೆ. ವಾಹನಗಳಿಂದಾಗುವ ವಾಯುಮಾಲಿನ್ಯದ ಪ್ರಮಾಣವನ್ನು ಶೀಘ್ರವಾಗಿ ಇಳಿಕೆ ಮಾಡಬೇಕು ಎಂಬ ಉದ್ದೇಶದಿಂದ ಬಿಎಸ್‌–5 ಜಾರಿಯನ್ನು ಕೈಬಿಟ್ಟು, ನೇರವಾಗಿ ಬಿಎಸ್‌–6ಗೆ ಜಿಗಿಯಲಾಗುತ್ತಿದೆ. ವಿಶ್ವದ ಬಹುತೇಕ ಕಡೆ ಈಗಾಗಲೇ ಯೂರೊ–6 ಜಾರಿಯಲ್ಲಿದೆ.

ADVERTISEMENT

ಬಿಎಸ್‌–4 ಮತ್ತು ಬಿಎಸ್‌–6 ನಡುವೆ ವ್ಯತ್ಯಾಸವಿದೆಯೇ?

ಬಿಎಸ್‌ ಎಂಬುದು ಇಂಧನದ ಗುಣಮಟ್ಟವನ್ನೂ ನಿರ್ಧರಿಸುತ್ತದೆ ಮತ್ತು ವಾಹನಗಳು ಹೊರಹಾಕುವ ಮಾಲಿನ್ಯಕಾರಕಗಳ ಮೇಲೂ ಮಿತಿ ಹೇರುತ್ತದೆ. ಬಿಎಸ್‌–4 ವಾಹನಗಳಲ್ಲಿ ಬಿಎಸ್‌–4 ಗುಣಮಟ್ಟದ ಇಂಧನವನ್ನು ಬಳಸಲಾಗುತ್ತದೆ. ಬಿಎಸ್‌–6 ವಾಹನಗಳಲ್ಲಿ ಬಿಎಸ್‌–6 ಇಂಧನವನ್ನೇ ಬಳಸಬೇಕಾಗುತ್ತದೆ. ಬಿಎಸ್‌–4 ಪೆಟ್ರೋಲ್ ಎಂಜಿನ್‌ಗಳ ತಂತ್ರಜ್ಞಾನದಲ್ಲಿ ವ್ಯಾಪಕ ಬದಲಾವಣೆ ಏನೂ ಇರುವುದಿಲ್ಲ. ಹೀಗಾಗಿ ಬಿಎಸ್‌–6 ಪೆಟ್ರೋಲ್ ವಾಹನಗಳ ಬೆಲೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗುವುದಿಲ್ಲ. ಬಿಎಸ್‌–6 ಪೆಟ್ರೋಲ್ ಎಂಜಿನ್‌ಗಳು ಉಗುಳುವ ಹೊಗೆಯಲ್ಲಿನ ಮಾಲಿನ್ಯಕಾರಕಗಳ ಪ್ರಮಾಣದಲ್ಲಿ ಸ್ವಲ್ಪ ಇಳಿಕೆಯಾಗುತ್ತದೆ.

ಆದರೆ, ಡೀಸೆಲ್‌ ಎಂಜಿನ್‌ಗಳ ಕಥೆಯೇ ಬೇರೆ. ಬಿಎಸ್‌–4 ಮತ್ತು ಬಿಎಸ್–6 ಡೀಸೆಲ್‌ ಎಂಜಿನ್‌ಗಳ ಮಧ್ಯೆ ವಿಪರೀತ ಎನ್ನುವಷ್ಟು ವ್ಯತ್ಯಾಸವಿದೆ. ಡೀಸೆಲ್‌ ಎಂಜಿನ್‌ನ ಎಕ್ಸಾಸ್ಟ್‌ ಸಿಸ್ಟಂನಲ್ಲಿ (ಆಡುಮಾತಿನಲ್ಲಿ ಸೈಲೆನ್ಸರ್ ಎನ್ನಲಾಗುತ್ತದೆ) ಡೀಸೆಲ್ ಪರ್ಟಿಕ್ಯುಲೇಟ್ ಫಿಲ್ಟರ್‌–ಡಿಪಿಎಫ್‌ ಅನ್ನು ಅಳವಡಿಸಲಾಗುತ್ತದೆ. ಈ ಸಾಧನದ ಬೆಲೆಯೇ ಲಕ್ಷ ರೂ ದಾಟುತ್ತದೆ. ಹೀಗಾಗಿ ಬಿಎಸ್‌–6 ಡೀಸೆಲ್ ಎಂಜಿನ್‌ ಇರುವ ವಾಹನಗಳ ಬೆಲೆಯೂ ವಿಪರೀತದ ಮಟ್ಟದಲ್ಲಿ ಏರಿಕೆಯಾಗಲಿದೆ. ಅದೇ ರೀತಿ ಡೀಸೆಲ್‌ ಎಂಜಿನ್‌ಗಳು ಉಗುಳುವ ಮಾಲಿನ್ಯಕಾರಕ ಕಣಗಳೂ ಭಾರಿ ಪ್ರಮಾಣದಲ್ಲಿ ಕಡಿಮೆಯಾಗಲಿದೆ.

ಯಾವೆಲ್ಲಾ ಮಾಲಿನ್ಯಕಾರಕಗಳು ಇಳಿಕೆಯಾಗಲಿವೆ?

ಬಿಎಸ್‌–4 ಡೀಸೆಲ್ ಎಂಜಿನ್‌ ಉಗುಳುವ ಹೊಗೆಯಲ್ಲಿ ನೈಟ್ರೊಜನ್ ಆಕ್ಸೈಡ್‌ ಪ್ರಮಾಣವು 250 ಮಿಲಿಗ್ರಾಂಗಳಿಂದ ಬಿಎಸ್‌–6 ಎಂಜಿನ್‌ನಲ್ಲಿ 80 ಮಿಲಿಗ್ರಾಂಗೆ ಇಳಿಕೆಯಾಗಲಿದೆ. ಡೀಸೆಲ್‌ ಕಣಗಳ ಸಂಖ್ಯೆ 25ರಿಂದ 4.5 ಕಣಗಳಿಗೆ ಇಳಿಕೆಯಾಗಲಿದೆ. (ಪ್ರತಿಘನ ಮೀಟರ್‌ ಹೊಗೆಯಲ್ಲಿ ಇರಬಹುದಾದ ಗರಿಷ್ಠ ಕಣಗಳ ಸಂಖ್ಯೆ)

ಪೆಟ್ರೋಲ್‌ ಎಂಜಿನ್‌ಗಳ ಹೊಗೆಯಲ್ಲಿ ಇಂಗಾಲದ ಮಾನಾಕ್ಸೈಡ್‌ ಪ್ರಮಾಣವು 833ರಿಂದ (ಬಿಎಸ್‌–4) 667ಕ್ಕೆ (ಬಿಎಸ್‌–6) ಇಳಿಕೆಯಾಗಲಿದೆ. ಹೈಡ್ರೊಕಾರ್ಬನ್ ಪ್ರಮಾಣ 83 ಕಣಗಳಿಂದ 76 ಕಣಗಳಿಗೆ ಇಳಿಕೆಯಾಗಲಿದೆ.ನೈಟ್ರೊಜನ್ ಆಕ್ಸೈಡ್‌ ಪ್ರಮಾಣವು 80ರಿಮದ 60ಕ್ಕೆ ಇಳಿಕೆಯಾಗಲಿದೆ.

ಬಿಎಸ್‌–6 ಪರಿಮಾಣ ಜಾರಿಗೆ ಬಂದ ನಂತರ ಬಿಎಸ್‌–4 ವಾಹನ ಬಳಸಬಹುದೇ?

ಖಂಡಿತ ಬಳಸಬಹುದು. 2020ರ ಮಾರ್ಚ್‌ 31ರವರೆಗೆ ನೋಂದಣಿಯಾದ ಯಾವುದೇ ಬಿಎಸ್‌–4 ವಾಹನಗಳನ್ನು ಅವುಗಳ ನೋಂದಣಿ ಅವಧಿ ಮುಗಿಯುವವರೆಗೂ ಬಳಸಬಹುದು. ಈಗ ಬಳಕೆಯಲ್ಲಿರುವ ವಾಹನಗಳನ್ನೂ ಅವುಗಳ ನೋಂದಣಿ ಅವಧಿ ಮುಗಿಯುವವರೆಗೂ ಬಳಸಬಹುದು. ನೋದಣಿ ಅವಧಿ ಮುಗಿದ ವಾಹನಗಳ ವಿಲೇವಾರಿಗೆ ಕೇಂದ್ರ ಸರ್ಕಾರವು ‘ವಾಹನ ಗುಜರಿ ಯೋಜನೆ’ ಜಾರಿಗೆ ತರುವ ಪ್ರಸ್ತಾವವಿದೆ.

ಬಿಎಸ್‌–4 ವಾಹನಗಳಲ್ಲಿ ಬಿಎಸ್‌–6 ಇಂಧನ ಬಳಸಬಹುದೇ?

ಬಿಎಸ್‌–6 ಇಂಧನದಲ್ಲಿ ಗಂಧಕದ ಪ್ರಮಾಣ ತೀರಾ ಕಡಿಮೆ ಇರುತ್ತದೆ. ಬಿಎಸ್‌–4 ವಾಹನಗಳಲ್ಲಿ ಬಿಎಸ್‌–6 ಇಂಧನ ಬಳಸುವುದರಿಂದ ಎಂಜಿನ್‌ಗೆ ಯಾವುದೇ ಹಾನಿಯಾಗುವುದಿಲ್ಲ ಎಂದು ತಜ್ಞರು ಹೇಳಿದ್ದಾರೆ. ಈಗ ದೆಹಲಿಯಲ್ಲಿ ಮಾತ್ರ ಬಿಎಸ್‌–6 ಇಂಧನ ಲಭ್ಯವಿದೆ. 2020ರ ಏಪ್ರಿಲ್‌ 1ಕ್ಕೂ ಮುನ್ನ ದೇಶದ ಎಲ್ಲೆಡೆ ಬಿಎಸ್‌–6 ಇಂಧನ ಲಭ್ಯವಿರಲಿದೆ.

ಬಿಎಸ್‌–6 ವಾಹನಗಳಲ್ಲಿ ಬಿಎಸ್‌–4 ಇಂಧನ ಬಳಸಬಹುದೇ?

ಬಿಎಸ್‌–6 ವಾಹನಗಳಲ್ಲಿ ಬಿಎಸ್‌–4 ಇಂಧನ ಬಳಸುವುದರಿಂದ ಎಂಜಿನ್‌ಗೆ ಹಾನಿಯಾಗುವ ಅಪಾಯವಿರುತ್ತದೆ. ಇದು ತಕ್ಷಣವೇ ಪತ್ತೆಯಾಗದಿದ್ದರೂ, ದೀರ್ಘಾವಧಿಯಲ್ಲಿ ಎಂಜಿನ್‌ ಹಾಳಾಗುವ ಅಪಾಯವಿದೆ. ಆದರೆ ಆರಂಭದಿಂದಲ್ಲೇ ಎಂಜಿನ್‌ ಕಾರ್ಯಕ್ಷಮತೆ ಮತ್ತು ಇಂಧನ ದಕ್ಷತೆ ಕಡಿಮೆ ಇರಲಿದೆ. ಅಲ್ಲದೆ ವಾಯುಮಾಲಿನ್ಯದ ಪ್ರಮಾಣವೂ ಅಧಿಕವಾಗೇ ಇರಲಿದೆ. ಕಿಯಾ ಮೋಟರ್ಸ್‌ ಈಚೆಗೆ ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿರುವ ಸೆಲ್ಟೋಸ್‌ ಎಸ್‌ಯುವಿ ಬಿಎಸ್‌–6 ಎಂಜಿನ್‌ ಹೊಂದಿದೆ. ಇದರಲ್ಲಿ ಬಿಎಸ್‌–4 ಇಂಧನ ಬಳಸುವುದರಿಂದ ಯಾವುದೇ ಹಾನಿ ಇಲ್ಲ ಎಂದು ಕಂಪನಿ ಹೇಳಿದೆ. ಆದರೆ ಬಿಎಸ್‌–6 ವಾಹನಗಳಲ್ಲಿ ಬಿಎಸ್‌–4 ಇಂಧನ ಬಳಸುವುದರಿಂದ ಎಂಜಿನ್‌ಗೆ ಹಾನಿಯಾಗುತ್ತದೆ ಎಂದು ಹುಂಡೈ ಹೇಳಿದೆ.

ಹೀಗಾಗಿಯೇ ಹಲವು ಕಂಪನಿಗಳು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಿಎಸ್‌–6 ಎಂಜಿನ್‌ ಇರುವ ವಾಹನಗಳನ್ನು ಬಿಡುಗಡೆ ಮಾಡಿದ್ದರೂ, ಭಾರತದಲ್ಲಿ ಅದೇ ವಾಹನಗಳ ಬಿಎಸ್–4 ಅವತರಣಿಕೆಗಳನ್ನು ಮಾತ್ರ ಮಾರಾಟ ಮಾಡುತ್ತಿವೆ.

ಬಿಎಸ್‌–6 ವಾಹನಗಳು ದುಬಾರಿಯಾಗಿರಲಿವೆಯೇ?

ಬಿಎಸ್‌–6 ವಾಹನಗಳು ಖಂಡಿತವಾಗಿಯೂ ಬಿಎಸ್–4 ವಾಹನಗಳಿಗಿಂತ ದುಬಾರಿ ಆಗಿರಲಿವೆ. ಪೆಟ್ರೋಲ್ ಎಂಜಿನ್‌ ವಾಹನಗಳ ಬೆಲೆ ಅಲ್ಪ ಪ್ರಮಾಣದಲ್ಲಿ ಏರಿಕೆಯಾಗಲಿದೆ. ಡೀಸೆಲ್‌ ವಾಹನಗಳ ಬೆಲೆ ₹ 1.5 ಲಕ್ಷದಿಂದ ₹ 2 ಲಕ್ಷದಷ್ಟು ಏರಿಕೆಯಾಗಲಿದೆ. ಕೆಲವು ವರ್ಗದ ಡೀಸೆಲ್ ವಾಹನಗಳ ಬೆಲೆ ₹ 2 ಲಕ್ಷಕ್ಕಿಂತಲೂ ಹೆಚ್ಚು ಏರಿಕೆಯಾಗವ ಸಾಧ್ಯತೆ ಇದೆ. ಕೆಲವು ಕಂಪನಿಗಳು ತಾವು ಸಣ್ಣ ಡೀಸೆಲ್ ಕಾರುಗಳನ್ನು ತಯಾರಿಕೆಯನ್ನು ನಿಲ್ಲಿಸುತ್ತೇವೆ ಎಂದು ಈಗಾಗಲೇ ಘೋಷಿಸಿವೆ.

ಎಲ್ಲಾ ಟ್ರ್ಯಾಕ್ಟರ್‌ಗಳು ಡೀಸೆಲ್‌ ಎಂಜಿನ್ ಹೊಂದಿವೆ. ಹೀಗಾಗಿ ಬಿಎಸ್‌–6 ಟ್ರ್ಯಾಕ್ಟರ್‌ಗಳ ಬೆಲೆಯೂ ಭಾರಿ ಪ್ರಮಾಣದಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ. ಅರ್ಥ್‌ ಮೂವರ್‌ ವಾಹನಗಳ (ಜೆಸಿಬಿ, ಬ್ಯಾಕ್‌ ಲೋಡರ್, ಹಿಟಾಚಿ ಮತ್ತಿತ್ತರ ಯಂತ್ರೋಪಕರಣ ವಾಹನಗಳು) ಬೆಲೆಯೂ ಭಾರಿ ಪ್ರಮಾಣದಲ್ಲಿ ಏರಿಕೆಯಾಗಲಿದೆ.

ಪೆಟ್ರೋಲ್‌/ಡೀಸೆಲ್ ವಾಹನಗಳಿಗಿಂತ ಎಲೆಕ್ಟ್ರಿಕಲ್ ವಾಹನ ಖರೀದಿಸುವುದು ಲಾಭವೇ?

ಈಗಿನ ಸಂದರ್ಭದಲ್ಲಿ ಎಲೆಕ್ಟ್ರಿಕಲ್ (ವಿದ್ಯುತ್ ಚಾಲಿತ) ವಾಹನಗಳ ಖರೀದಿ ಖಂಡಿತಾ ಲಾಭಕರವಲ್ಲ. ಒಮ್ಮೆ ಚಾರ್ಜ್ ಮಾಡಿದರೆ ಸುಮಾರು 100 ಕಿ.ಮೀ. ಕ್ರಮಿಸುವ ಸಣ್ಣ ವಿದ್ಯುತ್ ಚಾಲಿತ ಕಾರಿನ ಬೆಲೆ ₹ 10 ಲಕ್ಷ ದಾಟುತ್ತದೆ. ಈ ಕಾರಿನ ಪ್ರಯಾಣ ತೀರಾ ಅಗ್ಗ. ಆದರೆ ಖರೀದಿಗೆ ಭಾರಿ ಮೊತ್ತ ವ್ಯಯಿಸಬೇಕಾಗುತ್ತದೆ. ಒಮ್ಮೆ ಚಾರ್ಜ್ ಮಾಡಿದರೆ 200–300 ಕಿ.ಮೀ. ದೂರ ಕ್ರಮಿಸುವ ಕಾರುಗಳು ಬೆಲೆ ₹ 35 ಲಕ್ಷ ದಾಟುತ್ತದೆ. ಅಲ್ಲದೆ ದೇಶದ ಎಲ್ಲೆಡೆ ಚಾರ್ಜಿಂಗ್ ಸ್ಟೇಷನ್ ಲಭ್ಯವಿಲ್ಲ. ವಿದ್ಯುತ್ ಚಾಲಿತ ವಾಹನಗಳ ಬಳಕೆ ಹೆಚ್ಚಬೇಕೆಂದರೆ ಅವುಗಳ ಖರೀದಿ ಬೆಲೆ ಇಳಿಬೇಕು, ಬ್ಯಾಟರಿಗಳ ಬೆಲೆ ಭಾರಿ ಪ್ರಮಾಣದಲ್ಲಿ ಇಳಿಯಬೇಕು. ಎಲ್ಲಕ್ಕಿಂತ ಮುಖ್ಯವಾಗಿ ದೇಶದ ಎಲ್ಲೆಡೆ ಫಾಸ್ಟ್‌ ಚಾರ್ಜಿಂಗ್ ಸ್ಟೇಷನ್‌ಗಳು ಲಭ್ಯವಿರಬೇಕು. ಅಲ್ಲಿಯವರೆಗೆ ಪೆಟ್ರೋಲ್‌/ಡೀಸೆಲ್ ಕಾರುಗಳ ಖರೀದಿಯೇ ಲಾಭಕರ.

ಅಲ್ಲದೆ, ‘ಬಿಎಸ್‌–6 ಪರಿಮಾಣ ಜಾರಿಗೆ ಬರುವುದರಿಂದ ಡೀಸೆಲ್‌ ಕಾರುಗಳ ಮತ್ತು ಡೀಸೆಲ್ ವಾಹನಗಳನ್ನು ನಿಷೇಧಿಸುವುದರಲ್ಲಿ ಅರ್ಥವಿಲ್ಲ. ಅವುಗಳ ಮಾರಾಟವನ್ನು ನಿಷೇಧಿಸುವುದಿಲ್ಲ’ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಕಳೆದ ವಾರವಷ್ಟೇ ಘೋಷಿಸಿದ್ದಾರೆ. ಹೀಗಾಗಿ ಇಂದಿನ ಪರಿಸ್ಥಿತಿಯಲ್ಲಿ ಡೀಸೆಲ್/ಪೆಟ್ರೋಲ್ ವಾಹನಗಳ ಖರೀದಿಯೇ ಉತ್ತಮ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.