ವಾಷಿಂಗ್ಟನ್: ಡೆಟ್ರಾಯಿಟ್ ಆಟೊ ಶೋದಲ್ಲಿ ಅಲೆಫ್ ಏರೋನಾಟಿಕ್ಸ್ ಸಂಸ್ಥೆ ತಯಾರಿಸಿದ ಜಗತ್ತಿನ ಮೊದಲ ಹಾರುವ ಕಾರನ್ನು ಅನಾವರಣಗೊಳಿಸಲಾಗಿದೆ. ಈ ಕಾರು ಈ ವರ್ಷದ ಜೂನ್‌ನಲ್ಲಿ ಕಾನೂನು ಅನುಮೋದನೆಯನ್ನೂ ಪಡೆದಿದೆ.
ಈ ಹಾರುವ ಕಾರಿನಲ್ಲಿ ಇಬ್ಬರು ಕುಳಿತುಕೊಳ್ಳಬಹುದು. ಇದರ ಬೆಲೆ $299,999 ಅಂದರೆ ಸರಿಸುಮಾರು ₹2.46 ಕೋಟಿ ಆಗಿದೆ. ಸಂಪೂರ್ಣ ಎಲೆಕ್ಟ್ರಿಕ್ ಕಾರ್ ಇದಾಗಿದೆ. ಕಾರು ಆಗಸದಲ್ಲಿ ಚಲಿಸುವಾಗ ಚಾಲಕ ಸ್ಥಿರವಾಗಿರುವಂತೆ ಕಾರಿನ ಕ್ಯಾಬಿನ್ ಅನ್ನು ವಿನ್ಯಾಸಗೊಳಿಸಲಾಗಿದೆ. ಒಂದು ಬಾರಿ ಸಂಪೂರ್ಣ ಚಾರ್ಜ್ ಆದರೆ ಆಗಸದಲ್ಲಿ 177 ಕಿ.ಮೀ., ರಸ್ತೆ ಮೇಲೆ 322 ಕಿ.ಮೀ ದೂರ ಚಲಿಸಬಲ್ಲದು. ವಿಶೇಷವೆಂದರೆ ಈ ಕಾರಿನಲ್ಲಿ ಕುಳಿತಿರುವವರು 180 ಡಿಗ್ರಿಯಷ್ಟು ಸುತ್ತಲಿನ ಪ್ರದೇಶವನ್ನು ನೋಡಬಹುದಾಗಿದೆ.
ಕಾರ್ ಕಂಪನಿಯ ಸಂಸ್ಥಾಪಕ ಮತ್ತು ಸಿಇಒ ಜಿಮ್ ಡುಖೋವ್ನಿ ಈ ಬಗ್ಗೆ, ‘ಈಗ ಅನಾವರಣಗೊಳಿಸಿರುವ ಕಾರು ಗ್ರಾಹಕರಿಗೆ ಮಾರಾಟ ಮಾಡುವ ಅಂತಿಮ ಆವೃತ್ತಿಯಲ್ಲ. ಗ್ರಾಹಕರಿಗೆ ದೊರಕುವ ಸಮಯವೂ ಹತ್ತಿರವಿದೆ. ಈ ಕಾರನ್ನು ಆಗಸದಲ್ಲಿ ಹೇಗೆ ಡ್ರೈವ್ ಮಾಡಬಹುದು ಎನ್ನುವುದನ್ನು ತೋರಿಸಿಕೊಡುತ್ತೇನೆ’ ಎಂದಿದ್ದಾರೆ.
ಈ ವರ್ಷ ಜೂನ್‌ನಲ್ಲಿ ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್‌ನಿಂದ ವಿಶೇಷ ಏರ್‌ವರ್ತಿನೆಸ್ ಪ್ರಮಾಣೀಕರಣವನ್ನು ಈ ಕಾರು ಪಡೆದುಕೊಂಡಿದೆ. ಈ ಅನುಮೋದನೆಯಿಂದಾಗಿ, ಅಲೆಫ್ ಏರೋನಾಟಿಕ್ಸ್ ಸಂಸ್ಥೆಯು ರಸ್ತೆ ಮತ್ತು ಗಾಳಿಯಲ್ಲಿ ಹಾರುವ ಕಾರನ್ನು ಪರೀಕ್ಷಿಸಲು ಸಾಧ್ಯವಾಗುತ್ತದೆ.
ಅಲೆಫ್ ಏರೋನಾಟಿಕ್ಸ್ ಸಂಸ್ಥೆಯು 2022ರಲ್ಲಿಯೇ ಕಾರು ಖರೀದಿಗೆ ನೋಂದಣಿ ಆರಂಭಿಸಿದ್ದು, ಈಗಾಗಲೇ 500 ಬುಕಿಂಗ್ ಆಗಿದೆ ಎಂದು ವರದಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.