ADVERTISEMENT

ಅಮಿತ ನೆನಪುಗಳ ಕೌದಿ

​ಪ್ರಜಾವಾಣಿ ವಾರ್ತೆ
Published 25 ಮೇ 2024, 0:33 IST
Last Updated 25 ಮೇ 2024, 0:33 IST
   

ಕೌದಿ,ಇದನ್ನ ಹೊಲಿಯುತ್ತಿರುವ ಈ ಗಳಿಗೆ ನನ್ನ ಅಜ್ಜಿ ನೆನಪಾಗ್ತಾ ಇದ್ದಾರೆ. ಅವರು ಶಿರಸಿಯ ಪರಿಚಿತ ಟೈಲರ್ ಅಂಗಡಿಯಿಂದ ಚೂರು ಚಿಂದಿ ಬಟ್ಟೆ ತಗೊಂಡು ಬಂದು ಅವನ್ನು ಅಳತೆ ಬಣ್ಣಗಳ ಅನುಗುಣವಾಗಿ ಜೋಡಿಸಿ ಪುಟ್ಟ ಪೊಟ್ಲಿ ಮಾಡಿ ತಮ್ಮ ಎಲೆ ಅಡಿಕೆ ಸಂಚಿಯಲ್ಲಿ ಇಟ್ಟುಕೊಳ್ಳುತ್ತಿದ್ದರು ಪುರುಸೊತ್ತಾದಾಗೆಲ್ಲ ಪುಟ್ಟ ಪುಟ್ಟ ಪಟ್ಟಿ ಹೊಲಿದು ಇಡುತ್ತಿದ್ದರು. ಆ ಬಟ್ಟೆಯ ಗಂಟಿಗೆ ಎಲೆ ಅಡಿಕೆ ಹೊಗೆಸೊಪ್ಪು ಸುಣ್ಣ ಬೆರೆತ ನವಿರಾದ ಕವಳದ ಘಮ.

ಹಾಗೇ ಒಮ್ಮೆ ನಾನು ಅಜ್ಜಿ ಹತ್ತಿರದ ಕುಸೂರು ಎಂಬ ಹಳ್ಳಿಗೆ ಹೋಗಿದ್ದೆವು ಅಲ್ಲಿ ವಿನೋಬಾ ಭಾವೆ ಅವರ ಅನುಯಾಯಿ ಕರ್ಮಯೋಗಿಯಂತೆ ಬದುಕುತ್ತಿದ್ದ ರಮಾನಂದ್ ಮಾಮನ ಮನೆಯಲ್ಲಿ ದಿನಪೂರ್ತಿ ಇದ್ದು ಸಂಜೆ ವಾಪಸ್ ಬರುವಾಗ ಕೊಟ್ಟ ಅವರ ತೋಟದ ಪೇರಲೆ ಹಣ್ಣುಗಳನ್ನು ಅಜ್ಜಿ ಉಡಿಯಲ್ಲಿ ಕಟ್ಟಿ ಕೊಂಡಿದ್ದರು.

ವಾಪಸ್ ಮುಂಡಗೋಡ ಬರಲು ಬಸ್ ಸಿಗಲೇ ಇಲ್ಲ. ಕತ್ತಲಾಗುತ್ತಿತ್ತು ನನಗೊಂಚೂರು ಭಯವೂ ಶುರು ಆಯಿತು. ಆಗ ಯಾವುದೋ ಒಂದು ಇಟ್ಟಿಗೆ ಸಾಗಿಸುತ್ತಿದ್ದ ಲಾರಿಯವ ನಿಲ್ಲಿಸಿ 'ಬರ್ರಿ ಅವ್ವಾರ' ಎಂದು ಹತ್ತಿಸಿಕೊಂಡಿದ್ದ.

ADVERTISEMENT

ಅಜ್ಜಿಯ ಮಡಿಲಲ್ಲಿ ಮುಖ ಮುಚ್ಚಿಕೊಂಡು, ಮಲಗಿದಂತೆ ನಟಿಸುತ್ತಿದ್ದೆ. ಆಗ ಅಜ್ಜಿಯ ಸೀರೆಯಿಂದ ಹೊಮ್ಮುತ್ತಿದ್ದ ಆ ಪೇರಲೆ ಹಣ್ಣಿನ ಘಮ ಮತ್ತು ತಿಳಿಯಾಗಿ ಹರಡಿಕೊಂಡ ಪೆಟ್ರೋಲ್ ವಾಸನೆ ಮಾತ್ರ ನನ್ನ ಜೊತೆ ಮಾತಿಗಿಳಿದಿದ್ದವು.

ಕೆಲ ವರ್ಷಗಳ ನಂತರ ಅಜ್ಜಿಯ ಆ ಸೀರೆ ಹಳೆಯದಾಯಿತು, ಗೊದಡಿಯ ಹಿಂಬದಿಗೆ ಆಯವಾಯಿತು. ಆ ಕೌದಿಯನ್ನು ನೋಡಿದಾಗ ಹೊದ್ದುಕೊಂಡಾಗ, ಮೂಸಿದಾಗ ನನಗೆ ಪೇರಳೆಹಣ್ಣಿನ ಘಮ ಮತ್ತು ಇಟ್ಟಿಗೆಯ ಲಾರಿಯಲ್ಲಿ ಪಸರಿಸಿದ್ದ ಪೆಟ್ರೋಲ್ ವಾಸನೆಯೇ ಬರುತ್ತಿತ್ತು.

ನಾ ಹೊಂದಿಸಿದ ಈ ಬಟ್ಟೆಯ ಚೌಕಗಳು ಅವನ್ನು ಜೋಡಿಸಿದ ಸಾವಿರಾರು ಹೊಲಿಗೆಗಳು ಈ ಪುಟ್ಟ ಕೌದಿಯಾಗಿ ರೂಪುಗೊಳ್ಳುತ್ತ ಏನೇನೆಲ್ಲ  ನೆನಪಾಯಿತು. ಎಷ್ಟೆಲ್ಲ ನೆನಪ ಮಾಡಿತು.

ಕಳೆದ ಬೇಸಿಗೆಯ ರಜೆಯಲ್ಲಿ ಮಗಳನ್ನು ಬ್ಯುಸಿ ಇಡಲು ನಾನು ಆಯ್ದು ಕೊಂಡಿದ್ದು ಅಜ್ಜಿ ಮಾಡುತ್ತಿದ್ದ ಇದೇ ಕೌದಿಯನ್ನ. ನನ್ನ ಅಕ್ಕನಂತಿರುವ ಸ್ನೇಹಿತೆ, ಅನು ಪಾವಂಜೆ ಅವರ ವಿವಿಧ ರೀತಿಯ ಕೌದಿಯ ಪೋಸ್ಟ್ ಗಳನ್ನು ನೋಡಿ ನನಗೆ ಅಜ್ಜಿ ಆಕೆಯ ಸಂಚಿ, ಬಣ್ಣ ಬಣ್ಣದ ಬಟ್ಟೆ, ಅವನ್ನು ಹರಿದು ಹಂಚಿ ಹೊಂದಿಸಿ,ಬೇರೆ ಬೇರೆ ಆದ ಆ ಬಟ್ಟೆಯ ತುಂಡುಗಳನ್ನು ಕೌದಿಯ ಚೌಕಟ್ಟಿನಲ್ಲಿ ಹೊಂದಿಸುವುದು ಅದು ಪೂರ್ತಿಯಾದಾಗ ಸಿಗುವ ಆತ್ಮ ತೃಪ್ತಿಯನ್ನು ಅನುಭವಿಸುವ ಉತ್ಕಟತೆ.

ಮಗಳೊಂದಿಗೆ, ಕುಳಿತು ಒಂದಷ್ಟು ಬಳಸದ ಬಟ್ಟೆಗಳನ್ನ ಚೌಕ ಆಯತದ ಆಕಾರದಲ್ಲಿ ಕತ್ತರಿಸಿ, ಅವನ್ನು ಜೋಡಿಸಿ ಇಟ್ಟು. ಎರಡು ಕೌದಿ ತಯಾರಿಸುವ ಪ್ಲಾನ್ ಮಾಡಿ, ಇಬ್ಬರೂ ಒಟ್ಟಿಗೆ ಶುರು ಮಾಡಿದೆವು.

ಆಕೆಯದು ಇಟ್ಟಿಗೆ ಜೋಡಿಸಿದಂತೆ, ಚದುರಂಗದ ಮಣೆಯಂತೆ. ನನ್ನದು ಹಚ್ಚಿದ ಕೌದಿ ಒಂದು ಚೌಕದಲ್ಲಿ ಎಲ್ಲ ಬಣ್ಣದ ಬಟ್ಟೆಗಳನ್ನ ಎಲ್ಲೂ ಜಾಗ ಬಿಡದಂತೆ ತುಂಬುವುದು.

ಕೌದಿಯಲಿ ಬಳಸುವ ಪ್ರತಿ ಬಟ್ಟೆ ಚೂರಿಗೂ ಒಂದು ಕಥೆ ಇದೆ. ಎಂದೋ ಖುಷಿಯಲ್ಲಿ ಧರಿಸಿದ ಬಟ್ಟೆಯ ಚೌಕ, ದುಃಖದಲ್ಲಿ ಹಾಕಿದ್ದು, ಯಾರದೋ ಮದುವೆಗೆ ಹೊಲಿಸಿದ್ದು, ಬಾಣಂತನಕ್ಕೆ ಹಾಕಿಕೊಂಡ ನೈಟಿ, ಕೂಸು ಹುಟ್ಟಿದಾಗ ಬಳಸಿದ ಬಿಳಿ ಚೌಕಗಳು. ಅಮ್ಮ ಅತ್ತೆ ಅಜ್ಜಿಯರ ಸೀರೆ, ನಾದಿನಿ ಅಂದೇನೋ ಬಿಟ್ಟುಹೋದ ಹಳೆಯ ಶಾಲು ಮಕ್ಕಳ ಬಟ್ಟೆ, ಆ ಬಟ್ಟೆ ಹಾಕಿದಾಗ ಜರುಗಿದ ಘಟನೆಗಳು ಎಲ್ಲವೂ ಆ ಕೌದಿ ಚೌಕಟ್ಟಿನಲ್ಲಿ ಸುರಕ್ಷಿತ. ಮಗಳಿಗೂ ಈ ಆಟ ಖುಷಿ ಕೊಟ್ಟಿತ್ತು, ಇಬ್ಬರೂ ಒಟ್ಟಿಗೆ ಕೂತು ಆಗೀಗ ಈ ಕೌದಿಯೆಂಬ ಖುಷಿಗೆ ತೆರೆದುಕೊಂಡಿದ್ದು ಒಂದು ಅನನ್ಯ ಅನುಭವ.

ಕೌದಿ ಮಾಡುವಷ್ಟು ಹೊತ್ತು ಎರಡೂ ಕೈ ಮತ್ತು ಮನಸ್ಸೂ ಬ್ಯುಸಿ ಇರುವುದರಿಂದ ಸುಖಾ ಸುಮ್ಮನೆ ಫೋನ್ ಸ್ಕ್ರಾಲ್ ಮಾಡೋದು ನಿಂತು ಹೋಗುತ್ತದೆ. ಈ ನಿಟ್ಟಿನಲ್ಲಿ ಕೂಡ ಕೌದಿ ನಮ್ಮನ್ನು ಬೆಚ್ಚಗೆ ಕಾಯುತ್ತದೆ.

ಒಮ್ಮೆಲೇ ಮಾಡಿ ಮುಗಿಸಬೇಕು ಎನ್ನುವ ಒತ್ತಡವೂ ಇಲ್ಲದ ಕಾರಣ ಮನಸು ಮತ್ತೆ ಮತ್ತೆ ಬೇಕೆನಿಸಿದಾಗ ಈ ಬಣ್ಣದ ಬಟ್ಟೆ ಚೂರು ಮತ್ತು ಸೂಜಿ ದಾರಗಳ ಮಾಯೆಗೆ ಮರಳುತ್ತದೆ. ಇದೊಂದು ರೀತಿಯ ತವರು ಮನೆ ಮೋಹದಂತೆ. 

ಈಗ ಹೇಳಿ, ನೀವೂ ಯಾಕೆ ಒಮ್ಮೆ ಕೌದಿ ಮಾಡಲು ಪ್ರಯತ್ನ ಪಡಬಾರದು?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.