ಕಾಲ್ಗೆಜ್ಜೆ ಎಂದಾಕ್ಷಣ ಗಲ್ ಗಲ್ ಎಂಬ ಸಪ್ಪಳದೊಂದಿಗೆ ಗುಂಗು ಹಿಡಿಸುವ ಕಾಲ ಹೊರಟು ಹೋಯಿತು. ಸದ್ದಿಲ್ಲದ ಕಾಲ್ಗೆಜ್ಜೆಗಳು, ಆ್ಯಂಕ್ಲೆಟ್, ಕಾಲಂದುಗೆಗಳು ಹೊಸ ಬಗೆಯ ವಿನ್ಯಾಸದೊಂದಿಗೆ ಮಾರುಕಟ್ಟೆಯಲ್ಲಿ ಟ್ರೆಂಡ್ ಸೃಷ್ಟಿಸುತ್ತಿವೆ.
ಎರಡೂ ಕಾಲುಗಳಿಗೆ ಕಾಲ್ಗೆಜ್ಜೆ ಧರಿಸುವ ಬದಲು ಒಂದು ಕಾಲಿಗೆ ಧರಿಸುವುದು ಈಗೀಗ ಫ್ಯಾಷನ್. ಲಿಂಗಭೇದವಿಲ್ಲದೇ ಕಾಲಿನ ಆಭರಣಗಳು ಎಲ್ಲರನ್ನೂ ಆಕರ್ಷಿಸುತ್ತಿವೆ. ಚಿನ್ನ, ಬೆಳ್ಳಿ ಕಾಲ್ಗಡಗಗಳನ್ನು ಹಿಂದಿಕ್ಕಿ ಬಗೆ ಬಗೆಯ ದುಬಾರಿ ಹರಳು, ಮಣಿ, ಲೆದರ್, ಬ್ಲಾಕ್ ಮೆಟಲ್, ಗೋಲ್ಡ್ ಪ್ಲೇಟೆಡ್, ಥ್ರೇಡ್, ಶೇಲ್, ಕಲ್ಲು, ಪ್ಲಾಸ್ಟಿಕ್, ಗಾಜು, ತಾಮ್ರ, ಕಂಚು,ವಜ್ರ, ಮುತ್ತು,ಹವಳ, ಮರದ ತುಂಡು ಬಳಸಿ ವಿನ್ಯಾಸಗೊಳ್ಳುತ್ತಿರು ಕಾಲ್ಗೆಜ್ಜೆಗಳಿಗೆ ಮನಸೋಲದವರಿಲ್ಲ. ಆ್ಯಂಕ್ಲೆಟ್ ಈಗ ಪುರುಷರನ್ನು ಸೆಳೆಯುತ್ತಿದೆ. ಆದರೆ ವಿನ್ಯಾಸದಲ್ಲಿ ಸ್ವಲ್ಪ ಬದಲಾವಣೆ ಇರುತ್ತದೆ ಅಷ್ಟೇ. ಪುರುಷರು ಬಳಸುವ ಆ್ಯಂಕ್ಲೆಟ್ ಎಂದರೆ ದಾರ, ಕವಡೆ ಮತ್ತು ಸರಪಳಿ ಶೈಲಿಯವು.
ಫ್ಯಾನ್ಸಿ ಆ್ಯಂಕ್ಲೆಟ್‌ಗಳನ್ನು ಸುಲಭವಾಗಿ ಮನೆಯಲ್ಲಿಯೇ ತಯಾರಿಸಿಕೊಳ್ಳಬಹುದು. ಒಂದಿಷ್ಟು ಬೇರೆ, ಬೇರೆ ವಿನ್ಯಾಸದ, ಬಣ್ಣದ ಮಣಿಗಳು, ಚಿಹ್ನೆಗಳು ಮತ್ತು ದಾರಗಳನ್ನು ಬಳಸಿ ಕಲರ್‌ಫುಲ್ ಗೆಜ್ಜೆಗಳನ್ನು ತಯಾರಿಸಬಹುದು.
ಪರಿಸರಸ್ನೇಹಿ ಆ್ಯಂಕ್ಲೆಟ್: ರಾಸಾಯನಿಕಗಳ ಬಳಕೆಯಿಲ್ಲದೆ ಭತ್ತ, ಅಂಟುವಾಳ, ನೀಲಗಿರಿ ಬೀಜ, ಗುಲಗಂಜಿ, ಕಾಶಿಮಣಿ, ಬೀನ್ಸ್, ಹುಣಸೆಬೀಜ, ಸೀತಾಫಲ, ಪಪ್ಪಾಯ ಬೀಜಗಳಿಂದಳೂ ಆ್ಯಂಕ್ಲೆಟ್ ತಯಾರಿಸಬಹುದು.
ಕ್ರಿಸ್ಟಲ್ ಆ್ಯಂಕ್ಲೆಟ್ಸ್: ಸ್ಫಟಿಕ ಮತ್ತು ಇತರ ಹರಳುಗಳಿಂದ ಮಾಡಿದ ಆ್ಯಂಕ್ಲೆಟ್ ಹೊಳಪಿನಿಂದ ಕೂಡಿರುತ್ತದೆ. ದುಬಾರಿ ಎನಿಸಿದರೂ ಎಲಿಗೆಂಟ್ ಆಗಿ ಕಾಣುತ್ತದೆ.
ಮಣಿಯ ಆ್ಯಂಕ್ಲೆಟ್: ದಿನಬಳಕೆಗೆ ಹೆಚ್ಚು ಸೂಕ್ತವಾಗಿದ್ದು, ಸಣ್ಣ, ದೊಡ್ಡ, ಬೇರೆ ಬೇರೆ ಆಕಾರದಲ್ಲಿರುವ ಮಣಿಗಳನ್ನು ಬಳಸಿ ಆ್ಯಂಕ್ಲೆಟ್ ಧರಿಸಬಹುದು. ಚಿನ್ನ ಅಥವಾ ಬೆಳ್ಳಿ ಲೋಹದಲ್ಲಿ ಮಣಿ ಬಳಸಿ ವಿನ್ಯಾಸಗೊಳಿಸಬಹುದು.
ಕ್ಯೂಬನ್-ಲಿಂಕ್: ಕ್ಯೂಬನ್ ಲಿಂಕ್ ಕಾಲ್ಗೆಜ್ಜೆಗಳನ್ನುಕರ್ಬ್ ಚೈನ್ ಆಂಕ್ಲೆಟ್ಗಳು ಎಂದೂ ಕರೆಯಲಾಗುತ್ತದೆ. ಕ್ಲಾಸಿಕ್ ಲುಕ್ ಹೊಂದಿರುವ ಇವು ಹೆಚ್ಚು ಗಟ್ಟಿಯಾಗಿದ್ದು, ಬಾಳಿಕೆ ಬರುತ್ತವೆ. ಎಲ್ಲ ರೀತಿಯ ಉಡುಪಿಗೂ ಹೊಂದಿಕೊಳ್ಳುವ ಸರಳವಾದ ವಿನ್ಯಾಸದಲ್ಲಿ ದೊರೆಯುತ್ತದೆ. ಬೆಳ್ಳಿಯ ಬಣ್ಣದಲ್ಲಿ ಹೆಚ್ಚು ಮಾರಾಟವಾಗುತ್ತಿದ್ದು, ಬಂಗಾರದ ಬಣ್ಣಗಳಲ್ಲಿಯು ದೊರೆಯುತ್ತದೆ.
ಸಂಕೇತ ಮತ್ತು ಅಕ್ಷರ ಆ್ಯಂಕ್ಲೆಟ್: ಹೂವು, ಸೂರ್ಯ, ಚಂದ್ರ, ನಕ್ಷತ್ರದಂಥ ಆಕೃತಿಗಳಲ್ಲಿ ಮತ್ತು ಅಕ್ಷರ ಮತ್ತು ಪದಗಳ ಆಕೃತಿಯನ್ನು ಒಳಗೊಂಡಿರುವ ಕಾಲ್ಗೆಜ್ಜೆಯು ಸಿಟಿ ಹುಡುಗಿಯರ ನೆಚ್ಚಿನ ಕಾಲ್ಗೆಜ್ಜೆ ವಿನ್ಯಾಸವಾಗಿದ್ದು, ಕಾಲ್ಗೆಜ್ಜೆಗಳಲ್ಲಿ ಹೆಸರು, ದಿನಾಂಕ, ಗಂಟೆ, ಬೀಗ, ಬೀಗದ ಕೈ, ಜ್ಯಾಮಿತಿಯ ಆಕರ, ಹಾಡಿನ ಸಾಲು, ಘೋಷವಾಕ್ಯ, ಚಿತ್ರ ವಿಚಿತ್ರವಾದ ಊಹಿಸಲಾದಗಷ್ಟು ಆಯ್ಕೆಗಳಿವೆ.
ಚಿಪ್ಪುಗಳು ಆ್ಯಂಕ್ಲೆಟ್: ನೈಸರ್ಗಿಕ ಕಪ್ಪೆ ಚಿಪ್ಪುಗಳು ಮತ್ತು ಬಳ್ಳಿಯಿಂದ ಮಾಡಲ್ಪಟ್ಟ ಕಾಲ್ಗೆಜ್ಜೆಗಳಿಗೆ ಇಂದು ಹೆಚ್ಚು ಬೇಡಿಕೆಯಿದೆ. ಅವುಗಳು ತಿಳಿ ನೀಲಿ, ಕೆಂಪು, ಗುಲಾಬಿ, ಕಪ್ಪು, ಕಿತ್ತಳೆ ಮತ್ತು ನೀಲಿ ಬಣ್ಣಗಳಲ್ಲಿನ ಲಭ್ಯವಿದ್ದರೂ ಆಫ್-ವೈಟ್ ಬಣ್ಣ ಎಲ್ಲರಿಗೂ ಅಚ್ಚುಮೆಚ್ಚಿನದ್ದು.
ಬಹುಪದರ ಆ್ಯಂಕ್ಲೆಟ್ : ಎರಡು ಅಥವಾ ಅದಕ್ಕೂ ಹೆಚ್ಚು ಪದರಗಳ ಚಿತ್ರ-ವಿಚಿತ್ರ ವಿನ್ಯಾಸದ ಕಾಲ್ಗೆಜ್ಜೆಗಳು ತಯಾರಾಗುತ್ತಿದ್ದು, ಜೀನ್ಸ್‌ಗಳಿಗೆ ಉತ್ತಮವಾಗಿ ಕಾಣುತ್ತದೆ. ಅವುಗಳು ಸಾಮಾನ್ಯವಾಗಿ ಸಣ್ಣದಾದ ಹೂ, ಹೃದಯ ಅಥವಾ ಇತರ ಆಕೃತಿಯನ್ನು ಜೋಡಿಸಲಾಗಿರುತ್ತದೆ
ದಾರದ ಆ್ಯಂಕ್ಲೆಟ್: ವಿವಿಧ ದಾರಗಳನ್ನು ಬಳಸಿ ತಯಾರಾಗುವ ಕಾಲ್ಗೆಜ್ಜೆಗಳು ಕಾಲಿಗೆ ಹೊಸ ಲುಕ್ ನೀಡುತ್ತಿದ್ದು, ಅದರಲ್ಲಿಯೂ ಕಪ್ಪು ದಾರದ ಕಾಲ್ಗೆಜ್ಜೆ ಇಂದು ಹೆಚ್ಚು ಟ್ರೆಂಡ್‌ನಲ್ಲಿದೆ.
⇒v
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.