ADVERTISEMENT

ಜುಮಕಿ ಕೊಳ್ಳಲು ಕಾರಣ

​ಪ್ರಜಾವಾಣಿ ವಾರ್ತೆ
Published 3 ಮೇ 2024, 22:42 IST
Last Updated 3 ಮೇ 2024, 22:42 IST
   

ಜುಮ್ಕಾ ಗಿರಾರೆ...

ಈ ಎರಡು ಪದಗಳನ್ನು ಕೇಳಿದಾಕ್ಷಣ ಎರಡು ತಲೆಮಾರುಗಳ ಕಿವಿ ಚುರುಕಾಗುತ್ತವೆ. ಒಂದು ಆಶಾ ಭೋಸ್ಲೆ ಅವರ ಧ್ವನಿಯಲ್ಲಿ ಸಾಧನಾ ಅಭಿನಯದ.. ಬರೇಲಿ ಕೆ ಬಾಜಾರ್‌ ಮೆ ಹಾಡು ಗುನುಗುತ್ತ ತಲೆದೂಗುತ್ತಾರೆ. 

ಇನ್ನೊಂದು ಈ ಕಾಲದ ಹುಡುಗಿಯರು ಆಲಿಯಾ ಭಟ್‌ನನ್ನು ನೆನಪಿಸಿಕೊಂಡು.. ವಾಟ್‌ ಜುಮ್ಕಾಎಂದು ಕೇಳುತ್ತಾರೆ.. 
ಈ ಐದಾರು ದಶಕಗಳಲ್ಲಿ ಜುಮ್ಕಾಹಾಡು ತನ್ನ ಜನಪ್ರಿಯತೆಯನ್ನು ಉಳಿಸಿಕೊಂಡು ಬಂದಿದೆ. ಕ್ರಿಸ್ತಶಕ 300ರಿಂದಲೇ ಝಮ್ಕಿ ಆಭರಣ ನಮ್ಮಲ್ಲಿ ಪ್ರಚಲಿತದಲ್ಲಿತ್ತು ಎಂದು ಇತಿಹಾಸ ಹೇಳುತ್ತದೆ. ಚೋಳರ ಕಾಲದ ದೇಗುಲಗಳಲ್ಲಿ ನಾಟ್ಯಕಲಾವಿದೆಯರು ಝುಮ್ಕಿ ಧರಿಸಿರುವ ಶಿಲ್ಪಕಲಾಕೃತಿಗಳು ಇದಕ್ಕೆ ಪುರಾವೆ ಒದಗಿಸಿವೆ.

ADVERTISEMENT

ಜುಮಕಾ ಅಥವಾ ಜುಮಕಿ ಈ ಪದವೇ ಹೆಂಗಳೆಯರ ಮೊಗದ ಮೇಲೆ ನಗುವನ್ನು ಅರಳಿಸುತ್ತದೆ. ಹಿಂದಿ ಪದ ಝುಮ್ಕಿ ಇದರ ಮೂಲ ಸ್ವರೂಪವೆಂದು ಪರಿಣತರು ಹೇಳುತ್ತಾರೆ. ಝುಮ್ಕಿ ಎಂದರೆ ಸಣ್ಣ ಸಣ್ಣ ಗಂಟೆಯ ರೂಪ. ಝೂಮರ್‌ನಂತೆ ಇವಕ್ಕೂ ಸಣ್ಣ ಸಣ್ಣ ಲೋಲಾಕುಗಳಂಥ ಗುಂಡುಗಳಿರುತ್ತವೆ. ಕಿವಿಗೆ ಹೀಗೆ ಇಳಿಬಿಡುವ ಓಲೆ ಧರಿಸುವುದರಿಂದ ಯೌವ್ವನಸ್ಥರಾಗಿ ಕಾಣುತ್ತಾರೆ ಎಂಬುದೊಂದು ನಂಬಿಕೆ. ಇನ್ನೊಂದು ವಾದದ ಪ್ರಕಾರ, ಜುಮಕಿಗಳಿಂದ ಬರುವ ಸಣ್ಣ ಕಿಣಿಕಿಣಿನಾದವು ಗೃಹಿಣಿಯರು ಪ್ರಸನ್ನವದನರಾಗಿರುವಂತೆ ನೋಡಿಕೊಳ್ಳುತ್ತವೆಯಂತೆ.

ಕತ್ತಿನ ಬಳಿ ಓಲಾಡುವ ಈ ಜುಮ್ಕಿಗಳ ಕರಾಮತ್ತು ಇಲ್ಲಿಗೇ ನಿಲ್ಲುವುದಿಲ್ಲ. ಚಂದಗಾಣಿಸುವುದು ಅಷ್ಟೆ ಅಲ್ಲ, ಇವು ಪ್ರತಿಷ್ಠೆಯ ಸಂಕೇತಗಳಾಗಿಯೂ ಬಳಕೆಯಾಗುತ್ತವೆ. ಅರ್ಧಚಂದ್ರ, ಅರಳಿದ ಹೂ ಜುಮ್ಕಿಯ ಮೇಲ್ಭಾಗದಲ್ಲಿದ್ದರೆ ಲೋಲಾಕಿನಂತಿರುವ ಝೂಮರ್‌ಗಳು ವಜ್ರ, ರೂಬಿ ಹಾಗೂ ಪಚ್ಚೆಗಳಲ್ಲಿ ಅಲಂಕೃತವಾಗಿರುತ್ತವೆ. ಮುತ್ತಿನ ಗುಚ್ಛಗಳೂ ಇವುಗಳಲ್ಲಿರುತ್ತವೆ. ನವರತ್ನಗಳ ಜುಮಕಿಗೆ ಹೆಚ್ಚು ಬೇಡಿಕೆ. ಸ್ನಾನ ಮಾಡುವಾಗ ಜುಮಕಿಯಿಂದ ಇಳಿದು ಬರುವ ನೀರು ಹೆಚ್ಚಿನ ಉಮ್ಮೇದು, ಹುಮ್ಮಸ್ಸು ನೀಡುತ್ತದೆ. ಈ ನವರತ್ನ ಮತ್ತು ಸುವರ್ಣಜಲದ ಶಕ್ತಿಯಿಂದ ಧರಿಸಿದವರು ಸದಾ ಚೈತನ್ಯದಿಂದ ಕೂಡಿರುತ್ತಾರೆ ಎನ್ನಲಾಗುತ್ತದೆ.

ಪುಟ್ಟ ಗಂಟೆಯಾಕಾರದ ಈ ಜುಮಕಿಯ ಆರಾಧಕಿಯರಿಗೆ ಈ ಸಲ ಅಕ್ಷಯ ತೃತೀಯದ ದಿನ ಜುಮ್ಕಿ ಕೊಳ್ಳಲು ಇಷ್ಟು ಕಾರಣಗಳು ಸಾಕಲ್ಲ. ಒಲಿದ ಜೀವಕ್ಕೆ ಒಲುಮೆಯ ಉಡುಗೊರೆಯಾಗಿ ನೀಡಲೂ ಇವೇ ಕಾರಣಗಳು ಸಾಕಲ್ವಾ? 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.