ADVERTISEMENT

ಆಕೆಯ ಆಪ್ತ ತಾಣ...: ಬ್ಯೂಟಿ ಪಾರ್ಲರ್‌ಗೂ ನಿಮ್ಮಲ್ಲಿರಲಿ ಸಮಯ

ಪವಿತ್ರಾ ಭಟ್
Published 17 ಮೇ 2024, 23:30 IST
Last Updated 17 ಮೇ 2024, 23:30 IST
   
ನಮ್ಮನ್ನು ನಾವು ಹೇಗೆ ಬಿಂಬಿಸಿಕೊಳ್ಳುತ್ತೀವಿ ಎನ್ನುವುದರಲ್ಲಿ ಆತ್ಮವಿಶ್ವಾಸ ಅಡಗಿದೆ. ಪ್ರೀತಿ ಹಂಚುವ, ಇತರರ ಕಾಳಜಿ ಮಾಡುವ, ಇಡೀ ಕುಟುಂಬದ ದೇಖರೇಖಿ ನೋಡಿಕೊಳ್ಳುವ ಹೆಣ್ಣುಮಕ್ಕಳು ಆಗಾಗ್ಗೆ ನಮ್ಮೊಳಗೆ ನಾವು ಇಳಿದು ನೋಡುವ, ಸ್ವಆರೈಕೆ ಮಾಡಿಕೊಳ್ಳುವ ಬಗೆಯನ್ನು ಅರಿತುಕೊಳ್ಳಬೇಕಿದೆ.

ಬ್ಯೂಟಿಪಾರ್ಲರ್‌, ಮೇಕಪ್‌  ಅಪ್‌, ಸ್ವ ಆರೈಕೆ ಎಂದಾಕ್ಷಣ ಕುಹಕವಾಡುವವರೇ ಹೆಚ್ಚು. ಹೆಣ್ಣುಮಕ್ಕಳ ಮೇಕಪ್‌ ಅಂದರೆ ಎಲ್ಲಿಲ್ಲದ ವ್ಯಂಗ್ಯ, ಕೊರಂಬುಗಳೆಲ್ಲ ಸೇರಿಕೊಂಡು ಮಾತಾಗುತ್ತವೆ. ಆದರೆ, ಬ್ಯೂಟಿಪಾರ್ಲರ್‌ನತ್ತ ಹೆಜ್ಜೆ ಹಾಕುವುದು ಸ್ವಕಾಳಜಿಯ ಮತ್ತೊಂದು ಮುಖವೆಂದರೆ ನಂಬುತ್ತೀರಾ?

ಐಬ್ರೋ ಶೇಪ್‌, ಬ್ಲೀಚಿಂಗ್‌, ಫೇಸ್‌ಪ್ಯಾಕ್‌ ಎಲ್ಲವೂ ಮೇಲ್ಮಧ್ಯಮ ವರ್ಗದವರ ಸ್ವತ್ತಾಗಿದ್ದ ಕಾಲವಿತ್ತು. ಈಗ ಅವೆಲ್ಲವೂ ಎಲ್ಲರಿಗೂ ಲಭ್ಯವಾಗಿರುವಂಥ ಸಂದರ್ಭ. ಆರ್ಥಿಕ ಸದೃಢರಾಗುತ್ತಿರುವ ಮಹಿಳೆಯರಷ್ಟೆ ಅಲ್ಲ, ಗೃಹಿಣಿಯರು ಸೌಂದರ್ಯದ ಕಾಳಜಿ ಮಾಡಲು ಮೀನಾಮೇಷ ಎಣಿಸಬೇಕಿಲ್ಲ. 

ಕೆಲಸದ ಒತ್ತಡವೆಂದರೆ ಒತ್ತಡ.  ಅದು ಆಫೀಸಿದ್ದೇ ಇರಲಿ, ಮನೆಯದ್ದೇ ಇರಲಿ. ಎರಡೂ ದೋಣಿಯಲ್ಲಿ ಸಾಗುತ್ತಿರುವ ಮಹಿಳೆಯರಿಗೆ ತುಸು ಬಿಡುವು ಸಿಗುವುದು ಕಡಿಮೆ. ಸಿಕ್ಕರೆ ಯಾವ ಜಂಜಾಟದಲ್ಲಿ ಕಳೆದು ಹೋಗದೇ ಸ್ವ ಆರೈಕೆಗೆ ಹೆಚ್ಚಿನ ಆದ್ಯತೆ ಕೊಡಬೇಕು. ಹಾಗೆ ಗಂಡ, ಮಕ್ಕಳ ಆರೈಕೆಯಲ್ಲಿ ಕಳೆದು ಹೋಗಿರುವ ಮನೆಯ ದೇಖರೇಖಿ ನೋಡಿಕೊಳ್ಳುವ ಗೃಹಿಣಿಯರ ಆದ್ಯತಾ ಪಟ್ಟಿಯಲ್ಲಿ ಸೌಂದರ್ಯ ಕಾಳಜಿ ಸೇರಿರಲಿ. 

ADVERTISEMENT

ವೃತ್ತಿಪರ ಬ್ಯೂಟಿಷಿಯನ್‌ಗಳನ್ನು ಆಗಾಗ್ಗೆ ಭೇಟಿ ಮಾಡುವುದು ಕೇವಲ ಕೇಶ ವಿನ್ಯಾಸ, ಚರ್ಮದ ಆರೈಕೆಗಷ್ಟೆ ಅಲ್ಲ, ನಮ್ಮನ್ನು ನಾವು ಹೇಗೆ ಬಿಂಬಿಸಿಕೊಳ್ಳುತ್ತೀವಿ, ಹೇಗೆ ಪ್ರಸ್ತುತಪಡಿಸಿಕೊಳ್ಳುತ್ತೀವಿ ಎನ್ನುವುದಕ್ಕೂ ಈ ಸೌಂದರ್ಯ ಕಾಳಜಿ ಮುಖ್ಯವಾಗುತ್ತದೆ. 

ಕಚೇರಿ, ಮನೆ, ಗಂಡ, ಮಕ್ಕಳು, ಓದು ಎಂದು ಸದಾ ಬಿಡುವಿಲ್ಲದ ಜೀವನ ಹೆಣ್ಣುಮಕ್ಕಳದ್ದು. ಇದರ ನಡುವೆಯೂ ಸೌಂದರ್ಯ ಕಾಪಾಡಿಕೊಳ್ಳಲು, ತಮಗಾಗಿ ಒಂದಿಷ್ಟು ಸಮಯ ತೆಗೆದಿಡಲು ಈ ಬ್ಯೂಟಿಪಾರ್ಲರ್‌ಗಳು, ಸ್ಪಾಗಳು ಸಹಕಾರಿ.  ನಮ್ಮನ್ನು ನಾವೇ ಪ್ರೀತಿಸದಿದ್ದರೆ ಇನ್ನಾರು ಪ್ರೀತಿಸಿಯಾರು? ನಮ್ಮ ದೇಹದ ಆರೈಕೆ ನಾವೇ ಆದ್ಯತೆ ನೀಡಬೇಕಲ್ಲವೇ?ಆಗಾಗ ಪಾರ್ಲರ್‌ಗಳ ಭೇಟಿಯಿಂದ   ಕೈ– ಕಾಲುಗಳಿಗೆ, ಚರ್ಮಕ್ಕೆ, ಕೂದಲಿಗೆ ಅಕ್ಕರೆಯ ಆರೈಕೆಯನ್ನು ಗಡಿಬಿಡಿಯಿಲ್ಲದೆ ಮಾಡಿಕೊಳ್ಳಬಹುದು.

ವಿಶ್ರಾಂತಿಯ ಅನುಭವ

ಬ್ಯೂಟಿಪಾರ್ಲರ್‌ಗಳು ಕೇವಲ ಮೇಕಪ್‌ ಮಾಡಿಸಿಕೊಳ್ಳಲು ಮಾತ್ರ ಇರುವುದಲ್ಲ. ಪಾರ್ಲರ್‌ ಹಾಗೂ ಸ್ಪಾಗಳಲ್ಲಿ ಮಾಡುವ ಮಸಾಜ್‌, ಫೇಶಿಯಲ್‌ಗಳು ಆರಾಮದಾಯಕ ಅನುಭವ ನೀಡುತ್ತದೆ. ಮಾನಸಿಕ ಒತ್ತಡದಿಂದ ಸುಕ್ಕುಗಟ್ಟಿದ ಚರ್ಮಗಳನ್ನು ಮಸಾಜ್‌ನಿಂದ ಸರಿಪಡಿಸಬಹುದು.  ದೇಹದಲ್ಲಿ ರಕ್ತಸಂಚಾರ ಸುಗಮವಾಗುತ್ತದೆ. ಇದು ಚರ್ಮ ಕಾಂತಿಯುತವಾಗುವಂತೆ ಮಾಡುತ್ತದೆ.  

ಒಪ್ಪುವ ಪದ್ಧತಿ ಅನುಸರಿಸಿ

ಬ್ಯೂಟಿ ಪಾರ್ಲರ್‌ಗಳಿಗೆ ಹೋಗುವುದರಿಂದ ದೇಹದ ಆಕಾರ, ಚರ್ಮದ ಗುಣಕ್ಕೆ ತಕ್ಕ ರೀತಿಯ ಸೌಂದರ್ಯ ಸಲಹೆಗಳನ್ನೂ ಪಡೆದುಕೊಳ್ಳಬಹುದು. ಎಣ್ಣೆಯುಕ್ತ ಚರ್ಮವನ್ನು ಹೇಗೆ ಆರೈಕೆ ಮಾಡಬೇಕು, ಕೂದಲನ್ನು ಹೇಗೆ ನಿರ್ವಹಿಸಬೇಕು  ಹೀಗೆ ಹತ್ತು ಹಲವು ಸಲಹೆಗಳನ್ನು ಪಡೆದುಕೊಂಡು ಅದರಂತೆ ನಡೆಯಲು ಅನುಕೂಲ. 

ಎಲ್ಲೇ ಇದ್ದರೂ ನಮ್ಮನ್ನು ನಾವು ಮೊದಲು ಪ್ರೀತಿಸಬೇಕು. ಸ್ವಪ್ರೀತಿ, ಸ್ವಕಾಳಜಿ ಎಲ್ಲವೂ ಆತ್ಮವಿಶ್ವಾಸದ ಸಂಕೇತ. ಸೌಂದರ್ಯ ಅದಕ್ಕೆ ಗರಿಯಷ್ಟೆ. 

ಏನೆಲ್ಲಾ ಆಯ್ಕೆಗಳಿವೆ?

  • ಚರ್ಮದ ಆರೈಕೆಗೆ ಫೇಶಿಯಲ್‌, ಸ್ಪಾ, ಮಸಾಜ್‌, ಫೇಸ್‌ ಪ್ಯಾಕ್‌ಗಳನ್ನು ಹಾಕಿಕೊಳ್ಳಬಹುದು.

  • ಉಗುರುಗಳು ಕಳೆಗುಂದದಿರುವಂತೆ ಮಾಡಲು ಕಾಲುಗಳಿಗೆ ಪೆಡಿಕ್ಯೂರ್‌, ಕೈ ಬೆರಳುಗಳಿಗೆ ಮೆನಿಕ್ಯೂರ್‌ ಆರೈಕೆ

  • ಕೂದಲಿನ ಆರೈಕೆಗೆ ಹೇರ್‌ ಪ್ಯಾಕ್‌, ಹೇರ್‌ ವಾಶ್‌, ಹೇರ್‌ ಕಟಿಂಗ್‌, ಎಣ್ಣೆಯ ಮಸಾಜ್‌ನಂತಹ ವಿಧಾನಗಳಿಂದ ತಲೆಹೊಟ್ಟು, ಸೀಳು ಕೂದಲುಗಳಿಂದ ಮುಕ್ತಿ ಪಡೆಯಬಹುದು.

  • ಪಾರ್ಲರ್‌ಗಳಲ್ಲಿ ಮಂದ ಬೆಳಕಿನಲ್ಲಿ ಮಸಾಜ್‌ ಅಥವಾ ಫೇಶಿಯಲ್‌ಗಳನ್ನು ಮಾಡಿಸುವುದರಿಂದ ಚರ್ಮದ ಮೇಲೆ ಹಿತವಾದ ಒತ್ತಡ ಬೀಳುತ್ತದೆ. ಇದರಿಂದ ರಕ್ತಪರಿಚಲನೆ ಉತ್ತಮವಾಗಿ ಚರ್ಮದ ಆಳದಿಂದ ಹೊಳಪು ಮೂಡುತ್ತದೆ.

ಇವುಗಳನ್ನು ನೆನಪಿಡಿ...

  • ಫೇಶಿಯಲ್‌, ಪೆಡಿಕ್ಯೂರ್‌, ಮೆನಿಕ್ಯೂರ್‌ ಮಾಡಿಸುವಾಗ 25 ದಿನಗಳ ಅಂತರವಿರಲಿ.

  • ವಿಶ್ವಾಸಾರ್ಹ ಪಾರ್ಲರ್‌ಗಳಿಗೆ ಮಾತ್ರ ಭೇಟಿ ನೀಡಿ.

  • ಚರ್ಮಕ್ಕೆ ಯಾವ ಉತ್ಪನ್ನಗಳು ಹಾನಿಕಾರಕವಲ್ಲ ಎನ್ನುವುದನ್ನು ಗೊತ್ತುಪಡಿಸಿಕೊಳ್ಳಿ.

  • ಆನ್‌ಲೈನ್‌ ಸಲಹೆಗಳಿಂದ ಸ್ವ ಆರೈಕೆ ಮಾಡಿಕೊಳ್ಳುವ ಬದಲು ಸೌಂದರ್ಯತಜ್ಞರನ್ನು ಭೇಟಿ ಮಾಡಿ.

ಬ್ಯೂಟಿ ಪಾರ್ಲರ್‌ಗಳಿಗೆ ಹೋದರೆ ಮಾತ್ರ ಸುಂದರವಾಗಿ ಕಾಣುತ್ತಾರಾ? ಸಮಯ, ಹಣ ವ್ಯರ್ಥ ಎನ್ನುವ ಮಾತು ಆಗಾಗ ಕೇಳಿಬರುತ್ತದೆ. ಆದರೆ ಮೇಕ್‌ಓವರ್‌ ಅಥವಾ ದೇಹದ ಭಾಗಗಳನ್ನು ಪಾರ್ಲರ್‌ಗಳಲ್ಲಿ ಆರೈಕೆ ಮಾಡಿದಷ್ಟು ನಾಜೂಕಾಗಿ, ಪರಿಪೂರ್ಣವಾಗಿ ಮನೆಯಲ್ಲಿ ಮಾಡಿಕೊಳ್ಳಲು ಸಾಧ್ಯವಿಲ್ಲ. ಅಲ್ಲದೆ ಮುಖ್ಯವಾಗಿ ನಾವಿರುವ ರೀತಿ ನಮ್ಮೊಳಗಿನ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ.
-ಆಶಾ ಅಮೈರಾ, ಮೇಕಪ್‌ ಆರ್ಟಿಸ್ಟ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.