ಕೆಲವು ದಿನಗಳ ಹಿಂದೆ Instagramನಲ್ಲಿ ಓದಿದ ಸಾಲುಗಳು ನನ್ನನ್ನು ಬಹಳ ಹೊತ್ತು ಯೋಚಿಸುವಂತೆ ಮಾಡಿತು. ಸೌಂದರ್ಯದ ಬಗೆಗಿನ ಒಂದು ವಿಷಯವನ್ನು ಪ್ರಶ್ನಿಸುವಂತೆ ಮಾಡಿತು. ಕೆಲವು ವಿಷಯಗಳೇ ಹಾಗೆ, ತಿಳಿದಿದ್ದರೂ ಅದನ್ನು ಒಪ್ಪಿಕೊಳ್ಳಲು ಮನಸ್ಸು ನಿರಾಕರಿಸುತ್ತದೆ.
ಸೌಂದರ್ಯವೆಂಬುದು ನಿಮ್ಮಲ್ಲಿಲ್ಲದ ಕೊರತೆಯನ್ನು ಕೊರತೆಯಾಗಿ ನಂಬಿಸಿ, ಬಂಡವಾಳಶಾಹಿಗಳು ನಿಮಗೆ ಬೇಡದ ವಸ್ತುವನ್ನು ನಿಮಗೆ ಮಾರುವ ಒಂದು ಮಾರಾಟದ ವಸ್ತುವಾಗಿಹೋಗಿದೆ. ಸೌಂದರ್ಯವೆಂಬುದು ಇಂದು ಕೇವಲ ದೈಹಿಕ ನೋಟಕ್ಕೆ ಸೀಮಿತವಾಗಿರುವುದು ನಮಗೆಲ್ಲ ತಿಳಿದಿರುವ ವಿಷಯ. ಆ ಕಟ್ಟುಪಾಡಿಗೆ ಮತ್ತಷ್ಟು ಬೇಲಿ ಹಾಕಿ, ಸೌಂದರ್ಯವು ನಿರ್ದಿಷ್ಟ ದೇಹದ ತೂಕ, ಚರ್ಮದ ಬಣ್ಣಕ್ಕೆ ಸೀಮಿತಪಡಿಸಿರುವುದು ವಿಪರ್ಯಾಸ.
ಸೌಂದರ್ಯದ ಉಚಿತ ವ್ಯಾಖ್ಯಾನ ಹುಡುಕಲು ಅಸಾಧ್ಯ. ಅದು ವ್ಯಕ್ತಿಗತ ಅನಿಸಿಕೆಯಾಗಿ ರೂಪುಗೊಳ್ಳುವುದೇ ಉಚಿತ. ಆದರೆ ವರ್ಷಗಳಿಂದ ನಮ್ಮಲ್ಲಿ ಬೆಳೆದಿರುವ ಮತ್ತು ಬೆಳೆಸಲಾಗಿರುವ ಪರಿಕಲ್ಪನೆಯ ಅನುಸಾರಕ್ಕೆ ನಾವು ಯೋಚಿಸುವುದು ಸಹಜ. ಇಂತಹ ಪರಿಕಲ್ಪನೆಗಳೊಂದರಲ್ಲಿ ಪ್ರಮುಖವಾಗಿ ಎದುರಾಗುವುದೇ ಬಾಹ್ಯ ಸೌಂದರ್ಯದ ವಿಚಾರಗಳು
ಫೆಮಿನಿಸಂ, ಸ್ತ್ರೀಸಮಾನತೆ, ಸ್ತ್ರೀಸಬಲೀಕರಣದ ಯುಗದಲ್ಲಿ ತಮ್ಮ ಹಕ್ಕುಗಳಿಗಾಗಿ ಹೋರಾಡುವ ಆಧುನಿಕ ಮಹಿಳೆಯರು ಸಹ ಸಮಾಜ ರೂಪಿಸಿರುವ ‘ಆದರ್ಶ’ ದೈಹಿಕ ಸೌಂದರ್ಯದ ಹುರುಳು ಮೋಡಿಗೆ ಮರುಳಾಗುತ್ತಾರೆ ಮತ್ತು ಮೋಸ ಹೋಗುತ್ತಾರೆ. ಆಧುನಿಕ ಜಗತ್ತಿನ, ಆಧುನಿಕ ಜೀವನಶೈಲಿಯೂ ಆಂತರಿಕ ಸೌಂದರ್ಯ, ವ್ಯಕ್ತಿತ್ವ ಮತ್ತು ಅದರ ಬೆಳವಣಿಗೆಗೆ ಪ್ರೋತ್ಸಾಹ ನೀಡಲು ವಿಫಲವಾಗುತ್ತಿದೆ.
ಮಾರುಕಟ್ಟೆಯಲ್ಲಿ ಸಿಗುವ ಸೌಂದರ್ಯವರ್ಧಕಗಳು, ಚರ್ಮದ ಬಣ್ಣವನ್ನು ವೃದ್ಧಿಸುವ ಕ್ರೀಮ್‌ಗಳು, ದೇಹದ ತೂಕವನ್ನು ಎರಡೇ ವಾರದಲ್ಲಿ ಇಳಿಸುವಂತಹ ಪದಾರ್ಥ, ತಲೆಗೂದಲನ್ನು ಒಂದೇ ತಿಂಗಳಲ್ಲಿ ಬೆಳೆಸುವ ಎಣ್ಣೆ – ಇವೆಲ್ಲವೂ ಜನರ ಹುಚ್ಚು ಆತುರಕ್ಕೆ ಮೂರ್ಖರನ್ನಾಗಿ ಮಾಡುತ್ತಿವೆ.
'Self care' ಎಂಬ ಹೆಸರಿನಲ್ಲಿ ಲಾಭಮಾಡಿಕೊಳ್ಳುತ್ತಿರುವ ವ್ಯಾಪಾರಗಳು ದಿನದಿಂದ ದಿನಕ್ಕೆ ತಲೆಯೆತ್ತುತಲೇ ಇವೆ. ಮಾದರಿ ಸೌಂದರ್ಯವು, ದೇಹವೂ ತಮ್ಮದಾಗಿಲ್ಲದಾಗ ಹೆಣ್ಣುಮಕ್ಕಳು ಮಾನಸಿಕವಾಗಿ ಕುಗ್ಗುವುದು ಕಂಡುಬರುತ್ತದೆ. ಅವರು ತಮ್ಮ ಆತ್ಮಸ್ಥೈರ್ಯವನ್ನು ಮರೆಮಾಡಲು ಮೇಕಪ್ ಮತ್ತು ಸರ್ಜರಿಯ ಮೊರೆಹೋಗುತ್ತಾರೆ. ಆದರೆ ಈ ರೀತಿಯಾಗಿ ತಮ್ಮ ತನವನ್ನು ಕಳೆದುಕೊಂಡು ಇಲ್ಲದ ಕುಂದನ್ನು ಪರದೆ ಹಿಂದೆ ಮುಚ್ಚಿ ಹಾಕುವುದರಿಂದ ತಮ್ಮ ಆತ್ಮವಿಶ್ವಾಸವನ್ನು ಮತ್ತು ಆತ್ಮಗೌರವವನ್ನು ಕಳೆದುಕೊಳ್ಳುತ್ತಾರೆ.
ಬಾಹ್ಯ ಸೌಂದರ್ಯವನ್ನು ಹೆಚ್ಚಿಸಿಕೊಳ್ಳುವ ಓಟದಲ್ಲಿ ಆಧುನಿಕ ಮಹಿಳೆಯರು ತಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎನ್ನುವುದು ಸ್ಪಷ್ಟ. ಈ ಸಮಸ್ಯೆಯನ್ನು ಆದಷ್ಟು ಬೇಗ ಅರಿತು ಇಂತಹ ಮೋಸಕ್ಕೆ ಒಳಗಾಗದೆ ತಮ್ಮನ್ನು ತಾವು ಪ್ರೀತಿಸಬೇಕು. ಹೆಣ್ಣು ತನ್ನ ಆಂತರಿಕ ಸೌಂದರ್ಯವನ್ನು ತಾನೇ ಗೌರವಿಸುವುದನ್ನು ಕಲಿಯಬೇಕು; ಆಂತರಿಕ ಶಕ್ತಿಯ ಮೂಲಕ ಆತ್ಮವಿಶ್ವಾಸದಿಂದ ಜೀವನದ ಹೆಜ್ಜೆಯನ್ನು ಇಡಬೇಕು.
**
ನೀವೂ ಬರೆಯಿರಿ
ಸೌಂದರ್ಯದ ಬಗ್ಗೆ ನಿಮ್ಮ ಅನಿಸಿಕೆ ಏನು? ನಿಮ್ಮ ಅಭಿಪ್ರಾಯಗಳನ್ನು 200 ಪದಗಳಲ್ಲಿ ನಿರೂಪಿಸಿ ನಮಗೆ ಕಳುಹಿಸಿ. ಆಯ್ದ ಬರಹಗಳನ್ನು ಪ್ರಕಟಿಸುತ್ತೇವೆ. ನಮ್ಮ ವಿಳಾಸ: ಸಂಪಾದಕರು, ಭೂಮಿಕಾ ಪುರವಣಿ, ಪ್ರಜಾವಾಣಿ, ನಂ. 75, ಮಹಾತ್ಮ ಗಾಂಧಿ ರಸ್ತೆ, ಬೆಂಗಳೂರು – 560 001. ಇ–ಮೇಲ್: bhoomika@prajavani.co.in
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.