ADVERTISEMENT

ಸೌಂದರ್ಯ: ತೆಂಗಿನೆಣ್ಣೆಯಲ್ಲಡಗಿದೆ ಚರ್ಮದ ಅಂದ!

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2021, 19:30 IST
Last Updated 12 ನವೆಂಬರ್ 2021, 19:30 IST
ಡಾ.ಜುಶ್ಯ ಭಾಟಿಯಾ ಸರೀನ್
ಡಾ.ಜುಶ್ಯ ಭಾಟಿಯಾ ಸರೀನ್   

ಚರ್ಮ ಹಾಗೂ ಕೂದಲಿನ ಆರೋಗ್ಯಕ್ಕೆ ಸಂಬಂಧಿಸಿ ತೆಂಗಿನೆಣ್ಣೆಗೆ ಸರಿಸಾಟಿ ಇನ್ನೊಂದಿಲ್ಲ. ತೆಂಗಿನೆಣ್ಣೆ ಅಂಶವಿರುವ ಚರ್ಮ ಮತ್ತು ಕೂದಲಿನ ಎಣ್ಣೆಗಳು ಆರೋಗ್ಯವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ತೆಂಗಿನೆಣ್ಣೆ ಕೂದಲಿಗೆ ಉತ್ತಮ ಕಂಡೀಶನರ್‌ ಕೂಡ ಹೌದು. ಇದರಲ್ಲಿ ಮಿಟಮಿನ್ ಇ ಸೇರಿದಂತೆ ಹಲವು ಬಗೆಯ ಪೋಷಕಾಂಶಗಳಿದ್ದು ಚರ್ಮದ ಆರೈಕೆಗೆ ಸೂಕ್ತವಾಗಿದೆ.

ಪುರಾತನ ಕಾಲದಿಂದಲೂ ಚರ್ಮದ ಆರೈಕೆಗೆ ಸಸ್ಯಜನ್ಯ ಎಣ್ಣೆಗಳನ್ನು ಬಳಸಲಾಗುತ್ತಿತ್ತು. ಆದರೆ ಇತ್ತೀಚೆಗೆ ಚರ್ಮದ ಆರೋಗ್ಯ ಕಾಪಾಡಿಕೊಳ್ಳಲು ಜನರು ತೆಂಗಿನೆಣ್ಣೆ ಆಧಾರಿತ ಉತ್ಪನ್ನಗಳತ್ತ ಮೊರೆ ಹೋಗುತ್ತಿದ್ದಾರೆ.

ತೆಂಗಿನೆಣ್ಣೆ ಚರ್ಮಕ್ಕೆ ಉತ್ತಮ ಮಾಯಿಶ್ಚರೈಸರ್ ಕೂಡ ಹೌದು. ಇದು ಇತರ ವಿಟಮಿನ್ ಎಣ್ಣೆಗಳಿಂತ ಉತ್ತಮವಾಗಿದೆ ಎನ್ನುತ್ತವೆ ಅಧ್ಯಯನಗಳು. ತೆಂಗಿನೆಣ್ಣೆ ಬಳಕೆಯನ್ನು ಚರ್ಮ ಹಾಗೂ ಕೂದಲಿಗೆ ನಿಯಮಿತವಾಗಿ ಬಳಸುವುದರಿಂದ ಚರ್ಮವು ತೇವಾಂಶದಿಂದ ಕೂಡಿರುತ್ತದೆ. ಅಲ್ಲದೇ ಚರ್ಮಕ್ಕೆ ತಡೆಗೋಡೆಯಾಗಿರುವ ಲಿಪಿಡ್‌ಗಳನ್ನು ಸದೃಢಗೊಳಿಸುತ್ತದೆ.

ADVERTISEMENT

ಚರ್ಮವು ತೆಂಗಿನೆಣ್ಣೆಯನ್ನು ಸುಲಭವಾಗಿ ಹೀರಿಕೊಳ್ಳುತ್ತದೆ. ಚರ್ಮದ ಆಳವಾದ ಪದರಗಳಿಗೆ ಸುಲಭವಾಗಿ ತೂರಿಕೊಳ್ಳುವ ಮೂಲಕ ಚರ್ಮಕ್ಕೆ ಸಂಪೂರ್ಣ ಆರ್ಧ್ರತೆಯನ್ನು ಒದಗಿಸುತ್ತದೆ. ಚರ್ಮದಲ್ಲಿ ನೀರಿನ ಕೊರತೆಯನ್ನು ಕಡಿಮೆ ಮಾಡುವ ಮೂಲಕ, ತೆಂಗಿನೆಣ್ಣೆಯು ಚರ್ಮವನ್ನು ದೀರ್ಘಕಾಲದವರೆಗೆ ತೇವಗೊಳಿಸಲು ಸಹಾಯ ಮಾಡುತ್ತದೆ.

ಪರಿಸರ ಮಾಲಿನ್ಯ, ಕೋವಿಡ್‌ ಸಮಯದಲ್ಲಿ ಅತಿಯಾದ ಸ್ಯಾನಿಟೈಸೇಷನ್‌ ಮತ್ತು ಹವಾಮಾನ ಬದಲಾವಣೆಗಳು ಚರ್ಮ ಒಣಗುವಂತೆ ಮಾಡಿವೆ. ಈ ಎಣ್ಣೆಯು ಈ ಎಲ್ಲಾ ಅಡ್ಡ ಪರಿಣಾಮಗಳನ್ನು ತಡೆಯುವ ಅಗ್ಗದ ಉತ್ಪನ್ನವಾಗಿದೆ.

ಆಸಕ್ತಿದಾಯಕ ವಿಷಯವೆಂದರೆ, ತೆಂಗಿನೆಣ್ಣೆಯನ್ನು ಚರ್ಮ ಹೀರಿಕೊಂಡು ನಂತರ ಆಂಟಿಮೈಕ್ರೊಬಿಯಲ್ ಏಜೆಂಟ್ ಎಂದು ಕರೆಯಲ್ಪಡುವ ಮೊನೊಲೌರಿನ್ ಮತ್ತು ಲಾರಿಕ್ ಆಸಿಡ್ ಆಗಿ ವಿಭಜನೆ ಯಾಗುತ್ತದೆ. ತೆಂಗಿನೆಣ್ಣೆಯಿಂದ ನಿಯಮಿತವಾಗಿ ಮಸಾಜ್ ಮಾಡುವುದರಿಂದ ಶಿಶುಗಳಲ್ಲಿ ಸೋಂಕಿನ ವಿರುದ್ಧ ಹೋರಾಡಲು ಮತ್ತು ಸುರಕ್ಷಿತವಾಗಿರಲು ಸಹಾಯ ಮಾಡುತ್ತದೆ.

ಆ್ಯಂಟಿ-ಬ್ಯಾಕ್ಟೀರಿಯಲ್ ಏಜೆಂಟ್ ಎಂದು ಕರೆಯಲ್ಪಡುವ, ತೆಂಗು-ಆಧಾರಿತ ಚರ್ಮದ ಎಣ್ಣೆಯು ಅತ್ಯಂತ ಶುಷ್ಕ (ಒಣ) ಚರ್ಮ ಹಾಗೂ ದದ್ದು ಸಮಸ್ಯೆಗಳನ್ನು ಹೊಂದಿರುವವರಲ್ಲಿ ಬ್ಯಾಕ್ಟೀರಿಯಾ ಸಂಗ್ರಹವಾಗುವುದನ್ನು ತಡೆಯುತ್ತದೆ. ಅಗ್ಗ ಮತ್ತು ವ್ಯಾಪಕವಾಗಿ ಲಭ್ಯವಿರುವ ಈ ಎಣ್ಣೆಯ ನಿಯಮಿತ ಬಳಕೆಯಿಂದ ಚರ್ಮದ ಆರೋಗ್ಯವನ್ನು ಸುಧಾರಿಸಬಹುದು.

ತೆಂಗಿನೆಣ್ಣೆಯು ಆ್ಯಂಟಿ-ವೈರಲ್, ಆ್ಯಂಟಿಬ್ಯಾಕ್ಟೀರಿಯಲ್ ಮತ್ತು ಆ್ಯಂಟಿಫಂಗಲ್ ಗುಣಲಕ್ಷಣಗಳನ್ನು ಸಹ ಪ್ರದರ್ಶಿಸಿದೆ.

ಈಗ ಡಬಲ್‌ ಕ್ಲೆನ್ಸಿಂಗ್ (ಎರಡು ಬಾರಿ ಸ್ವಚ್ಛಗೊಳಿಸುವುದು) ಜನಪ್ರಿಯತೆ ಪಡೆದುಕೊಳ್ಳುತ್ತಿದೆ. ಮೇಕಪ್ ಹಾಗೂ ಸನ್‌ಸ್ಕ್ರೀನ್ ತೆಗೆಯಲು ತೆಂಗಿನೆಣ್ಣೆಯನ್ನು ಬಳಸಲಾಗುತ್ತಿದೆ. ವಿಶೇಷವಾಗಿ ಕಣ್ಣಿನ ಮೇಕಪ್‌ ತೆಗೆಯುವಾಗ ಮೃದು ಅನುಭವ ನೀಡುತ್ತದೆ. ಜೊತೆಗೆ, ಕಣ್ಣಿನ ಸುತ್ತಲಿನ ಸೂಕ್ಷ್ಮ ಹಾಗೂ ದುರ್ಬಲ ಪ್ರದೇಶ ಒಣಗದಂತೆ ತಡೆಯುತ್ತದೆ. ಇದು ಮೇಕಪ್‌ ರಿಮೂವರ್‌ನಂತಹ ನೈಸರ್ಗಿಕ ಎಣ್ಣೆಗಳ ಬಳಕೆಯನ್ನು ತಡೆಯುತ್ತದೆ.

ಇದರಲ್ಲಿ ಕೊಮೆಡೊಜೆನಿಕ್‌ ಅಂಶವಿದ್ದು, ಮೊಡವೆ ಸಮಸ್ಯೆ ಹೊಂದಿರುವವರು ಈ ಎಣ್ಣೆ ಬಳಕೆಯ ವೇಳೆ ಎಚ್ಚರಿಕೆ ವಹಿಸುವಂತೆ ಸಲಹೆ ನೀಡಲಾಗಿದೆ. ತೆಂಗಿನೆಣ್ಣೆ ಚರ್ಮದ ತಡೆಗೋಡೆಯನ್ನು ರಿಪೇರಿ ಮಾಡುವ ಹಾಗೂ ರಕ್ಷಿಸುವ ಗುಣಗಳನ್ನು ಒಳಗೊಂಡಿದೆ. ಇದು ಸುಲಭವಾಗಿ ಕೈಗೆಟಕುವ ದರದಲ್ಲಿ ಲಭ್ಯವಿದೆ ಮತ್ತು ದೇಹದ ಚರ್ಮಕ್ಕೆ ಸುರಕ್ಷಿತ ಹಾಗೂ ಪರಿಣಾಮಕಾರಿ ಮಾಯಿಶ್ಚರೈಸರ್‌ ಆಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.