ಪಂಚೇಂದ್ರಿಯಗಳಲ್ಲಿ ನಯನಗಳೇ ಪ್ರಧಾನ. ಮುಖದ ಅಂದದಲ್ಲಿ ಕಣ್ಣುಗಳ ಪಾತ್ರವೇ ಮುಖ್ಯ. ಸುಂದರ ಕಂಗಳ ಅಂದಕ್ಕೆ ಮನಸೋಲದವರೇ ಇಲ್ಲ. ಕೆಲವರ ಕಣ್ಣುಗಳು ಅಗಲವಾಗಿದ್ದರೆ, ಇನ್ನು ಕೆಲವರಿಗೆ ಸಣ್ಣ ಆಕಾರದ ಕಣ್ಣುಗಳಿರುತ್ತವೆ. ಈ ಆಕಾರಗಳಿಗೆ ತಕ್ಕಂತೆ ಮೇಕಪ್ ಮಾಡಿಕೊಂಡಾಗ ಮಾತ್ರ ಅವುಗಳ ಅಂದ ಮತ್ತಷ್ಟು ಹೆಚ್ಚಬಲ್ಲದು.
ವಿವಿಧ ಆಕಾರದ ಕಣ್ಣುಗಳ ಅಲಂಕಾರಕ್ಕಾಗಿ ಇಲ್ಲಿವೆ ಕೆಲ ಟಿಪ್ಸ್
ಬಾದಾಮಿ ಆಕಾರ: ಈ ಆಕಾರದ ಕಣ್ಣುಗಳು ಒಂದು ರೀತಿಯಲ್ಲಿ ವರದಾನ. ಬಾದಾಮಿ ಆಕಾರದ ಕಣ್ಣುಗಳಿಗೆ ಯಾವ ರೀತಿಯಲ್ಲಿ ಬೇಕಾದರೂ ಮೇಕಪ್ ಮಾಡಬಹುದು. ನಿಮ್ಮ ಮೈಬಣ್ಣಕ್ಕೆ ಸೂಕ್ತವಾದ ಐ ಶ್ಯಾಡೋ ಬಳಸಿ. ಕಣ್ಣು ಮತ್ತು ಹುಬ್ಬಿನ ಮಧ್ಯಭಾಗದ ಜಾಗದಲ್ಲಿ ಬಿಳಿ ಐಲೆಡ್ ಬಳಸಿ ಎಲ್ಲೆಡೆಯೂ ಸಮಪ್ರಮಾಣದಲ್ಲಿ ಹರಡುವಂತೆ ಬೆರಳುಗಳಿಂದ ಹಚ್ಚಿಕೊಳ್ಳಿ. ನಂತರ ಐಶ್ಯಾಡೊ. ತೀರಾ ಗಾಢವಲ್ಲದ ಐಶ್ಯಾಡೊ ಬಳಸಿ.
ಸಣ್ಣ ಕಣ್ಣು: ಸಣ್ಣ ಆಕಾರದ ಕಣ್ಣುಗಳು ದೊಡ್ಡದಾಗಿ ಕಾಣುವಂತೆ ಗಾಢ ಬಣ್ಣದ ಐ ಶ್ಯಾಡೋ ಬಳಸಿ. ಕಣ್ರೆಪ್ಪೆಯ ಮಧ್ಯಭಾಗದಿಂದ ಹೊರತುದಿಯ ಮೂಲೆಗಳ ತನಕ ವಿಸ್ತರಿಸುವಂತೆ ಲೈನರ್ ಎಳೆಯಿರಿ.
ವೃತ್ತಾಕಾರದ ಕಣ್ಣು: ಈ ರೀತಿಯ ಕಣ್ಣುಗಳ ಮೇಲ್ಭಾಗ ತುಸು ಉಬ್ಬಿದಂತಿರುತ್ತದೆ. ಇಂಥ ಕಣ್ಣುಗಳಿಗೆ ನ್ಯೂಡ್ ಇಲ್ಲವೇ ಗುಲಾಬಿ ಬಣ್ಣದ ಐಶ್ಯಾಡೋ ಹೆಚ್ಚು ಹೊಂದುತ್ತದೆ. ಕಣ್ಣುಗಳ ಮೇಲ್ಭಾಗದಲ್ಲಿ ಗಾಢವಾಗಿ ಲೈನರ್ ಬಳಸದಿರಿ. ಕಣ್ಣುಗಳ ಮೇಲ್ಭಾಗ ಮತ್ತು ಕೆಳಭಾಗ ಎರಡನ್ನೂ ಸಮಾನಾಂತರವಾಗಿ ಕಾಣುವಂತೆ ಮೇಕಪ್ ಮಾಡಿ. ಕಣ್ಣಿನ ಮೇಲ್ಭಾಗದಲ್ಲಿ ಐಲೈನರ್ ಗಾಢವಾಗಿ ಬಳಸಿದಲ್ಲಿ ಕೆಳಭಾಗದಲ್ಲಿ ಕಾಡಿಗೆ ಹಚ್ಚದಿರುವುದೇ ಸೂಕ್ತ. ಕಾಡಿಗೆ ಬದಲು ಬಿಳಿ ಐಶ್ಯಾಡೊ ನಿಮ್ಮ ಆಯ್ಕೆಯಾಗಿರಲಿ.
ಆಳವಾದ ಕಣ್ಣು: ಈ ರೀತಿಯ ಕಣ್ಣುಗಳಿಗೆ ಗಾಢಬಣ್ಣದ ಐಶ್ಯಾಡೊ ಚೆನ್ನಾಗಿ ಹೊಂದುತ್ತದೆ. ಕಣ್ರೆಪ್ಪೆಯ ತುದಿ ಮತ್ತು ಹುಬ್ಬಿನ ತುದಿಭಾಗದಲ್ಲಿ ತುಸು ಗಾಢವಾಗಿಯೇ ಐಶ್ಯಾಡೊ ಬಳಸಿ. ಕಾಡಿಗೆ ಬದಲು ಬಿಳಿಬಣ್ಣದ ಐಪೆನ್ಸಿಲ್ ಬಳಸಿ. ಕಣ್ರೆಪ್ಪೆಗಳಿಗೆ ಮಸ್ಕರಾ ಬಳಸಿ.
ಕಣ್ಣುಗಳು ದೇಹದ ಸೂಕ್ಷ್ಮ ಭಾಗವಾಗಿರುವುದರಿಂದ ಗುಣಮಟ್ಟದ ಕಾಡಿಗೆ, ಐಲೈನರ್, ಮಸ್ಕರಾ ಬಳಸಿ. ಐಪೆನ್ಸಿಲ್ ಬಳಸುವಾಗ ಪೆನ್ಸಿಲ್ ತುದಿ ಚೂಪಾಗಿರದಂತೆ ನೋಡಿಕೊಳ್ಳಿ. ಮೇಕಪ್ ಕಣ್ಣಿನೊಳಗೆ ಹರಡದಂತೆ ಎಚ್ಚರ ವಹಿಸಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.