‘ಬೆಲ್ಲಿ ಫ್ಯಾಟ್’ ಮಿಲೇನಿಯಲ್ ಜಮಾನದವರನ್ನು ಕಾಡುವ ಪ್ರಮುಖ ಸಮಸ್ಯೆಗಳಲ್ಲಿ ಒಂದು. ಒಮ್ಮೆ ಸೊಂಟದ ಸುತ್ತಲೂ ಕೊಬ್ಬು ಬೆಳೆದರೆ ಮತ್ತೆ ಅದನ್ನು ಕರಗಿಸುವುದು ಬಹಳ ಕಷ್ಟ. ಹಾಗಂತ ಕೊಬ್ಬು ಬೆಳೆಯದಂತೆ ಎಷ್ಟೇ ಪ್ರಯತ್ನ ಪಟ್ಟರೂ ಆಗುವುದಿಲ್ಲ. ಬೆಲ್ಲಿ ಫ್ಯಾಟ್‌ನಿಂದಾಗಿ ನಿಮ್ಮಿಷ್ಟದ ಡ್ರೆಸ್ ತೊಡುವುದೂ ಕಷ್ಟ. ಇದರಿಂದಾಗಿ ಯುವಜನರಲ್ಲಿ ಅದರಲ್ಲೂ ಹೆಚ್ಚಾಗಿ ಹೆಣ್ಣುಮಕ್ಕಳಲ್ಲಿ ಆತ್ಮವಿಶ್ವಾಸ ಕುಸಿಯುತ್ತಿದೆ. ಹಲವರಿಗೆ ವ್ಯಾಯಾಮ, ಅತಿಯಾಗಿ ವರ್ಕ್‌ಔಟ್ ಮಾಡುವುದು ಇಷ್ಟವಾಗುವುದಿಲ್ಲ. ಅಲ್ಲದೇ ಸಮಯದ ಅಭಾವವೂ ಕಾರಣವಾಗುತ್ತದೆ. ಆದರೆ ಕೆಲವು ಮನೆ ಮದ್ದಿನಿಂದ ಸೊಂಟದ ಸುತ್ತಲಿನ ಕೊಬ್ಬನ್ನು ಕರಗಿಸಬಹುದು.
ದೇಹದಲ್ಲಿ ಶೇಖರಣೆಯಾಗುವ ಕೆಟ್ಟ ಕೊಬ್ಬಿನಾಂಶಗಳಿಂದ ಕೆಲವೊಂದು ಗಂಭೀರ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಆ ಕಾರಣದಿಂದಲೂ ಕೊಬ್ಬನ್ನು ಕಡಿಮೆ ಮಾಡಿಕೊಳ್ಳುವುದು ಅವಶ್ಯವಾಗಿದೆ. ನಮಗೆ ತಿಳಿಯದ ಮನೆಯಲ್ಲಿ ಪ್ರತಿನಿತ್ಯ ನಾವು ಬಳಸುವ ಕೆಲವು ಆಹಾರ ಪದಾರ್ಥಗಳು ಸೊಂಟದ ಸುತ್ತಲಿನ ಕೊಬ್ಬಿನಾಂಶ ನಿವಾರಣೆಗೆ ಸಹಕಾರಿಯಾಗಿವೆ. ಅಂತಹ ಕೆಲವು ಪ್ರಮುಖ ಆಹಾರಗಳು ಹೀಗಿವೆ.
ಹೆಚ್ಚು ನೀರು ಕುಡಿಯಿರಿ
ಹೆಚ್ಚು ಹೆಚ್ಚು ನೀರು ಕುಡಿಯುವುದರಿಂದ ಬೆಲ್ಲಿ ಫ್ಯಾಟ್ ನಿವಾರಣೆಯಾಗುತ್ತದೆ. ಇದು ಸೊಂಟದ ಸುತ್ತಲಿನ ಕೊಬ್ಬನ್ನು ನಿವಾರಿಸಿ ದೇಹಾರೋಗ್ಯವನ್ನು ಸುಧಾರಿಸುತ್ತದೆ. ಹೆಚ್ಚು ನೀರು ಕುಡಿಯುವುದರಿಂದ ಚಯಾಪಚಯ ಕ್ರಿಯೆ ಉತ್ತಮವಾಗುತ್ತದೆ. ನೀರು ಜೀರ್ಣಕ್ರಿಯೆ ಹೆಚ್ಚಿ ತೂಕ ಕಡಿಮೆಯಾಗಲು ಸಹಾಯ ಮಾಡುತ್ತದೆ. ಹೆಚ್ಚು ನೀರು ಕುಡಿಯುವುದರಿಂದ ಹೊಟ್ಟೆ ತುಂಬಿದಂತಿರುತ್ತದೆ. ಹಾಗಾಗಿ ಪದೇ ಪದೇ ತಿನ್ನಬೇಕು ಎನ್ನಿಸುವುದಿಲ್ಲ.
ಕಲ್ಲಂಗಡಿ ರಸ
ಕಲ್ಲಂಗಡಿಯಲ್ಲಿ ಸಮೃದ್ಧವಾದ ಉತ್ಕರ್ಷಣ ನಿರೋಧಕ ಅಂಶವಿದೆ. ಇದರಲ್ಲಿನ ಅಂಶಗಳು ಕೊಬ್ಬನ್ನು ಕಡಿಮೆ ಮಾಡಲು ಸಹಕರಿಸುತ್ತವೆ. ಕಲ್ಲಂಗಡಿ ಹಣ್ಣು ಸೊಂಟದ ಸುತ್ತಲಿನ ಕೊಬ್ಬನ್ನು ಇಳಿಸಲು ಸಹಾಯ ಮಾಡುತ್ತದೆ. ಅಲ್ಲದೇ ಚರ್ಮದ ಆರೋಗ್ಯ ರಕ್ಷಣೆಗೂ ಇದು ಸಹಕಾರಿ. ನಿಮಗೆ ಹಸಿವಾದಾಗ ಲಘು ಆಹಾರವಾಗಿ ಕಲ್ಲಂಗಡಿಗಳನ್ನು ಸೇವಿಸಬಹುದು ಅಥವಾ ಇದನ್ನು ಜ್ಯೂಸ್ ಮಾಡಿಕೊಂಡು ಕುಡಿಯಬಹುದು.
ತೆಂಗಿನೆಣ್ಣೆ
ತೆಂಗಿನೆಣ್ಣೆಯನ್ನು ಅಡುಗೆಗೆ ಬಳಸುವುದರಿಂದ ಜೀರ್ಣಕ್ರಿಯೆ ಸುಲಭವಾಗುತ್ತದೆ. ಅಲ್ಲದೇ ಆರೋಗ್ಯಕರ ಜೀರ್ಣಕ್ರಿಯೆಗೂ ಇದು ಸಹಕಾರಿ. ಕೊಬ್ಬರಿ ಎಣ್ಣೆ ಸೇವನೆಯು ದೇಹದಲ್ಲಿ ಚಯಾಪಚಯ ಕ್ರಿಯೆ ಹೆಚ್ಚಲು ಸಹಾಯ ಮಾಡುತ್ತದೆ.
ಹಣ್ಣಿನ ರಸಗಳು
ಹಣ್ಣಿನ ರಸಗಳು ಕೊಬ್ಬನ್ನು ಕಡಿಮೆ ಮಾಡಲು ನೇರವಾಗಿ ಸಹಾಯ ಮಾಡದಿದ್ದರೂ ಪರೋಕ್ಷವಾಗಿ ಸಹಾಯ ಮಾಡುತ್ತವೆ. ಹಣ್ಣಿನ ರಸಕ್ಕೆ ಸಕ್ಕರೆ ಹಾಕದೇ ಸೇವಿಸಬೇಕು. ಯಾಕೆಂದರೆ ಇದರಲ್ಲಿ ಕ್ಯಾಲೊರಿ ಅಂಶ ಕಡಿಮೆ ಇರುತ್ತದೆ. ಇದನ್ನು ಸೇವಿಸುವುದರಿಂದ ತಿನ್ನುವ ಆಹಾರದ ಪ್ರಮಾಣವನ್ನು ಕಡಿಮೆ ಮಾಡಬಹುದು. ಅತಿಯಾಗಿ ಹಸಿವಾದಾದಾಗ ಹಣ್ಣಿನ ರಸವನ್ನು ಸೇವಿಸಬಹುದು.
ಶುಂಠಿ ಚಹಾ
ಶುಂಠಿ ಚಹಾವು ಹಲವು ಬಗೆಯ ಆರೋಗ್ಯ ಪ್ರಯೋಜನಗಳ ಜೊತೆಗೆ ತೂಕ ನಷ್ಟಕ್ಕೆ ಹೇಳಿ ಮಾಡಿಸಿದ ಆಹಾರ ಪದಾರ್ಥವಾಗಿದೆ. ಶುಂಠಿ ಚಹಾವನ್ನು ಪ್ರತಿದಿನ ಕುಡಿಯುವುದರಿಂದ ಅದರಲ್ಲಿನ ಥರ್ಮೋಜೆನಿಕ್ ಅಂಶವು ರಕ್ತದ ಶಾಖವನ್ನು ಹೆಚ್ಚಿಸುತ್ತದೆ. ಅಧ್ಯಯನಗಳ ಪ್ರಕಾರ ಇದು ಹೊಟ್ಟೆಯ ಕೊಬ್ಬನ್ನು ಸುಡಲು ಉತ್ತೇಜಿಸುತ್ತದೆ. ಇದು ಕಾರ್ಟಿಸೋಲ್ ಅನ್ನು ಪ್ರತಿಬಂಧಿಸುತ್ತದೆ. ಹಾಗಾಗಿ ಇದು ಒತ್ತಡದ ಹಾರ್ಮೋನ್ ನಿಯಂತ್ರಿಸುತ್ತದೆ. ಆ ಮೂಲಕ ತೂಕ ನಿವಾರಣೆಗೆ ಸಹಕರಿಸುತ್ತದೆ.
ಚೆನ್ನಾಗಿ ನಿದ್ರೆ ಮಾಡಿ
ಚೆನ್ನಾಗಿ ನಿದ್ರೆ ಮಾಡುವುದರಿಂದ ದೇಹಕ್ಕೆ ಹಲವು ಬಗೆಯ ಉಪಯೋಗಗಳಿವೆ. ದಿನದಲ್ಲಿ 7 ರಿಂದ 8 ಗಂಟೆಗಳ ಕಾಲ ಯಾವುದೇ ಕಿರಿಕಿರಿಯಿಲ್ಲದಂತೆ ನಿದ್ದೆ ಮಾಡಬೇಕು. ಉತ್ತಮ ನಿದ್ದೆಯು ಸೊಂಟದ ಸುತ್ತಲಿನ ಕೊಬ್ಬು ನಿವಾರಣೆಗೆ ಸಹಕಾರಿ. ನಿದ್ದೆ ಕಡಿಮೆಯಾದರೆ ದೈಹಿಕ ಕಾರ್ಯಕ್ಷಮತೆಯೂ ಕಡಿಮೆಯಾಗುತ್ತದೆ. ಇದು ನರಗಳ ಕಾರ್ಯನಿರ್ವಹಣೆ, ಚಯಾಪಚಯ ಕ್ರಿಯೆ ಹಾಗೂ ಹಾರ್ಮೋನ್ ಉತ್ಪಾದನೆಯ ಮೇಲೆ ಪರಿಣಾಮ ಬೀರುತ್ತದೆ. ಉತ್ತಮ ನಿದ್ದೆಯು ಚಯಾಪಚಯ ಕ್ರಿಯೆಯನ್ನು ಉತ್ತೇಜಿಸುತ್ತದೆ. ಅಲ್ಲದೇ ಇದು ದೇಹದ ಅಂಗಗಳ ಕಾರ್ಯ ನಿರ್ವಹಣೆಯನ್ನು ಸುಧಾರಿಸುತ್ತದೆ. ಹಾಗಾಗಿ ಬೊಜ್ಜು ನಿವಾರಣೆಗೆ ಉತ್ತಮ ನಿದ್ದೆ ಕೂಡ ಅತೀ ಅವಶ್ಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.