ADVERTISEMENT

ಮಳೆಗಾಲಕ್ಕಿರಲಿ ಬಣ್ಣಗಳ ಬಟ್ಟೆ

ಕಲಾವತಿ ಬೈಚಬಾಳ
Published 28 ಜೂನ್ 2024, 22:10 IST
Last Updated 28 ಜೂನ್ 2024, 22:10 IST
ಫ್ಲೋರಲ್‌ ಪ್ರಿಂಟೆಡ್‌ ಜಾಕೆಟ್‌– ಸಾಂದರ್ಭಿಕ ಚಿತ್ರ
ಫ್ಲೋರಲ್‌ ಪ್ರಿಂಟೆಡ್‌ ಜಾಕೆಟ್‌– ಸಾಂದರ್ಭಿಕ ಚಿತ್ರ   

ಋತುಮಾನಗಳು ಬದಲಾಗುವಂತೆ ಫ್ಯಾಷನ್ ಕ್ಷೇತ್ರದಲ್ಲೂ ಬದಲಾವಣೆಗಳಾಗುತ್ತಿರುತ್ತವೆ. ಆಯಾ ಕಾಲಕ್ಕೆ ಹೊಂದುವಂತಹ ಫ್ಯಾಷನ್‌ ಉಡುಪುಗಳು ಮಾರುಕಟ್ಟೆಯನ್ನು ಪ್ರವೇಶಿಸುತ್ತಲೇ ಇರುತ್ತವೆ. 

ತುಂತುರು ಮಳೆಯಿಂದ ಆರಂಭವಾಗುವ ಮಳೆ ಕೆಲವೊಮ್ಮೆ ಹೊರಗಡೆ ಹೆಜ್ಜೆ ಇಡಲು ಸಾಧ್ಯವಾಗದಷ್ಟು ಸುರಿಯುತ್ತದೆ. ಮಳೆಗಾಲದಲ್ಲಿ ಧರಿಸುವ, ಆಯ್ಕೆ ಮಾಡಿಕೊಳ್ಳುವ ಬಣ್ಣ ಬಣ್ಣದ ಉಡುಪುಗಳು ನಿಮ್ಮನ್ನು ಸ್ಟೈಲಿಷ್‌ ಆಗಿ ಕಾಣುವಂತೆ ಮಾಡಬಲ್ಲವು. 

ನಮ್ಮ ಉಡುಗೆ ನಮ್ಮ ವ್ಯಕ್ತಿತ್ವವನ್ನು ಪ್ರತಿನಿಧಿಸುವಂಥದ್ದು. ಟ್ರೆಂಡ್‌ಗೆ ಹೊಂದುವಂತೆ, ಬೇರೆಯವರಿಗಿಂತ ವಿಭಿನ್ನವಾಗಿ ಕಾಣಿಸಿಕೊಳ್ಳಬೇಕೆಂಬ ಹಂಬಲ ಬಹುತೇಕರದ್ದು.

ADVERTISEMENT

ಹೊಸ ವಿನ್ಯಾಸದ ಬಟ್ಟೆಗಳನ್ನು ಧರಿಸುವ ಭರದಲ್ಲಿ ಕಿರಿಕಿರಿಯಾಗದಂಥ, ಆಹ್ಲಾದಕರ ಎನಿಸುವ, ಕಣ್ಣಿಗೆ ರಾಚದಂಥ ಬಣ್ಣದ ಉಡುಪುಗಳನ್ನು ಧರಿಸುವುದು ಉತ್ತಮ. ವರ್ಣರಂಜಿತ ಶಿರವಸ್ತ್ರಗಳು, ಹೆಡ್‌ಬ್ಯಾಂಡ್‌ಗಳು ಅಥವಾ ಛತ್ರಿ, ಶೂ, ಚಪ್ಪಲಿಗಳು ನಿಮ್ಮ ಉಡುಪಿಗೆ ಒಗ್ಗುವಂತೆ ಬಳಸಿ.

ಸಾಮಾನ್ಯವಾಗಿ ಮನೆಯಲ್ಲೇ ಇರುವ ಬಹುತೇಕರು ಬೆಚ್ಚಗಿನ ಹಿತ ನೀಡುವ ಉಡುಪುಗಳನ್ನು ತೊಡಲು ಇಷ್ಟಪಡುತ್ತಾರೆ. ಇನ್ನು ಮನೆಯಿಂದ ಆಚೆ, ಕಚೇರಿಯಲ್ಲಿ ದುಡಿಯುವ ಮಹಿಳೆಯರು ಮಳೆ ನೀರು, ಕೆಸರಿನ ರಸ್ತೆ ದಾಟಿ ಬರುವಾಗ ಉಡುಗೆ ಹಾಳಾಗದಂತೆ ಜಾಗೃತಿ ವಹಿಸುವತ್ತ ಮುಂದಾಗುತ್ತಾರೆ. ಅಂಥವರು ಶಾರ್ಟ್ಸ್‌, ಸ್ಕರ್ಟ್ಸ್‌, ಆ್ಯಂಕಲ್‌ ಲೆಂಥ್‌ ಜೀನ್ಸ್‌, ಲೆಗ್ಗಿನ್ಸ್‌, ಕಾಟನ್‌ ಹಾಗೂ ಹಗುರವಾದ ಸೀರೆ ಮುಂತಾದವುಗಳನ್ನೇ ಆಯ್ದುಕೊಳ್ಳುತ್ತಾರೆ.

ಮಾನ್ಸೂನ್ ಋತುವಿಗೆ ಶಾರ್ಟ್ಸ್ ಬಟ್ಟೆಗಳು ಸೂಕ್ತ ಆಯ್ಕೆ. ಡೆನಿಮ್ ಶಾರ್ಟ್ಸ್ ಜನಪ್ರಿಯ ಉಡುಪುಗಳಾಗಿದ್ದರೂ ಒದ್ದೆಯಾದಾಗ ಅವು ಭಾರವಾಗಬಹುದು. ಬದಲಿಗೆ, ಲಿನಿನ್ ಅಥವಾ ಸಿಂಥೆಟಿಕ್ ಮಿಶ್ರಣದ ಬಟ್ಟೆಗಳನ್ನು ಬಳಸಬಹುದು. ಇವು ನೀರು ಹಿಡಿದಿಟ್ಟುಕೊಳ್ಳದೇ, ಬೇಗನೆ ಒಣಗುತ್ತವೆ.  ರಬ್ಬರ್ ಸ್ಯಾಂಡಲ್‌ಗಳು, ಸ್ನೀಕರ್‌ಗಳಂತಹ ವಾಟರ್‌ಪ್ರೂಫ್‌ ಶೂ, ಬ್ಯಾಗ್‌ಗಳು ಅತ್ಯುತ್ತಮ ಆಯ್ಕೆಯಾಗಲಿ.

ಸನ್ನಿ ಯೆಲ್ಲೊ ಬಣ್ಣದ ರೇನ್‌ಕೋಟ್‌, ಕುರ್ತಿ, ಶರ್ಟ್ಸ್‌, ಓಷಿಯನ್‌ ಬ್ಲೂ ಬಣ್ಣದ ಡೆನಿಂಸ್ಕರ್ಟ್ಸ್‌ ಜೊತೆಗೆ ಹಗುರವಾದ ಉಲನ್‌ ಟಾಪ್‌ಗಳನ್ನು ತೊಡಬಹುದು. ಫ್ರೆಷ್‌ ಗ್ರೀನ್‌ ಬಣ್ಣದ ಕಾಟನ್‌ ಮತ್ತು ಲೆನಿನ್‌ ಬಟ್ಟೆಯ ಕುರ್ತಾ ತೊಟ್ಟಾಗ ಮೈಗೆ ಹಗುರವೆನಿಸಿ ಆರಾಮದಾಯಕ ಅನುಭವ ನೀಡುತ್ತವೆ.

ಮರಳಿನ ಬಣ್ಣದ ಹಾಗೂ ಬಿಳಿ, ತಿಳಿ ಗುಲಾಬಿ ಬಣ್ಣದ ಟ್ರೆಂಚ್ ಕೋಟ್‌ಗಳು, ವೈಡ್ ಲೆಗ್ ಪ್ಯಾಂಟ್ ಅಥವಾ ಲಿನಿನ್ ಶರ್ಟ್‌ಗಳು ಸುಲಭವಾಗಿ ಹೊಂದುವುದರಿಂದ ಕಾರ್ಪೋರೆಟ್‌ ಕಂಪನಿಗಳಲ್ಲಿ ಕೆಲಸ ಮಾಡುವವರಿಗೆ ಹೆಚ್ಚು ಸೂಕ್ತ ಎನಿಸುವವು.

ಆ್ಯಂಕಲ್‌ ಲೆಂತ್‌ ಜೀನ್ಸ್‌ ಜೊತೆಗೆ, ಶಾರ್ಟ್‌, ಟಾಪ್‌, ಆ್ಯಂಕಲ್‌ ಬೂಟ್ಸ್‌ ಜೊತೆಗೆ ಉದ್ದನೆಯ ಜಾಕೆಟ್‌ ಧರಿಸಿದರೆ ಸ್ಟೈಲಿಷ್‌ ಲುಕ್ ಸಿಗುವುದು. ಇಲ್ಲಿ ಬಣ್ಣಗಳ ಆಯ್ಕೆಗೆ ಆದ್ಯತೆ ನೀಡುವುದು ಉತ್ತಮ. 

ಕಡುಕಪ್ಪು, ಬಿಳಿ, ಕೆಂಪು ಬಣ್ಣವಿಲ್ಲದೇ ಫ್ಯಾಷನ್‌ ಲೋಕವೇ ಇಲ್ಲ. ಫ್ಲೋರಲ್‌ ಪ್ರಿಂಟೆಡ್‌ ರೇನ್‌ಕೋಟ್ಸ್‌, ಸ್ಟ್ರೈಪ್ಡ್ ಟಾಪ್‌ಗಳು, ಫ್ಲೋರಲ್‌ ಪ್ರಿಂಟೆಡ್‌ ಟ್ರುಷರ್ಸ್‌ ಹಾಗೂ ರೇನ್‌ ಬೂಟ್ಸ್‌ಗಳನ್ನು ತೊಡವುದರಿಂದ ಇನ್ನಷ್ಟು ಟ್ರೆಂಡಿಯಾಗಿ ಕಾಣಿಸಿಕೊಳ್ಳಬಹುದು. ಮಳೆಗಾಲದ ಖುಷಿಯನ್ನು ಇವು ಹೆಚ್ಚಿಸಬಲ್ಲವು. 

ಮಳೆಗಾಲದಲ್ಲಿ ಟ್ರೆಕಿಂಗ್‌ ಮಾಡುವವರು ಟ್ರ್ಯಾಕ್ ಪ್ಯಾಂಟ್‌ಗಳು, ಹೂಡೀಸ್ ಅಥವಾ ಸ್ನೀಕರ್ಸ್‌ಗಳನ್ನು ಧರಿಸುವುದು ಹೆಚ್ಚು ಸೂಕ್ತ. 

ಜಾಕೆಟ್‌, ಉಲನ್‌ ಬಟ್ಟೆಗಳು, ಫುಲ್‌ಓವರ್‌‌ಗಳು ಟ್ರೆಂಡಿ ಎನ್ನಿಸುವ ಜೊತೆಗೆ ಅಂದವನ್ನೂ ಹೆಚ್ಚಿಸುತ್ತವೆ. ಜೊತೆಗೆ ದೇಹವನ್ನೂ ಬೆಚ್ಚಗಿಸಿರುತ್ತವೆ. ಇದನ್ನು ಜೀನ್ಸ್‌ ಜೊತೆ, ಕುರ್ತಾ ಹಾಗೂ ಸೀರೆ ಮೇಲೆ, ಸ್ಕರ್ಟ್ ಜೊತೆ ಧರಿಸಬಹುದು.

ಸೀರೆ ಉಡುವ ಮಹಿಳೆರಿಗಾಗಿ ಓವರ್‌ಕೋಟ್‌ ಬ್ಲೌಸ್‌ ಮಳೆಗಾಲದ ಟ್ರೆಂಡಿ ಡ್ರೆಸ್‌‌ ಆಗಿದೆ. ತೊಡಲು ಆರಾಮದಾಯಕ ಎನ್ನಿಸುವ ಈ ಬ್ಲೌಸ್‌, ಫ್ಯಾಷನ್‌ ವಿಚಾರದಲ್ಲಿ ಬದಲಾದ ಮನಸ್ಥಿತಿಯನ್ನೂ ಹೇಳುತ್ತದೆ.  ಕಾಟನ್‌, ಆರ್ಗಾಂಜಾ, ಕ್ರೇಪ್, ಫ್ಯಾನ್ಸಿ, ಹೀಗೆ ಎಲ್ಲ ಥರದ ಸೀರೆಗಳಿಗೂ ಈ ಬ್ಲೌಸ್‌ ಹೊಂದುವಂಥದ್ದು.

ಲಾಂಗ್‌ ಜಾಕೆಟ್‌ ರೇನಿ ಜೌಟ್‌ಫಿಟ್‌
ರೇನಿ ಜೌಟ್‌ಫಿಟ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.