ADVERTISEMENT

ಕೌ–ಪ್ರಿಂಟ್‌ ವಿನ್ಯಾಸದ ಫ್ಯಾಷನ್ ನೋಟ

ರೇಷ್ಮಾ
Published 13 ಮೇ 2022, 19:30 IST
Last Updated 13 ಮೇ 2022, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಫ್ಯಾಷನ್ ಟ್ರೆಂಡ್ ಸದಾ ಬದಲಾಗುತ್ತಿರುತ್ತದೆ. ಬದಲಾಗುತ್ತಲೇ ಇರುವ ಫ್ಯಾಷನ್ ಜಗತ್ತಿನಲ್ಲಿ ನವ ನವೀನ ವಿನ್ಯಾಸಗಳು ಫ್ಯಾಷನ್ ಪ್ರಿಯರನ್ನು ಹೆಚ್ಚು ಸೆಳೆಯುತ್ತವೆ. ಕಳೆದ ಕೆಲ ವರ್ಷಗಳಿಂದ ಪ್ರಾಣಿಗಳ ಮೈಬಣ್ಣದ ಚಿತ್ತಾರವನ್ನು ಡ್ರೆಸ್‌ ಮೇಲೆ ಮೂಡಿಸುವುದು ವಿಶೇಷವಾಗಿತ್ತು. ಜೀಬ್ರಾ, ಚಿರತೆ ಮೈಬಣ್ಣದ ಪ್ರಿಂಟ್‌ ಅನ್ನು ಹೋಲುವ ಉಡುಪುಗಳು ಫ್ಯಾಷನ್ ಮಾರುಕಟ್ಟೆಯಲ್ಲಿ ಹೆಚ್ಚು ಸದ್ದು ಮಾಡಿದ್ದವು. ಇತ್ತೀಚೆಗೆ ಈ ರೀತಿಯ ಹೊಸದೊಂದು ಟ್ರೆಂಡ್‌ ಫ್ಯಾಷನ್ ಪ್ರಿಯರ ಗಮನ ಸೆಳೆಯುತ್ತಿದೆ. ಇದೇ ‘ಕೌ ಪ್ರಿಂಟ್‌(ಹಸುವಿನ ಮೈ ಬಣ್ಣದ)’ ಡ್ರೆಸ್ ಟ್ರೆಂಡ್‌.

ಫ್ಯಾಂಟ್‌, ಟಾಪ್‌, ಶರ್ಟ್‌, ಆಭರಣಗಳು ಹೀಗೆ ಎಲ್ಲದರಲ್ಲೂ ಇದನ್ನು ಅಳವಡಿಸಲಾಗಿದೆ. ಸೆಲೆಬ್ರೆಟಿಗಳು ಈ ವಿನ್ಯಾಸವನ್ನು ಹೆಚ್ಚು ಮೆಚ್ಚಿ ಧರಿಸುತ್ತಿದ್ದಾರೆ. ಮೊದ ಮೊದಲು ಬಿಳಿ ಬಟ್ಟೆಯ ಮೇಲೆ ಕಂದು ಅಥವಾ ಕಪ್ಪು ಬಣ್ಣದ ಡಾಟ್‌ಗಳನ್ನು ಮೂಡಿಸುವುದು ಹೆಚ್ಚು ಪ್ರಚಲಿತವಾಗಿತ್ತು. ಆದರೆ ಇತ್ತೀಚೆಗೆ ಎಲ್ಲ ರೀತಿಯ ಗಾಢ ಬಣ್ಣದ ಮೇಲೆ ಡಾಟ್‌ಗಳನ್ನು ಮೂಡಿಸಲಾಗುತ್ತಿದೆ. ಕೌ ಪ್ರಿಂಟ್‌ ಡ್ರೆಸ್‌ ಜೊತೆಗೆ ಇಂತಹದ್ದೇ ಪ್ರಿಂಟ್‌ ಇರುವ ಶೂ, ಪರ್ಸ್‌, ಟೋಪಿ ಧರಿಸುವುದರಿಂದ ಭಿನ್ನವಾಗಿ ಕಾಣಬಹುದು ಎಂಬುದು ಫ್ಯಾಷನ್ ತಜ್ಞರ ಅಭಿಪ್ರಾಯ.

ನೆಕ್‌ ಟೈ ಶರ್ಟ್‌

ADVERTISEMENT

ನೆಕ್‌ ಟೈ ಶರ್ಟ್ ಇತ್ತೀಚೆಗೆ ಹೆಚ್ಚು ಟ್ರೆಂಡ್‌ನಲ್ಲಿದೆ. ಇದರಲ್ಲಿ ಕೌ ಪ್ರಿಂಟ್‌ ವಿನ್ಯಾಸವನ್ನು ಮಿಲೇನಿಯಲ್ ಯುವತಿಯರು ಹೆಚ್ಚು ಮೆಚ್ಚುತ್ತಿದ್ದಾರೆ. ಶರ್ಟ್‌ಗೆ ಟೈಯನ್ನು ಅಳವಡಿಸಲಾಗಿದ್ದು ಇದೊಂದು ಹೊಸ ವಿನ್ಯಾಸದ ಡ್ರೆಸ್‌ನಂತೆ ಕಾಣಿಸುತ್ತದೆ. ಟೈ ಕೂಡ ಶರ್ಟ್‌ನಂತೆ ಕೌ ಪ್ರಿಂಟ್‌ ಚಿತ್ತಾರವನ್ನೇ ಹೊಂದಿದ್ದು ಇದನ್ನು ಸ್ಕರ್ಟ್‌, ಜೀನ್ಸ್‌, ಲೆಗ್ಗಿಂಗ್ಸ್‌, ಜಗ್ಗಿಂಗ್ಸ್‌ ಜೊತೆ ಧರಿಸಬಹುದು. ಶರ್ಟ್‌ ಬಣ್ಣದ್ದೇ ಬಾಟಮ್‌ ಉಡುಪು ಧರಿಸುವುದರಿಂದ ಅಂದವಾಗಿ ಕಾಣಬಹುದು.

ಹೈ ವೇಸ್ಟ್ ಪ್ಯಾಂಟ್‌

ಹಳೆಯ ಸಿನಿಮಾಗಳಲ್ಲಿ ಹೀರೊಗಳು ಧರಿಸುತ್ತಿದ್ದ ಹೈ ವೇಸ್ಟ್ ಪ್ಯಾಂಟ್ ಈಗಿನ ಜಮಾನದ ಹುಡುಗಿಯರ ಹಾಟ್ ಫೇವರಿಟ್ ಆಗಿದೆ. ಈಗ ಕೌ ಪ್ರಿಂಟ್‌ನಲ್ಲೂ ಹೈವೇಸ್ಟ್ ಪ್ಯಾಂಟ್ ಬಂದಿದ್ದು ಹೆಣ್ಣುಮಕ್ಕಳ ಮನ ಸೆಳೆದಿದೆ. ಈ ಪ್ಯಾಂಟ್‌ ಮೇಲೆ ಕ್ರಾಪ್‌ ಟಾಪ್‌, ಶರ್ಟ್‌, ಸ್ಲೀವ್‌ ಲೆಸ್ ಇಂತಹವನ್ನು ಧರಿಸುವುದರಿಂದ ಸುಂದರವಾಗಿ ಕಾಣಬಹುದು. ಡಾಟ್‌ ಇರುವ ಟಾಪ್‌ ಧರಿಸುವುದರಿಂದ ಈ ಪ್ಯಾಂಟ್‌ಗೆ ಇನ್ನಷ್ಟು ಲುಕ್ ಮೂಡಿಸಬಹುದು.

ಅರೈಡರ್‌ ಬೂಟ್ಸ್‌

ಅರೈಡರ್‌ ಬೂಟ್ಸ್‌ ಟ್ರೆಂಡ್‌ನಲ್ಲಿದೆ. ಹಾಫ್‌ ಜೀನ್ಸ್‌, ಸ್ಕರ್ಟ್‌, ಮಿನಿ ಸ್ಕರ್ಟ್‌ ಧರಿಸಿದಾಗ ಇದನ್ನು ಧರಿಸಿದರೆ ನೋಟವೇ ಬದಲಾಗುತ್ತದೆ. ಈಗ ಇದರ ಮೇಲೂ ಕೌ ಪ್ರಿಂಟ್ ಮೂಡಿಸಲಾಗಿದ್ದು ಇದನ್ನು ನೈಟ್‌ಔಟ್‌, ಡಿನ್ನರ್‌ ಪಾರ್ಟಿಯಂತಹ ಸಂದರ್ಭಗಳಲ್ಲಿ ಧರಿಸಲು ಹೆಚ್ಚು ಸೂಕ್ತ ಎನ್ನಿಸುತ್ತದೆ.

ಕೌ ಪ್ರಿಂಟ್ ಬಕೆಟ್ ಹ್ಯಾಟ್‌

ತಲೆ ಮೇಲೆ ಧರಿಸಿದರೆ ಪೂರ್ತಿ ತಲೆಯನ್ನು ಕವರ್‌ ಮಾಡುವ ಈ ಬಕೆಟ್ ಹ್ಯಾಟ್‌ ಬೇಸಿಗೆಯಲ್ಲಿ ಧರಿಸಲು ಸೂಕ್ತ. ಅಲ್ಲದೇ ನೀವು ಬೇಸಿಗೆಯಲ್ಲಿ ಯಾವುದೇ ಪ್ರವಾಸ್‌, ಪಿಕ್‌ನಿಕ್‌ ಅಂತ ಹೋದಾಗ ಅಲ್ಲಿ ಧರಿಸಲು ಚೆನ್ನಾಗಿರುತ್ತದೆ. ಇದು ಬಿಸಿಲು ನೇರವಾಗಿ ಮುಖಕ್ಕೆ ಬೀಳುವುದನ್ನು ತಡೆಯುವುದಲ್ಲದೇ ಟ್ರೆಂಡಿ ಆಗಿಯೂ ಕಾಣಿಸುತ್ತದೆ. ಈ ಹ್ಯಾಟ್‌ ಮೇಲೆ ಕೌ ಪ್ರಿಂಟ್ ಚಿತ್ತಾರ ಮೂಡಿಸುವುದು ಈಗಿನ ವಿಶೇಷ.

ಶಾಕೆಟ್‌

ಜಾಕೆಟ್‌ನಂತೆ ಉದ್ದಕ್ಕೆ ಇರುವ ಶಾಕೆಟ್‌ನಲ್ಲೂ ಕೌ ಪ್ರಿಂಟ್‌ ವಿನ್ಯಾಸವನ್ನು ಮೂಡಿಸಲಾಗಿದೆ. ಈ ಶಾಕೆಟ್‌ ನೈಟ್ ಪಾರ್ಟಿ, ಔಟಿಂಗ್‌ನಂತಹ ಸಂದರ್ಭದಲ್ಲಿ ಧರಿಸಲು ಹೆಚ್ಚು ಸೂಕ್ತ ಎನ್ನಿಸುತ್ತದೆ. ಇದನ್ನು ಮಿಕ್ಸ್ ಅಂಡ್‌ ಮ್ಯಾಚ್‌ ಪ್ಯಾಂಟ್‌, ಟಾಪ್‌ ಜೊತೆ ಧರಿಸಬಹುದು.

ಜಾಗರ್‌ ಪ್ಯಾಂಟ್‌

ಜಾಗಿಂಗ್ ಹೋಗುವಾಗ ಒಂದೇ ರೀತಿಯ ಪ್ಯಾಂಟ್ ಧರಿಸಿ ಬೇಸರ ಮೂಡಿದ್ದರೆ ಕೌ ಪ್ರಿಂಟ್ ಜಾಗರ್ ಪ್ಯಾಂಟ್ ಧರಿಸಬಹುದು. ಇದರೊಂದಿಗೆ ಟೀ ಶರ್ಟ್‌, ಸ್ಲೀವ್‌ ಲೆಸ್‌ ಟಾಪ್‌ ಮುಂತಾದುವನ್ನು ಧರಿಸಬಹುದು. ಜಾಗರ್‌ ಪ್ಯಾಂಟ್‌ನಲ್ಲಿ ಬಿಳಿದ ಬಣ್ಣದ ಮೇಲೆ ಕಪ್ಪು ಡಾಟ್‌ ಇರುವ ಶೈಲಿಯೇ ಹೆಚ್ಚು ಪ್ರಚಲಿತದಲ್ಲಿದೆ.

ಇಷ್ಟೇ ಅಲ್ಲದೇ ಕೌ ಪ್ರಿಂಟ್ ವಿನ್ಯಾಸದ ಡ್ರೆಸ್‌ ಡ್ರೆಸ್‌, ಪೈಜಾಮ ಪ್ಯಾಂಟ್ ಮತ್ತು ಶರ್ಟ್‌, ಹೈ ವೇಸ್ಟ್ ಮಿನಿ ಸ್ಕರ್ಟ್‌, ಚಪ್ಪಲಿ, ಫ್ಲೇರ್ ಪ್ಯಾಂಟ್‌, ಡೆನಿಮ್‌ ಸ್ಕರ್ಟ್, ಪುಲ್ಲೋವರ್‌, ಹೆಡ್‌ಬ್ಯಾಂಡ್‌, ಜಾಗಾರ್ ಪ್ಯಾಂಟ್‌, ಕ್ಲಾಗ್ಸ್‌ ಎಲ್ಲವೂ ಇವೆ. ಇದನ್ನು ಸಂದರ್ಭಕ್ಕೆ ತಕ್ಕಂತೆ ಧರಿಸಿ ಅಂದ ಹೆಚ್ಚಿಸಿಕೊಳ್ಳುವ ಜಾಣ್ಮೆ ನಿಮಗಿರಬೇಕಷ್ಟೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.