ಮಹಿಳೆಯರ ಅಲಂಕಾರದ ಸಾಧನಗಳಲ್ಲಿ ಕಾಲ್ಗೆಜ್ಜೆಯೂ ಒಂದು. ಇದು ವಿವಿಧ ವಿನ್ಯಾಸಗಳ ಮೂಲಕ ನಾರಿಯ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸುವಂತಹದ್ದು. ಹಬ್ಬದ ದಿನ ಉದ್ದ ಲಂಗ ತೊಟ್ಟು ಹೊಸ್ತಿಲ ಆಚೀಚೆ ಓಡಾಡುವ ಪುಟ್ಟ ಹುಡುಗಿಯ ಘಲಘಲ ಗೆಜ್ಜೆಯ ನಾದ ಮನೆ ಮಂದಿಗೆಲ್ಲ ಸಂಭ್ರಮದ ಸಿಂಚನ ಮೂಡಿಸುತ್ತದೆ.
ಒಂದಷ್ಟು ದಿನ ಮೂಲೆಗೆ ಸರಿದಿದ್ದ ಕಾಲ್ಗೆಜ್ಜೆ ಈಗ ಹೊಸ ವಿನ್ಯಾಸದ ಮೂಲಕ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ತನ್ನ ಆಕರ್ಷಕ ವಿನ್ಯಾಸದಿಂದ ಮಹಿಳೆಯರನ್ನು ಸೆಳೆಯುತ್ತಿವೆ. ಕಾಲ್ಗೆಜ್ಜೆಗಳಲ್ಲಿ ಕೆಲವರಿಗೆ ದಪ್ಪವಾದ ಗೆಜ್ಜೆ ಇಷ್ಟವಾದರೆ ಇನ್ನು ಕೆಲವರಿಗೆ ತೆಳುವಾದ ಭಾರವಿಲ್ಲದ ಗೆಜ್ಜೆ ಇಷ್ಟವಾಗುತ್ತದೆ. ಇತ್ತೀಚೆಗೆ ಸಭೆ ಸಮಾರಂಭಗಳಲ್ಲಿ ಹೆಣ್ಣು ಮಕ್ಕಳು ಹೆಚ್ಚು ಗ್ರ್ಯಾಂಡ್ ಆಗಿ ಕಾಣುವ ಕಾಲ್ಗೆಜ್ಜೆಗಳನ್ನು ಧರಿಸುತ್ತಿದ್ದಾರೆ. ಸಿಂಪಲ್ ಆದ ಕಾಲ್ಗೆಜ್ಜೆಯನ್ನು ಸಾಮಾನ್ಯ ದಿನಗಳಲ್ಲಿ ಹಾಕುತ್ತಾರೆ.
ಫ್ಯಾನ್ಸಿಯತ್ತ ಒಲವು
ಕಾಲ್ಗೆಜ್ಜೆ ಈಗ ಫ್ಯಾನ್ಸಿ ರೂಪ ಪಡೆಯುತ್ತಿವೆ. ಯುವತಿಯರಿಂದ ಹಿಡಿದು ಮಧ್ಯ ವಯಸ್ಸಿನ ಮಹಿಳೆಯರವರೆಗೂ ಇದು ಮೆಚ್ಚುಗೆ ಪಡೆದುಕೊಂಡಿದೆ. ಧರಿಸುವ ಬಟ್ಟೆಯ ಬಣ್ಣಕ್ಕೆ ಸರಿಹೊಂದುವ ಕಾಲ್ಗೆಜ್ಜೆಗಳು ಸದ್ಯದ ಟ್ರೆಂಡ್. ಬೆಳ್ಳಿ, ಬ್ಲ್ಯಾಕ್ ಮೆಟಲ್, ಗೋಲ್ಡನ್ ಕಲರ್ ಹೀಗೆ ನಾನಾ ತರಹ ವಿನ್ಯಾಸದ ಗೆಜ್ಜೆಗಳು ಸಮಾರಂಭಗಳಲ್ಲಿ ಹೆಂಗಳೆಯರ ಕಾಲಿನ ಅಂದವನ್ನು ಹೆಚ್ಚಿಸುತ್ತವೆ. ಆಕರ್ಷಕ ಹವಳ, ಮುತ್ತುಗಳಿಂದ ಕೈಯಲ್ಲಿಯೇ ಕುಸರಿ ಕೆತ್ತನೆ ಮಾಡಿದ ಕಾಲ್ಗೆಜ್ಜೆಗಳು ಸಾಂಪ್ರದಾಯಕ ಶೈಲಿಯಲ್ಲೇ ಗಮನ ಸೆಳೆಯುತ್ತಿವೆ. ಈ ಫ್ಯಾನ್ಸಿ ಕಾಲ್ಗೆಜ್ಜೆಗಳು ಕೈಗೆಟಕುವ ದರದಿಂದಾಗಿ ಕಾಲೇಜು ಹುಡುಗಿಯರನ್ನು ಹೆಚ್ಚು ಆಕರ್ಷಿಸುತ್ತಿವೆ.
ಈ ಫ್ಯಾನ್ಸಿ ಕಾಲ್ಗೆಜ್ಜೆಗಳನ್ನು ಸುಲಭವಾಗಿ ಮನೆಯಲ್ಲಿಯೇ ತಯಾರಿಸಬಹುದು. ಒಂದಿಷ್ಟು ಬೇರೆ ಬೇರೆ ವಿನ್ಯಾಸ ಹಾಗೂ ಬಣ್ಣದ ಮಣಿಗಳನ್ನು ಪೋಣಿಸಿ ಸುಂದರ ಗೆಜ್ಜೆಗಳನ್ನಾಗಿಸಿಕೊಳ್ಳಬಹುದು. ಇದಕ್ಕಾಗಿ ವೈವಿಧ್ಯ ಆಕಾರದ ಮಣಿಗಳನ್ನು ಸಂಗ್ರಹಿಸಬೇಕಾಗುತ್ತದೆ. ಹಸಿರು, ಹಳದಿ, ಕೆಂಪು, ಬಿಳಿ ಹೀಗೆ ನಾನಾ ಬಣ್ಣದ ಮಣಿಗಳನ್ನು ಸೇರಿಸಿ ರಂಗುರಂಗಿನ ಕಾಲ್ಗೆಜ್ಜೆ ತಯಾರಿಸಬಹುದು. ಪರಿಸರ ಸ್ನೇಹಿ ಹಾಗೂ ಆಕರ್ಷಕ ಲುಕ್ ನೀಡುವ ಭತ್ತ, ಅಂಟುವಾಳ, ನೀಲಗಿರಿ ಬೀಜ, ಗುಲಗಂಜಿ, ಕಾಶಿಮಣಿ, ಹುಣಸೆಬೀಜ, ಸೀತಾಫಲ, ಪಪ್ಪಾಯ ಬೀಜಗಳಿಂದಲೂ ಕಾಲ್ಗೆಜ್ಜೆ ತಯಾರಿಸಬಹುದು. ಕಾಲೇಜು ಹುಡುಗಿಯ ಮ್ಯಾಚಿಂಗ್ ಕ್ರೇಜ್ ಹೆಚ್ಚಿಸುವುದೇ ಈ ಫ್ಯಾನ್ಸಿ ಕಾಲ್ಗೆಜ್ಜೆ.
ಇದಲ್ಲದೇ ಕುಂದನ್ ಬಳಸಿ ನೆಕ್ಲೇಸ್ ಮಾಡುವ ರೀತಿಯಲ್ಲಿ ನಾವೇ ಕಾಲ್ಗೆಜ್ಜೆಯನ್ನು ಮಾಡಿಕೊಳ್ಳಬಹುದಾಗಿದೆ. ಬಣ್ಣ ಬಣ್ಣದ ಮುತ್ತುಗಳನ್ನು ಬಳಸಿ ಗ್ರ್ಯಾಂಡ್ ಡ್ರೆಸ್‌ಗಳಿಗೆ ಹಾಕಿಕೊಂಡರೆ ನೋಡಲು ಚೆನ್ನಾಗಿ ಕಾಣುತ್ತದೆ. ಇಂತಹ ಕಾಲ್ಗೆಜ್ಜೆ ಹಾಕಿಕೊಳ್ಳುವಾಗ ಕಾಲಿಗೆ ಪ್ರತ್ಯೇಕವಾಗಿ ಮೆಹೆಂದಿ ಹಚ್ಚುವ ಅವಶ್ಯಕತೆ ಇರುವುದಿಲ್ಲ. ಒಂದು ವೇಳೆ ಹಚ್ಚಿದರೂ ಕಾಲ್ಗೆಜ್ಜೆಯ ಸೌಂದರ್ಯ ಮರೆಯಾಗಿ ಹೋಗುತ್ತದೆ. ಮದುಮಗಳು ಶಾಸ್ತ್ರಕ್ಕೋಸ್ಕರ ಮೆಹೆಂದಿ ಹಚ್ಚಿಕೊಂಡು ಇಂತಹ ಕಾಲ್ಗೆಜ್ಜೆ ಧರಿಸಬಹುದು. ಹಳದಿ, ಗುಲಾಬಿ ಬಣ್ಣದ ಸೀರೆ, ಲೆಹೆಂಗಾ ಹಾಕಿಕೊಂಡಾಗ ಕುಂದನ್, ಮುತ್ತುಗಳಿಂದ ಮಾಡಿದ ಕಾಲ್ಗೆಜ್ಜೆ ಚೆನ್ನಾಗಿ ಹೊಂದಿಕೆಯಾಗುತ್ತವೆ. ಉಳಿದ ಬಣ್ಣಗಳಿಗೆ ಆ್ಯಂಟಿಕ್ ಕಾಲ್ಗೆಜ್ಜೆಗಳು ಸೂಕ್ತ.
ಆ್ಯಂಟಿಕ್
ಹಳೆಕಾಲದ್ದು ಅದು. ಔಟ್ ಆಫ್ ಫ್ಯಾಷನ್ ಅಂತ ಬದಿಗಿಟ್ಟಿದ್ದಳು ಮಗಳು. ಆದರೆ ಅದೇ ಅಜ್ಜಿಯ ಒಡವೆ ಇದೀಗ ಮೊಮ್ಮಗಳಿಗೆ ಅಚ್ಚುಮೆಚ್ಚು. ಇದು ಕೇವಲ ಆ್ಯಂಟಿಕ್ ಅಷ್ಟೆ ಅಲ್ಲ, ಆಕರ್ಷಕ ಕೆತ್ತನೆಯಿಂದ ಮನಸೆಳೆಯುತ್ತದೆ. ಇವುಗಳ ಕುಸರಿ ಕೆತ್ತನೆ ಸುಲಭದ್ದಲ್ಲ. ತೀರ ಸೂಕ್ಷ್ಮವಾಗಿ ಮಾಡುವಂಥದ್ದು. ಆ್ಯಂಟಿಕ್ ಕಾಲ್ಗೆಜ್ಜೆಗಳ ತುಸು ದುಬಾರಿ. ಹೀಗಾಗಿ ಹೆಚ್ಚಿನ ಜನ ಆಕರ್ಷಿತರಾಗುತ್ತಿದ್ದರೂ, ಬೆಲೆಗೆ ಅಂಜಿ ಖರೀದಿಸುವಾಗ ಹಿಂದೆ ಮುಂದೆ ನೋಡುತ್ತಿದ್ದಾರೆ.
ಆರೋಗ್ಯ
ಕಾಲ್ಗೆಜ್ಜೆ ಆರೋಗ್ಯದ ದೃಷ್ಟಿಯಿಂದಲೂ ಒಳಿತು ಎಂದು ಹಿರಿಯರು ಹೇಳುತ್ತಾರೆ. ಕಾಲ್ಗೆಜ್ಜೆ ಕಾಲಿನ ಬಲವನ್ನು ಹೆಚ್ಚಿಸುತ್ತದೆ. ಬಂಗಾರ ಅಥವಾ ಬೆಳ್ಳಿ ಲೋಹ ಶರೀರಕ್ಕೆ ಒಳ್ಳೆಯದು. ಅನೇಕ ಕಾಯಿಲೆಗಳನ್ನು ತಡೆಯುವ ಶಕ್ತಿ ಈ ಲೋಹಕ್ಕಿದೆ. ಆಯುರ್ವೇದದಲ್ಲಿ ಕೆಲವೊಂದು ಔಷಧಗಳನ್ನು ಲೋಹದ ಬೂದಿಯಿಂದ ತಯಾರಿಸಲಾಗುತ್ತದೆ. ಹಾಗಾಗಿ ಲೋಹದ ಕಾಲ್ಗೆಜ್ಜೆ ಧರಿಸಲು ಉತ್ತಮ. ಬೆಳ್ಳಿಯ ಕಾಲ್ಗೆಜ್ಜೆಗಳನ್ನು ಧರಿಸುವುದರಿಂದ ಕಾಲು ನೋವು ಕಡಿಮೆಯಾಗುತ್ತದೆ. ಶರೀರ ದೌರ್ಬಲ್ಯಕ್ಕೂ ಕಾಲ್ಗೆಜ್ಜೆ ಮದ್ದು. ಬೆಳ್ಳಿಯ ಕಾಲ್ಗೆಜ್ಜೆಯನ್ನು ಮಹಿಳೆಯರು ಧರಿಸುವುದರಿಂದ ದೇಹದ ರಕ್ತಸಂಚಾರ ಸಲೀಸಾಗುವಂತೆ ಮಾಡುತ್ತದೆ. ಇದು ಕಾಲುಗಳಲ್ಲಿನ ಊತವನ್ನು ಕಡಿಮೆ ಮಾಡುತ್ತದೆ. ದೇಹದ ಉಷ್ಣವನ್ನು ಹೀರಿಕೊಂಡು ದೇಹವನ್ನು ತಂಪಾಗಿಡುವಂತೆ ಮಾಡುತ್ತದೆ. ಶರೀರವು ಸುಕ್ಕು ಗಟ್ಟದಂತೆ, ದೇಹದ ಅಂದವನ್ನು ಹೆಚ್ಚಿಸಲು ಕಾಲ್ಗೆಜ್ಜೆ ಸಹಕಾರಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.