ADVERTISEMENT

ಬಳೆಗಳಲ್ಲಿ ಅವತರಿಸಿದ ಫ್ಯಾಷನ್‌

ಸ್ಮಿತಾ ಶಿರೂರ
Published 12 ಜುಲೈ 2024, 23:30 IST
Last Updated 12 ಜುಲೈ 2024, 23:30 IST
   

ಬಳೆಗಳ ಗಣಗಣ, ಕಣಕಣ ಈಚೆಗೆ ಕಡಿಮೆಯಾಗಿದೆ. ಎಂದರೆ, ಬಳೆ ಹಾಕಿಕೊಳ್ಳುವ ಸಂಸ್ಕೃತಿ ಮಾಯವಾಗುತ್ತಿದೆ ಎಂದಲ್ಲ. ಕೈತುಂಬಾ ಬಳೆ ಇಡುವ, ಶಬ್ದ ಬರುವ ಗಾಜಿನ ಬಳೆಗಳನ್ನು ಧರಿಸುವ ರೂಢಿ ಸ್ವಲ್ಪ ಕಡಿಮೆಯಾಗಿದೆ. ಸಮಕಾಲೀನ ವಿನ್ಯಾಸಗಳಿಗೆ ಇಂದಿನ ಯುವಪೀಳಿಗೆ ಮಹತ್ವ ನೀಡುತ್ತಿದೆ. ಹೀಗಾಗಿ ಹೊಸ ವಸ್ತು, ವಿನ್ಯಾಸಕ್ಕಾಗಿ ಹುಡುಕಾಟ ನಿರಂತರ. ಪ್ಲಾಸ್ಟಿಕ್‌, ಮರ, ಸಿರಾಮಿಕ್‌, ಬಟ್ಟೆ, ರೇಷ್ಮೆ ಹಾಗೂ ಹೊಸ ಮಾದರಿಗಳಿಂದ ಮಾಡಿದಂಥ ಬಳೆಗಳು ಬೇಡಿಕೆ ಪಡೆಯುತ್ತಿವೆ.

ವೃತ್ತಾಕಾರ ಮೀರಿ ವಿವಿಧ ಆಕಾರಗಳಲ್ಲಿಯೂ ಬಳೆಗಳು ಮೂಡಿ ಬರುತ್ತಿವೆ. ಅಲೆಗಳು, ಚಿಪ್ಪಿನ ಆಕಾರದವು, ಎಲೆಗಳಂತೆ ಕಾಣುವ ಬಳೆಗಳು ಹೊಸ ಅಲೆಯನ್ನೇ ಸೃಷ್ಟಿಸಿವೆ. ಫ್ಯಾಷನ್‌ ಜಗತ್ತಿನ ಚಲನಶೀಲತೆಗೆ ವೇಗ ದೊರಕಿಸಿವೆ ಇಂಥ ನವೀನ ಪ್ರಯೋಗಗಳು. ವಿವಾಹ, ಕಚೇರಿ, ಸಭೆ, ಸಮಾರಂಭ, ಹಬ್ಬ, ಮಾರುಕಟ್ಟೆ, ಸ್ನೇಹಿತೆಯರ ಮನೆಗಳಿಗೆ ಹೋಗಬೇಕಾದಾಗೆಲ್ಲ ಯಾವ ಬಳೆ ಹಾಕಲಿ ಎಂಬ ಪ್ರಶ್ನೆ ನಾರಿಯ ಮನದಲ್ಲಿ ಬಂದೇ ಬರುತ್ತದೆ. ಸಂಪ್ರದಾಯದ ಹಂಗನ್ನು ಇಷ್ಟ ಪಡದವರೂ ಬಳೆಗಳ ಮೋಹದಿಂದ ಬಿಡಿಸಿಕೊಳ್ಳುವುದಿಲ್ಲ. ಕಾಲಕಾಲಕ್ಕೆ ಬಳೆಗಳು ನವೀನ ರೂಪ ತಳೆದು ಬರುತ್ತಿವೆ. ಆದರೆ ಹೆಣ್ಣುಮಕ್ಕಳಲ್ಲಿ ಇದರ ಕ್ರೇಜ್‌ ಕಡಿಮೆ ಆಗಿಲ್ಲ.

ಕಫ್‌ ಬ್ಯಾಂಗಲ್‌: ಮಾಡರ್ನ್‌ ಡ್ರೆಸ್‌ ಅದರಲ್ಲೂ ಕುರ್ತಾ ಹಾಗೂ ಚೂಡಿದಾರ್‌ಗಳಿಗೆ ಹೊಂದುವ ಕಫ್‌ ಬ್ಯಾಂಗಲ್‌ ಅನ್ನು ಇಷ್ಟ ಪಡದವರು ಇಲ್ಲ. ಇವು ಸಿಂಗಲ್‌ ಆಗಿಯೇ ಸುಂದರವಾಗಿ ಕಾಣುತ್ತವೆ.

ADVERTISEMENT

ಪಂಜಾಬಿ ಚೂಡಾ: ಈಚೆಗೆ ಬಳೆಗಳಲ್ಲಿ ಪಂಜಾಬಿ ಚೂಡಾ ಮಾದರಿಯವು ಹೆಚ್ಚು ಸದ್ದು ಮಾಡುತ್ತಿದೆ. ಇವು ಕೆಂಪು–ಬಿಳಿ ಬಣ್ಣದ ಸಂಯೋಜನೆಯಲ್ಲಿ ಇರುವಂಥವು. ಬಳೆಗಳಿಗೆ ಜೋಲುವ ನಕ್ಷತ್ರ, ಕಿವಿಯೋಲೆ ಅಥವಾ ಥರಥರದ ಚಿತ್ತಾರಗಳು ಬಳೆಗಳ ಸೌಂದರ್ಯವನ್ನು ಇಮ್ಮಡಿಗೊಳಿಸುತ್ತವೆ. ವಿವಾಹ ಸಮಾರಂಭದಲ್ಲಿ ವಧು ಇದನ್ನು ಧರಿಸುವುದು ವಾಡಿಕೆ. ಆದರೆ ಉಳಿದ ಸಂದರ್ಭಕ್ಕೂ ತಕ್ಕಂತೆ ಚೂಡಾ ವಿನ್ಯಾಸಗೊಂಡಿವೆ. ಸಾಂಪ್ರದಾಯಿಕ ಡ್ರೆಸ್‌ಗಳಿಗೆ ಇದು ಸೂಕ್ತ.

ರೇಷ್ಮೆ ಎಳೆಗಳ ಬಳೆ: ಬಳೆಗಳಿಗೆ ರೇಷ್ಮೆ ದಾರಗಳನ್ನು ಸುತ್ತಿ ಅದರ ಮೇಲೆ ಕುಂದನ್ ವರ್ಕ್‌ ಮಾಡಿದ ಬಳೆಗಳು ದುಬಾರಿಯಾದರೂ ಚಿತ್ತಾಕರ್ಷಕವಾಗಿರುತ್ತವೆ. ರೇಷ್ಮೆ ಸೀರೆಗಳಿಗೆ ಅತ್ಯಂತ ಸೂಕ್ತ. ಇದೇ ಮಾದರಿಯಲ್ಲಿ ಹೂಗಳ ವಿನ್ಯಾಸ ಮಾಡಿದಂಥ ಬಳೆಗಳೂ ಮಾರುಕಟ್ಟೆಗೆ ಲಗ್ಗೆಯಿಟ್ಟು ಮಹಿಳೆಯರ ಮನಗೆದ್ದಿವೆ.

ಮುತ್ತಿನ ಬಳೆ: ಹೈದರಾಬಾದ್‌ ಮುತ್ತುಗಳ ಬಳೆಗಳು ಬಹಳ ಕಾಲದಿಂದಲೂ ಮಹಿಳೆಯರ ಮೆಚ್ಚುಗೆ ಗಳಿಸಿವೆ. ಈಗಲೂ ಇದರ ಮಹತ್ವ ಕಡಿಮೆ ಆಗಿಲ್ಲ. ಇದು ಸಹ ಸಾಂಪ್ರದಾಯಿಕ ಡ್ರೆಸ್‌ಗಳಿಗೆ ಹೆಚ್ಚಾಗಿ ಒಪ್ಪುವಂಥದ್ದು. ಅದರಲ್ಲೂ ಸೀರೆ, ಲೆಹೆಂಗಾಗಳಿಗೆ ಸೂಕ್ತ.

ಕರಕುಶಲ ಕಲೆ: ಹಿತ್ತಾಳೆಯ ಕರಕುಶಲ ಕೆತ್ತನೆ ಒಳಗೊಂಡ ದಪ್ಪ ಬಳೆಗಳು ವಿಶಿಷ್ಟ ಲುಕ್‌ ನೀಡುತ್ತವೆ. ಇವು ಮಾಡರ್ನ್‌ ಡ್ರೆಸ್‌ ಹಾಗೂ ಸಾಂಪ್ರದಾಯಿಕ ಎರಡೂ ರೀತಿಯ ಡ್ರೆಸ್‌ಗಳಿಗೆ ಒಪ್ಪುತ್ತದೆ.

ವಿವಿಧ ಲೋಹಗಳ ಮಿಶ್ರಣ ಮಾಡಿದ ಬಳೆಗಳೂ ಹೊಸ ಅವತಾರವೇ ಆಗಿದೆ. ಚಿನ್ನದೊಂದಿಗೆ ಬೆಳ್ಳಿ, ವೈಟ್‌ ಗೋಲ್ಡ್‌ ಜೊತೆ ರೋಸ್‌ ಗೋಲ್ಡ್‌, ಮ್ಯಾಟ್‌ ಫಿನಿಶ್‌ ಹಾಗೂ ಹೆಚ್ಚಿನ ಹೊಳಪು ಬರುವಂತೆ ಮಾಡಿದಂಥವು ಇವೆ. ಇಂಥ ಹಲವು ಹೊಸ ವೈವಿಧ್ಯಗಳು ಬಳೆಗಳನ್ನು ತಮಗೆ ಬೇಕಾದಂತೆ, ಬಟ್ಟೆಗೆ ಮ್ಯಾಚ್‌ ಆಗುವಂತೆ ಹೊಂದಿಸಿಕೊಳ್ಳುವಂಥ ಅವಕಾಶವನ್ನು ನೀಡಿವೆ.

ಆಕ್ಸಿಡೈಸ್ಡ್‌ ಸಿಲ್ವರ್‌ ಪ್ಲೇಟೆಡ್‌ ಬಳೆಗಳು, ಮುತ್ತುಗಳಿಂದ ತುಂಬಿದ ಗೋಲ್ಡ್‌ ಪ್ಲೇಟೆಡ್‌, ಆ್ಯಂಟಿಕ್ ಲುಕ್‌ ಇರುವಂಥವು, ಮಣಿಗಳು ಹುದುಗಿರುವ, ಕುಂದನ್‌ಗಳನ್ನು ಜೋಡಿಸಿದ ಗೋಲ್ಡ್‌ ಹಾಗೂ ಸಿಲ್ವರ್‌ ಪ್ಲೇಟೆಡ್‌, ವೆಲ್ವೆಟ್‌ ಸಿಲ್ವರ್‌ ಥ್ರೆಡ್‌, ವೆಲ್ವೆಟ್‌ ಗೋಲ್ಡ್‌ ಥ್ರೆಡ್‌, ಅಮೆರಿಕನ್‌ ಡೈಮಂಡ್‌, ಮಲ್ಟಿ ಕಲರ್‌ ಮೆಟಲ್‌ ಬಳೆಗಳು, ಝಿರ್ಕಾನ್‌ ರತ್ನ ಖಚಿತ ಬಳೆಗಳು, ಮಣಿಗಳನ್ನು ಜೋಡಿಸಿ ಮಾಡಿದಂಥ ಬಳೆಗಳು ಮಾರುಕಟ್ಟೆಯಲ್ಲಿ ಮಿಂಚುತ್ತಿವೆ.

ಒಂದೇ ಬಣ್ಣದ ಬಳೆ ತೊಡುವ ಕಾಲ ಹೋಗಿದೆ. ಹಲವು ಬಣ್ಣಗಳ ಬಳೆ ಸಂಯೋಜನೆ ಮಾಡಿ ಹಾಕಿಕೊಳ್ಳುವುದೇ ಈಗ ಫ್ಯಾಷನ್‌ ಆಗಿದೆ. ಕೈಗೆ ಸರಿಹೊಂದುವಂತೆ ಮಾಡುವ ತಂತ್ರಜ್ಞಾನವೂ ಬಂದಿರುವುದರಿಂದ ಬಳೆಗಳನ್ನು ಧರಿಸುವುದು ಈಗ ಮೊದಲಿಗಿಂತ ಸುಲಭ.

ಮುಂದೆ ಬಂದ ಕಡಗ
ಇಂದಿಗೂ ದೇಶದ ಹಲವು ಭಾಗಗಳಲ್ಲಿ ಅಲ್ಲಿಯದ್ದೇ ಆದ ಬಳೆಗಳ ವಿಶೇಷತೆ ಉಳಿದುಕೊಂಡಿದೆ. ಅವುಗಳಿಗೆ ಈಗಲೂ ಬೇಡಿಕೆ ಸಹ ಇದೆ. ಕಡಿಮೆ ಬಳೆ ಇಟ್ಟುಕೊಳ್ಳುವುದು, ಒಂದೇ ಕೈಗೆ ಬಳೆ ಹಾಕುವುದೂ ಸಹ ಹೊಸ ಫ್ಯಾಷನ್‌. ಸಿಂಗಲ್‌ ಬಳೆ ಇಡುವುದು ಸಾಮಾನ್ಯವಾಗಿದ್ದರೆ, ಕಡಗ ಮಾದರಿಯಲ್ಲಿ ಈಗ ಬಳೆಯ ವೈವಿಧ್ಯತೆ ಅವತರಿಸಿದೆ.
ಕಡಿಮೆಯಾಗದ ‘ಚಿನ್ನದ’ ಮಹತ್ವ
ಸಾಂಪ್ರದಾಯಿಕ ಚಿನ್ನದ ಬಳೆಗಳ ಮಹತ್ವ ಎಂದಿಗೂ ಕಡಿಮೆಯಾಗುವುದಿಲ್ಲ. ಇವು ಸಭೆ–ಸಮಾರಂಭ ಹಾಗೂ ದಿನನಿತ್ಯದ ಬಳಕೆಗೂ ಯೋಗ್ಯ ಎನ್ನಿಸುವುದರಿಂದ ಇವು ಫ್ಯಾಷನ್‌ ಜೊತೆಗೆ ಸಂಪ್ರದಾಯದ ಕೊಂಡಿಯನ್ನೂ ಬೆಸೆಯುತ್ತವೆ. ವಜ್ರದ ಬಳೆಗಳಿಗೆ ವಿಶೇಷ ಕಾಳಜಿ ಅಗತ್ಯ ಇರುವುದರಿಂದ ಅವುಗಳು ಸಮಾರಂಭಗಳಿಗಷ್ಟೇ ಸೀಮಿತವಾಗಿವೆ. ಕಚೇರಿಗೆ ಧರಿಸಲು ಹೆಚ್ಚಾಗಿ ಸಿಂಗಲ್‌ ಬಳೆಗಳನ್ನು ಇಷ್ಟ ಪಡುತ್ತಾರಾದ ಕಾರಣ ಅವುಗಳಲ್ಲಿ ಸಾಕಷ್ಟು ವೈವಿಧ್ಯ ಮೂಡಿ ಬರುತ್ತಿದೆ. ಪೋಲ್ಕಿ ಬ್ಯಾಂಗಲ್ಸ್‌, ಸ್ಟೋನ್‌ ಬ್ಯಾಂಗಲ್ಸ್‌ಗಳು ಸಹ ಇಂದಿನ ಮಹಿಳೆಯರ ಮನಗೆದ್ದಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.