ADVERTISEMENT

ಜೀನ್ಸ್‌ನಲ್ಲೂ ನೆರಿಗೆ ಫ್ಯಾಷನ್

ಸುಮಲತಾ ಎನ್, ಪದ್ಮನಾಭ ಭಟ್ಟ
Published 23 ಜುಲೈ 2018, 19:30 IST
Last Updated 23 ಜುಲೈ 2018, 19:30 IST
   

ಜೀನ್ಸ್‌ನಲ್ಲಿ ಏನೆಲ್ಲಾ ಪ್ರಯೋಗಗಳು ಬಂದುಹೋಗಿವೆ. ರಿಪ್ಡ್ ಜೀನ್ಸ್, ಕಟ್‌ಆಫ್ ಜೀನ್ಸ್, ಲೇಸ್‌ ಅಪ್, ಕ್ರಾಷೆಟ್ ಜೀನ್ಸ್, ಬಾಯ್‌ ಫ್ರೆಂಡ್, ಬೂಟ್‌ ಕಟ್, ಸಿಗರೇಟ್ ಜೀನ್ಸ್... ಕಾಲಕ್ಕೆ, ಬದಲಾದ ಅಭಿರುಚಿಗಳಿಗೆ ತಕ್ಕಂತೆ ಜೀನ್ಸ್‌ನಲ್ಲೂ ಹುಟ್ಟಿಕೊಂಡ ವಿನ್ಯಾಸಗಳಿಗೆ ಲೆಕ್ಕವಿಲ್ಲ.

ಆದರೆ ಕಾಲ ಸರಿದಂತೆ ಇವೂ ಔಟ್‌ಡೇಟೆಡ್ ಪಟ್ಟಿಗೆ ಸೇರುತ್ತವೆ. ಸದಾ ಹೊಸತನ್ನೇ ಹುಡುಕುವ ಯುವತಿಯರು ಜೀನ್ಸ್‌ನಲ್ಲೋ ಇನ್ನೇನೋ ಹೊಸತನ್ನು ಬಯಸುತ್ತಾರೆ. ಅದಕ್ಕೆ ತಕ್ಕಂತೆ ಹೊಸ ಹೊಸ ಪ್ರಯೋಗಗಳೂ
ನಡೆಯುತ್ತವೆ.

ಸದ್ಯಕ್ಕೆ ಇದೀಗ ಜೀನ್ಸ್‌ನಲ್ಲಿ ಟ್ರೆಂಡ್ ಆಗಿರುವುದು ರಫಲ್‌ ಜೀನ್ಸ್. ಇತ್ತೀಚೆಗೆ ಬಾಲಿವುಡ್ ನಟಿ ಅಲಿಯಾ ಭಟ್ ಫೋಟೊಶೂಟ್ ಒಂದಕ್ಕೆ ಧರಿಸಿದ್ದ ಈ ರಫಲ್‌ ಜೀನ್ಸ್ ಇದ್ದಕ್ಕಿದ್ದಂತೆ ಜನಪ್ರಿಯವೆನಿಸಿತು. ಜೀನ್ಸ್ಅನ್ನು ಹೀಗೂ ತೊಡಬಹುದಾ ಎಂದು ಅಲಿಯಾ ನೋಡಿ ಹುಬ್ಬೇರಿಸಿದ್ದವರು ಎಷ್ಟೋ ಹುಡುಗಿಯರು. ಅಲಿಯಾ ಒಬ್ಬರೇ ಅಲ್ಲ, ನಟಿಯರಾದ ದೀಪಿಕಾ ಪಡುಕೋಣೆ, ಜಾಕ್ವೆಲಿನ್ ಇವರೆಲ್ಲರೂ ರಫಲ್ ಜೀನ್ಸ್ ಚೆಂದಕ್ಕೆ ಮಾರು ಹೋದವರೇ. ಸದಾ ಪ್ರಯೋಗಮುಖಿಯರಾದ ಈ ನಟಿಯರಿಗೆ ಈ ಶೈಲಿಯ ಜೀನ್ಸ್ ಕೂಡ ಚೆಂದದ ಫ್ಯಾಷನ್ ಪ್ರಯೋಗವೇ ಎನಿಸಿತ್ತು.

ADVERTISEMENT

ಏನಿದು ರಫಲ್‌ ಜೀನ್ಸ್?

ನೆರಿಗೆಗಳನ್ನು ಹೊಂದಿರುವ ಜೀನ್ಸ್‌ಗೆ ರಫಲ್‌ ಜೀನ್ಸ್ ಎನ್ನುತ್ತಾರೆ. ಪ್ಯಾಂಟ್‌ನ ತುದಿಯಲ್ಲಿ ಅಥವಾ ಪ್ಯಾಂಟ್‌ನ ಬದಿಗಳಲ್ಲಿ ನೆರಿಗೆಗಳನ್ನು ಹೊಂದಿರುವುದೇ ಈ ಜೀನ್ಸ್‌ನ ಶೈಲಿ.ಜೀನ್ಸ್‌ನ ಮಂಡಿ ಭಾಗದಿಂದ ನೆರಿಗೆಗಳನ್ನು ಹೊಂದಿರುವುದು ಹೊಸ
ಶೈಲಿಯ ಜೀನ್ಸ್ ಎನಿಸಿಕೊಂಡಿತು.

ಇದಕ್ಕೆ ನಿರ್ದಿಷ್ಟ ಶೈಲಿಯ ಜೀನ್ಸ್‌ ಬೇಕು ಎನ್ನುವಂತಿಲ್ಲ. ಸ್ಕಿನ್ನಿ ಪ್ಯಾಂಟ್‌ ವಿನ್ಯಾಸ ಇದಕ್ಕೆ ಹೆಚ್ಚು ಒಪ್ಪುತ್ತದೆ. ಹೈರೈಸ್, ಕೇಪ್ರಿ, ಬೆಲ್‌ ಬಾಟಂ ಎಲ್ಲದಕ್ಕೂ ಈ ನೆರಿಗೆ ವಿನ್ಯಾಸ ಹೇಳಿಮಾಡಿಸಿದಂತಿರುತ್ತದೆ.

ಜೀನ್ಸ್‌ನ ನೆರಿಗೆಗಳಲ್ಲೂ ಸ್ಲಿಟ್ ರಫಲ್, ಎಕ್ಸ್‌ಟ್ರೀಮ್ ಫ್ಲೇರ್, ಸೈಡ್ ರಫಲ್... ಹೀಗೆ ನಾನಾ ರೀತಿ ಇವೆ.
ಪ್ಯಾಂಟ್‌ನ ಸುತ್ತಲೂ ನೆರಿಗೆಗಳಿರುವುದು ಒಂದು ಬಗೆಯಾದರೆ, ಸ್ಲಿಟ್‌ ರಫಲ್‌ನಲ್ಲಿ ಕಡಿಮೆ ನೆರಿಗೆಗಳಿರುತ್ತವೆ. ಎಕ್ಸ್‌ಟ್ರೀಮ್‌ ರಫಲ್‌ನಲ್ಲಿ ಹೆಚ್ಚು ಮಡಿಕೆಗಳು ಇರುತ್ತವೆ. ಸೈಡ್‌ ರಫಲ್‌ನಲ್ಲಿ ಜೀನ್ಸ್‌ನ ಎರಡೂ ಬದಿಗಳಲ್ಲಿ, ಮೇಲಿಂದ ಪ್ಯಾಂಟ್‌ನ ತುದಿವರೆಗೂ ನೆರಿಗೆಗಳು ಜೋತುಕೊಂಡಂತೆ ಇರುತ್ತವೆ.

ಈ ನೆರಿಗೆಗಳಲ್ಲಿ ಪ್ಯಾಚ್‌ ವರ್ಕ್ ಕೂಡ ಇರುವುದು ಜೀನ್ಸ್‌ಗೆ ಮತ್ತೊಂದು ಹೊಸ ನೋಟ ಕೊಟ್ಟಿದೆ. ಹಿಪ್ಪಿ ಶೈಲಿಯ ಜೀನ್ಸ್‌ಗಳಂತೆ ನೆರಿಗೆಗೆ ಮಾತ್ರ ಬೇರೆ ಬಟ್ಟೆಯನ್ನು ಬಳಸಿ ವಿನ್ಯಾಸಗೊಳಿಸುವುದು ರಫಲ್‌ ಜೀನ್ಸ್‌ನ ಮತ್ತೊಂದು ಶೈಲಿ.

ಪ್ರತಿದಿನವೂ ಒಂದೇ ಬಗೆಯ ಜೀನ್ಸ್ ತೊಟ್ಟು ಬೇಸರ ಬಂದಿದ್ದವರು ಈ ರಫಲ್‌ ಜೀನ್ಸ್‌ ಪ್ರಯೋಗಿಸಿ ನೋಡಬಹುದು. ಇದಕ್ಕೆ ತಕ್ಕಂತೆ ಧರಿಸುವ ಟಾಪ್‌ನಲ್ಲೂ ಭಿನ್ನತೆ ಇದ್ದರೆ ಚೆನ್ನ. ಅದಕ್ಕೆಂದೇ ರಫಲ್‌ ಟಾಪ್‌, ಅಂದರೆ ನೆರಿಗೆಗಳನ್ನು ಹೊಂದಿರುವ ಮೇಲಂಗಿಗಳೇ ದೊರೆಯುತ್ತವೆ.

ಜೀನ್ಸ್‌ ಬಟ್ಟೆಯಲ್ಲಿ ಅಥವಾ ಸಾದಾ ಬಟ್ಟೆಯಲ್ಲಿ ಮೇಲಂಗಿಗಳ ತೋಳಿಗೆ, ಕುತ್ತಿಗೆ ಭಾಗದಲ್ಲಿ ನೆರಿಗೆ ಇರುವಂತೆ ವಿನ್ಯಾಸಗೊಳಿಸುವುದು ಟ್ರೆಂಡ್. ಉದ್ದ ತೋಳಿನ, ಗಿಡ್ಡ ತೋಳಿನ ಅಂಗಿ ಯಾವುದಕ್ಕೂ ಈ ಜೀನ್ಸ್ ಶೈಲಿ ಒಪ್ಪುತ್ತದೆ. ಇದಕ್ಕೆ ಹೀಲ್ಡ್‌ ಚಪ್ಪಲಿಗಳನ್ನು ಧರಿಸಿದರೆ ಜೀನ್ಸ್‌ನ ಚೆಂದ ಮತ್ತಷ್ಟು ಹೆಚ್ಚುತ್ತದೆ ಎನ್ನುತ್ತಾರೆ ಕೆಲವು ವಿನ್ಯಾಸಕರು. ಈ ಜೀನ್ಸ್‌ಗೆಂದೇ ರಫಲ್‌ ಸ್ವೆಟರ್‌ಗಳೂ ಈಗ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.