ಹೂವಿನ ಅಂದ, ಘಮಲು, ಬಣ್ಣಕ್ಕೆ ಮನಸೋಲದವರಾರು? ಹೂವು ಎಂದರೆ ಸೌಂದರ್ಯ, ಮೃದುತ್ವ, ಕೋಮಲತೆ, ಸುಗಂಧ, ಮಧುರ ಭಾವನೆ... ಹೀಗೆ ಹೂವಿಗೆ ಇರುವ ವಿಶೇಷಣಗಳು ಹಲವು. ಹೆಣ್ಣನ್ನು ಹೂವಿಗೆ ಹೋಲಿಸುವುದರ ಜೊತೆಗೆ ‘ಹೂವಿನಂಥ ಮನಸ್ಸು’ ಎಂದು ಕರೆದರೂ ಸೂಕ್ತವೇ. ಪ್ರಕೃತಿಯ ಮಡಿಲಿನಲ್ಲಿ ಅರಳಿ ನಗುವ ಬಗೆ ಬಗೆಯ ಹೂವುಗಳನ್ನು ಒಡಲಲ್ಲಿ ತುಂಬಿಕೊಂಡು ಅದನ್ನು ದೇವರಿಗೇರಿಸಲೋ ಹೆಣ್ಣಿನ ಮುಡಿಗೇರಿಸುವುದೋ ಎಂಬ ಸಣ್ಣ ಅನುಮಾನ ಕಾಡುತ್ತದೆ. ಒಟ್ಟಿನಲ್ಲಿ ಹೂವು ಸಾರ್ಥಕ್ಯ ಪಡೆಯಲೇಬೇಕು.
ಸಾಮಾನ್ಯವಾಗಿ ಮದುಮಗಳ ಅಲಂಕಾರ ಎಂದರೆ ಮಲ್ಲಿಗೆ, ಗುಲಾಬಿ, ಸೇವಂತಿಗೆ ದಳ ಮುಂತಾದ ಹೆಸರುವಾಸಿ ಹೂವುಗಳಿಂದಲೇ ಮಾಡಲಾಗುತ್ತದೆ. ಆದರೆ ಆಧುನಿಕ ಮದುಮಗಳಿಗೆ ಬೇಲಿ ಹೂಗಳೂ ಮುಡಿಯಲ್ಲಿ ಆಕರ್ಷಕವಾಗಿ ಕಾಣುತ್ತದೆ. ಏಕೆಂದರೆ ಫ್ಯಾಷನ್ ಲೋಕ ಎಂಬುದು ಸದಾ ಹರಿಯುವ ನದಿ, ಅದು ನಿಂತ ನೀರಲ್ಲ. ವಧುವಿನ ಅಲಂಕಾರವೂ ಇದಕ್ಕಿಂತ ಹೊರತಾಗಿಲ್ಲ.
ಸಾಂಪ್ರದಾಯಿಕ ನೆಲೆಯಲ್ಲಿ ಆಧುನಿಕ ಟ್ರೆಂಡ್‌ಗೆ ಒಪ್ಪುವಂತಹ ಅಲಂಕಾರ ಮಾಡುವುದರಲ್ಲಿಯೇ ಹೊಸತನ ಕಾಣಬಹುದು. ವಧುವಿನ ಅಲಂಕಾರಕ್ಕಾಗಿ ಮಲ್ಲಿಗೆ ಬಳಸದೆ ಚೆಂಡು ಹೂವು ಬಳಸುವುದು, ಗುಲಾಬಿ ಬದಲಾಗಿ ಯುಫೋರಿಯಾ ಬಳಸುವುದು, ಮಲ್ಲಿಗೆ ಬದಲಾಗಿ ಕ್ಯಾಕ್ಟಸ್, ಎಲ್ಲೋ ಅರಳಿ ಬಾಡಿ ಹೋಗುವ ಬೇಲಿ ಹೂವುಗಳನ್ನು ಬಳಸಿ ವಧುವಿನ ತುರುಬನ್ನು ಅಲಂಕರಿಸುವುದು ಈಗಿನ ಫ್ಯಾಷನ್ ಟ್ರೆಂಡ್. ವಧುವಿಗೆ ಸಖತ್ ಲುಕ್ ಕೊಡಲು ಇದು ಸಹಕಾರಿಯೂ ಹೌದು.
‘ಈ ಎಲ್ಲ ಹೂವುಗಳ ಸಾಲಿಗೆ ಸೇರಿದ ಮತ್ತೊಂದು ಹೂವು ಎಂದರೆ ಅಚ್ಚ ಬಿಳಿ ಬಣ್ಣದ ‘ಬೇಬಿ ಬ್ರೀತ್’ ಫ್ಲವರ್, ದುಂದು ಮಲ್ಲಿಗೆ ಮೊಗ್ಗಿನ ಜಡೆ ಹಾಕುವುದರ ಬದಲಾಗಿ ಚೆಂಡು ಹೂವಿನ ದಳಗಳ ಒಪ್ಪ ಓರಣ ವಿನ್ಯಾಸ, ಜಪಾನಿ ಶೈಲಿಯ ಇಕೆಬಾನ ಫ್ಲವರ್ಸ್.. ಇವೆಲ್ಲವೂ ಮದುಮಗಳ ಅಲಂಕಾರಕ್ಕೆ ಸೂಕ್ತ, ಅಲ್ಲದೆ ದರವೂ ಅಗ್ಗ. ಫ್ಯಾಷನ್ ಬಯಸುವ ಯುವತಿಯರು ರಿಸೆಪ್ಶನ್‌ಗಳಲ್ಲಿ ಇದೇ ತರದ ಕೇಶಾಲಂಕಾರ ಬಯಸುತ್ತಾರೆ. ಇವರ ಮನದಾಳವನ್ನು ಅರಿತ ನಾವೂ ಇಂಥ ಹೂವುಗಳನ್ನೇ ಆರಿಸಿ ತಂದು ಅಲಂಕಾರ ಮಾಡುತ್ತೇವೆ’ ಎನ್ನುತ್ತಾರೆ ಫ್ಯಾಷನ್ ಲೋಕದಲ್ಲಿ ವನ್ ಮಿನಿಟ್ ಉಮಾ ಎಂದೇ ಖ್ಯಾತಿಯಾಗಿರುವ ಬೆಂಗಳೂರಿನ ಸೌಂದರ್ಯತಜ್ಞೆ ಉಮಾ ಜಯಕುಮಾರ್.
‘ಕೆಲವು ಹೂವುಗಳ ಘಮಲಿನಲ್ಲಿ ಮಾದಕಶಕ್ತಿಯಿದೆ. ಮಲ್ಲಿಗೆ ಸಂಪಿಗೆ, ಕೇದಿಗೆ, ಪಾರಿಜಾತ, ಸುಗಂಧರಾಜ ಮುಂತಾದ ಹೂವುಗಳು ಉತ್ತಮ ಘಮಲನ್ನು ಹೊಂದಿದ್ದರೂ ವಧುವಿನ ಅಲಂಕಾರ ಬರೀ ಸಾಂಪ್ರದಾಯಿಕ ಲುಕ್‌ಗಷ್ಟೇ ಸೀಮಿತ ಎಂದು ಈಗಿನ ಹುಡುಗಿಯರು ಅದನ್ನು ಬಯಸುವುದಿಲ್ಲ. ಇಂಥವರಿಗೆ ಯುಫೋರಿಯಾ ಹೂವು ಉತ್ತಮ ಆಯ್ಕೆ. ಇದು ಬೇಗನೆ ಬಾಡುವುದೂ ಇಲ್ಲ. ಕೇಶ ಶೈಲಿಗಳಾದ ಮೆಸ್ಸಿ ಕಟ್, ಮೆಸ್ಸಿ ನಾಟ್ ಮುಂತಾದ ವೈವಿಧ್ಯಗಳಲ್ಲಿ ಯುಫೋರಿಯಾವನ್ನೇ ಬಳಸುತ್ತೇನೆ’ ಎಂದು ವಿವರ ನೀಡುತ್ತಾರೆ. ‘ಹೂವು ಬೇಲಿಯಲ್ಲೇ ಇರಲಿ, ಗದ್ದೆ ಬದಿಯ ಬಳ್ಳಿಯಲ್ಲೇ ನಸುನಗುತಿರಲಿ, ಇದನ್ನು ನಾವು ಹೇಗೆ ಅಲಂಕಾರ ಮಾಡುತ್ತೇವೆ ಎಂಬುದು ಮುಖ್ಯ. ಆಧುನಿಕ ಮನೋಭಾವದ ಮದುಮಗಳಿಗೆ ಇಂಥ ಬೇಲಿ ಹೂವುಗಳಿಂದ ಅಲಂಕಾರ ಮಾಡುವಾಗ ನನಗೆ ಬೆಸುಗೆ’ ಚಿತ್ರದ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರು ಹಾಡಿದ ‘ಯಾವ ಹೂವು ಯಾರ ಮುಡಿಗೊ’ ಎಂಬ ಹಾಡಿನ ಸಾಲೇ ನೆನಪಿಗೆ ಬರುತ್ತದೆ’ ಎನ್ನುತ್ತಾರೆ ಕೇಶಾಲಂಕಾರದಲ್ಲಿ ಕೌಶಲ್ಯ ತೋರುತ್ತಿರುವ ಈ ಸೌಂದರ್ಯತಜ್ಞೆ.
‘ಹೂವುಗಳನ್ನು ಮುಡಿಗಷ್ಟೇ ಅಲ್ಲ, ಕುತ್ತಿಗೆ, ಕಿವಿಗಳಿಗೆ ಆಭರಣದಂತೆಯೂ ಧರಿಸಬಹುದು. ಚೆಂಡು ಹೂವು, ಸೇವಂತಿಗೆ, ಧವನ, ಮರುಗ, ಪನ್ನೀರು ಎಲೆಗಳನ್ನು ಸೇರಿಸಿ ಸುಂದರ ವಿನ್ಯಾಸ ಮಾಡಬಹುದು. ಕ್ಯಾಕ್ಟಸ್ ಹೂವು ಕೂಡ ಅಂದದಿಂದ ಮೆರುಗು ನೀಡುತ್ತವೆ. ಮರಳುಗಾಡಿನ ಪುಷ್ಪಗಳೂ ತರಾವರಿ ರೂಪ ತಳೆಯುತ್ತವೆ. ಎತ್ತಿ ಕಟ್ಟಿದ ತುರುಬಿನ ಸುತ್ತ ಕಾಡುಹೂವುಗಳಿಂದ ಅಲಂಕಾರ ಮಾಡಿದರೆ ನೋಡುಗರು ಹುಬ್ಬೇರಿಸದೇ ಇರಲಾರರು. ಸೀತಾಳೆ ಹೂವುಗಳೂ ತುರುಬನ್ನು ಅಲಂಕರಿಸಿ ಹೊಸ ರೂಪ ಪಡೆಯುತ್ತವೆ’ ಎಂದು ವಿವರಿಸುತ್ತಾರೆ.
ದುಬಾರಿ ಹೂಗಳೇ ಬೇಕಿಲ್ಲ
ಮದುಮಗಳ ಅಲಂಕಾರಕ್ಕೆ ದುಬಾರಿ ಹೂವುಗಳೇ ಬೇಕಿಲ್ಲ. ಆದರೆ ಈ ಬೇಲಿ ಹೂಗಳು ಸುಲಭವಾಗಿ, ಕೆಲವೊಮ್ಮೆ ಕಡಿಮೆ ದರದಲ್ಲಿ ಸಿಗುವುದಾದರೂ ಮದುಮಗಳ ವಿನ್ಯಾಸ ಮಾಡಲು ಹೆಚ್ಚಿನ ಹಣ ವ್ಯಯಿಸಬೇಕಾಗುತ್ತದೆ. ಬೇಲಿ ಬದಿಯಲ್ಲಿ ಯಾರ ಹಂಗಿಲ್ಲದೆ ಅರಳಿ ನಸುನಗುವ ಹೂಗೊಂಚಲುಗಳು ನಾರಿಯರ ಮುಡಿಗೇರುವಾಗ ವಿನ್ಯಾಸದಲ್ಲಿ ನಾವೀನ್ಯವನ್ನು ಬಯಸುತ್ತದೆ. ನೋಡುಗರ ಕಣ್ಣುಗಳನ್ನು ಸೆಳೆಯಬೇಕಾದರೆ ವಿನ್ಯಾಸಕಿಗೆ ಕೈಚಳಕ ಬೇಕು. ಯುಕ್ತಿ, ಶ್ರದ್ಧೆ ಇದ್ದರೆ ಇಂಥ ಹೂವುಗಳು ಕೂಡ ಚೆಲುವು ಸೂಸುತ್ತವೆ.
ಬಹುಶಃ ‘ಶುಭಮಂಗಳ’ ಸಿನಿಮಾದಲ್ಲಿ ಬರುವ ಮಧುರಾತಿಮಧುರ ಹಾಡು ‘ಹೂವೊಂದು ಬಳಿ ಬಂದು ತಾಕಿತು ಎನ್ನೆದೆಯಾ.. ಹೇಳಿತು.. ಹೆಣ್ಣೆ... ನೀ ನನ್ನಷ್ಟೇ ಚೆಲುವೆ...’ ಆಧುನಿಕ ಜಗತ್ತಿನ ಸುಂದರ ಹೆಣ್ಣುಮಗಳಿಗಾಗಿಯೇ ಬರೆದದ್ದು, ಹಾಡಿದ್ದು, ಜನಮನ ಗೆದ್ದದ್ದು ಅಲ್ಲವೇ?⇒v
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.