ADVERTISEMENT

ಅಂದ- ಚೆಂದ ಸ್ವಾಸ್ಥ್ಯಕ್ಕೆ ದ್ರಾಕ್ಷಿ

ಲತಾ ಹೆಗಡೆ
Published 31 ಮೇ 2019, 19:30 IST
Last Updated 31 ಮೇ 2019, 19:30 IST
   

ಬೇಸಿಗೆಯ ಬಿರು ಬೇಗೆಯಲ್ಲಿ ಎಲ್ಲೆಲ್ಲೂ ನೀರಿಗಾಗಿ ಪರದಾಟದ ಚಿತ್ರಣ. ಮಳೆಯ ಹನಿಗಾಗಿ ಕಾದು ಕಾತರಿಸಿ ಬಿರಿದಿರುವಂತಹ ಒಣಗಿದ ನೆಲ. ಇಂತಹ ಸಂದರ್ಭದಲ್ಲೂ ಪ್ರಕೃತಿ ಮಾತೆ ನೀರಿನಂಶದಿಂದ ಸಮೃದ್ಧವಾದ ತರಕಾರಿ, ಹಣ್ಣುಗಳನ್ನು ನೀಡಿ ಬಿಸಿಲಿನ ಬೇಗೆಯಿಂದ ಬೆಂದು ಬಸವಳಿದ ಜೀವಜಂತುಗಳನ್ನು ಮಕ್ಕಳ೦ತೆಯೇ ಓಲೈಸುವ ಕ್ರಿಯೆ ಅದ್ಭುತ! ಅವುಗಳಲ್ಲಿ ಸಂಜೀವಿನಿಯಂತೆ ಕೆಲಸ ಮಾಡುವ ಹಣ್ಣುಗಳಲ್ಲಿ ದ್ರಾಕ್ಷಿ ಕೂಡ ಒಂದು.

ಬಿಸಿಲ ಪ್ರದೇಶದಲ್ಲಿ ಹದಿನೈದರಿಂದ ಇಪ್ಪತ್ತು ಅಡಿಗಳಷ್ಟು ಎತ್ತರಕ್ಕೆ ಬೆಳೆಯುವ ಸುಮಾರು ಹನ್ನೆರಡರಿಂದ ಹದಿಮೂರು ಅಡಿಗಳಷ್ಟು ಹರಡಿಕೊಳ್ಳುವ ದ್ರಾಕ್ಷಿ ಬಳ್ಳಿ ಬೆಳೆಯಲು ಹಂದರ ಬೇಕು. ಬಿಳಿ, ಹಳದಿ, ಹಸಿರು, ಕಪ್ಪು, ಕಡು ನೀಲಿ, ನೇರಳೆ ಬಣ್ಣಗಳಲ್ಲಿ ಲಭ್ಯವಿರುವ ದ್ರಾಕ್ಷಿಯ ಪ್ರಭೇದಗಳಲ್ಲಿ ಬೀಜರಹಿತ ಹಣ್ಣಿಗೆ ಬೇಡಿಕೆ ಹೆಚ್ಚು.

ಇದರಲ್ಲಿರುವ ಆ್ಯಂಟಿ ಆಕ್ಸಿಡೆಂಟ್‌ ಅಂಶ ಕೊಲೋನ್ ಮತ್ತು ಪ್ರಾಸ್ಟೇಟ್ ಕ್ಯಾನ್ಸರ್ ಅನ್ನು ತಡೆಗಟ್ಟುವ ಶಕ್ತಿಯನ್ನು ಹೊಂದಿದೆ. ವಿಟಮಿನ್ ಸಿ ಹೇರಳವಾಗಿರುವ ದ್ರಾಕ್ಷಿಯಲ್ಲಿ ವಿಟಮಿನ್ ಬಿ, ಕೆ, ಎ ಕೂಡ ಇರುವುದರಿಂದ ಕಣ್ಣುಗಳ ಹಾಗೂ ಚರ್ಮದ ಸ್ವಾಸ್ಥ್ಯಕ್ಕೆ ಉಪಯುಕ್ತ. ಕೆರೋಟಿನ್, ಖನಿಜಗಳಿಂದ ಕೂಡಿದ ಈ ಹಣ್ಣಲ್ಲಿ ನಾರಿನಂಶ ಸಮೃದ್ಧವಾಗಿರುವುದರಿಂದ ಮಲಬದ್ಧತೆಗೆ ರಾಮಬಾಣ. ಇದರಲ್ಲಿನ ಫ್ಲೆವೋನೈಡ್ ಎಂಬ ನೈಸರ್ಗಿಕ ಅಂಶ ಊತ ಮತ್ತು ಅಲರ್ಜಿಯನ್ನು ಶಮನಗೊಳಿಸುವ ಶಕ್ತಿಯನ್ನು ಹೊಂದಿದೆ. ಅಲರ್ಜಿಗೆ ಕಾರಣವಾಗುವ ಹಿಸ್ಟಮೈನ್ ಉತ್ಪತ್ತಿಯನ್ನು ಸ್ಥಗಿತಗೊಳಿಸುವ ದಿವ್ಯ ಶಕ್ತಿ ದ್ರಾಕ್ಷಿ ಹಣ್ಣಿಗಿದೆ. ದೇಹ - ರಕ್ತದಲ್ಲಿನ ಕೊಬ್ಬು ಕಡಿಮೆ ಮಾಡುವ ಗುಣವಿರುವುದರಿಂದ ಹೃದ್ರೋಗವನ್ನು ತಡೆಗಟ್ಟಬಹುದು. ಇತ್ತೀಚಿನ ಸಂಶೋಧನೆಯ ಪ್ರಕಾರ ಕಪ್ಪು ಅಥವಾ ನೇರಳೆ ಬಣ್ಣದ ದ್ರಾಕ್ಷಿ ಸ್ತನದ ಕ್ಯಾನ್ಸರ್ ಅನ್ನು ತಡೆಗಟ್ಟುವಲ್ಲಿ ಸಹಕಾರಿ ಎಂಬ ಅಂಶ ಬೆಳಕಿಗೆ ಬಂದಿದೆ.

ADVERTISEMENT

ಒಣ ದ್ರಾಕ್ಷಿಯಲ್ಲಿ ಶೇ 15ರಷ್ಟು ನೀರಿನಂಶ ಇರುತ್ತದೆ. ಪೊಟಾಷಿಯಂ, ಕಬ್ಬಿಣಾಂಶ ಇದರಲ್ಲಿ ಹೆಚ್ಚಿರುವುದರಿಂದ ರಕ್ತಹೀನತೆಯನ್ನು ನಿವಾರಿಸುತ್ತದೆ.

ಒಣದ್ರಾಕ್ಷಿ ಮಾಡುವ ವಿಧಾನ: ಚೆನ್ನಾಗಿ ಮಾಗಿದ ಹಸಿದ್ರಾಕ್ಷಿಯನ್ನು ಶುಭ್ರಗೊಳಿಸಿ ಸ್ಟೀಲ್ ಪಾತ್ರೆಗೆ ಹಾಕಿ ಒಂದು ಚಮಚ ಸಕ್ಕರೆ ಮತ್ತು ಒಂದು ಚಮಚ ಹಾಲು ಬೆರೆಸಿ ( 1 : 1 ಪ್ರಮಾಣ ) ಕುಕ್ಕರ್‌ನಲ್ಲಿಟ್ಟು ಎರಡು ವಿಷಲ್ ಕೂಗಿಸಬೇಕು. ನಂತರ ಕಡು ಬಿಸಿಲಿನಲ್ಲಿ ಬೇಯಿಸಿದ ಹಣ್ಣುಗಳನ್ನು ಒಂದು ದಿನ ಇಟ್ಟು ನೆರಳಿನಲ್ಲಿ ಹದಿನೈದು ದಿನಗಳವರೆಗೆ ಒಣಗಲು ಬಿಡಬೇಕು. ಮೂರು ಕೆ.ಜಿ. ದ್ರಾಕ್ಷಿಯಿಂದ ಒಂದು ಕೆ.ಜಿ. ಒಣ ದ್ರಾಕ್ಷಿ ಸಿಗುತ್ತದೆ. ರಾತ್ರಿ ನೀರಲ್ಲಿ ಒಂದು ಚಮಚ ಒಣ ದ್ರಾಕ್ಷಿಯನ್ನು ನೆನೆಹಾಕಿ ಬೆಳಿಗ್ಗೆ ನೀರಿನ ಸಮೇತ ಸೇವಿಸುವುದರಿಂದ ಮಲಬದ್ಧತೆ, ಚರ್ಮರೋಗ ನಿವಾರಣೆಯಾಗುತ್ತದೆ.

ಸೌ೦ದರ್ಯ ವರ್ಧಕ

ದ್ರಾಕ್ಷಿ ಸೌ೦ದರ್ಯ ವರ್ಧಕವೂ ಹೌದು. ಇದು ಉತ್ತಮ ಕ್ಲೆನ್ಸರ್‌ನಂತೆ ಕೆಲಸ ಮಾಡುತ್ತದೆ. ದ್ರಾಕ್ಷಿಯನ್ನು ಕಿವುಚಿ ಕಣ್ಣುಗಳ ಸುತ್ತ ಹಾಗೂ ಬಾಯಿ ಭಾಗ ಬಿಟ್ಟು ಮುಖಕ್ಕೆ, ಕುತ್ತಿಗೆಗೆ ಹಚ್ಚಿ ಸ್ವಲ್ಪ ಹೊತ್ತಿನ ಬಳಿಕ ಉಗುರು ಬೆಚ್ಚಗಿನ ನೀರಿನಿಂದ ತೊಳೆದುಕೊಂಡರೆ ಮುಖದ ಚರ್ಮ ಸ್ವಚ್ಛವಾಗಿ ಬಣ್ಣ ತಿಳಿಯಾಗುತ್ತದೆ ಮತ್ತು ತಾಜಾತನದಿಂದ ಕಂಗೊಳಿಸುತ್ತದೆ. ಇದು ಎಲ್ಲ ರೀತಿಯ ಚರ್ಮಕ್ಕೂ ಉಪಯುಕ್ತ.

ಫೇಸ್ ಮಾಸ್ಕ್: ಒಂದು ಚಮಚ ದ್ರಾಕ್ಷಿಯ ರಸ, ಒಂದು ಚಮಚ ಲಿಂಬೆ ಹಣ್ಣಿನ ರಸ, ಒಂದು ಚಮಚ ಪುದೀನ ಸೊಪ್ಪಿನ ರಸ ಕೂಡಿಸಿ ಮುಖ ಹಾಗೂ ಕುತ್ತಿಗೆಗೆ ಹಚ್ಚಿ ಸ್ವಲ್ಪ ಸಮಯದ ಬಳಿಕ ನೀರಿನಿಂದ ತೊಳೆದು ಗುಲಾಬಿ ಜಲ ಮತ್ತು ಐಸ್ ನೀರನ್ನು ಸೇರಿಸಿ ಮುಖಕ್ಕೆ ಹಚ್ಚಿಕೊಳ್ಳಿ. ಇದು ಎಣ್ಣೆ ಚರ್ಮದವರಿಗೆ ಉತ್ತಮ.

ಮುಖದ ಕಾಂತಿಗೆ: ಅರ್ಧ ಬಟ್ಟಲು ದ್ರಾಕ್ಷಿ ತಿರುಳಿಗೆ ಎರಡು ದೊಡ್ಡ ಚಮಚ ಹಸಿ ಹಾಲು ಮತ್ತು ಒಂದು ಚಮಚ ಜೇನು ತುಪ್ಪ ಬೆರೆಸಿ ತಯಾರಿಸಿದ ಪೇಸ್ಟನ್ನು ಮುಖ, ಕುತ್ತಿಗೆಗೆ ಹಚ್ಚಿ ಹದಿನೈದು ನಿಮಿಷಗಳವರೆಗೆ ಹಗುರವಾಗಿ ಮೇಲ್ಮುಖವಾಗಿ ಮಸಾಜ್‌ ಮಾಡಿಕೊಂಡು ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆದುಕೊಂಡಲ್ಲಿ ಮುಖ ಕಾಂತಿಯುತವಾಗುತ್ತದೆ. ಕಲೆ, ಗುಳ್ಳೆ, ಮೊಡವೆಗಳು ಕಡಿಮೆಯಾಗುತ್ತವೆ.

ಮೂರು ಚಮಚ ದ್ರಾಕ್ಷಿ ರಸಕ್ಕೆ ಒಂದು ಚಮಚ ಬಾದಾಮಿ ಎಣ್ಣೆ ಬೆರೆಸಿ ಕಾಲು, ಕೈ ಮತ್ತು ಪಾದಗಳಿಗೆ ಹಚ್ಚಿ ಮಸಾಜ್ ಮಾಡುವುದರಿಂದ ಚರ್ಮ ಮೃದುವಾಗಿ ಕಾಂತಿಯುತವಾಗುತ್ತದೆ.

ತಲೆ ಕೂದಲಿಗೆ: ಮೊಟ್ಟೆಯ ಬಿಳಿ ಭಾಗ, ಸ್ವಲ್ಪ ದ್ರಾಕ್ಷಿ ರಸ, ಸ್ವಲ್ಪ ಮೊಸರು, ಬಾದಾಮಿ ಎಣ್ಣೆ ಸ್ವಲ್ಪ ಕೂಡಿಸಿ ಕೂದಲಿನ ಬುಡ ಹಾಗೂ ಕೂದಲಿಗೆ ಹಚ್ಚಿ. ಅರ್ಧ ಗಂಟೆಯ ಬಳಿಕ ಮೃದುವಾದ ಶಾಂಪು ಬಳಸಿ ತಲೆ ತೊಳೆದುಕೊಳ್ಳುವುದರಿಂದ ಹೊಟ್ಟು ಕಡಿಮೆಯಾಗಿ ಕೂದಲು ಹೊಳಪಿನಿಂದ ಆರೋಗ್ಯಕರವಾಗಿ ಸೊಂಪಾಗಿ ಬೆಳೆಯುತ್ತದೆ.

ಆದರೆ ಎಚ್ಚರಿಕೆ ವಹಿಸಬೇಕಾದ ವಿಷಯವೆಂದರೆ, ಯಾವುದೇ ಕಾರಣಕ್ಕೂ ದ್ರಾಕ್ಷಿಯನ್ನು ತೊಳೆಯದೇ ಸೇವಿಸಬಾರದು. ಅದಕ್ಕೆ ಸಿಂಪಡಿಸಿರುವ ಕೀಟನಾಶಕ ಬಲು ಅಪಾಯಕಾರಿ. ದ್ರಾಕ್ಷಿ ಗೊಂಚಲನ್ನು ನಲ್ಲಿಯ ನೀರಿನ ಬುಡಕ್ಕೆ ಹಿಡಿದು ತೊಳೆಯಬೇಕು. ನಂತರ ಪಾತ್ರೆಯಲ್ಲಿ ನೀರು ಹಾಕಿ, ಉಪ್ಪು ಸೇರಿಸಿ ದ್ರಾಕ್ಷಿಯನ್ನು ಸ್ವಲ್ಪ ಹೊತ್ತು ನೆನೆಸಿ ತೊಳೆದು ತಿಂದರೆ ಕೀಟನಾಶಕದಿಂದ ಆಗುವ ಅಪಾಯವನ್ನು ತಡೆಗಟ್ಟಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.