ADVERTISEMENT

ಕನ್ನಡಕದಲ್ಲಿ ಕಂಡೀರಾ ಇಷ್ಟೆಲ್ಲಾ ವಿಧ?

ಪವಿತ್ರಾ ಭಟ್
Published 19 ಜುಲೈ 2024, 22:05 IST
Last Updated 19 ಜುಲೈ 2024, 22:05 IST
..
..   

ಕಣ್ಣಿನ ಸಮಸ್ಯೆ ಇರುವವರು ಮಾತ್ರ ಕನ್ನಡ ಧರಿಸಬೇಕು ಎನ್ನುವ ಕಾಲವೊಂದಿತ್ತು. ಆದರೆ ಇತ್ತೀಚೆಗೆ ಕನ್ನಡಕ ಧರಿಸುವುದೇ ಟ್ರೆಂಡ್‌ ಆಗಿದೆ. ಕಣ್ಣಿಗೆ ಹಿತವಾದ, ಸ್ಟೈಲಿಷ್‌ ಲುಕ್‌ ನೀಡುವ ಕನ್ನಡಕಗಳು ಯುವ ಜನರಿಗೆ ಅಚ್ಚುಮೆಚ್ಚು.

ಸಂದರ್ಭಗಳಿಗೆ ಅನುಸಾರವಾಗಿ ಉಡುಪಿಗೊಪ್ಪುವ ಕನ್ನಡ ಧರಿಸಿ ಒಂದು ಫೋಟೊ ಕ್ಲಿಕ್ಕಿಸಿಕೊಂಡರೆ ಖುಷಿ. ನಿಮಗೆ ಗೊತ್ತಾ ಕನ್ನಡಕದಲ್ಲೂ ಹಲವು ವಿಧಗಳಿವೆ. ಫ್ಯಾಷನ್‌ಗೆ ಸರಿಹೊಂದುವಂತಹ ಗ್ಲಾಸ್‌ ಧರಿಸಿ ಕಣ್ಣುಗಳನ್ನೂ ರಕ್ಷಿಸಿಕೊಳ್ಳಬಹುದು.

ನೀಲಿ ಬೆಳಕನ್ನು ತಡೆಯುವ ಕನ್ನಡಕ

ADVERTISEMENT

ಡಿಜಿಟಲ್ ಸಾಧನಗಳಿಂದ ಹೊರಸೂಸುವ ನೀಲಿ ಬೆಳಕನ್ನು ಫಿಲ್ಟರ್ ಮಾಡುವ ಮೂಲಕ ಒತ್ತಡವನ್ನು ಕಡಿಮೆ ಮಾಡಲು ಮತ್ತು ನಿದ್ರೆಯ ಗುಣಮಟ್ಟವನ್ನು ಸುಧಾರಿಸಲು ಈ ಕನ್ನಡಕ ಸಹಾಯ ಮಾಡುತ್ತದೆ. ಬೇರೆ ಬೇರೆ ಆಕಾರದಲ್ಲಿ ಸಿಗುವ ಈ ಕನ್ನಡಕ ಸದಾ ಗಣಕಯಂತ್ರ ಕುಟ್ಟುವ, ಮೊಬೈಲ್‌ ನೋಡುವವರಿಗೆ ಉತ್ತಮ ಗೆಳೆಯ. ಹೀಗಾಗಿ ಕಚೇರಿಗಳಿಗೆ ತೆರಳುವವರಿಗೆ ಗುಡ್‌ ಲುಕ್‌ ನೀಡುತ್ತದೆ.

ಝೀರೋ ಲೆನ್ಸ್‌ ಕನ್ನಡಕ

ವೈದ್ಯರ ಸಲಹೆ ಇಲ್ಲದೆಯೇ ಫ್ಯಾಷನ್‌ಗಾಗಿಯೇ ಕನ್ನಡಕಗಳನ್ನು ಧರಿಸುತ್ತಾರೆ. ಅಂತಹವರಿಗೆ ಝೀರೊ ಲೆನ್ಸ್‌ ಕನ್ನಡಕ ಉತ್ತಮ. ವೃತ್ತಾಕಾರಾದ ಗ್ಲಾಸ್‌ಗಳು, ಬಣ್ಣದ ಬಣ್ಣದ ಫ್ರೇಮ್‌ಗಳನ್ನು ಹೊಂದಿರುವ ಕನ್ನಡಕಗಳು ಹೊಸ ಲುಕ್‌ ನೀಡುತ್ತವೆ.

ಪೋಲರೈಸ್ಡ್‌ ಗ್ಲಾಸ್‌

ಈ ವಿಶೇಷ ಕನ್ನಡ ನೀರು ಅಥವಾ ರಸ್ತೆಯ ಮೇಲೈಗಳು ಹೊಳೆಯುವಂತೆ ಕಾಣುವುದನ್ನು ಕಡಿಮೆ ಮಾಡುತ್ತದೆ. ಹೀಗಾಗಿ ಬೇಸಿಗೆ ಕಾಲದಲ್ಲಿ ಇದು ಉತ್ತಮ ಆಯ್ಕೆಯಾಗಿದೆ. ಅಲ್ಲದೆ ವಾಹನ ಚಾಲನೆ ಮಾಡುವವರಿಗೆ ಇದು ಹೇಳಿ ಮಾಡಿಸಿದ ಕನ್ನಡಕ. ಸ್ಟೈಲಿಷ್‌ ಆಗಿಯೂ, ಕಣ್ಣಿಗೆ ಹಿತವಾಗಿಯೂ ಇರುತ್ತದೆ.

ವೇಫೇರರ್ ಸನ್‌ಗ್ಲಾಸ್‌

ಕಣ್ಣುಗಳನ್ನು ಪೂರ್ತಿಯಾಗಿ ಸುತ್ತುವರಿಯುವ ಈ ಕನ್ನಡಕಗಳು ಮುಖಕ್ಕೆ ಹೊಸ ಲುಕ್‌ ನೀಡುತ್ತದೆ. ತ್ರಿಕೋನ ಅಥವಾ ವೃತ್ತಾಕಾರದ ಮುಖ ಇರುವವರಿಗೆ ಈ ವೇಫೇರರ್ ಶೈಲಿಯ ಸನ್‌ಗ್ಲಾಸ್‌ಗಳು ಹೇಳಿ ಮಾಡಿಸಿದಂತವು.

ಮಿರರ್‌ ಸನ್‌ಗ್ಲಾಸ್‌

ನೀವೇನಾದರೂ ಟ್ರೆಂಡಿ ಸನ್‌ಗ್ಲಾಸ್‌ ಹುಡುಕುತ್ತಿದ್ದರೆ ಮಿರರ್‌ ಸನ್‌ಗ್ಲಾಸ್ ಉತ್ತಮ ಆಯ್ಕೆಯಾಗಿದೆ. ಗಾಢ ಬೆಳಕಿನಿಂದ ಕಣ್ಣನ್ನು ರಕ್ಷಿಸಿ, ಆರಾಮದಾಯಕ ಅನುಭವ ನೀಡುತ್ತದೆ. ಸಮುದ್ರ ತೀರಗಳು, ಚಾರಣಕ್ಕೆ ಹೋಗುವಾಗ ಈ ಕನ್ನಡಕ ನೆರವಾಗುತ್ತದೆ.

ಏವಿಯೇಟರ್‌ ಕನ್ನಡ

ಇದನ್ನು ಸಾಮಾನ್ಯವಾಗಿ ಪೈಲಟ್‌ಗಳು ಬಳಸುತ್ತಾರೆ. ಇದು ಪೋಲರೈಸ್ಡ್‌ ಗ್ಲಾಸ್‌ನಂತೆ ಇದ್ದು, ಹೊಳೆಯುವ ಬೆಳಕಿನ ಕಿರಣಗಳಿಂದ ಕಣ್ಣುಗಳನ್ನು ರಕ್ಷಿಸುತ್ತವೆ.

ಏವಿಯೇಟರ್‌ ಕನ್ನಡಕಗಳನ್ನು ಓಡುವಾಗ, ಆಟವಾಡುವಾಗ, ಹೊರಾಂಗಣಕ್ಕೆ ಹೋದಾಗ ಧರಿಸಬಹುದು. ಈ ಕನ್ನಡದಲ್ಲಿ ಕಪ್ಪು, ನೀಲಿ, ಕೇಸರಿ, ಹಳದಿ ಸೇರಿ ಹಲವು ಬಣ್ಣಗಳ ಗ್ಲಾಸ್‌ ಪಡೆಯಬಹುದು. ಹೀಗಾಗಿ ಫ್ಯಾಷನ್‌ ಪ್ರಿಯರಿಗೆ ಇದು ಬೆಸ್ಟ್‌

ವಿವಿಧ ಫ್ರೇಮ್‌ಗಳ ಕನ್ನಡಕಗಳು

ಗ್ಲಾಸ್‌ಗಳ ಸುತ್ತಲೂ ಚೌಕಟ್ಟಿರುವ ಕನ್ನಡಕವನ್ನು ಫುಲ್‌ ರಿಮ್‌ ಗ್ಲಾಸ್‌ ಎನ್ನುತ್ತಾರೆ ಇವುಗಳಲ್ಲಿ ವೃತ್ತಾಕಾರದ ದೊಡ್ಡದಾದ ಕನ್ನಡಕಗಳೂ ಸಿಗುತ್ತವೆ. ಬಾಲಿವುಡ್‌ ನಟ ಕರಣ ಜೋಹರ್‌ ಧರಿಸುತ್ತಾರಲ್ಲ ಆ ರೀತಿಯದ್ದು.

ಇನ್ನು, ಗ್ಲಾಸ್‌ಗಳ ಮೇಲ್ಭಾಗದಲ್ಲಿ ಮಾತ್ರ ಚೌಕಟ್ಟಿರುವ ಸೆಮಿ ರಿಮ್‌, ಗ್ಲಾಸ್‌ಗಳಿಗೆ ಚೌಕಟ್ಟಿಲ್ಲದ ರಿಮ್‌ಲೆಸ್‌ ಕನ್ನಡಕಗಳು, ಬೆಕ್ಕಿನ ಕಣ್ಣುಗಳ ಆಕಾರದಲ್ಲಿರುವ ಕನ್ನಡಕಗಳೂ ದೊರೆಯುತ್ತವೆ.

.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.