ADVERTISEMENT

Hair Care Tips | ಆರೋಗ್ಯವಂತ ಕೂದಲಿಗೆ ಆರೈಕೆ ಹೀಗಿರಲಿ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2024, 1:11 IST
Last Updated 26 ಅಕ್ಟೋಬರ್ 2024, 1:11 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಅದೊಂದು ಮಂಗಲಕಾರ್ಯನಡೆಯುತ್ತಿದ್ದ ಮನೆ. ಆಪ್ತರು, ನೆಂಟರಿಷ್ಟರು, ಕುಟುಂಬದವರೆಲ್ಲರೂ ಸಂಭ್ರಮದಿಂದ ಪಾಲ್ಗೊಂಡಿದ್ದರು. ಒಂದು ಕಡೆ ಪೂಜೆ-ಹವನ ನಡೆಯುತ್ತಿದ್ದರೆ, ಇನ್ನೊಂದು ಕಡೆ ಒಂದು ದೊಡ್ಡ ಗುಂಪು ಸೇರಿ ಏನೋ ಗಹನವಾಗಿ ಚರ್ಚಿಸುತ್ತಿದ್ದು ಎಲ್ಲರೂ ಅತ್ತಕಡೆಗೇ ಕುತೂಹಲದಿಂದ ಹೋಗುತ್ತಿದ್ದುದು ಕಂಡುಬಂತು. ಅಲ್ಲೇನು ನಡೆಯುತ್ತಿದೆ ಎಂದು ನೋಡಲಾಗಿ, ನನಗೂ ಅದನ್ನುಕಂಡು ಒಮ್ಮೆ ಸೋಜಿಗವಾಯಿತು. ಮಂಗಲಕಾರ್ಯಕ್ಕೆಂದು ಬಂದ ಫೋಟೋಗ್ರಾಫರ್ ನಮ್ಮ ಸಂಬಂಧಿಯೊಬ್ಬಳ “ಜಡೆ”ಯ ಫೋಟೋ ತೆಗೆಯುತ್ತಿದ್ದರೆ, ಉಳಿದವರೆಲ್ಲರೂ ಆಕೆಯ ಜಡೆಯನ್ನು ಬುಡದಿಂದ ತುದಿಯವರೆಗೂ ಮುಟ್ಟಿ ಖುಷಿಪಡುತ್ತಿದ್ದರು. ನೀಳವಾದ, ದಟ್ಟವಾದ, ಆರೋಗ್ಯಪೂರ್ಣವಾದ, ಕಾಲಿನಮಂಡಿಯವರೆಗೂ ಇಳಿಬಿಟ್ಟಿದ್ದ ಆಕೆಯ ಕೂದಲನ್ನು ನೋಡಲು ಯಾರಿಗಾದರೂ ಆನಂದವಾದೀತು. ನನ್ನ ಕೂದಲೂ ಹಾಗೆಯೇ ಇದ್ದಿದ್ದರೆ, ಕಡೇಪಕ್ಷ ಅದರ ಅರ್ಧದಷ್ಟಾದರೂ ಇದ್ದಿದ್ದರೆ! ಎಂದು ಎಷ್ಟೋಮಂದಿಗೆ ಅನಿಸದೇ ಇರಲಿಲ್ಲ. ಇಂದಿನ ದಿನಗಳಲ್ಲಿ ಹೀಗೆ ತುಂಬಾ ಅಪರೂಪವಾಗಿ ಕಾಣಸಿಗುವ “ನೀಳವೇಣಿ” ಯು ಮುಂದೆ ಇಂತಹ ಅದ್ಭುತವೊಂದನ್ನು ನೋಡುತ್ತೇವೆಯೋ ಇಲ್ಲವೋ ಎಂದು ಫೋಟೋ ತೆಗೆದಿಟ್ಟುಕೊಳ್ಳುವಷ್ಟರ ಮಟ್ಟಿನ ಕಾಲ ಇದಾಗಿದೆ. ಕೂದಲು ಉದ್ದವಿಲ್ಲದಿದ್ದರೂ ಇರುವಷ್ಟು ಕೂದಲನ್ನೇ ಆರೋಗ್ಯವಾಗಿಟ್ಟುಕೊಳ್ಳುವದೂ ಸವಾಲೇ ಸರಿ. ಇದು ಹಲವರಿಗೆ ದೊಡ್ಡ ಸಮಸ್ಯೆಯಾಗಿಯೂ ಕಾಡುತ್ತದೆ. ಎಷ್ಟೇ ಪ್ರಯತ್ನಪಟ್ಟರೂ ಉದ್ದವಾದ, ದಟ್ಟವಾದ ಕೂದಲನ್ನು ಪಡೆಯಲು ಕೆಲವರಿಗೆ ಸಾಧ್ಯವೇ ಆಗದು. ಕೂದಲು ಬೆಳೆಯು ವಬಗೆ, ಅದರ ಸಮಸ್ಯೆಗಳು ಹಾಗೂ ಪರಿಹಾರಗಳನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.

ಕೂದಲಿನ ಬೆಳವಣಿಗೆ
ಎಲ್ಲಾ ಜೀವಸಂಕುಲದಂತೆ ಕೂದಲಿಗೂ ಕೂಡ ಹುಟ್ಟುವುದು, ಬೆಳೆಯುವುದು ಮತ್ತು ನಾಶಗೊಳ್ಳುವುದು ಎಂಬ ಮೂರು ಘಟ್ಟಗಳಿವೆ. ಅವರವರ ಪ್ರಕೃತಿಗನುಗುಣವಾಗಿ ಕೂದಲಿನ ಬಣ್ಣ, ಅದರ ದಪ್ಪ ಎಲ್ಲವೂ ನಿರ್ಧಾರವಾಗುತ್ತದೆ ಅಲ್ಲದೇ ಆನುವಂಶಿಯತೆಯನ್ನೂ ಅವಲಂಬಿಸಿರಬಹುದು. ಆಯುರ್ವೇದದಲ್ಲಿ ಕೂದಲು ಹಾಗೂ ಉಗುರು ಅಸ್ಥಿಧಾತುವಿನ ಮಲ ಎಂದು ಹೇಳಲಾಗಿದೆ. ಅಂದರೆ ಕೂದಲು ಆರೋಗ್ಯವಾಗಿರಲು ಅಸ್ಥಿಧಾತುವಿನ ಪೋಷಣೆ ಮೊದಲಾಗಬೇಕು. ವಾತಪ್ರಕೃತಿಯವರಲ್ಲಿ ಕೂದಲು ಒರಟಾಗಿರುತ್ತದೆ. ಪಿತ್ತಪ್ರಕೃತಿಯವರಲ್ಲಿ ಮೃದುವಾಗಿಯೂ, ಅಲ್ಪಪ್ರಮಾಣದಲ್ಲಿದ್ದು ಕಪಿಲ(ಕೆಂಚು)ವರ್ಣದ್ದಾಗಿರುತ್ತದೆ. ಈ ಪ್ರಕೃತಿಯವರು ಬಾಲನೆರೆಗೆ ತುತ್ತಾಗುವುದು ಹೆಚ್ಚು. ಕಫಪ್ರಕೃತಿಯವರು ದಟ್ಟವಾದ ಹಾಗೂ ಕೋಮಲವಾದ ಕೂದಲನ್ನು ಹೊಂದಿರುತ್ತಾರೆ.

ADVERTISEMENT

ಕೂದಲಿನ ಬೆಳವಣಿಗೆಯ ಮೂರು ಹಂತಗಳು ಹೀಗಿವೆ

  • ಪ್ರತಿಯೊಂದು ಕೂದಲ ಎಳೆಯು ರೋಮಕೂಪದಿಂದ ಬೆಳೆಯಲು ಪ್ರಾರಂಭಿಸುತ್ತದೆ. ಇದು 3 ರಿಂದ 5 ವರ್ಷದ ಅತಿದೀರ್ಘ ಅವಧಿಯಾಗಿದೆ.

  • ಕೂದಲು ಬೆಳವಣಿಗೆ ಹಂತದಿಂದ ವಿಶ್ರಾಂತಿಹಂತಕ್ಕೆ ಹೋಗುವ ಅವಧಿ ಇದಾಗಿದ್ದು 1 ರಿಂದ 2 ವಾರಗಳವರೆಗೆ ಇರುತ್ತದೆ. ಈ ಅವಧಿಯಲ್ಲಿ ಕೂದಲಿಗೆ ಯಾವದೇ ರಕ್ತಪೂರೈಕೆ ಇಲ್ಲದೇ ಅದರ ಬೆಳವಣಿಗೆ ಸ್ಥಗಿತಗೊಳ್ಳುತ್ತದೆ.

  • ಇದು 3 ರಿಂದ 4 ತಿಂಗಳುಗಳವರೆಗೆ ಇರುವ ವಿಶ್ರಾಂತಿ ಹಂತ. ಈ ಹಂತ ಮುಗಿದ ನಂತರ ಕೂದಲು ಉದುರಿ, ಹೊಸ ಕೂದಲಿನ ಬೆಳವಣಿಗೆ ಶುರುವಾಗುತ್ತದೆ. ದಿನಕ್ಕೆ 50 ರಿಂದ 100 ಕೂದಲು ಸಾಮಾನ್ಯವಾಗಿ ಉದುರುತ್ತದೆ. ಇದು ಆತಂಕ ಪಡುವ ವಿಷಯವಲ್ಲ.

ಕೂದಲಿಗೆ ಎದುರಾಗುವ ಸಮಸ್ಯೆಗಳು
ಕೀಮೋಥೆರಪಿ, ಕ್ಷ-ಕಿರಣ ಮುಂತಾದವುಗಳ ಅಡ್ಡಪರಿಣಾಮದಿಂದ, ಖನಿಜ ವಿಷ, ಲೂಸ್ ಅನಾಜೆನ್ ಸಿಂಡ್ರೋಮ್ ,ಪೆಂಫಿಜಸ್ ಕಾಯಿಲೆಗಳಿಂದ ಕೂದಲು ಹುಟ್ಟುವ ಹಂತದಲ್ಲೇ ತೊಡಕಾಗುತ್ತದೆ.

ಅತೀ ದೀರ್ಘ ಅವಧಿಯ ಜ್ವರದಂತಹ ಯಾವದೇ ಕಾಯಿಲೆಯಿಂದ ನರಳುತ್ತಿದ್ದರೆ, ಥೈರಾಯ್ಡ್‌ ತೊಂದರೆ, ಪೋಷಕಾಂಶಗಳ ಕೊರತೆ, ರಕ್ತಹೀನತೆ, ಮಾನಸಿಕ ಒತ್ತಡ, ಶಸ್ತçಚಿಕಿತ್ಸೆಯ ನಂತರ, ಹೆರಿಗೆ ಹಾಗೂ ಗರ್ಭಪಾತದ ನಂತರ ರಕ್ತದೊತ್ತಡಕ್ಕೆ ತೆಗೆದುಕೊಳ್ಳುವ ಮಾತ್ರೆಗಳ ಅಡ್ಡಪರಿಣಾಮ, ಹಾರ್ಮೋನಲ್ ಚಿಕಿತ್ಸೆಯನ್ನು ಒಮ್ಮೆಲೇ ನಿಲ್ಲಿಸುವುದು ಮುಂತಾದ ಕಾರಣಗಳಿಂದ 1 ರಿಂದ 2 ತಿಂಗಳಲ್ಲಿ ಕೂದಲು ಉದುರುವಿಕೆ ಪ್ರಾರಂಭವಾಗುತ್ತದೆ. ಇದು ಹಾರ್ಮೋನಿನ ಏರುಪೇರಿನಿಂದ ಉಂಟಾಗುವಂತಾಗಿದ್ದು ಅನುವಂಶಿಕವಾಗಿ ಬರುತ್ತದೆ. 20 ರಿಂದ 45 ವರ್ಷ ವಯಸ್ಸಿನ ಗಂಡಸರಲ್ಲಿ ಮಾತ್ರ ಕಂಡುಬರುತ್ತದೆ.
40 ರಿಂದ 45 ವರ್ಷದವರಲ್ಲಿ ಸ್ವಾಭಾವಿಕವಾಗಿ ಉಂಟಾಗುವ ಕೂದಲು ಉದುರುವಿಕೆ ಇದಾಗಿದ್ದು ವಿಶೇಷವಾಗಿ ಕಿವಿ ಮತ್ತು ಹಣೆಯ ಮೇಲ್ಭಾಗ ಹಾಗೂ ತಲೆಯ ಹಿಂಭಾಗದಲ್ಲಿ ಕೂದಲು ಉದುರುತ್ತದೆ.


ಆರೋಗ್ಯಕರ ಕೂದಲಿಗೆ ಈ ಕೆಳಗಿನವುಗಳನ್ನು ಪಾಲಿಸಿ

  • ಆಹಾರದಲ್ಲಿ ಹಸಿರು ತರಕಾರಿ, ಸೊಪ್ಪು, ಹಣ್ಣು, ಮೊಳಕೆ ಕಾಳು, ಹಾಲು ಹಾಗೂ ಹಾಲಿನ
    ಉತ್ಪನ್ನಗಳನ್ನು ಯಥೇಚ್ಛವಾಗಿ ಬಳಸಿ. ಇವುಗಳಿಂದ ಕಬ್ಬಿಣಂಶ ಹಾಗೂ ಇತರ ಪೋಷಕಾಂಶಗಳ
    ಪೂರೈಕೆಯಾಗಿ ಕೂದಲಿನ ಬುಡಕ್ಕೆ ಬಲ ಸಿಗುವದು.

  • ವಿವಿಧ ರೀತಿಯ ತಂಪುಪಾನೀಯಗಳು, ಟಿನ್‌ಗಳಲ್ಲಿ ದೊರೆಯುವ ಸಿದ್ಧ ಆಹಾರಗಳು, ಜಂಕ್
    ಫುಡ್‌ಗಳು, ಬೇಕರಿ ತಿನಿಸುಗಳು, ಅತಿ ಹುಳಿ, ಉಪ್ಪು, ಖಾರ, ಹೆಚ್ಚು ಮಸಾಲೆಯುಕ್ತ ತಿಂಡಿಗಳು,
    ಕರಿದ ತಿಂಡಿಗಳನ್ನು ಆದಷ್ಟು ದೂರವಿಡಿ.

  • ಮಾನಸಿಕ ಒತ್ತಡಗಳಿಂದ, ಖಿನ್ನತೆಯಿಂದ ನರಳದಿರಿ. ಇದರಿಂದ ಅಕಾಲದಲ್ಲಿ ಕೂದಲು ಬೆಳ್ಳಗಾಗುವುದನ್ನು ತಪ್ಪಿಸಬಹುದು. ಧ್ಯಾನ, ಪ್ರಾಣಾಯಾಮ, ಮನಸ್ಸಿಗೆ ಮುದ ನೀಡುವ ಸಂಗೀತ, ಚಿತ್ರಕಲೆ ಮುಂತಾದ ಹವ್ಯಾಸಗಳನ್ನು ರೂಢಿಸಿಕೊಳ್ಳುವುದರಿಂದ ಒತ್ತಡವನ್ನು ನಿವಾರಿಸಬಹುದು.

  • ಭೃಂಗರಾಜ, ಬ್ರಾಹ್ಮಿ, ನೀಲಿನಿ, ತಿಲ, ನಾರಿಕೇಳ, ಮದಯಂತಿಕಾ ಮುಂತಾದವುಗಳನ್ನು ಬಳಸುವುದರಿಂದ ಕೂದಲಿಗೆ ನೈಸರ್ಗಿಕವಾಗಿ ಬಣ್ಣ ಹಾಗೂ ಹೊಳಪು ಸಿಗುವದಲ್ಲದೇ ಕೂದಲಿನ ಬೆಳವಣಿಗೆಗೆ ಸಹಾಯವಾಗುತ್ತದೆ.

  • ಶಿರೋ ಅಭ್ಯಂಗ ಅಥವಾ ಎಣ್ಣೆಯ ಮಸಾಜ್ ಮಾಡುವಾಗ ಎಣ್ಣೆಯನ್ನು ಸ್ವಲ್ಪ ಬಿಸಿ ಮಾಡಿ, ಬೆರಳಿನ
    ತುದಿಗಳಿಂದ ಕೂದಲಿನ ಬುಡಕ್ಕೆ ಹಚ್ಚಿ. ಒಂದು ರಾತ್ರಿ ಹಾಗೇ ಬಿಟ್ಟು ಮರುದಿನ ಸ್ನಾನ ಮಾಡಿ.
    ಸಾಧ್ಯವಾದರೆ ತಲೆಗೆ ನಿತ್ಯವೂ ಎಣ್ಣೆಯ ಮಸಾಜ್ ಮಾಡುವುದು ಒಳ್ಳೆಯದು. ಇದರಿಂದ ಇಂದ್ರಿಯಗಳಿಗೆ ಚೈತನ್ಯಬರುವುದು, ಮಾನಸಿಕ ಒತ್ತಡ ಕಡಿಮೆಯಾಗಿ ಒಳ್ಳೆಯ ನಿದ್ದೆಬರಲು ಸಹಾಯಕಾರಿ. ಜಡತ್ವ, ಆಲಸ್ಯ ನಿವಾರಣೆಯಾಗುವುದು. ತಲೆಗೆ ಎಣ್ಣೆಹಚ್ಚಿದ ನಂತರ ಅತಿಬಿಸಿಲು, ಗಾಳಿ, ಧೂಳಿಗೆ ಹೋಗಬಾರದು. ಇದರಿಂದ ತಲೆನೋವು ಬರುವ ಸಾಧ್ಯತೆಯಿರುತ್ತದೆ. ಜ್ವರ, ಅಜೀರ್ಣ, ನೆಗಡಿ, ಕೆಮ್ಮು ಹಾಗೂ ಕಫಸಂಬಂಧಿ ರೋಗಗಳಿದ್ದಾಗ ಎಣ್ಣೆ ಹಚ್ಚಬಾರದು.

  • ವಾರಕ್ಕೆರಡು ಸಲವಾದರೂ ತಲೆಸ್ನಾನ ಮಾಡಿ. ತಲೆಸ್ನಾನಕ್ಕೆ ಅತಿಬಿಸಿಯಾದ ನೀರನ್ನು ಬಳಸಬೇಡಿ.
    ರಾಸಾಯನಿಕಗಳನ್ನೊಳಗೊಂಡ ಶ್ಯಾಂಪುಗಳನ್ನು ಬಳಸದಿರಿ. ಶೀಗೆಕಾಯಿ, ಅಂಟುವಾಳಕಾಯಿ,
    ದಾಸವಾಳ ಮುಂತಾದ ಪ್ರಾಕೃತಿಕ ಶ್ಯಾಂಪುಗಳನ್ನು ಬಳಸುವುದು ಉತ್ತಮ. ನಿಮ್ಮ ಕೂದಲಿಗೆ
    ಹೊಂದುವಂತಹ ಸಾಬೂನುಗಳಿಂದ ಧೂಳು, ಹೊಟ್ಟು, ಹೇನು, ಬೆವರಿನಿಂದ ತಲೆಯನ್ನು
    ಸ್ವಚ್ಛವಾಗಿರಿಸಿಕೊಳ್ಳಿ. ಜಾಹೀರಾತಿಗೆ ಮರುಳಾಗಿ ಪದೇ ಪದೇ ಸಾಬೂನು ಅಥವಾ ಶ್ಯಾಂಪುವನ್ನು
    ಬದಲಿಸುತ್ತಿರಬಾರದು, ಇವುಗಳಿಂದ ಸ್ವಚ್ಛತೆ ಕಾಪಾಡಿಕೊಳ್ಳಬಹುದೇ ವಿನಃ ಕೂದಲು ಉದ್ದವಾಗುವುದು ಸಾಧ್ಯವಿಲ್ಲ.

  • ಕೂದಲನ್ನು ಬುಡದಿಂದ ತುದಿಯವರೆಗೆ ದಿನಕ್ಕೆರಡು ಬಾರಿ ಬಾಚಿಕೊಳ್ಳಿ, ಆದರೆ ಒದ್ದೆಯಿರುವ ಕೂದಲನ್ನು ಬಾಚದಿರಿ. ಕೂದಲಿನ ಸುಕ್ಕು ಬಿಡಿಸುವಾಗ ಅಗಲ ಹಲ್ಲಿನ ಬಾಚಣಿಕೆಯಿಂದ ಬಾಚಬೇಕು. ಹೇರ್ ಡ್ರಯರ್‌ಗಳಿಂದ ಕೂದಲನ್ನು ಒಣಗಿಸುವುದರಿಂದ ಕೂದಲು ಸೀಳು ಬಿಡುವ ಸಾಧ್ಯತೆ ಹೆಚ್ಚು. ಆದ್ದರಿಂದ ಕೂದಲನ್ನು ಸ್ವಾಭಾವಿಕವಾಗಿ ಒಣಗಲು ಬಿಟ್ಟು ನಂತರ ಬಾಚಿಕೊಳ್ಳಬೇಕು.

  • ನೀರನ್ನು ಹೆಚ್ಚು ಸೇವಿಸಿ.

  • ರಾತ್ರಿ ನಿದ್ದೆಗೆಡದೇ ಸೊಂಪಾದ ನಿದ್ದೆ ಮಾಡಿ.

  • ಹೆರಿಗೆ ನಂತರ, ಅನಿಯಮಿತವಾದ ಮುಟ್ಟು, ಹಾರ್ಮೋನಿನ ಏರುಪೇರು, ಅನಿಮಿಯಾ, ವಿವಿಧ
    ಚರ್ಮದಕಾಯಿಲೆಯಿಂದಾಗಿ ಕೂದಲು ಉದುರುವಿಕೆಗೆ ವೈದ್ಯರನ್ನು ಕಂಡು ಸೂಕ್ತ ಚಿಕಿತ್ಸೆ ಪಡೆಯಿರಿ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.