ನವದೆಹಲಿ: ಅರ್ಜೆಂಟೀನಾದ ಬ್ಯೂನಸ್ ಐರಿಸ್ ಪ್ರಾಂತ್ಯದ ರಾಜಧಾನಿ ಲಾ ಪ್ಲಾಟಾದಲ್ಲಿ ನಡೆದ 2024ರ ಮಿಸ್ ಯೂನಿವರ್ಸ್ ಬ್ಯೂನಸ್ ಐರಿಸ್ ಸ್ಪರ್ಧೆಯಲ್ಲಿ 60 ವರ್ಷದ ಮಹಿಳೆಯೊಬ್ಬರು ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ.
ವೃತ್ತಿಯಲ್ಲಿ ಪತ್ರಕರ್ತೆ, ವಕೀಲರಾದ 'ಅಲೆಜಾಂಡ್ರಾ ಮಾರಿಸಾ ರೊಡ್ರಿಗಸ್' ತನ್ನ 60ನೇ ವಯಸ್ಸಿನಲ್ಲಿ ಪ್ರತಿಷ್ಠಿತ ಸೌಂದರ್ಯ ಸ್ಪರ್ಧೆಯನ್ನು ಗೆದ್ದ ಮೊದಲ ಮಹಿಳೆ ಎಂಬ ದಾಖಲೆಯನ್ನೂ ಬರೆದಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾದ ವಿಡಿಯೊಗಳ ಪ್ರಕಾರ, ಈ ಗೆಲುವಿನೊಂದಿಗೆ, ರೊಡ್ರಿಗಸ್ 2024ರ ಮೇ ತಿಂಗಳಲ್ಲಿ ಮಿಸ್ ಯೂನಿವರ್ಸ್ ಅರ್ಜೆಂಟೀನಾ ರಾಷ್ಟ್ರೀಯ ಆಯ್ಕೆಯಲ್ಲಿ ಬ್ಯೂನಸ್ ಐರಿಸ್ ಅನ್ನು ಪ್ರತಿನಿಧಿಸಲಿದ್ದಾರೆ. ಅಲ್ಲಿ ಗೆದ್ದರೆ ಮಿಸ್ ಯೂನಿವರ್ಸ್ ವರ್ಲ್ಡ್ ಸ್ಪರ್ಧೆಯಲ್ಲಿ ಭಾಗವಹಿಸಲು ಆಯ್ಕೆಯಾಗುತ್ತಾರೆ. ಈ ಸ್ಪರ್ಧೆ 2024ರ ಸೆಪ್ಟೆಂಬರ್ 28ರಂದು ಮೆಕ್ಸಿಕೋದಲ್ಲಿ ನಡೆಯಲಿದೆ.
'ಸೌಂದರ್ಯ ಸ್ಪರ್ಧೆಯ ಈ ಹೊಸ ಮಾದರಿಯಲ್ಲಿ ಭಾಗವಹಿಸಿ ನಾನು ರೋಮಾಂಚಿತಗೊಂಡಿದ್ದೇನೆ. ಏಕೆಂದರೆ ಮಹಿಳೆಯರ ಕೇವಲ ದೈಹಿಕ ಸೌಂದರ್ಯ ಮಾತ್ರವಲ್ಲ, ಮತ್ತೊಂದು ಮೌಲ್ಯಗಳನ್ನು ಗೌರವಿಸುವ ಹೊಸ ಮಾದರಿಯನ್ನು ಆರಂಭಿಸುತ್ತಿದ್ದೇವೆ' ಎಂದು ಗೆಲುವಿನ ಬಳಿಕ ಮಾಧ್ಯಮಗಳಿಗೆ ತಿಳಿಸಿದರು.
ಮಿಸ್ ಯೂನಿವರ್ಸ್ ಸಂಸ್ಥೆ ಕಳೆದ ವರ್ಷ ಸ್ಪರ್ಧಿಗಳ ವಯಸ್ಸಿನ ಮಿತಿಯನ್ನು ತೆಗೆದುಹಾಕಿದೆ. 18 ವರ್ಷ ಮೇಲ್ಪಟ್ಟ ಯಾವುದೇ ಮಹಿಳೆ ಸ್ಪರ್ಧಿಸಲು ಅರ್ಹರಾಗಿರುತ್ತಾರೆ ಎಂದು ಹೇಳಿದೆ. ಇದಕ್ಕೂ ಮೊದಲು 18-28 ವರ್ಷ ವಯಸ್ಸಿನ ಮಹಿಳೆಯರು ಮಾತ್ರ ಸ್ಪರ್ಧೆಯಲ್ಲಿ ಭಾಗವಹಿಸಬಹುದಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.