ADVERTISEMENT

ಘಲ್‌ ಘಲ್‌: ಕಾಲ್ಗೆಜ್ಜೆ ನಾದದಲಿ...

ರೇಷ್ಮಾ
Published 7 ಜನವರಿ 2022, 19:30 IST
Last Updated 7 ಜನವರಿ 2022, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಘಲ್‌ ಘಲ್‌ ಎಂದು ಕಾಲ್ಗೆಜ್ಜೆ ಸದ್ದು ಮಾಡುತ್ತಾ ಹೆಣ್ಣುಮಕ್ಕಳು ಮನೆ ತುಂಬಾ ಓಡಾಡಿಕೊಂಡಿದ್ದರೆ ಕೇಳುವುದೇ ಚೆಂದ. ಕಾಲ್ಗೆಜ್ಜೆ ನಾದ ಮನದಲ್ಲಿ ಪುಳಕ ತರದೇ ಇರದು. ಹೆಣ್ಣುಮಕ್ಕಳಿಗೂ ಕಾಲ್ಗೆಜ್ಜೆಗೂ ಅವಿನಾಭಾವ ಸಂಬಂಧ. ತಂದೆಯಾದವನು ತನಗೆ ಹೆಣ್ಣು ಕೂಸಾದರೆ ಆ ಮುದ್ದು ಕಂದಮ್ಮನಿಗೆ ಮೊದಲು ನೀಡುವ ಉಡುಗೊರೆಯೇ ಕಾಲ್ಗೆಜ್ಜೆ.

ಪ್ರಿಯಕರನಿಗೆ ತಾನಿತ್ತ ಕಾಲ್ಗೆಜ್ಜೆ ಧರಿಸಿ ಪ್ರೇಯಸಿ ಓಡಾಡುತ್ತಿದ್ದರೆ ಮನದಲ್ಲೇನೋ ಖುಷಿ. ಹೀಗೆಂದಾಗ ನಿಮಗೆ ‘ಮುನಿಯನ ಮಾದರಿ’ ಸಿನಿಮಾದ ‘ಕಾಲ್ಗೆಜ್ಜೆ ತಾಳಕೆ.. ಕೈ ಬಳೆಯ ನಾದಕೆ.. ಮರುಳಾಗಿ ಓಡಿ ಬಂದೆ ನೀ.. ಎದೆ ಝಲ್ ಝಲ್‌.. ಮೈ ಜುಂ ಜುಂ..’ ಎನ್ನುವ ಯುಗಳ ಗೀತೆ ನೆನಪಾಗಬಹುದು.

ಹೀಗೆ ಹಿಂದಿನಿಂದಲೂ ಕಾಲ್ಗೆಜ್ಜೆ ಹೆಂಗಳೆಯರ ನೆಚ್ಚಿನ ಸಂಗಾತಿಯಾಗಿದೆ. ಆ ಕಾಲದಲ್ಲಿ ಬೆಳ್ಳಿಯ ಕಾಲ್ಗೆಜ್ಜೆ ಧರಿಸುವುದು ರೂಢಿಯಲ್ಲಿದ್ದರೆ, ಇತ್ತೀಚೆಗೆ ಒಂಟಿ ಕಾಲಿಗೆ ಕಪ್ಪನೆಯ ದಾರ ಧರಿಸುವುದು ಚಾಲ್ತಿಯಲ್ಲಿದೆ. ಕೆಟ್ಟದೃಷ್ಟಿ ತಾಕದಂತಿರಲಿ ಎಂದುಕಪ್ಪುದಾರವನ್ನು ಕಟ್ಟಿಕೊಳ್ಳುತ್ತಾರೆ. ಈಗ ಆ ಕಪ್ಪುದಾರದಲ್ಲೇ ವೈವಿಧ್ಯಮಯ ವಿನ್ಯಾಸದ ಕಾಲ್ಗೆಜ್ಜೆಗಳನ್ನು ಪರಿಚಯಿಸಲಾಗಿದೆ. ಇಂಥ ವಿನ್ಯಾಸಗಳ ಕಾಲ್ಗೆಜ್ಜೆಗಳು ಟ್ರೆಂಡ್ ಆಗಿವೆ.

ADVERTISEMENT

ಕಪ್ಪು ದಾರದ ಬೆಳ್ಳಿಯ ಕರಕುಶಲದ ಕಾಲ್ಗಜ್ಜೆ
ಕಪ್ಪು ಬಣ್ಣದ ದಪ್ಪನೆಯ ದಾರಕ್ಕೆ ವಿವಿಧ ವಿನ್ಯಾಸದ ಬೆಳ್ಳಿಯ ಮಣಿಗಳು, ಹರಳುಗಳನ್ನು ಜೋಡಿಸುವುದು ಇಂದಿನ ಟ್ರೆಂಡ್‌. ಬೆಳ್ಳಿಯ ಗೆಜ್ಜೆ, ಟೆಂಪಲ್‌ ವಿನ್ಯಾಸ, ಪುಟ್ಟ ಪುಟ್ಟ ಹರಳುಗಳನ್ನು ದಾರದೊಂದಿಗೆ ಪೋಣಿಸುವುದು ಈ ರೀತಿ ಸುಂದರವಾದ ಕಾಲ್ಗೆಜ್ಜೆ ಮಾಡಲಾಗುತ್ತದೆ. ಇದು ಭಾರತೀಯ ಹಾಗೂ ಪಾಶ್ಚಾತ್ಯ ಎರಡೂ ರೀತಿಯ ಡ್ರೆಸ್‌ಗಳಿಗೂ ಹೊಂದುತ್ತದೆ. ಕಾಲ್ಗೆಜ್ಜೆಯ ಬಗ್ಗೆ ಸಾಂಪ್ರದಾಯಿಕ ನಿಲುವು ಇರಿಸಿಕೊಂಡವರು ಇದನ್ನು ಧರಿಸಬಹುದು. ಇದು ನೋಡಲು ಸರಳವಾಗಿದ್ದು ಧರಿಸಿದಾಗ ಕಾಲಿನ ಅಂದವನ್ನು ಹೆಚ್ಚಿಸುತ್ತದೆ.

ಕಪ್ಪುದಾರ–ಜರ್ಮನ್ ಮಣಿಗಳು
ಕಪ್ಪುದಾರಕ್ಕೆ ಮೇಲಿಂದ ಹಾಗೂ ಕೆಳಗಿನಿಂದ ಜರ್ಮನ್‌ ಮಣಿಗಳಿಂದ ಜೋಡಿಸಿರುವ ಅಂದದ ಕಾಲ್ಗೆಜ್ಜೆಗಳತ್ತ ಹೆಣ್ಣುಮಕ್ಕಳು ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಧರಿಸಿದಾಗ ಸರಳವಾಗಿ ಕಾಣುವ ಈ ಕಾಲ್ಗೆಜ್ಜೆಯನ್ನು ಸಿನಿಮಾ ನಟಿಯರು ಕೂಡ ಮೆಚ್ಚಿ ತೊಡುತ್ತಿದ್ದಾರೆ. ಚಿಕ್ಕ ಚಿಕ್ಕ ಮಣಿಗಳಿಂದ ಕೂಡಿರುವ ಈ ದಾರದ ಕಾಲ್ಗೆಜ್ಜೆ ಕಾಲಿನ ಅಂದ ಹೆಚ್ಚಿಸುವುದರಲ್ಲಿ ಅನುಮಾನವಿಲ್ಲ.

ವಿಂಟೇಜ್ ಸ್ಟೈಲ್ ದಾರದ ಗೆಜ್ಜೆ
ಕಪ್ಪುದಾರ ಧರಿಸುವ ರೂಢಿ ನಿಮಗಿದ್ದೂ ಬರಿಯ ದಾರ ಧರಿಸಿ ಬೇಸರವಾಗಿದ್ದರೆ ನೀವು ಈ ವಿನ್ಯಾಸದ ಕಾಲ್ಗೆಜ್ಜೆಯನ್ನು ಧರಿಸಬಹುದು. ಇದು ಸಾಂಪ್ರದಾಯಿಕ ಗೆಜ್ಜೆಯ ಹಾಗೆಯೂ ಕಾಣಿಸುತ್ತದೆ. ಬೆಳ್ಳಿಯ ಅಥವಾ ಆಕ್ಸಿಡೈಸ್ಡ್‌ ಆಭರಣದ ಗುಂಡನ್ನು ದಾರಕ್ಕೆ ಕಟ್ಟಲಾಗಿರುತ್ತದೆ. ಇದು ಸರಳವಾಗಿದ್ದು ಸುಂದರವಾಗಿಯೂ ಇರುತ್ತದೆ.

ಕಪ್ಪುದಾರದ ಚಿಪ್ಪಿನ ಕಾಲ್ಗೆಜ್ಜೆ
ದಪ್ಪಗೆ ಹೆಣೆದ ಕಪ್ಪುದಾರದ ಮೇಲೆ ಕಪ್ಪೆಚಿಪ್ಪನ್ನು ಜೋಡಿಸಿ ಸುಂದರವಾಗಿ ಕಾಲ್ಗೆಜ್ಜೆ ಮಾಡಿದ್ದಾರೆ. ಕಪ್ಪು‌ದಾರದ ಮೇಲೆ ಬಿಳಿ, ಕ್ರೀಮ್‌ ಬಣ್ಣದ ಚಿಪ್ಪು ಹೆಚ್ಚು ಹೊಂದುತ್ತದೆ. ಇದು ಎಲ್ಲಾ ವರ್ಣದವರಿಗೂ ಹೊಂದಿಕೆಯಾಗುತ್ತದೆ. ಕಾಲಿನ ಅಂದ ಹೆಚ್ಚಿಸುತ್ತದೆ.

ಚೋಕರ್‌ ವಿನ್ಯಾಸದ ಕಾಲ್ಗೆಜ್ಜೆ
ಚೋಕರ್‌ ವಿನ್ಯಾಸದ ಕತ್ತಿನ ಹಾರ ಹಾಗೂ ಕಾಲ್ಗೆಜ್ಜೆ ಈಗ ಹೆಚ್ಚು ಟ್ರೆಂಡ್ ಸೃಷ್ಟಿಸುತ್ತಿದೆ. ಈ ವಿನ್ಯಾಸದ ಕಾಲ್ಗೆಜ್ಜೆಯೊಂದಿಗೆ ವಿವಿಧ ವಿನ್ಯಾಸದ ಕಪ್ಪು ದಾರದ ಕಾಲ್ಗೆಜ್ಜೆಯನ್ನು ಜೊತೆಯಾಗಿ ಧರಿಸಬಹುದು. ಚೋಕರ್‌ ವಿನ್ಯಾಸವು ಜೀನ್ಸ್‌, ಶಾರ್ಟ್ ಸ್ಕರ್ಟ್‌ನಂತಹ ಪಾಶ್ಚಾತ್ಯ ಶೈಲಿಯ ಉಡುಪಿನೊಂದಿಗೆ ಇದು ಹೆಚ್ಚು ಹೊಂದುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.