ADVERTISEMENT

21 ವರ್ಷಗಳ ಬಳಿಕ ಭಾರತಕ್ಕೆ ಭುವನ ಸುಂದರಿ ಪಟ್ಟ; ಹರ್ನಾಜ್‌ ಸಂಧು ಮಿಸ್ ಯುನಿವರ್ಸ್

ಪಿಟಿಐ
Published 13 ಡಿಸೆಂಬರ್ 2021, 21:18 IST
Last Updated 13 ಡಿಸೆಂಬರ್ 2021, 21:18 IST
ಹರ್ನಾಜ್‌ ಕೌರ್‌ ಸಂಧು
ಹರ್ನಾಜ್‌ ಕೌರ್‌ ಸಂಧು   

ಈಲಟ್, ಇಸ್ರೇಲ್‌: ಭಾರತದ ನಟಿ ಹಾಗೂ ರೂಪದರ್ಶಿ ಹರ್ನಾಜ್‌ ಕೌರ್‌ ಸಂಧು ಅವರು ‘ಭುವನ ಸುಂದರಿ’ ಕಿರೀಟವನ್ನು ಸೋಮವಾರ ಮುಡಿಗೇರಿಸಿಕೊಂಡಿದ್ದಾರೆ.

21 ವರ್ಷಗಳ ನಂತರ ಭಾರತಕ್ಕೆ ‘ಭುವನ ಸುಂದರಿ’ ಪಟ್ಟ ಒಲಿದಂತಾಗಿದೆ. ಈ ಹಿಂದೆ ನಟಿಯರಾದ ಸುಷ್ಮಿತಾ ಸೇನ್‌ (1994) ಹಾಗೂ ಲಾರಾ ದತ್ತಾ (2000) ಅವರು ಈ ಗೌರವಕ್ಕೆಭಾಜನರಾಗಿದ್ದರು.

ಪರಾಗ್ವೆಯ 22 ವರ್ಷದ ನಾದಿಯಾ ಫೆರೆರಾ ಮೊದಲ ರನ್ನರ್‌ ಅಪ್‌ ಹಾಗೂ ದಕ್ಷಿಣ ಆಫ್ರಿಕಾದ 24 ವರ್ಷದ ಲಲೇಲಾ ಸ್ವಾನ್‌ ಎರಡನೇ ರನ್ನರ್‌ ಅಪ್‌ ಸ್ಥಾನ ಪಡೆದರು.

ADVERTISEMENT

ಕೆಂಪು ಸಮುದ್ರ ತೀರದಲ್ಲಿರುವ ಈಲಟ್‌ ನಗರದ ಐಷಾರಾಮಿ ರೆಸಾರ್ಟ್‌ನಲ್ಲಿ ಭುವನ ಸುಂದರಿ ಸ್ಪರ್ಧೆಯ 70ನೇ ಆವೃತ್ತಿಯ ಕಾರ್ಯಕ್ರಮ ನಡೆಯಿತು. ಚಂಡೀಗಡ ಮೂಲದ, 21ರ ಹರೆಯದ ಹರ್ನಾಜ್‌ ಕೌರ್‌ ಅವರು ಅಂತಿಮ ಸುತ್ತಿನಲ್ಲಿ ‘ಭುವನ ಸುಂದರಿ’ ಪಟ್ಟವನ್ನು ತಮ್ಮದಾಗಿಸಿಕೊಂಡರು.

ಹಿಂದಿನ ವರ್ಷ ಇದೇ ಗೌರವಕ್ಕೆ ಪಾತ್ರರಾಗಿದ್ದ, ಮೆಕ್ಸಿಕೊದ ಆ್ಯಂಡ್ರಿಯಾ ಮೆಜಾ ಅವರು ಹರ್ನಾಜ್‌ಅವರಿಗೆ ಕಿರೀಟತೊಡಿಸಿದರು. ಈಲಟ್‌ನಲ್ಲಿ ನೆಲೆಸಿರುವ ಭಾರತೀಯರು ಸೇರಿದಂತೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಇತರರು ಹರ್ನಾಜ್‌ ಅವರ ಸಾಧನೆಯ ಅಮೂಲ್ಯ ಕ್ಷಣಗಳಿಗೆ ಸಾಕ್ಷಿಯಾದರು.

ಹರ್ನಾಜ್‌ ಕೌರ್ ಅವರು ಸಾರ್ವಜನಿಕ ಆಡಳಿತದಲ್ಲಿ ಸ್ನಾತಕೋತ್ತರ ಪದವಿ ಅಧ್ಯಯನ ಮಾಡುತ್ತಿದ್ದಾರೆ.

‘21 ವರ್ಷಗಳ ನಂತರ ಭಾರತಕ್ಕೆ ಈ ಮಹೋನ್ನತ ಗೌರವ ತಂದುಕೊಡುತ್ತಿದ್ದು, ಇದು ಅತ್ಯಂತ ಹೆಮ್ಮೆಯ ಕ್ಷಣ’ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

‘ನನ್ನನ್ನು ಬೆಂಬಲಿಸಿದ್ದಕ್ಕಾಗಿ ದೇವರು, ಪೋಷಕರು ಹಾಗೂ ಮಿಸ್ ಇಂಡಿಯಾ ಸಂಸ್ಥೆಗೆ ನಾನು ಕೃತಜ್ಞಳಾಗಿದ್ದೇನೆ. ನನ್ನ ಗೆಲುವಿಗಾಗಿ ಪ್ರಾರ್ಥಿಸಿದ ಹಾಗೂ ಹಾರೈಸಿದ ಪ್ರತಿಯೊಬ್ಬರಿಗೂ ಧನ್ಯವಾದ ಅರ್ಪಿಸುತ್ತೇನೆ’ ಎಂದೂ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.