ADVERTISEMENT

ಮೂಗುತಿ | ಮೊಗದ ಅಂದಕೆ ನತ್ತಿನ ಬಂಧ

ಚೆಲುವೆಯ ಅಂದದ ಮೊಗಗೆ ನತ್ತೇ ಭೂಷಣ!

ತಪಶ್ಚರಣ
Published 30 ಸೆಪ್ಟೆಂಬರ್ 2022, 19:30 IST
Last Updated 30 ಸೆಪ್ಟೆಂಬರ್ 2022, 19:30 IST
ಆಕ್ಸಿಡೈಸ್ಡ್‌ ನತ್ತಿನಲ್ಲಿ ರೂಪದರ್ಶಿ ಅಪೂರ್ವ ಹೆಗಡೆಚಿತ್ರ ಕೃಪೆ: ಕುಸುರಿ ಆರ್ಟ್‌ ವರ್ಕ್‌
ಆಕ್ಸಿಡೈಸ್ಡ್‌ ನತ್ತಿನಲ್ಲಿ ರೂಪದರ್ಶಿ ಅಪೂರ್ವ ಹೆಗಡೆಚಿತ್ರ ಕೃಪೆ: ಕುಸುರಿ ಆರ್ಟ್‌ ವರ್ಕ್‌   

ಮೂಗುತಿ, ಮೂಗುಬಟ್ಟು, ಮೂಗುನತ್ತು ಹೀಗೆ ನಾನಾ ಹೆಸರಿನಿಂದ ಕರೆಸಿಕೊಳ್ಳುವ ಈ ಆಭರಣವೀಗ ಬಗೆ ಬಗೆಯ ಸ್ವರೂಪ ಪಡೆದುಕೊಂಡಿದೆ. ಸಾಂಪ್ರದಾಯಿಕವಾಗಿ ಮೂಗುತಿಗೆ ವಿಶಿಷ್ಟ ಸ್ಥಾನ ಸಿಕ್ಕಿದೆ. ಈಗ ಎಲ್ಲೆಡೆ ನವರಾತ್ರಿಯ ಸಂಭ್ರಮ. ಶಕ್ತಿಪೀಠಗಳಲ್ಲಿರುವ ದೇವಿಯ ಮೂರ್ತಿಗೆ ಹಾಕಿರುವ ಮೂಗುತಿ ಭಕ್ತರನ್ನಷ್ಟೆ ಅಲ್ಲ ಫ್ಯಾಷನ್‌ಪ್ರಿಯರ ಕಣ್ಮನ ಸೆಳೆಯುತ್ತದೆ. ಹೊರನಾಡಿನ ಅನ್ನಪೂರ್ಣೇಶ್ವರಿ ದೇವಿಗೆ ಹಾಕಲಾದ ಮೂಗುತಿ, ದಕ್ಷಿಣದಲ್ಲಿರುವ ಕನ್ಯಾಕುಮಾರಿಯ ಮೂಗುತಿಯು ತನ್ನ ಹೊಳಪಿನಿಂದಾಗಿ ಪ್ರಸಿದ್ಧಿ ಪಡೆದುಕೊಂಡಿದೆ.

ಮೂಗುತಿ ಧರಿಸುವುದು ಹಳೆಯ ಕಾಲದವರ ಫ್ಯಾಷನ್‌ ಎಂಬುದೆಲ್ಲ ಬದಲಾಗಿದೆ. ಯಾವ ಬಟ್ಟೆಗೆ ಎಂಥ ಮೂಗುತಿ ಧರಿಸಬೇಕು ಎನ್ನುವುದೇ ಸದ್ಯದ ಟ್ರೆಂಡ್. ಸದ್ಯಕ್ಕೆ ಮಾರುಕಟ್ಟೆಯಲ್ಲಿ ಹಲಬಗೆಯ ವಿನ್ಯಾಸದ ಮೂಗುತಿಗಳು ಲಭ್ಯವಿದ್ದು, ಎಲ್ಲ ವಯೋಮಾನದ ಹೆಂಗಳೆಯರ ಕಣ್ಮನ ಸೆಳೆಯುತ್ತಿದೆ.

ಆಕ್ಸಿಡೈಸ್ಡ್‌ ನತ್ತು: ಆಕ್ಸಿಡೈಸ್ಡ್‌ನಿಂದ ತಯಾರಿಸಿದ ಎಲ್ಲ ಆಭರಣಗಳು ಯುವ ಮನಸ್ಸುಗಳನ್ನು ಸೆಳೆಯುತ್ತವೆ ಅದರಲ್ಲಿಯೂ ಆಕ್ಸಿಡೈಸ್ಡ್‌ ಮೂಗುನತ್ತು ಸದ್ಯ ಟ್ರೆಂಡ್‌ನಲ್ಲಿದೆ. ಕಾಲೇಜು ಸಮವಸ್ತ್ರವೇ ಇರಲಿ, ಫಾರ್ಮಲ್ಸ್‌ ಇರಲಿ ಈ ಆಕ್ಸಿಡೈಸ್ಡ್‌ ನತ್ತು ಚೆನ್ನಾಗಿ ಒಪ್ಪುತ್ತದೆ. ಇಂಡೊ ವೆಸ್ಟರ್ನ್‌ ಶೈಲಿಯ ಉಡುಪಿಗೂ ಆಕ್ಸಿಡೈಸ್ಡ್‌ ನತ್ತು ಹೇಳಿ ಮಾಡಿಸಿದ ಆಭರಣ. ಹಾಗಾಗಿ ಸಂಪ್ರದಾಯದಿಂದ ದೂರ ಉಳಿದವರೂ ಈ ನತ್ತಿನ ಗತ್ತಿಗೆ ಮಾರುಹೋಗುತ್ತಾರೆ.

ADVERTISEMENT

ಮುತ್ತಿನ ನತ್ತು:ಮುತ್ತಿನ ನತ್ತು ಸದ್ಯಕ್ಕೆ ಚಾಲ್ತಿಯಲ್ಲಿರುವ ಮತ್ತೊಂದು ಟ್ರೆಂಡ್‌. ಸಾಂಪ್ರದಾಯಿಕ ಉಡುಪು, ಸೀರೆಗಳಿಗೆ ಇದು ಚೆನ್ನಾಗಿ ಒಪ್ಪುತ್ತದೆ.

ರಿಂಗ್ ಮಾದರಿಯ ನೋಸ್‌ಪಿನ್‌: ಮೂಗಿನಲ್ಲಿ ರಿಂಗ್‌ ನಮೂನೆಯ ನತ್ತು ಧರಿಸಲಾಗುತ್ತದೆ. ಇದು ನೋಡಲು ತುಸು ದೊಡ್ಡದಾಗಿ ಕಂಡರೂ, ಅಗಲ ಮುಖವಿರುವವರಿಗೆ ಚೆನ್ನಾಗಿ ಹೊಂದುತ್ತದೆ. ಇದರಲ್ಲಿ ವಿವಿಧ ವಿನ್ಯಾಸದ ನೋಸ್‌ಪಿನ್‌ಗಳಿವೆ.. ಇವು ಹೆಚ್ಚಾಗಿ ಸಾಂಪ್ರದಾಯಿಕ ಶೈಲಿಯ ಮೂಗುತಿಯಾಗಿದ್ದು, ಕೆಲವು ಕಡೆ ಮದುವೆಯಾದ ಹೆಣ್ಣುಮಕ್ಕಳು ಮಾತ್ರ ಇದನ್ನು ಧರಿಸಬೇಕು ಎಂಬ ನಿಯಮವಿದೆ.

ಹರಳು ಮೂಗುತಿ: ಒಂದು ಹರಳು, ಎರಡು ಅಥವಾ ಮೂರು ಹರಳುಗಳನ್ನು ಜೋಡಿಸಿರುವ ಮೂಗುತಿಗಳು ಹೆಚ್ಚು ಬಳಕೆಯಲ್ಲಿವೆ. ನೋಡಲು ಸರಳವಾಗಿದ್ದರೂ, ಧರಿಸಿದಾಗ ಆಕರ್ಷಕವಾಗಿ ಕಾಣುತ್ತದೆ. ಇತ್ತೀಚೆಗೆ ಈ ಮೂಗುತಿಗಳೂ ಟ್ರೆಂಡ್‌ನಲ್ಲಿವೆ.

ಬೆಳ್ಳಿ ಮೂಗುತಿ: ಸಣ್ಣ ಸಣ್ಣ ಕುಸುರಿಯಿಂದ ಬೆಳ್ಳಿ ಲೋಹದಲ್ಲಿ ಮಾಡಿರುವ ಮೂಗುತಿ ಇದು. ಇದಕ್ಕೆ ಹೆಚ್ಚಾಗಿ ಬಂಗಾರದ ಅಂಚು ಇರುತ್ತದೆ. ಬೆಳ್ಳಿ ಬಂಗಾರದ ಮಿಶ್ರಣದಂತೆ ಕಾಣುವ ಈ ಮೂಗುತಿಯೂ ಸಿಕ್ಕಾಪಟ್ಟೆ ಟ್ರೆಂಡ್‌ನಲ್ಲಿದೆ.

ಸೆಪ್ಟಂ: ಸೆಪ್ಟಂ ಈಗೀಗ ರೆಬೆಲಿಯನ್‌ಗಳ ಸಿಗ್ನೇಚರ್ ಆ್ಯಕ್ಸೆಸರಿ ಎಂದೇ ಖ್ಯಾತಿ ಪಡೆದಿದೆ. ಇದು ಹೆಚ್ಚಾಗಿ ಯುವಜನರ ಪ್ರೀತಿಯ ನತ್ತು. ಮೂಗಿನ ಮಧ್ಯಭಾಗದಲ್ಲಿ ಸಿಕ್ಕಿಸಿಕೊಳ್ಳುವ ಈ ನತ್ತು ಹೊಸ ಹೊಸ ಲೋಹದಲ್ಲಿ ಲಭ್ಯವಿದೆ. ಇದರ ನಾವೀನ್ಯತೆ ಹೊಸದೆಂದೇ ಅನಿಸಿದರೂ, ಇದರ ಬಳಕೆ ಪ್ರಾಚೀನ ಬುಡಕಟ್ಟು ಜನಾಂಗಗಳಲ್ಲಿ ಹೇರಳವಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.