‘ಕೂಲಿ ಮಾಡುವ ವ್ಯಕ್ತಿಯೂ ಹಣ ಸಂಪಾದಿಸುತ್ತಾನೆ. ಆದರೆ, ಹೆಸರು ಗಳಿಸುವುದು ಸುಲಭವಲ್ಲ. ದುಡ್ಡಿಗಿಂತ ಸಾಧನೆ ಮುಖ್ಯ’ ಎಂಬ ಅಪ್ಪನ ಸ್ಫೂರ್ತಿದಾಯಕ ಮಾತುಗಳು ಮಗನ ಮನ ತಟ್ಟಿದ್ದವು. ತನಗಾಗಿ ಸರ್ವಸ್ವವನ್ನೂ ತ್ಯಾಗ ಮಾಡುವ ತಂದೆ- ತಾಯಿಯನ್ನು ಕಂಡ ಆತನಿಗೆ ಸಾಧಿಸುವ ಛಲ ಹುಟ್ಟಿತು. ತನ್ನ ಇಷ್ಟದ ಫ್ಯಾಷನ್ ಮಾಡೆಲಿಂಗ್ ಕ್ಷೇತ್ರವನ್ನು ಪ್ರವೇಶಿಸಿದ ಆತ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ವಿಜೇತನಾಗಿ ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಹೆಜ್ಜೆ ಹಾಕಲು ಸಿದ್ಧತೆ ನಡೆಸಿದ್ದಾನೆ.
ಮಿರ್ಜಾ ಜವಹರ್ ಅಲಿ ಈ ಸಾಧನೆಗೆ ಭಾಜನರಾದ ಯುವಕ. ಪುಣೆಯಲ್ಲಿ ಜ.20ರಂದು ನಡೆದ ರಾಷ್ಟ್ರೀಯ ರೂಪದರ್ಶಿ ಸ್ಪರ್ಧೆಯಲ್ಲಿ ಪಾಲ್ಗೊಂಡು ‘ಬೆಸ್ಟ್ ಮಾಡೆಲ್ ಆಫ್ ಯೂನಿವರ್ಸ್ ಇಂಡಿಯಾ- 2019’ ಎಂಬ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ದಕ್ಷಿಣ ಯೂರೋಪ್‌ನ ಕೊಸೊವೊದಲ್ಲಿ ಜೂ.21ರಂದು ನಡೆಯಲಿರುವ ಅಂತರರಾಷ್ಟ್ರೀಯ ರೂಪದರ್ಶಿ ಸ್ಪರ್ಧೆಯಲ್ಲಿ ಭಾರತದ ಪರವಾಗಿ ಪಾಲ್ಗೊಳ್ಳಲಿದ್ದಾರೆ. ಅದಕ್ಕಾಗಿ ತಮ್ಮ ದೇಹವನ್ನು ಹುರಿಗೊಳಿಸಿ, ಅಂದಗೊಳಿಸಲು ಸಿದ್ಧತೆ ನಡೆಸಿದ್ದಾರೆ.
ಕಠಿಣ ಹಾದಿ: ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವುದು ಮಿರ್ಜಾಗೆ ಅಷ್ಟು ಸುಲಭವಿರಲಿಲ್ಲ. 2018ರಲ್ಲಿ ಜುಲೈನಲ್ಲಿ ಅಕ್ಷಾಯ್ಸ್ ಮಾರ್ಕ್ ಸಂಸ್ಥೆಯು ಆಯೋಜಿಸಿದ್ದ ಸ್ಪರ್ಧೆಯಲ್ಲಿ ‘ಮಿಸ್ಟರ್ ಕರ್ನಾಟಕ ಟೂರಿಸಂ ಅಂಡ್ ಕಲ್ಚರ್ ಯೂನಿವರ್ಸ್’ ಆಗಿ ಆಯ್ಕೆ ಆಗಿದ್ದರು. ಹೀಗಾಗಿ, ಪುಣೆಯಲ್ಲಿ ನಡೆಯಲಿದ್ದ ಸ್ಪರ್ಧೆಗೆ ಕರ್ನಾಟಕದಿಂದ ಆಯ್ಕೆಯಾಗಿದ್ದರು. ಆದರೆ, ಈ ಸ್ಪರ್ಧೆಯ ಅಂತಿಮ ಹಂತಕ್ಕೆ ಹೋಗಲು ಮೂರು ಸ್ಪರ್ಧೆಗಳನ್ನು ಎದುರಿಸಬೇಕಿತ್ತು.
ಮೂರು ತಿಂಗಳ ಮುನ್ನವೇ ನೋಂದಣಿ ಮಾಡಿಸಬೇಕಿತ್ತು. ಪುಣೆಯಲ್ಲಿ ಪ್ರತಿ 15 ದಿನಗಳಿಗೊಮ್ಮೆ ನಡೆಯುತ್ತಿದ್ದ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಬೇಕು. ಒಳ ಉಡುಪಿನಲ್ಲಿ ಫೋಟೊಶೂಟ್ ಮಾಡಿಸಬೇಕು. ಅದರಲ್ಲಿ ರೂಪದರ್ಶಿಯ ನೋಟ, ಹಾವಭಾವ, ಉಡುಪುಗಳನ್ನು ಗಮನಿಸಿ ತೀರ್ಪುಗಾರರು ಅಂಕಗಳನ್ನು ಕೊಡುತ್ತಿದ್ದರು. ನಡಿಗೆ ಸ್ಪರ್ಧೆಯಲ್ಲಿ ಅತ್ಯುತ್ತಮ ಪ್ರದರ್ಶನ ತೋರುತ್ತಿದ್ದವರು ಮುಂದಿನ ಸುತ್ತಿಗೆ ಆಯ್ಕೆಯಾಗುತ್ತಿದ್ದರು. 3ನೇ ಸುತ್ತು ಪರಿಚಯ ಮಾಡಿಕೊಳ್ಳುವುದು. ರೂಪದರ್ಶಿಯರು ತಮ್ಮನ್ನು ಭಿನ್ನ ಹಾಗೂ ಸೃಜನಾತ್ಮಕವಾಗಿ ಹೇಗೆ ಪರಿಚಯಿಸಿಕೊಳ್ಳುತ್ತಾರೆ ಎಂಬ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತಿತ್ತು. ಈ ಮೂರೂ ಸುತ್ತುಗಳಲ್ಲಿ ಮಿರ್ಜಾ ಆಯ್ಕೆಯಾಗಿದ್ದರು. ಅಂತಿಮ ಸ್ಪರ್ಧೆಯಲ್ಲಿ 20 ಮಂದಿ ಆಯ್ಕೆಯಾಗಿದ್ದರು.
‘ಬ್ಲೇಜರ್ಸ್, ಸಾಂಪ್ರದಾಯಿಕ ಹಾಗೂ ಈಜು ಉಡುಗೆಯಲ್ಲಿ ರೂಪದರ್ಶಿಗಳು ನಡಿಗೆ ಮಾಡಬೇಕಿತ್ತು. ಬ್ಲೇಜರ್ಸ್ ಧರಿಸಿ ಕಾರ್ಪೊರೇಟ್ ಜಗತ್ತಿಗೆ ತಕ್ಕಂತೆ ಹಾವಭಾವ ಪ್ರದರ್ಶಿಸುತ್ತಾ ನಡಿಗೆ ಹಾಕಿದೆ. ಸಾಂಪ್ರದಾಯಿಕ ನಡಿಗೆಯಲ್ಲಿ ರಾಜ ಪೋಷಾಕು ಧರಿಸಿ ರಾಜ ಗಾಂಭೀರ್ಯದಿಂದ ನಡೆದೆ. ಈಜು ಉಡುಗೆ ತೊಟ್ಟು ನಾಚಿಕೆ ಪಡದೇ ಧೈರ್ಯದಿಂದ ಹೆಜ್ಜೆ ಹಾಕಿದ್ದೆ’ ಎಂದು ಮಿರ್ಜಾ ಅಲಿ ಹೇಳಿದರು.
ಮಿರ್ಜಾ ಈ ಕ್ಷೇತ್ರದಲ್ಲಿ ಹೆಜ್ಜೆ ಗುರುತು ಮೂಡಿಸಲು 4 ವರ್ಷಗಳ ಪರಿಶ್ರಮ ಹಾಕಿದ್ದಾರೆ. ಆರಂಭದಲ್ಲಿ ಅವರ ದೇಹ ರೂಪದರ್ಶಿಗೆ ಇರುವಂತೆ ಇರಲಿಲ್ಲ. ದೇಹವನ್ನು ಹುರಿಗೊಳಿಸುವ ಜೊತೆಗೆ, ನಾಲ್ಕು ಪ್ಯಾಕ್ ಮೂಡಿಸಬೇಕಿತ್ತು. ಇದಕ್ಕಾಗಿ ಪ್ರತಿದಿನ ಜಿಮ್‌ಗೆ ಹೋಗಬೇಕಿತ್ತು.
‘ಮಂಡಿಮೊಹಲ್ಲಾದ ಆಕ್ಸಿಜನ್ ಜಿಮ್ ನ ಸಲ್ಮಾನ್ ಅವರು ನನಗೆ ಉಚಿತವಾಗಿ ಜಿಮ್ ವ್ಯವಸ್ಥೆ ಕಲ್ಪಿಸಿದರು. ನಾಲ್ಕು ತಿಂಗಳವರೆಗೆ ತರಬೇತಿ ನೀಡಿದರು. ಬಳಿಕ ನನ್ನ ದೇಹದಲ್ಲಿ ಆಮೂಲಾಗ್ರ ಬದಲಾವಣೆ ಕಂಡಿತು’ ಎಂದು ಪುಳಕಿತಗೊಂಡರು ಮಿರ್ಜಾ ಅಲಿ.
ಕೊಸೊವೊದಲ್ಲಿ ನಡೆಯುವ ಅಂತರರಾಷ್ಟ್ರೀಯ ಸ್ಪರ್ಧೆಯಲ್ಲಿ ಪಾಲ್ಗೊಳ್ಳಬೇಕಾದರೆ ಕನಿಷ್ಠ 80 ಸಾವಿರ ರೂಪಾಯಿ ಪ್ರಯಾಣದ ಖರ್ಚು ಬರಲಿದೆ. ಇದರ ಪ್ರಾಯೋಜಕತ್ವ ವಹಿಸಿಕೊಳ್ಳುವವರಿದ್ದರೆ ಮಿರ್ಜಾ ಅಲಿ ಅವರ ಮೊ. 8892255106 ಸಂಪರ್ಕಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.