ನೀಳಕಾಯ, ಮುದ್ದಾದ ಮುಖ, ಹೊಳೆವ ಕಂಗಳು, ದಟ್ಟ ಕೂದಲಿನ ಬೆಡಗಿ ಆಡ್ಲೈನ್ ಕ್ಯಾಸ್ಟೆಲಿನೊ. ಈ ಬಾರಿ ಅಮೆರಿಕದ ಫ್ಲೋರಿಡಾದಲ್ಲಿ ನಡೆದ 69ನೇ ಭುವನ ಸುಂದರಿ ಸ್ಪರ್ಧೆಯಲ್ಲಿ ಮೂರನೇ ರನ್ನರ್ ಅಪ್ ಆಗಿರುವ ಇವರು ಕನ್ನಡತಿ, ಉಡುಪಿಯ ಉದ್ಯಾವರದವರು. 5 ಅಡಿ 6 ಇಂಚಿನ ಈ ಸುಂದರಿ ಮಾಡೆಲಿಂಗ್ ಕ್ಷೇತ್ರದಲ್ಲಿ ಮಿಂಚಿದವರು. ಭಾರತ ಹಾಗೂ ವಿವಿಧ ದೇಶಗಳಲ್ಲಿ ನಡೆದ ಮಾಡೆಲಿಂಗ್ ಸ್ಪರ್ಧೆಗಳಲ್ಲಿ ಭಾಗವಹಿಸಿದ ಅನುಭವವೂ ಇವರಿಗಿದೆ.
ಹಿನ್ನೆಲೆ
1998, ಜುಲೈ 24 ರಂದು ಕುವೈತ್‌ನಲ್ಲಿ ಆಡ್ಲೈನ್ ಜನಿಸಿದರು. 15ನೇ ವಯಸ್ಸಿನಲ್ಲಿ ಭಾರತಕ್ಕೆ ಮರಳಿದ ಇವರು ಸದ್ಯ ತಂದೆ–ತಾಯಿಯ ಜೊತೆ ಮುಂಬೈನಲ್ಲಿ ನೆಲೆಸಿದ್ದಾರೆ. ಮುಂಬೈನ ಸೇಂಟ್ ಕ್ಸೇವಿಯರ್ ಹೈಸ್ಕೂಲ್‌ನಲ್ಲಿ ಪ್ರೌಢ ಶಿಕ್ಷಣ ಹಾಗೂ ವಿಲನ್ಸ್ ಕಾಲೇಜಿನಲ್ಲಿ ಬ್ಯುಸಿನೆಸ್ ಅಡ್ಮಿನಿಸ್ಟ್ರೇಷನ್ ಪದವಿ ಪಡೆದಿದ್ದಾರೆ.
‘ಮಿಸ್ ಯೂನಿವರ್ಸ್ 2020’ ಕಾರ್ಯಕ್ರಮವು ಮೇ 16 2021 ರಂದು ನಡೆದಿತ್ತು. ಈ ಬಾರಿಯ ಕಾರ್ಯಕ್ರಮದಲ್ಲಿ ಒಟ್ಟು 73 ದೇಶಗಳ ಸುಂದರಿಯರು ಭಾಗವಹಿಸಿದ್ದರು.
‘ಕುವೈತ್‌ನಲ್ಲಿ ಬೆಳೆದ ನನಗೆ ಮೊದಲು ಮಾಡೆಲಿಂಗ್‌ನಲ್ಲಿ ಅಂತಹ ಮಾನ್ಯತೆ ಸಿಕ್ಕಿರಲಿಲ್ಲ. ನನ್ನಂತಹ ಸಾಮಾನ್ಯ ಹುಡುಗಿಯೊಬ್ಬಳು ಪ್ರತಿಷ್ಠಿತ ವೇದಿಕೆಯಲ್ಲಿ ದೇಶವನ್ನು(ಭಾರತ) ಪ್ರತಿನಿಧಿಸುವುದು ನಿಜಕ್ಕೂ ಖುಷಿಯ ಸಂಗತಿ’ ಎಂದು ಖುಷಿ ಹಂಚಿಕೊಂಡಿದ್ದಾರೆಆಡ್ಲೈನ್.
‘ಮಿಸ್ ದಿವಾ ಯೂನಿವರ್ಸ್’ನಲ್ಲೂ ಭಾಗವಹಿಸಿ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದರು ಈ ಬೆಡಗಿ.
ಸಾಮಾಜಿಕ ಕಾರ್ಯಗಳು
ಮಾಡೆಲಿಂಗ್‌ನಲ್ಲಿ ರ‍್ಯಾಂಪ್ ಮೇಲೆ ಹೆಜ್ಜೆ ಹಾಕುವುದು ಮಾತ್ರವಲ್ಲ ಸಾಮಾಜಿಕ ಕಳಕಳಿಯನ್ನೂ ಹೊಂದಿರುವ ಇವರು ಹಲವು ಬಗೆಯ ಸಾಮಾಜಿಕ ಸೇವೆಯಲ್ಲೂ ತೊಡಗಿದ್ದಾರೆ.ರೈತರ ಆತ್ಮಹತ್ಯೆ ವಿರುದ್ಧದ ಹೋರಾಟ, ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹಣ ಸಂಗ್ರಹ, ಮಹಿಳೆಯರ ಸಬಲೀಕರಣ, ಅಕ್ಷಯಪಾತ್ರ ಫೌಂಡೇಶನ್, ಕೊರೊನಾ ಜಾಗೃತಿ ಸೇರಿದಂತೆ ಹತ್ತು ಹಲವು ಸಾಮಾಜಿಕ ಕಾರ್ಯಕ್ರಮಗಳಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ನಟನೆ
‘ಕಿಂಗ್‌ಪಿಷರ್ ಕ್ಯಾಲೆಂಡರ್: ದಿ ಮೇಕಿಂಗ್’ ಎಂಬ ಡಾಕ್ಯುಮೆಂಟರಿ ಸಿರೀಸ್‌ನಲ್ಲಿ ನಟಿಸಿರುವ ಇವರು ‘ಮೇರೆ ದಿಲ್ ವಿಚ್’, ‘ತೇರೆ ಬಿನಾ’ ಮ್ಯೂಸಿಕ್ ಅಲ್ಬಂಗಳಲ್ಲೂ ನಟಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.