ವಿನಾಯಕ್ ಹಾವೇರಿ ಜಿಲ್ಲೆ ರಾಣೆಬೆನ್ನೂರಿನವರು. ಸದ್ಯ ಮಾಡೆಲಿಂಗ್ ಕ್ಷೇತ್ರದಲ್ಲಿ ಮಿಂಚುತ್ತಿರುವ ಉತ್ತರ ಕರ್ನಾಟಕದ ಯುವ ಪ್ರತಿಭೆ. ಕನ್ನಡದ ಜೊತೆಗೆ ಬಾಲಿವುಡ್ ಅಂಗಳದಲ್ಲಿ ಮಾಡೆಲ್ ಆಗಿ ಪದಾರ್ಪಣೆ ಮಾಡುವ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡು ಇನ್ನೂ ಕೆಲವೇ ದಿನಗಳಲ್ಲಿ ಮುಂಬೈಯತ್ತ ಮುಖ ಮಾಡುವ ಕನಸುಗಳ ಮೂಟೆ ಕಟ್ಟುತ್ತಿರುವ ಈ ಯುವಪ್ರತಿಭೆ ‘ಮೆಟ್ರೊ’ ಜೊತೆ ಮಾತನಾಡಿದಾಗ..
* ವಿನಾಯಕ್ ನಿಮ್ಮ ಪರಿಚಯ..
ನಾನು ನಿಮ್ಮ ಪಕ್ಕದ ಮನೆ ಹುಡುಗ ವಿನಾಯಕ್ ಲದ್ವಾ. ಮೂಲತಃ ರಾಣೆಬೆನ್ನೂರಿನವನು. ಧಾರವಾಡದ ಜೆ.ಎಸ್.ಎಸ್. ಕಾಲೇಜಿನಿಂದ 2016ರಲ್ಲಿ ಬಿ.ಕಾಂ ಪದವಿ ಪಡೆದಿರುವೆ. ನಂತರ ಹೈದ್ರಾಬಾದ್‌ನಲ್ಲಿ ಕಂಪನಿ ಸೆಕ್ರೆಟರಿ ಕೋರ್ಸ್‌ಗೆ ಸೇರಿಕೊಂಡೆ. ಸದ್ಯ ಕಂಪನಿ ಸೆಕ್ರೆಟರಿ ಕೋರ್ಸ್ ಮಾಡುತ್ತ ಮಾಡೆಲಿಂಗ್‌ನಲ್ಲಿ ಬಿಜಿಯಾಗಿದ್ದೇನೆ.
* ಮಾಡೆಲಿಂಗ್ ಕ್ಷೇತ್ರಕ್ಕೆ ಬರಲು ಪ್ರೇರಣೆ..
(ನಗುತ್ತಾ) ತಪ್ಪು ತಿಳ್ಕೊಬೇಡಿ... ನಾನು ಹುಟ್ಟಿದಾಗಿನಿಂದ ತುಂಬಾ ಸ್ಮಾರ್ಟ್ ಹುಡುಗ. ಶಾಲೆಯಲ್ಲಿದ್ದಾಗ ಟೀಚರ್ಸ್ ಕೂಡ ನನ್ನ ಕೆನ್ನೆ ಹಿಂಡಿ ಖುಷಿ ಪಡುತ್ತಿದ್ದರು. ಯಾವುದಾದರೂ ಸಾಂಸ್ಕೃತಿಕ, ಆಟೋಟಗಳಿದ್ದರೆ ನಾನೂ ಮುಂದಿರುತ್ತಿದ್ದೆ. ನೋಡೋಕೆ ಚೆನ್ನಾಗಿದ್ದೆ ಅನ್ನೋದರ ಜೊತೆಗೆ ಪರದೆಯ ಮೇಲೆ ಹೆಜ್ಜೆ ಹಾಕುವುದು ನನ್ನ ಬಾಲ್ಯದ ಕನಸು. ಅದು ನನಗೆ ಪ್ಲಸ್ ಪಾಯಿಂಟ್ ಆಯಿತು. ಪದವಿ ಮುಗಿಸಿದ ಮೇಲೆ ನಾನು ಹೆಚ್ಚಿನ ವ್ಯಾಸಂಗಕ್ಕಾಗಿ ಹೈದ್ರಾಬಾದ್‌ಗೆ ತೆರಳಿದೆ. ಅಲ್ಲಿಂದ ನನಗೆ ಮಾಡೆಲಿಂಗ್ ಕಡೆಗೆ ಒಲವು ಹೆಚ್ಚಿತು. ಪ್ರತಿಭೆ ಅನಾವರಣಕ್ಕೆ ಅವಕಾಶ ದೊರಕುವ ಎಲ್ಲ ಲಕ್ಷಣಗಳು ಕಂಡಾಗ ನಾನು ಕಳೆದ ಮಾರ್ಚ್ ತಿಂಗಳಿಂದ ಮಾಡೆಲಿಂಗ್ ಪ್ರಾರಂಭಿಸಿದೆ.
* ಇಲ್ಲಿಯವರೆಗೂ ಯಾವ ಯಾವ ಷೋಗಳಲ್ಲಿ ಕಾಣಿಸಿಕೊಂಡಿದ್ದೀರಾ? ಯಾವ ಟೈಟಲ್‌ಗಳನ್ನು ಮುಡಿಗೇರಿಸಿಕೊಂಡಿದ್ದೀರಾ?
ಮಾಡೆಲಿಂಗ್‌ಗೆ ಬಂದ ಆರು ತಿಂಗಳಲ್ಲಿ ಜಿಲ್ಲಾ ಮಟ್ಟದ ಮಾಡೆಲಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿ ಆಯ್ಕೆಯಾಗಿ ನಂತರ ರಾಜ್ಯ ಮಟ್ಟದ ಮೂರು ಷೋಗಳಲ್ಲಿ ಕಾಣಿಸಿಕೊಂಡೆ. ಕಳೆದ ಜೂನ್‌ನಲ್ಲಿ ಚಿತ್ರದುರ್ಗದಲ್ಲಿ ನಡೆದ ಮಿಸ್ಟರ್ ಕರ್ನಾಟಕ-2018 ಸ್ಪರ್ಧೆಯಲ್ಲಿ ಬೆಸ್ಟ್ ಪರ್ಫಾಮೆನ್ಸ್ ಮತ್ತು ಮೋಸ್ಟ್ ಪಾಪ್ಯುಲರ್ ಫೇಸ್ ಆಫ್ ಕರ್ನಾಟಕ (ವೋಟೆಡ್) ಟೈಟಲ್ ಗಳಿಸಿದೆ.
ನಂತರ ಸೌಥ್ ಇಂಡಿಯಾ ಮಾಡೆಲಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ಲೇಸ್‌ಮೆಂಟ್ ಪಡೆದಿ
ರುವೆ. ಎರಡು ಟೈಟಲ್ ವಿನ್ ಆದ ನಂತರ ನನಗೆ ಮಿಸ್ಟರ್ ಇಂಡಿಯಾ ರಾಷ್ಟ್ರಮಟ್ಟದ ಮಾಡೆಲಿಂಗ್ ಸ್ಪರ್ಧೆಗೆ ಡೈರೆಕ್ಟ್ ಎಂಟ್ರಿ ಸಿಕ್ಕಿರೋದು ಖುಷಿ ಕೊಟ್ಟ ವಿಚಾರ. ಇದರ ಜೊತೆಗೆ ಲೆಡರ್ ವಾರೆನ್ ಅನ್ನೋ ಶೂ ಬ್ರಾಂಡ್ ಕಂಪನಿಗೆ ರಾಯಭಾರಿಯಾಗಿ ಕೆಲಸ ಮಾಡುತ್ತಿರುವೆ.
* ಮಾಡೆಲಿಂಗ್‌ನಲ್ಲಿ ನಿಮ್ಮ ಮುಂದಿನ ಕನಸು?
ನಾನು ನನ್ನ ಪ್ರಯತ್ನಗಳನ್ನು ಮಾಡುತ್ತಿರುವೆ. ನನ್ನದು ಮಧ್ಯಮ ವರ್ಗದ ಕುಟುಂಬ ಆಗಿರೋದ್ರಿಂದ ಸದ್ಯ ಬೆಂಗಳೂರು ಅಥವಾ ಮುಂಬೈಗೆ ಹೋಗಿ ಇರೋದು ಸ್ವಲ್ಪ ಕಷ್ಟದ ಕೆಲಸ. ಆದರೆ ನಮ್ಮೂರಲ್ಲೇ ಇದ್ದು ನನ್ನನ್ನು ನಾನು ಸ್ಯಾಂಡಲ್‌ವುಡ್ ಮತ್ತು ಬಾಲಿವುಡ್‌ಗೆ ಪರಿಚಯಿಸಿಕೊಳ್ಳುವ ಎಲ್ಲ ಪ್ರಯತ್ನಗಳನ್ನು ಮಾಡುತ್ತಿರುವೆ. ಹೀಗೊಂದು ಪ್ರಯತ್ನದ ಫಲವಾಗಿ ಬಾಲಿವುಡ್‌ನ ಯುವ ನಿರ್ದೇಶಕ ಸಾಜಿಷ್ ಸಾಜೀದ್ ಅತಿಂದರ್ ಅವರಿಂದ ಮಾಡೆಲಿಂಗ್‌ಗೆ ಅವಕಾಶ ಸಿಕ್ಕಿದ್ದು, ಅದಕ್ಕೆ ಪೂರಕವಾದ ತಯಾರಿ ನಡೆಸುತ್ತಿರುವೆ. ನನಗೆ ನಮ್ಮ ಚಂದನವನದಲ್ಲಿ ಒಬ್ಬ ಒಳ್ಳೆಯ ಮಾಡೆಲ್ ಆಗಿ, ಸಿನಿ ಪರದೆಯ ಮೇಲೆ ಕಾಣಿಸಿಕೊಳ್ಳುವ ಆಸೆ ಇದೆ. ಆ ನಿಟ್ಟಿನಲ್ಲೂ ಪ್ರಯತ್ನ ಮಾಡುವೆ.
*ನಿಮ್ಮ ಹವ್ಯಾಸಗಳು...
ನಾನು ಪಕ್ಕಾ ಉತ್ತರ ಕರ್ನಾಟಕದವನು. ನಮ್ಮ ಹಳ್ಳಿ ಜನರೊಂದಿಗೆ ಬೆರೆಯುವುದು ಮತ್ತು ಅವಶ್ಯಕತೆ ಇದ್ದವರಿಗೆ ಸಹಾಯ ಮಾಡೋದು ನನ್ನ ಗುಣ. ಮಾಡೆಲಿಂಗ್ ಮತ್ತು ಓದಿನ ಬಗೆಗಿನ ಕಾಳಜಿ ಬಿಟ್ಟರೆ ಕುಟುಂಬದವರೊಂದಿಗೆ ಕಾಲ ಕಳೆಯುವುದು ನನ್ನ ಮೊದಲ ಆದ್ಯತೆ. ಬಿಡುವಿದ್ದಾಗ ಪುಸ್ತಕ ಓದುವುದು ಟ್ರಾವೆಲಿಂಗ್, ಸ್ವಿಮ್ಮಿಂಗ್, ಬ್ಯಾಡ್ಮಿಂಟನ್ ಮತ್ತು ಕ್ರಿಕೆಟ್ ಆಡುವುದನ್ನು ಮಾತ್ರ ಮರೆಯುವುದಿಲ್ಲ. ಅವಾಗಾವಾಗ ಜಿಮ್‌ಗೆ ಹೋಗುತ್ತೇನೆ.
* ಮಾಡೆಲಿಂಗ್ ಜೊತೆ ಸಿನಿಮಾ ಕ್ಷೇತ್ರದಲ್ಲಿ ಆಸಕ್ತಿ ಇದೆಯಾ?
ಹೌದು. ನನಗೆ ಚಂದನವನದಲ್ಲಿ ಮೂಡಿ ಬರಬೇಕು ಅನ್ನೋ ಆಸೆಯಿದೆ. ಅವಕಾಶ ಸಿಕ್ಕರೆ ನಟನೆ ಮಾಡುತ್ತೇನೆ.
ಸದ್ಯ ರಾಷ್ಟ್ರಮಟ್ಟದ ಮಿಸ್ಟರ್ ಇಂಡಿಯಾ ಸ್ಪರ್ಧೆ ಮತ್ತು ಬಾಲಿವುಡ್ ಅಂಗಳದಲ್ಲಿ ಮಾಡೆಲಿಂಗ್‌ಗೆ ಅವಕಾಶ ಸಿಕ್ಕಿರುವುದರಿಂದ ನನ್ನ ಗಮನ ಅಲ್ಲಿದೆ. ಹಾಗಾಗಿ ಅದು ಕಂಪ್ಲೀಟ್ ಆದ ಮೇಲೆ ಚಂದವನಕ್ಕೆ ಬರುವ ನಿರೀಕ್ಷೆ ಇದೆ. ಕನ್ನಡದ ಜನತೆಯ ಆಶೀರ್ವಾದ ಈ ಉತ್ತರ ಕರ್ನಾಟಕದ ಹುಡುಗನೊಂದಿಗಿರಲಿ ಸಾಕು. ನನ್ನ ಆಸೆಗಳೆಲ್ಲವೂ ಕೈಗೂಡಿದಂತೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.