ಒಮ್ಮೆ ಧರಿಸಿ ಬಿಟ್ಟರೆ ಅದು ಹಳತು ಎನ್ನುತ್ತೆ ಫ್ಯಾಷನ್ ಉದ್ಯಮ. ಆದರೆ, ‘ಧರಿಸಿದ್ದನ್ನೇ ಧರಿಸುವುದಕ್ಕೆ ಯಾವುದೇ ಹಿಂಜರಿಕೆ ಬೇಡ. ಅದಕ್ಕೆ ಹೆಮ್ಮೆಪಡಿ. ಅಗತ್ಯವಿದ್ದರಷ್ಟೆ ಖರೀದಿಸಿ, ಧರಿಸಿ‘ ಎನ್ನುವ ಫ್ಯಾಷನ್ ಮಂತ್ರದೊಂದಿಗೆ ವಸ್ತ್ರವಿನ್ಯಾಸಕಿ ವಿನು ಸುಪ್ರಜ ಗಮನ ಸೆಳೆಯುತ್ತಾರೆ. ಖರೀದಿಯ ಭರಾಟೆಯ ನಡುವೆ ‘ಪರಿಸರಸ್ನೇಹಿ ಫ್ಯಾಷನ್’ ಎನ್ನುವ ತತ್ವವನ್ನು ಅವರು ಸದ್ದಿಲ್ಲದೇ ಧೇನಿಸುತ್ತಿದ್ದಾರೆ.ಚೀನಾದ ಶಾಂಘೈನಲ್ಲಿರುವ ಫ್ರೆಂಚ್ ಫ್ಯಾಷನ್ ಸ್ಕೂಲ್ ಐಎಫ್‌ಎ ನಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಅವರು, ಅಂತರರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಗಳಿಸಿರುವ ವಸ್ತ್ರವಿನ್ಯಾಸಕಿಯೂ ಹೌದು. ಅಂತರರಾಷ್ಟ್ರೀಯ ಮಟ್ಟದ ಝಗಮಗ ಬೆಳಕಿನ ರ್‍ಯಾಂಪ್ ವಾಕ್ ಎಂಬ ಹೆದ್ದಾರಿಯ ನಡುವೆ ‘ಪರಿಸರಸ್ನೇಹಿ ಫ್ಯಾಷನ್’ ಎಂಬ ಬಳಸು ದಾರಿಯಲ್ಲಿಯೂ ತಮ್ಮದೇ ಹೆಜ್ಜೆ ಮೂಡಿಸಲು ಪ್ರಯತ್ನಿಸುತ್ತಿದ್ದಾರೆ. ಈಚೆಗೆ ‘ಸಸ್ಟೈನಬಲ್ ಫ್ಯಾಷನ್‘ ಎಂಬ ಪುಸ್ತಕವನ್ನು ಹೊರತಂದಿದ್ದಾರೆ. ಈ ಬಗ್ಗೆ ’ಭೂಮಿಕಾ‘ಜತೆ ಆಡಿದ ಮಾತುಗಳ ಸಾರಂಶ ಇಲ್ಲಿದೆ...
*ಮೊದಲಿಗೆ ಪರಿಸರಸ್ನೇಹಿ ಫ್ಯಾಷನ್ ಅಂದರೆ?
ಪ್ರತಿಯೊಬ್ಬರು ಪರಿಸರಕ್ಕೆ ಒಂದಲ್ಲ ಒಂದು ರೀತಿಯಲ್ಲಿ ಇಂಗಾಲದ ಡೈ ಆಕ್ಸೈಡ್ ಅನ್ನು ನೀಡುತ್ತಲೇ ಇದ್ದೇವೆ. ಫ್ಯಾಷನ್ ಉದ್ಯಮವೂಇದಕ್ಕೆ ಹೊರತಲ್ಲ. ಖರೀದಿಯ ವ್ಯಾಮೋಹ ಎಷ್ಟಿದೆಯೆಂದರೆ ಅಗತ್ಯವಿರಲಿ, ಬಿಡಲಿ ಬಟ್ಟೆಯನ್ನು ಖರೀದಿ ಮಾಡುತ್ತಲೇ ಇದ್ದೇವೆ. ನಮ್ಮ ಉದ್ದೇಶ ಪರಿಸರಕ್ಕೆ ಬಟ್ಟೆಗಳಿಂದಾಗುವ ತ್ಯಾಜ್ಯದ ಹೊರೆಯನ್ನು ಕಡಿಮೆಗೊಳಿಸುವುದು. ಹಾಗಾಗಿ ಪ್ರತಿ ವಸ್ತ್ರ ವಿನ್ಯಾಸ ಮಾಡಿದ ಮೇಲೆ ಉಳಿಯುವ ಬಟ್ಟೆಯನ್ನು ಬಿಸಾಡದೇ, ಕೈಚೀಲ, ಬ್ಯಾಗ್ ಮುಂತಾದವು ಗಳನ್ನು ತಯಾರಿಸುತ್ತೇವೆ. ಸಾವಯವ ಹತ್ತಿ ಹಾಗೂ ಮರುಬಳಕೆ ಮಾಡಬಹುದಾದ ಪಾಲಿಸ್ಟರ್ (RPET)) ಅನ್ನು ಮಾತ್ರಬಳಸಿ ವಸ್ತ್ರ ತಯಾರಿಸುತ್ತಾ ಪರಿಸ್ನೇಹಿ ಫ್ಯಾಷನ್ ಉದ್ಯಮವಾಗಿ ರೂಪಿಸಲು ಹೆಜ್ಜೆ ಇಡುತ್ತಿದ್ದೇವೆ.
*ನಿಮ್ಮ ‘ ಪುರ್ಸೈ’ ಹೊಸ ವಸ್ತ್ರಸಂಗ್ರಹದ ಬಗ್ಗೆ ಹೇಳುವುದಾದರೆ,
ನಾನು ಮೂಲತಃ ತಮಿಳುನಾಡಿನ ವಂಡವಾಸಿ ಗ್ರಾಮದವಳು. ಪುರ್ಸೈಗೆ ಕೆಲವೇ ಕಿ.ಮೀ ಹತ್ತಿರ ಈ ಗ್ರಾಮವಿದೆ. ಪುರ್ಸೈ ತಮಿಳುನಾಡಿನ ಜನಪ್ರಿಯ ಜನಪದ ಕಲೆ ಥೇರುಕುಟ್ಟುವಿನ ತವರು. ನನ್ನ ಬಾಲ್ಯದ ಮೇಲೆ ಥೇರುಕುಟ್ಟುವಿನ ಪ್ರಭಾವ ದೊಡ್ಡದಿದೆ. ಧರಿಸುವ ವಸ್ತ್ರ ಈ ನೆಲದ ಕಲೆ, ಸಾಹಿತ್ಯ, ಸಂಗೀತವನ್ನು ಪ್ರತಿನಿಧಿಸುವ ಹಾಗೇ ಇರಬೇಕು ಎಂದು ನಂಬಿದವಳು ನಾನು. ಹಾಗಾಗಿ ಬಾಲ್ಯದಲ್ಲಿ ನೋಡಿ ಬೆಳೆದ ಥೇರುಕುಟ್ಟು ಕಲೆಯ ಪಾತ್ರಗಳನ್ನು ಪ್ರಧಾನವಾಗಿರಿಸಿಕೊಂಡು ಈ ವಸ್ತ್ರಗಳನ್ನು ರೂಪಿಸಿದ್ದೇನೆ. ಈ ಸಂಗ್ರಹದಲ್ಲಿ ಮಹಿಳೆಯರ ಡ್ರೆಸ್, ಪ್ಯಾಂಟ್, ಶರ್ಟ್, ಕ್ಯಾಷುವಲ್ ವೇರ್‌ಗಳಿವೆ.
*ಸಾವಯವ ಬಟ್ಟೆ ವಿನ್ಯಾಸದ ಹಾದಿಯಲ್ಲಿ ಎದುರಾಗಿರುವ ತೊಡಕುಗಳೇನು?
ನಾವಿಲ್ಲಿ ಕೇವಲ ಬಟ್ಟೆ ಮಾರುತ್ತಿಲ್ಲ. ಬದಲಿಗೆ ಒಂದು ತತ್ವವನ್ನು ಪಾಲಿಸಿರಿ ಎಂದು ಹೇಳುತ್ತಿದ್ದೇವೆ. ಇದು ಅಷ್ಟು ಸುಲಭವಲ್ಲ ಎಂಬುದರ ಅರಿವಿದೆ. ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದ್ದೀವಿ. ಒಂದು ಪಾಲಿಸ್ಟರ್ ಶರ್ಟ್ ಮಣ್ಣಿನಲ್ಲಿ ಕರಗಲು ಕನಿಷ್ಠ 200 ವರ್ಷಗಳೇ ಬೇಕು. ಇದೊಂದು ಕಲಿಕಾ ಪ್ರಯಾಣ. ಸದ್ಯಕ್ಕೆ ನಾವು ಶೇ 20ರಷ್ಟು ಪ್ರಮಾಣದಲ್ಲಿ ಮಾತ್ರ ಮರುಬಳಕೆ ಮಾಡಬಹುದಾದ ಪಾಲಿಸ್ಟರ್ ಅನ್ನು ಬಳಸುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಪಾಲಿಸ್ಟರ್ ಮುಕ್ತ ವಸ್ತ್ರಗಳನ್ನು ಮಾತ್ರ ಮಾರುಕಟ್ಟೆಗೆ ತರುವ ಯೋಜನೆಯಿದೆ.
*ಪರಿಸರಸ್ನೇಹಿ ತತ್ವದ ಸೆಳೆತ ಶುರುವಾಗಿದ್ದು ಹೇಗೆ?
ವಸ್ತ್ರವಿನ್ಯಾಸಕಿ ಆಗಬೇಕೆಂಬ ತುಡಿತ ಮೊದಲಿನಿಂದಲೂ ಇತ್ತು. ರ್‍ಯಾಂಪ್ ಮೇಲೆ ಹೆಜ್ಜೆ, ರೆಡ್ ಕಾರ್ಪೆಟ್ ಫ್ಯಾಷನ್ ಶೋ ಎಲ್ಲದರ ಬಗ್ಗೆಯೂ ವಿಶೇಷ ಆಕರ್ಷಣೆ ಇತ್ತು. ಫ್ಯಾಷನ್ ಡಿಸೈನಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆಯುವಾಗ ನನ್ನ ಗುರುಗಳ ಮಾತಿನಿಂದ ಪ್ರೇರೇಪಿತಳಾದೆ. ನಂತರ ಪರಿಸರಸ್ನೇಹಿ ಬಟ್ಟೆಗಳ ತಯಾರಿಕೆಯೇ ನನ್ನ ಆದ್ಯತೆಯಾಗಬೇಕೆಂದು ನಿರ್ಧರಿಸಿದೆ.
*ಗ್ರಾಹಕರ ಪ್ರತಿಕ್ರಿಯೆ ಹೇಗಿದೆ?
ಪರವಾಗಿಲ್ಲ. ಜನರಲ್ಲಿ ಈಗೀಗ ಜಾಗೃತಿ ಮೂಡುತ್ತಿದೆ. ಉತ್ತಮ ಗುಣಮಟ್ಟದ ಸಿಮೀತ ಪ್ರಮಾಣದಲ್ಲಿ ಸಾವಯವ ಬಟ್ಟೆಗಳನ್ನು ತಯಾರಿಸುತ್ತಿದ್ದೇವೆ. ನೇಕಾರರಿಗೆ, ಕುಶಲಕರ್ಮಿಗಳಿಗೆ ಉತ್ತಮ ಸಂಭಾವನೆ ನೀಡುತ್ತಿದ್ದೇವೆ. ಹಾಗಾಗಿ ಖರ್ಚು ವೆಚ್ಚ ಎರಡನ್ನೂ ಸರಿದೂಗಿಸುತ್ತಿದ್ದೇವೆ. ಈ ಬಗ್ಗೆ ತೃಪ್ತಿಯೂ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.