ಸಣ್ಣ ನೆರಿಗೆಗಳುಳ್ಳ (ಪ್ಲೀಟೆಡ್) ಬಟ್ಟೆಯಿಂದಲೇ ತಯಾರಾದ ವಿಧವಿಧವಾದ ವಸ್ತ್ರ ವಿನ್ಯಾಸಗಳು ಫ್ಯಾಶನ್ ಲೋಕದಲ್ಲಿ ಸದ್ದು ಮಾಡುತ್ತಿವೆ. ಇದಕ್ಕೆಂದೇ ವಿಶೇಷ ತಂತ್ರಜ್ಞಾನ ಬಳಸಿ ಸಿದ್ಧವಾಗುವ ಪ್ಲೀಟೆಡ್ ಬಟ್ಟೆಗಳನ್ನು ಸ್ಯಾಟಿನ್, ಕ್ರೇಪ್, ಸಾಫ್ಟ್ ಸಿಲ್ಕ್, ಜಾರ್ಜೆಟ್ ಮೆಟೀರಿಯಲ್‌ಗಳಲ್ಲಿ ಕಾಣಬಹುದು. ತೆಳ್ಳಗಿರಲಿ, ತುಸು ಸ್ಥೂಲಕಾಯವಿರಲಿ, ಪ್ಲೀಟೆಡ್ ಉಡುಗೆಗಳು ಆರಾಮಾಗಿ ಒಗ್ಗಿಕೊಳ್ಳುತ್ತವೆ. ಸಭೆ ಸಮಾರಂಭಗಳಲ್ಲಿ ನೋಡುಗರನ್ನು ಸೆಳೆಯುವ ಈ ವಸ್ತ್ರದ ವಿಶೇಷ. ಇದರಿಂದ ತಯಾರಾದ ಸೀರೆ, ಸಿದ್ಧ ಉಡುಪುಗಳು ಈಗ ಫ್ಯಾಷನ್.
ಸೀರೆ:ಪ್ಲೀಟೆಡ್ ಸೀರೆಗೆ ಫಾಲ್ಸ್, ಅಂಚು ಹೊಲಿಸುವ ಅವಶ್ಯಕತೆಯೇ ಇರದ ಸೀರೆಗಳು, ಸುಲಭವಾಗಿ ಉಡಲು ಬರುತ್ತವೆ. ಪಾರ್ಟಿ, ಮದುವೆ, ಕಚೇರಿ... ಹೀಗೆ ಎಲ್ಲ ಸಂದರ್ಭಕ್ಕೆ ಹೊಂದುವಂತೆ ಸೆರಗನ್ನು, ಸಿಂಗಲ್ ಲೇಯರ್, ಮಲ್ಟಿ ಲೇಯರ್, ಕೊರಳ ಸುತ್ತ ‘V‘ ಆಕಾರದಲ್ಲಿ ಇಳಿಯುವಂತೆ, ಇತ್ಯಾದಿ ವಿವಿಧ ವಿನ್ಯಾಸಗಳಲ್ಲಿ ಕೂರಿಸಬಹುದು. ಪ್ಲೈನ್, ಪ್ರಿಂಟೆಡ್ ಮತ್ತು ಡುಯಲ್ ಟೋನ್ ಸೀರೆಗಳು ಲಭ್ಯವಿವೆ. ಹೆಚ್ಚು ಭಾರವಿರದ ಈ ಸೀರೆಗಳು ಉಟ್ಟರೆ ಮೋಹಕವಾಗಿರುತ್ತದೆ.
ಮ್ಯಾಕ್ಸಿ:ಸೌಂದರ್ಯವನ್ನು ಇಮ್ಮಡಿಸುವ ಈ ಪ್ಲೀಟೆಡ್ ಮ್ಯಾಕ್ಸಿಗಳು ತೋಳು ಮತ್ತು ಕುತ್ತಿಗೆಯ ವಿವಿಧ ಡಿಸೈನ್‌ಗಳಲ್ಲಿ ಆಕರ್ಷಕವಾಗಿರುತ್ತದೆ. ಫುಲ್ ಲೆಂನ್ತ್, ಮಿಡಿ ಲೆಂನ್ತ್‌ನ ಪ್ಲೀಟೆಡ್ ಮ್ಯಾಕ್ಸಿಗಳು ಪಾರ್ಟಿಗಳಿಗೆ ಹೋಗುವಾಗ, ಮಾಲ್, ಶಾಪಿಂಗ್‌ಗಳಿಗೆ ತೆರಳುವಾಗ ಧರಿಸಬಹುದಾದ ಟ್ರೆಂಡಿ ಉಡುಗೆ.
ಸ್ಕರ್ಟ್:ಫ್ಲೋರಲ್ ಪ್ರಿಂಟ್, ಸಾದಾ, ಬಳುಕು ಸ್ವರೂಪದ ಸ್ಕರ್ಟ್‌ಗಳು ಎಲ್ಲರ ಮನ ಸೆಳೆವಂಥದ್ದು. ಉದ್ದ, ಗಿಡ್ಡ, ಅತಿ ಗಿಡ್ಡ ಅಳತೆಯ ಪ್ಲೀಟೆಡ್ ಸ್ಕರ್ಟ್‌ಗಳೂ ಇವೆ. ಸಮಾರಂಭಕ್ಕೆ ತಕ್ಕಂತೆ ಇವುಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಕ್ಯಾಶುವಲ್,ಅಫಿಷಿಯಲ್ ಉಡುಗೆಯಾಗಿಯೂ ಇವನ್ನು ಧರಿಸಬಹುದು.
ಟಾಪ್:ಸ್ಯಾಟಿನ್, ಪಾಲಿಯೆಸ್ಟರ್, ವಿಸ್ಕೊಸ್ ರಯಾನ್, ಕ್ರೇಪ್ ಬಟ್ಟೆಗಳಲ್ಲಿ ಸಿದ್ಧಪಡಿಸಿದ ಪ್ಲೀಟೆಡ್ ಟಾಪ್‌ಗಳು ಸ್ಕರ್ಟ್, ಪ್ಯಾಂಟ್, ಜೀನ್ಸ್, ಪಲಾಝೊಗಳಿಗೆ ಮೇಲುಡುಗೆಯಾಗಿ ಸೊಬಗು ನೀಡುತ್ತವೆ. ತೋಳಿನಲ್ಲಿ ಹಲವು ವಿನ್ಯಾಸದಲ್ಲಿ ಸಿಗುವ ಪ್ಲೀಟೆಡ್ ಟಾಪ್‌ಗಳು ನೋಡಲು ಅತ್ಯಾಕರ್ಷಕವಾಗಿರುತ್ತವೆ.
ಇಂದಿನ ಅವಸರ ಯುಗಕ್ಕೆ ಹೇಳಿ ಮಾಡಿಸಿದಂತಿರುವ ದಿನನಿತ್ಯದ ಅಗತ್ಯವನ್ನು ಸುಲಭವಾಗಿ ಪೂರೈಸುವ ಐರನ್ ಬೇಡದ, ರೆಡಿ ಟು ವೇರ್ ಪ್ಲೀಟೆಡ್ ಉಡುಗೆಗಳ ನಿರ್ವಹಣೆಯೂ ಸುಲಭ ಎನ್ನುವುದು ಇನ್ನೊಂದು ಪ್ರಮುಖ ಅಂಶ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.