ಲಾಸ್ ಏಂಜಲೀಸ್: ಪೋಲೆಂಡ್‌ನಕರೋಲಿನಾ ಬೈಲಾವ್ಸ್ಕಾ ಅವರು 2021ನೇ ಸಾಲಿನ ‘ವಿಶ್ವ ಸುಂದರಿ’ ಗೌರವಕ್ಕೆ ಪಾತ್ರರಾಗಿದ್ದಾರೆ. ಬುಧವಾರ ರಾತ್ರಿ ನಡೆದ 70ನೇ ಆವೃತ್ತಿಯ ಸ್ಪರ್ಧೆಯಲ್ಲಿ 96 ದೇಶಗಳ ಸುಂದರಿಯರು ಪಾಲ್ಗೊಂಡಿದ್ದರು.
‘ಮಿಸ್ ಯುಎಸ್‌ಎ’ ಪುರಸ್ಕೃತೆ, ಭಾರತ ಮೂಲದ ಅಮೆರಿಕನ್ ಆಗಿರುವ ಶ್ರೀ ಸೈನಿ ಅವರು ಮೊದಲ ರನ್ನರ್ ಅಪ್ ಆದರೆ, ಪಶ್ಚಿಮ ಆಫ್ರಿಕಾದ ರಾಷ್ಟ್ರ ಕೋಟ್ ಡಿ'ಐವರಿ'ಸ್‌ನ (ಹಿಂದಿನ ಐವರಿ ಕೋಸ್ಟ್) ಒಲಿವಿಯಾ ಯೇಸ್ ದ್ವಿತೀಯ ರನ್ನರ್ ಆಪ್ ಆದರು.
ಸ್ಯಾನ್ ಜುವಾನ್‌ನ ಕೊಕಾಕೋಲಾ ಮ್ಯೂಸಿಕ್ ಸಭಾಂಗಣದಲ್ಲಿ ನಡೆದ ವರ್ಣರಂಜಿತ ಸ್ಪರ್ಧೆಯಲ್ಲಿ, 2020ನೇ ಸಾಲಿನ ‘ವಿಶ್ವಸುಂದರಿ’, ಜಮೈಕಾದ ಟೊನಿ ಆ್ಯನ್ ಸಿಂಗ್ ಅವರುಕರೋಲಿನಾ ಅವರಿಗೆ ಕಿರೀಟ ತೊಡಿಸಿದರು.
ಈ ಮೂಲಕ ವಿಶ್ವಸುಂದರಿ ಗೌರವವು ಎರಡನೇ ಬಾರಿಗೆ ಪೋಲೆಂಡ್‌ನ ಯುವತಿಗೆ ದೊರೆತಂತಾಗಿದೆ. ಈ ಹಿಂದೆ ಪೋಲೆಂಡ್‌ನ ಅನೆಟಾ ಕ್ರೆಗ್ಲಿಕಾ ಅವರು 1989ರಲ್ಲಿ ಈ ಹಿರಿಮೆಗೆ ಪಾತ್ರರಾಗಿದ್ದರು.
ಭಾರತವನ್ನು ಪ್ರತಿನಿಧಿಸಿದ್ದ ‘ಭಾರತ ಸುಂದರಿ’ ಪುರಸ್ಕೃತೆ ಮಾನಸ ವಾರಾಣಸಿ ಅವರು 11ನೇ ಸ್ಥಾನ ಪಡೆದರು.
ವಿಶ್ವಸುಂದರಿ ಸ್ಪರ್ಧೆಯು ವಾಸ್ತವವಾಗಿ ಡಿಸೆಂಬರ್ 16, 2021ರಲ್ಲಿ ನಡೆಯಬೇಕಿತ್ತು. ಮಾನಸ ಸೇರಿದಂತೆ ಒಟ್ಟು 16 ಮಂದಿ ಸ್ಪರ್ಧಿಗಳಿಗೆ ಕೋವಿಡ್ ದೃಢಪಟ್ಟಿದ್ದ ಕಾರಣದಿಂದ ಮುಂದೂಡಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.