ADVERTISEMENT

ಮರುಕಳಿಸಿದ ರೆಟ್ರೊ ಫ್ಯಾಷನ್‌

ಸ್ಮಿತಾ ಶಿರೂರ
Published 25 ಸೆಪ್ಟೆಂಬರ್ 2018, 19:30 IST
Last Updated 25 ಸೆಪ್ಟೆಂಬರ್ 2018, 19:30 IST
ದೀಪಿಕಾ ಪಡುಕೋಣೆ
ದೀಪಿಕಾ ಪಡುಕೋಣೆ   

ಫ್ಯಾಷನ್ ಜಗತ್ತಿನಲ್ಲಿ ಇಂದಿನ ಟ್ರೆಂಡ್‌ ನಾಳೆಗೇ ತೆರೆಮರೆಗೆ ಸರಿಯುವುದಿದೆ.ಆದರೆ ಅವುಗಳ ಕಥೆ ಮುಗಿಯಿತು ಎಂದು ಅಂದುಕೊಳ್ಳುವಂತಿಲ್ಲ. ಫ್ಯಾಷನ್ ಡಿಸೈನರ್‌ಗಳ ಕೈಯಲ್ಲಿ ಅವು ಮತ್ತೆ ಮತ್ತೆ ಜನ್ಮ ತಳೆಯುತ್ತವೆ.

ಇಂದಿನ ಹಲವು ಚಲನಚಿತ್ರಗಳಲ್ಲಿ 70-80ರ ದಶಕದ ಹಳೆಯ ನಟಿಯರ ಝಲಕ್ ಆಗಾಗ ಕಾಣ ಸಿಗುತ್ತದೆ. ಸಾಧನಾ, ಆಶಾ ಪರೇಖ್, ಜೀನತ್ ಅಮಾನ್, ನೀತು ಸಿಂಗ್, ಸಾಯಿರಾ ಬಾನು, ಮುಮ್ತಾಜ್, ಹೇಮಾಮಾಲಿನಿ, ಶರ್ಮಿಳಾ ಟಾಗೋರ್ ಅವರಂಥ ನಟಿಯರು ಹಾಕಿದ್ದ ವಸ್ತ್ರ ಹಾಗೂ ಕೇಶ ವಿನ್ಯಾಸಗಳು ಇಂದಿಗೂ ಆಗಾಗ ಚಲನಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತ ‘ವಿಂಟೇಜ್', ಆ್ಯಂಟಿಕ್ ವಸ್ತುಗಳಂತೆ ಅಮೂಲ್ಯವೆನಿಸುತ್ತಿವೆ.

ಪ್ರಿಯಾಂಕಾ ಚೋಪ್ರಾ, ದೀಪಿಕಾ ಪಡುಕೋಣೆ, ಕತ್ರಿನಾ ಕೈಫ್‌, ಕಂಗನಾ ರಣೋಟ್, ಸೋನಂ ಕಪೂರ್ ಸೇರಿದಂತೆ ಇಂದಿನ ಬಹುತೇಕ ಎಲ್ಲ ಸುಪ್ರಸಿದ್ಧ ನಟಿಯರೂ ತಮ್ಮ ಚಿತ್ರಗಳಲ್ಲಿ ಹಳೆಯ ನಟಿಯರಂತೆ ದಿರಿಸನ್ನು ಧರಿಸಿದವರೇ.

ADVERTISEMENT

‘ಓಂ ಶಾಂತಿ ಓಂ’, ಕನ್ನಡದ ‘ಮದರಂಗಿ’ ಹಾಗೂ ಜೋಗಯ್ಯ ಸಿನಿಮಾ ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ರೆಟ್ರೊ ದಿರಿಸುಗಳು ವಿಜೃಂಭಿಸಿವೆ. ಹಾಡುಗಳಲ್ಲೂ ಹಳೆಯ ಫ್ಯಾಷನ್ ವಸ್ತ್ರ ವೈಭವ ಅನಾವರಣಗೊಂಡಿವೆ.

ಹೂಗಳ ಚಿತ್ರವಿರುವ ಸಲ್ವಾರ್, ಸೀರೆಗಳು 70-80 ದಶಕದ ಫ್ಯಾಷನ್ ಆಗಿದ್ದರೆ. ಅವೀಗ ಮತ್ತೆ ಭರ್ಜರಿಯಾಗಿ ಮರಳಿವೆ. ಹೂಗಳಂತೆ ಕೋಮಲ ಎಂಬುದನ್ನು ಸಂಕೇತಿಸಲು ಅಂದಿನ ಫ್ಯಾಷನ್ ಡಿಸೈನರ್‌ಗಳು ಮಹಿಳಾ ದಿರಿಸುಗಳಿಗೆ ಅವುಗಳನ್ನೇ ಆಯ್ದುಕೊಳ್ಳುತ್ತಿದ್ದರು. ಅದೇ ದೃಷ್ಟಿಕೋನಕ್ಕೆ ಮತ್ತೀಗ ಮನ್ನಣೆ ಲಭಿಸಿದೆ. ರಣವೀರ್ ಸಿಂಗ್ ಸಹ ಇಂಥ ಹೂಗಳ ಚಿತ್ರದ ದಿರಿಸುಗಳನ್ನು ಧರಿಸಿ ಅಭಿಮಾನಿಗಳ ಮನ ಗೆದ್ದಿದ್ದಾರೆ.

ಪ್ರಾಣಿಗಳ ಚಿತ್ರವಿರುವ ವಸ್ತ್ರಗಳು ಹಾಲಿವುಡ್‌ನಲ್ಲಿ ಹೆಚ್ಚಾಗಿ ಕಂಡು ಬರುತ್ತಿದ್ದವು. ಈಗ ಅವೂ ಮತ್ತೆ ಫ್ಯಾಷನ್ ಜಗತ್ತಿನಲ್ಲಿ ಹೆಸರು ಮಾಡುತ್ತಿವೆ. ಫಾರ್ಮಲ್ ಆಗಿರುವ ಟಾಪ್‌ಗಳು, ಶರ್ಟ್‌ಗಳ ಮೇಲೆ ಪ್ರಾಣಿಗಳ ಚಿತ್ರಗಳನ್ನು ಯುವಜನ ಬಯಸುತ್ತಿದ್ದಾರೆ. ಲೆಗಿಂಗ್ಸ್‌ಗಳ ಮೇಲೆ ಇವುಗಳ ಪ್ರಿಂಟ್ ಜನಪ್ರಿಯವಾಗಿವೆ. ಬೆಲ್ ಬಾಟಮ್ ಪ್ಯಾಂಟ್‌ಗಳು, ಸ್ಕಿನ್ ಟೈಟ್ ಸಲ್ವಾರ್‌ಗಳು, ಉದ್ದ ತೋಳಿನ ರವಿಕೆಗಳು ಮತ್ತೆ ಮಿಂಚಲಾರಂಭಿಸಿವೆ.

ಪೋಲ್ಕಾ ಡಾಟ್ ಇರುವ ಡ್ರೆಸ್‌ಗಳೂ ಜನಮೆಚ್ಚುಗೆ ಗಳಿಸಿವೆ. ಪಾರ್ಟಿಗಳಿಗೆ ಹೋಗುವಾಗ ಇಂಥ ‘ಓಲ್ಡ್ ಈಸ್ ಗೋಲ್ಡ್’ ಲುಕ್ ಅಳವಡಿಸಿಕೊಂಡರೆ ಎಲ್ಲರ ಗಮನ ಸೆಳೆಯುವಲ್ಲಿ ಎರಡು ಮಾತಿಲ್ಲ.

ಸಿನಿಮಾ, ಧಾರಾವಾಹಿಗಳ ಪ್ರಶಸ್ತಿ ಪ್ರದಾನ ಸಮಾರಂಭಗಳಲ್ಲಿಯೂ ಇಂಥ ಡ್ರೆಸ್‌ಗಳಿಗೆ ಈಗ ಎಲ್ಲಿಲ್ಲದ ಬೆಲೆ ಬಂದಿದೆ. ಪಾಶ್ಚಾತ್ಯರ ಕೊಡುಗೆಯಾಗಿರುವ ಈ ವಿನ್ಯಾಸ ಇಂದಿನ ಫ್ಯಾಷನ್ ಲೋಕದಲ್ಲಿ ಝಗಮಗಿಸುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.