ಬಿರುಬಿಸಿಲಿನಲ್ಲಿ ನಡೆದು ಬಂದರೆ ದಣಿವಾಗುವುದಷ್ಟೆ ಅಲ್ಲ ಚರ್ಮವು ಸುಟ್ಟಾಂತಾಗಿ ಕಾಂತಿಹೀನವಾಗುತ್ತದೆ. ಹಾಗಾಗಿ ಮುಖ, ಕುತ್ತಿಗೆ, ಕೈ ಕಾಲಿನ ಚರ್ಮದ ಬಗ್ಗೆ ಕಾಳಜಿ ವಹಿಸುವುದು ಅಗತ್ಯ. ರಾಸಾಯನಿಕ ಅಂಶಗಳಿರುವ ಕ್ರೀಮು, ಸೋಪುಗಳನ್ನು ಹೆಚ್ಚು ಬಳಸದೆ ಮನೆಯಲ್ಲಿ ಸಿಗುವ ಹಲ ಬಗೆಯ ಔಷಧೀಯ ಅಂಶಗಳಿರುವ ಪದಾರ್ಥಗಳನ್ನು ಉಪಯೋಗಿಸಿ ಸೂಕ್ತ ಚರ್ಮ ಆರೈಕೆ ಮಾಡಿಕೊಳ್ಳಬಹುದು.
ಹೀಗೆ ಮಾಡಿಕೊಳ್ಳುವ ಮೊದಲು ಚರ್ಮ ಯಾವ ಬಗ್ಗೆಯದ್ದು; ಜಿಡ್ಡಿನ ಚರ್ಮವಾ? ಒಣ ಚರ್ಮವಾ?ಎಂಬುದನ್ನು ಗಮನಿಸಿ, ಯಾವುದರ ಅಲರ್ಜಿ ಇದೆ? ಎಂಬುದರ ಅರಿವಿಟ್ಟುಕೊಂಡು ಮುಂದುವರಿಯುವುದು ಸೂಕ್ತ.
ಬೇಸಿಗೆಯಲ್ಲಿ ಬಹುತೇಕರ ಮನೆಯಲ್ಲಿ ಲಭ್ಯವಿರುವ ಐಸ್‌ಕ್ಯೂಬ್‌ಗಳಿಂದ ಚರ್ಮದ ಆರೈಕೆ ಮಾಡಿಕೊಳ್ಳಬಹುದು. ಸ್ಕಿನ್ ಐಸಿಂಗ್ ಎಂದು ಕರೆಯುವ ಈ ಆರೈಕೆ ಪದ್ಧತಿಯಲ್ಲಿ ಬೇಕಿರುವುದು ಐಸ್‌ಕ್ಯೂಬ್‌ಗಳು ಮಾತ್ರ.
ಮಾಡುವುದು ಹೇಗೆ?: ಕೆನ್ನೆ, ಮೂಗು, ಹಣೆ ಮೇಲೆ ಐಸ್ ಕ್ಯೂಬ್‌ಗಳನ್ನು ವೃತ್ತಾಕಾರದಲ್ಲಿ ಮೆದುವಾಗಿ ಉಜ್ಜಿ. ಇದರಿಂದ ಚರ್ಮದಲ್ಲಿ ಗುಳೆಗಳಾಗಿದ್ದರೆ, ಸೆಕೆ ಬೊಕ್ಕೆಗಳಿದ್ದರೆ ತಕ್ಷಣಕ್ಕೆ ಪರಿಹಾರ ಸಿಗುತ್ತದೆ. ಸೂರ್ಯನ ಕಿರಣಗಳಿಂದ ಚರ್ಮ ಸುಟ್ಟಿದ್ದರೆ, ಚರ್ಮದಲ್ಲಿ ಆಗಾಗ್ಗೆ ಜಿಡ್ಡಿನಂಶ ಉತ್ಪತ್ತಿಯಾಗುತ್ತಿದ್ದರೆ, ಈ ಸ್ಕಿನ್ ಐಸಿಂಗ್ ಉತ್ತಮ ಪರಿಹಾರ.
ನೆರಿಗೆ ಮೂಡುತ್ತಿದ್ದರೆ ವಾರದಲ್ಲಿ ಎರಡು ಬಾರಿಯಾದರೂ ಹೀಗೆ ಮಾಡುವುದರಿಂದ ಚರ್ಮ ಸುಕ್ಕುಗಟ್ಟುವುದನ್ನು ತಪ್ಪಿಸಬಹುದು. ಜತೆಗೆ ಚರ್ಮ ಕಾಂತಿಯುಕ್ತವಾಗಿಡಲು ಇದು ನೆರವಾಗುತ್ತದೆ.
ಅತಿ ಬಳಕೆ ಸಲ್ಲ: ಐಸ್‌ಕ್ಯೂಬ್‌ಗಳನ್ನು ಅತಿಯಾಗಿ ಬಳಸಿದರೆ ಚರ್ಮದ ಅಂಗಾಂಶ ಹಾನಿಯಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಈ ಬಗ್ಗೆ ಎಚ್ಚರಿಕೆ ವಹಿಸುವುದು ಮುಖ್ಯ.
ಹಲ ಬಗೆಯ ಐಸ್‌ಕ್ಯೂಬ್‌ಗಳನ್ನು ಮನೆಯಲ್ಲಿ ತಯಾರಿಸಬಹುದು: ಸೌತೆಕಾಯಿ ಕ್ಯೂಬ್, ಪುದೀನಾ. ರೋಸ್ ವಾಟರ್, ಕೇಸರಿ ದಳಗಳು, ಆಲೊವೆರಾ, ಅರಿಶಿನ ಪುಡಿ, ಕಾಫಿ ಪುಡಿ ಐಸ್‌ಕ್ಯೂಬ್‌ಗಳನ್ನು ತಯಾರಿಸಿಯೂ ಬಳಸಬಹುದು. ಉದಾಹರಣೆಗೆ ಸಾಮಾನ್ಯ ನೀರಿಗೆ ಸೌತೆಕಾಯಿ ರಸವನ್ನು ಸೇರಿಸಿ, ಫ್ರಿಜರ್‌ನಲ್ಲಿಟ್ಟರೆ ಐಸ್‌ಕ್ಯೂಬ್ ಸಿದ್ಧಗೊಳ್ಳುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.