‘ವ್ಯಕ್ತಿ ತೊಡಬಹುದಾದ ಅತ್ಯುತ್ತಮ ಆಭರಣವೆಂದರೆ ನಗು’.
ನಿಜವೇ, ನಗುವಿನಿಂದ ಮುಖಕ್ಕೆ ಮಾತ್ರವಲ್ಲ, ವ್ಯಕ್ತಿತ್ವಕ್ಕೇ ಶೋಭೆ. ಆದರೆ ನಗು, ಬರೀ ಸೌಂದರ್ಯವನ್ನು ಹೆಚ್ಚಿಸುವ, ಆತ್ಮವಿಶ್ವಾಸವನ್ನು ಸೂಸುವ ಆಭರಣವಷ್ಟೇ ಅಲ್ಲ; ಆರೋಗ್ಯವನ್ನು ವೃದ್ಧಿಸುವ ಟಾನಿಕ್ ಕೂಡ.
ಒತ್ತಡ ಕಡಿಮೆ: ಮನಸ್ಸಿಗೆ ಖುಷಿಯಾದಾಗ ಅದನ್ನು ಅಭಿವ್ಯಕ್ತಿಗೊಳಿಸುವ ಆಂಗಿಕಭಾಷೆಯೇ ನಗು. ಆದರೆ ಮನಸ್ಸು ಕುಗ್ಗಿದಾಗ/ ಬೇಸರದಲ್ಲಿದ್ದಾಗಲೂ ನಗು ಸಹಾಯಕ. ಆ ಸಂದರ್ಭದಲ್ಲಿ ಸಹಜವಾಗಿ ನಗು ಬಾರದಿದ್ದರೂ ಪ್ರಯತ್ನಪಟ್ಟು ನಕ್ಕರೂ ಸಾಕು. ಏಕೆಂದರೆ ಸುಮ್ಮನೇ ನಕ್ಕಂತೆ ತುಟಿಗಳನ್ನು ಮೇಲಕ್ಕೆ ಎಳೆದಾಗ ಮಿದುಳಿಗೆ ‘ನಗುವಿನ’ ಸಂದೇಶ ರವಾನೆಯಾಗುತ್ತದೆ. ಕೂಡಲೇ ಮನಸ್ಸಿಗೆ ಹಿತ ಕೊಡುವ ಡೋಪಮಿನ್, ಸೆರಟೋನಿನ್ ಹಾರ್ಮೋನ್‍ಗಳು ಬಿಡುಗಡೆಯಾಗುತ್ತವೆ. ಇದರಿಂದ ಒತ್ತಡದ ಮಟ್ಟ ಕಡಿಮೆಯಾಗಿ ಮನಸ್ಸು ತನ್ನಿಂತಾನೇ ಉಲ್ಲಸಿತವಾಗುತ್ತದೆ.
ಸ್ನೇಹವೃದ್ಧಿ: ಜಗತ್ತಿನ ಯಾವುದೇ ಮೂಲೆಗೆ ಹೋದರೂ, ಯಾವುದೇ ಭಾಷೆ ಮಾತನಾಡುವ/ ಭಾಷೆಯೇ ಬರದ ವ್ಯಕ್ತಿಯಾದರೂ ನಗುವನ್ನು ಅರ್ಥಮಾಡಿಕೊಳ್ಳುತ್ತಾರೆ. ಸಂತೋಷ-ಸ್ನೇಹವನ್ನು ಸೂಚಿಸುವ ಭಾವವಿದು. ಅಪರಿಚಿತರೊಂದಿಗೆ ಒಡನಾಡಲು ಪುಟ್ಟ ನಗು ಬೀರುವ ಪರಿಣಾಮ ದೊಡ್ಡದು. ಅಪರಿಚಿತರ ಮನವನ್ನು ಮುಟ್ಟಲು ಕೀಲಿಕೈ ನಗು! ನಗುವನ್ನು ಕೇವಲ ಮುಖ ನೋಡಿಯೇ ಗ್ರಹಿಸಬೇಕೆಂದಿಲ್ಲ. ಅಧ್ಯಯನಗಳ ಪ್ರಕಾರ ಫೋನಿನಲ್ಲಿ ಮಾತನಾಡುವಾಗಲೂ ನಗುವನ್ನು ಕೇಳಲು ಸಾಧ್ಯ. ಮಾತ್ರವಲ್ಲ ನಿಮ್ಮ ನಗು ಕೃತಕವಾದದ್ದೇ ಎಂಬುದನ್ನೂ ಗುರುತಿಸಬಹುದು. ನಗುತ್ತಾ ಪ್ರೀತಿಯಿಂದ ಆಡುವ ಮಾತುಗಳು ಇನ್ನೊಬ್ಬರ ದಿನವನ್ನೂ ಸುಂದರವಾಗಿಸುತ್ತವೆ, ಸ್ನೇಹವನ್ನು ವೃದ್ಧಿಸುತ್ತವೆ.
ಹೆಲ್ತಿ ಹಾರ್ಟ್: ನಕ್ಕಾಗ ದೇಹದಿಂದ ಬಿಡುಗಡೆಯಾಗುವ ಕಾರ್ಟಿಸಾಲ್ ಮತ್ತು ಎಂಡಾರ್ಫಿನ್‌ಗಳು ರಕ್ತದೊತ್ತಡವನ್ನು ಕಡಿಮೆ ಮಾಡುತ್ತವೆ. ಹೃದಯದ ಬಡಿತವನ್ನು ಕಡಿಮೆ ಮಾಡುತ್ತವೆ. ರಕ್ತನಾಳಗಳಲ್ಲಿ ರಕ್ತಸಂಚಾರವನ್ನು ಸುಗಮವಾಗಿ ನಡೆಯುತ್ತದೆ. ಆದ್ದರಿಂದ ಹೃದಯದ ಆರೋಗ್ಯಕ್ಕೆ ಖರ್ಚಿಲ್ಲದೇ ಶ್ರಮವಿಲ್ಲದೇ ದಿನವೂ ಮಾಡಬಹುದಾದ ಸುಲಭ ವ್ಯಾಯಾಮವಿದು.
ಹರಡುವ ನಗು: ರೋಗಗಳ ವಿಷಯಕ್ಕೆ ಬಂದಾಗ ‘ರೋಗಗಳು ಹರಡುತ್ತವೆ’ ಎಂದು ಹೆದರುವ ಹಾಗೆ ನಗುವೂ ಎಲ್ಲೆಡೆ ಹರಡುತ್ತದೆ; ಆದರೆ, ನಗು ಎಂಬುದು ಖುಷಿಯ ಸಾಂಕ್ರಾಮಿಕ! ಕಾರಣವೇನೆಂದರೆ ಮನುಷ್ಯರಲ್ಲಿ ಅನುಕರಣಾ ಪ್ರವೃತ್ತಿ ಕಂಡುಬರುತ್ತದೆ. ಇದು ಇತರರ ಭಾವನೆಯನ್ನು ಅರ್ಥೈಸಿಕೊಳ್ಳಲು, ಅವರೊಂದಿಗೆ ನಾವಿದ್ದೇವೆ ಎಂಬುದನ್ನು ತೋರಿಸಲು ಅಗತ್ಯ. ಮಿದುಳಿನಲ್ಲಿರುವ ಮಿರರ್ ನ್ಯೂರಾನ್ಸ್ (ಕನ್ನಡಿ ನರಕೋಶಗಳು) ಈ ಪ್ರಚೋದನೆಗೆ ಒಳಗಾಗಿ ಇತರರ ಮುಖಭಾವನೆಯನ್ನು ಅನುಕರಿಸುತ್ತವೆ. ಖುಷಿಗೆ ಪ್ರತಿಕ್ರಿಯಿಸುವ ಆತ್ಮೀಯತೆಯ ಸಂಕೇತ: ನಗು.
ಹುಟ್ಟುವಾಗಲೇ ನಗು: ಹುಟ್ಟಿದ ಮಗು ಆಗಾಗ್ಗೆ ನಗುವುದು ತನ್ನಿಂತಾನೇ ನಡೆಯುವ ಕ್ರಿಯೆ. ಸಾಮಾಜಿಕ ನಗು ಎರಡು ತಿಂಗಳ ನಂತರ ಕಾಣಬಹುದು ಎಂದು ನಂಬಲಾಗಿತ್ತು. ಆದರೆ ಇತ್ತೀಚಿನ ಅಧ್ಯಯನಗಳ ಪ್ರಕಾರ ಆನಂದದ ಸಹಜ ಅಭಿವ್ಯಕ್ತಿ ಎನ್ನಲಾಗುತ್ತಿದೆ. ಸುವಾಸನೆ, ಪ್ರೀತಿಪಾತ್ರರ ಸ್ಪರ್ಶ – ಇವೆಲ್ಲವೂ ಮಗುವಿನ ನಗುವಿಗೆ ಕಾರಣ ಎಂದು ಊಹಿಸಲಾಗಿದ್ದು ನಗುವುದು ಮನುಷ್ಯರಲ್ಲಿ ಹುಟ್ಟಿನೊಂದಿಗೇ ಬಂದದ್ದು ಎನ್ನಲಾಗಿದೆ!
ನೋವಿನ ತೀವ್ರತೆ ಕಡಿಮೆ: ನಕ್ಕಾಗ ದೇಹದಲ್ಲಿ ಒಳ್ಳೆಯ ಹಾರ್ಮೋನ್‍ಗಳು ಮತ್ತು ನೈಸರ್ಗಿಕ ನೋವುನಿವಾರಕಗಳು ಬಿಡುಗಡೆಯಾಗುತ್ತವೆ. ಮನಸ್ಸನ್ನು ಉಲ್ಲಸಿತ ಗೊಳಿಸುವುದರ ಜೊತೆ ಅವು ದೈಹಿಕ ಒತ್ತಡವನ್ನೂ ನೋವನ್ನೂ ಕಡಿಮೆ ಮಾಡುತ್ತವೆ. ನಗು, ನೋವಿಗೆ ಉತ್ತಮ ಔಷಧ! ರೋಗಿಗಳು ಚುಚ್ಚುಮದ್ದನ್ನು ಪಡೆಯುವಾಗ ನಗುತ್ತಿದ್ದಲ್ಲಿ (ಪ್ರಯತ್ನಪೂರ್ವಕವಾಗಿ) ನೋವಿನ ಪ್ರಮಾಣದಲ್ಲಿ ಶೇ. ನಲವತ್ತರಷ್ಟು ಇಳಿಕೆ ಕಂಡುಬಂದಿದ್ದರ ದಾಖಲೆಯಿದೆ.
ತಾರುಣ್ಯದ ಕಳೆ: ಮುಖದಲ್ಲಿ ನಗುವಿದ್ದರೆ ಆಕರ್ಷಕ ಎನಿಸುವುದಂತೂ ಸರಿ. ಅದರೊಂದಿಗೆ ತಾರುಣ್ಯಪೂರ್ಣ ತ್ವಚೆಯೂ ಸಾಧ್ಯ. ನಗುವಾಗ ಬಳಸುವ ಸ್ನಾಯುಗಳು ಮುಖದ ಚರ್ಮವನ್ನು ಮೇಲಕ್ಕೆ ಎಳೆಯುತ್ತವೆ. ತ್ವಚೆ ಕಾಂತಿಯುತವಾಗಿ ಹೊಳೆಯಲು, ಸುಕ್ಕು ನಿವಾರಿಸಲು ಫೇಸ್ ಲಿಫ್ಟ್ ಮಾಡಿಸುವ ಬದಲು ಆಗಾಗ್ಗೆ ನಕ್ಕರೆ ಸೌಂದರ್ಯವರ್ಧನೆ ಮತ್ತು ಚಿಕಿತ್ಸೆ – ಎರಡೂ ಏಕಕಾಲದಲ್ಲಿ ನಡೆಯುತ್ತದೆ! ಮಹಿಳೆಯರು ಮೇಕಪ್ ಧರಿಸುವುದಕ್ಕಿಂತಲೂ, ‘ನಗುವನ್ನು ಧರಿಸಿದಾಗ’ ಹೆಚ್ಚು ಆಕರ್ಷಕ ಎಂಬುದು ಶೇ. ಅರವತ್ತೊಂಬತ್ತು ಜನರ ಅಭಿಪ್ರಾಯ.
ಮೊದಲ ಭೇಟಿಯಲ್ಲಿ ಜನರು ಅತಿ ಹೆಚ್ಚು ಗಮನಿಸುವ ಮತ್ತು ನೆನಪಿನಲ್ಲಿ ಇಟ್ಟುಕೊಳ್ಳುವ ಅಂಶ ನಗು.
ಮಾಸ್ಕ್ ಧರಿಸಿದಾಗ?
ನಗುವಿನಿಂದ ಇಷ್ಟೆಲ್ಲಾ ಲಾಭಗಳಿವೆ ನಿಜ. ಆದರೆ ಕೋವಿಡ್ ಸಂದರ್ಭದಲ್ಲಿ ಮುಖಕ್ಕೆ ಮಾಸ್ಕ್ ಹಾಕಬೇಕಾದ ಅನಿವಾರ್ಯತೆ ಎದುರಾಗಿತ್ತಲ್ಲ, ಆಗ ನಗು ಗೊತ್ತಾಗುವುದಾದರೂ ಹೇಗೆ ಎಂಬ ಪ್ರಶ್ನೆ ಮೂಡುವುದು ಸಹಜ. ವಿಜ್ಞಾನಿಗಳ ಪ್ರಕಾರ ನಗುವನ್ನು ಗುರುತಿಸಲು ಬಾಯಿ-ಹಲ್ಲುಗಳು ಮಾನದಂಡಗಳಾದರೂ ಕೆನ್ನೆ–ಕಣ್ಣುಗಳ ಅಂಚಿನಲ್ಲಿ ಮೂಡುವ ನಗುವಿನ ರೇಖೆ ಮತ್ತು ಕಿರಿದಾಗುವ ಕಣ್ಣುಗಳಿಂದ ನಗುವನ್ನು ಕಂಡುಹಿಡಿಯಲು ಸಾಧ್ಯ. ಹಾಗಾಗಿ ಮಾಸ್ಕ್ ಧರಿಸಿದಾಗ ನಗುವಾಗ ದೃಷ್ಟಿಯೂ ಮುಖ್ಯವಾಗುತ್ತದೆ. ಮಾತ್ರವಲ್ಲ, ಧ್ವನಿಯಲ್ಲೂ ನಗು ಮತ್ತು ಖುಷಿಯ ಭಾವವನ್ನು ಗ್ರಹಿಸಲು ಸಾಧ್ಯ. ದೇಹದ ಇತರ ಅಂಗಗಳಾದ ಹುಬ್ಬು, ಕೈ ಇವುಗಳನ್ನು ಬಳಸಿಯೂ ‘ನಗುತ್ತಿದ್ದೇವೆ’ ಎಂಬುದನ್ನು ಸೂಚಿಸಬಹುದು. ಪರಸ್ಪರ ಸ್ಪರ್ಶ ಆರೋಗ್ಯದ ದೃಷ್ಟಿಯಿಂದ ನಿಷಿದ್ಧವಾದ ಸಂದರ್ಭದಲ್ಲಿ ವೈದ್ಯರು ರೋಗಿಗಳಿಗೆ ಧೈರ್ಯ ತುಂಬಿದ್ದು ವೈದ್ಯರ ಮಾಸ್ಕ್ ಒಳಗಿನ ನಗು ಮತ್ತು ಅದನ್ನು ಬಿಂಬಿಸಿದ ಕಣ್ಣುಗಳು! ಒಟ್ಟಿನಲ್ಲಿ ಮಾಸ್ಕ್ ಹಾಕಿದರೂ ನಗುವುದು ಮುಖ್ಯ.
ನಿಮಗೆ ಗೊತ್ತಿರಲಿ
ಮಕ್ಕಳು ದಿನಕ್ಕೆ ಮುನ್ನೂರರಿಂದ ಐನೂರು ಬಾರಿ ನಕ್ಕರೆ ವಯಸ್ಕರು ಕೇವಲ ಹದಿನೇಳರಿಂದ ಇಪ್ಪತ್ತು ಬಾರಿ ನಗುತ್ತಾರೆ.
ಭಾವನಾಜೀವಿಗಳಾದ ಮಹಿಳೆಯರು ಪುರುಷರಿಗಿಂತ ಹೆಚ್ಚು ಬಾರಿ ನಗುತ್ತಾರೆ.
ಮಾನವರಿಗೆ ನಗು ಸಹಜವಾಗಿ ಸಿದ್ಧಿಸಿದೆ; ಆದರೆ ಮಂಗ ಮತ್ತು ಚಿಂಪಾಂಜಿಗಳೂ ಕಚಗುಳಿ ಇಟ್ಟಾಗ ನಗಬಲ್ಲವು!
ನಗುವಿನಲ್ಲಿ ಹತ್ತೊಂಬತ್ತು ವಿಧಗಳನ್ನು ಗುರುತಿಸಲಾಗಿದೆ. ಇವುಗಳಲ್ಲಿ ಆರು ಮಾತ್ರ ಸಂತಸದ ನಗುಗಳು.
ನಗಲು ಉಪಯೋಗಿಸುವ ಮುಖದ ಸ್ನಾಯುಗಳ ಸಂಖ್ಯೆ ಮುಖ ಗಂಟಿಕ್ಕಲು ಬಳಸುವ ಸ್ನಾಯುಗಳ ಸಂಖ್ಯೆಗಿಂತ ಕಡಿಮೆ; ಅಂದರೆ ನಗಲು ವ್ಯಯವಾಗುವ ಶಕ್ತಿ ಕಡಿಮೆ!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.