ADVERTISEMENT

ಸೊಂಪಾದ ಕೂದಲಿಗೆ ಕೆಲವು ಸುಲಭ ಮಾರ್ಗಗಳು

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2021, 19:30 IST
Last Updated 22 ಅಕ್ಟೋಬರ್ 2021, 19:30 IST
ಸಾಂಧರ್ಬಿಕ ಚಿತ್ರ
ಸಾಂಧರ್ಬಿಕ ಚಿತ್ರ   

ಕೂದಲು ಕಾಳಜಿ ಇತ್ತೀಚಿನ ಯುವಜನರಿಗೆ ಸವಾಲು ಎನ್ನಿಸಿದ್ದು ಸುಳ್ಳಲ್ಲ. ಕೂದಲಿನ ಬಗ್ಗೆ ಎಷ್ಟೇ ಕಾಳಜಿ ಮಾಡಿದರೂ ಕೂದಲು ಉದುರುವುದು, ಬಾಲನೆರೆ ಕಾಣಿಸಿಕೊಳ್ಳುವುದು, ಸೀಳು ಬಿಡುವುದು ಆಗುತ್ತಲೇ ಇರುತ್ತದೆ. ಮಾರುಕಟ್ಟೆಯಲ್ಲಿ ಸಿಗುವ ಎಲ್ಲಾ ಔಷಧಿಗಳನ್ನು ಬಳಸಿ ನೋಡಿದರೂ ಕೂದಲ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ ಎನ್ನುವವರೇ ಹೆಚ್ಚು. ಕೂದಲು ಚೆನ್ನಾಗಿ ಬೆಳೆಯುವಂತೆ ಮಾಡಿ ಕೂದಲ ಅಂದವನ್ನು ಹೆಚ್ಚಿಸಿಕೊಳ್ಳುವ ಕೆಲವು ಸುಲಭ ಮಾರ್ಗಗಳು ಹೀಗಿವೆ.

ಉದ್ದನೆಯ ಕೂದಲಿಗೆ

ದಟ್ಟ ಹಾಗೂ ಉದ್ದನೆಯ ಕೂದಲು ಬೇಕು ಎನ್ನುವುದು ಎಲ್ಲರ ಆಸೆ. ಸರಳವಾದ ಮಾರ್ಗದ ಮೂಲಕ ಕೂದಲ ಬೆಳೆವಣಿಗೆಯನ್ನು ವೃದ್ಧಿಸಿಕೊಳ್ಳಬಹುದು. ಕೂದಲ ಬೆಳವಣಿಗೆಯನ್ನು ಉತ್ತೇಜಿಸುವ ಸರಳ ಮಾರ್ಗವೆಂದರೆ ನೆತ್ತಿಯ ಬುಡಕ್ಕೆ ಮಸಾಜ್ ಮಾಡುವುದು. ಕೂದಲ ಪೋಷಕಾಂಶಕ್ಕೆ ನೆರವಾಗುವ ಎಣ್ಣೆಯನ್ನು ನೆತ್ತಿಯ ಬುಡಕ್ಕೆ ಹಚ್ಚಿಕೊಂಡು ಚೆನ್ನಾಗಿ ಮಸಾಜ್ ಮಾಡಬೇಕು. ಇದಕ್ಕೆ ಹರಳೆಣ್ಣೆ ಬಹಳ ಉತ್ತಮ. ಬಿಸಿಎಣ್ಣೆಯ ಚಿಕಿತ್ಸೆ ಅಥವಾ ಎಣ್ಣೆಯ ಮಸಾಜ್ ಕೂದಲ ಬೆಳವಣಿಗೆಗೆ ಉತ್ತಮ ಮಾರ್ಗ. ಎಣ್ಣೆ ಮಸಾಜ್‌ ಮಾಡಿದ ನಂತರ ಸ್ನಾನ ಮಾಡಿ ಕೂದಲನ್ನು ನೈಸರ್ಗಿಕವಾಗಿ ಒಣಗಿಸಬೇಕು.

ADVERTISEMENT

ಕೂದಲು ಉದುರುವುದು ತಡೆಯಲು

ಕೂದಲು ಉದುರುವುದು ಬಹಳ ಕಿರಿಕಿರಿ ಎನ್ನಿಸುವ ಸಮಸ್ಯೆ. ಅಲ್ಲದೇ ಇದು ಹಲವರನ್ನು ಕಾಡುತ್ತಿದೆ. ಕೂದಲು ಉದುರುತ್ತಲೇ ಇರುತ್ತದೆ, ಆದರೆ ಬೆಳೆಯುವುದು ಕಷ್ಟ. ಹಾಗಾಗಿ ಕೂದಲಿಗೆ ನಿರಂತರವಾಗಿ ಎಣ್ಣೆ ಹಚ್ಚುವುದು ಒಳ್ಳೆಯದು. ಇದರಿಂದ ರಕ್ತ ಸಂಚಾರ ಸುಗಮವಾಗುತ್ತದೆ. ಅಲ್ಲದೇ ಕೂದಲು ಬೇರಿನಿಂದಲೇ ಗಟ್ಟಿಯಾಗುತ್ತದೆ. ಒತ್ತಡದ ಕಾರಣದಿಂದಲೂ ಕೂದಲು ಉದುರುತ್ತದೆ. ಆ ಕಾರಣಕ್ಕೆ ಒತ್ತಡ ಕಡಿಮೆ ಮಾಡುವ ಯೋಗ, ಧ್ಯಾನದಂತಹ ಹವ್ಯಾಸವನ್ನು ರೂಢಿಸಿಕೊಳ್ಳಬೇಕು. ಆತಂಕ, ಒತ್ತಡವನ್ನು ಕಡಿಮೆ ಮಾಡಿಕೊಂಡಷ್ಟೂ ಕೂದಲಿನ ಸಮಸ್ಯೆಯೂ ನಿವಾರಣೆಯಾಗುತ್ತದೆ. ಗ್ರೀನ್ ಟೀ ಬಳಕೆಯು ಕೂದಲು ಉದುರುವುದನ್ನು ತಡೆಯಬಹುದು. ಇದರಲ್ಲಿ ಅತ್ಯಧಿಕ ಆ್ಯಂಟಿಆಕ್ಸಿಡೆಂಟ್ ಅಂಶವಿದ್ದು ಇದು ಕೂದಲ ಬೆಳವಣಿಗೆಗೆ ಸಹಕರಿಸುತ್ತದೆ. ಬಿಸಿ ಇರುವ ಗ್ರೀನ್ ಟೀ ಬ್ಯಾಗ್‌ ಅನ್ನು ಕೂದಲ ಬುಡಕ್ಕೆ ಹಚ್ಚಬೇಕು. ನಂತರ ಒಂದು ಗಂಟೆ ಬಿಟ್ಟು ಸ್ನಾನ ಮಾಡಬೇಕು.

ತಲೆಹೊಟ್ಟು ನಿವಾರಣೆಗೆ

ತಲೆಹೊಟ್ಟಿನ ಕಾರಣದಿಂದ ತಲೆನೋವು ಶುರು ಮಾಡಿಕೊಂಡವರ ಸಂಖ್ಯೆ ಕಡಿಮೆ ಇಲ್ಲ. ತಲೆಹೊಟ್ಟು ಕಿರಿಕಿರಿಯೂ ಹೌದು. ಇದು ಹಲವು ರೀತಿಯ ಚರ್ಮದ ಸಮಸ್ಯೆಗೂ ಕಾರಣವಾಗುತ್ತದೆ. ಇದರ ನಿವಾರಣೆಗೆ ತಾಜಾ ನಿಂಬೆರಸ ಒಂದು ಲೋಟ ನೀರಿಗೆ ಹಾಕಿ ಮಿಶ್ರ ಮಾಡಿ. ಇದರಿಂದ ಕೂದಲ ಬುಡವನ್ನು ತೊಳೆಯಿರಿ. ಇದನ್ನು ಸ್ನಾನಕ್ಕೆ ಮುಂಚೆ ಮಾಡುವುದರಿಂದ ಉತ್ತಮ ಫಲಿತಾಂಶ ನಿರೀಕ್ಷಿಸಬಹುದು.

ಶುಷ್ಕ ಹಾಗೂ ಕಳೆಗುಂದಿದ ಕೂದಲು

ಶುಷ್ಕ ಅಥವಾ ಕಳೆಗುಂದಿದ ಕೂದಲಿಗೆ ಪ್ರಮುಖವಾಗಿ ತೇವಾಂಶ ಕಡಿಮೆಯಾಗುವುದೇ ಕಾರಣ. ಇದರಿಂದ ಕೂದಲು ಉದುರುವ ಸಮಸ್ಯೆಯೂ ಕಾಣಿಸಿಕೊಳ್ಳುತ್ತದೆ. ಇದರ ಪರಿಹಾರಕ್ಕೆ ವಾರಕ್ಕೊಮ್ಮೆ ಅಥವಾ ಎರಡು ವಾರಕ್ಕೊಮ್ಮೆ ಡೀಪ್ ಕಂಡಿಷನಿಂಗ್ ಮಾಡಿಸುವುದು ಉತ್ತಮ. ಶುಷ್ಕ ಹಾಗೂ ಕಳೆಗುಂದಿದ ಕೂದಲಿನ ಸಮಸ್ಯೆ ನಿವಾರಣೆಗೆ 2 ಚಮಚ ಆ್ಯಪಲ್ ಸೈಡರ್ ವಿನೆಗರ್‌ ಅನ್ನು 2 ಕಪ್ ಬಿಸಿ ನೀರಿಗೆ ಹಾಕಿ. ಇದನ್ನು ಕೂದಲ ಬುಡಕ್ಕೆ ಹಚ್ಚಿ ಒಣಗಿದ ಮೇಲೆ ಸ್ನಾನ ಮಾಡಿ. ಕೂದಲ ತೇವಾಂಶ ಹೆಚ್ಚಲು ಬೆಣ್ಣೆಹಣ್ಣಿನ ಮಾಸ್ಕ್ ಅನ್ನು ಕೂಡ ಬಳಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.