ದಕ್ಷಿಣ ಅಮೆರಿಕದ ಪೆರುವಿನಲ್ಲಿ ಈಚೆಗಷ್ಟೆ ಮುಕ್ತಾಯಗೊಂಡ ಅಂತರರಾಷ್ಟ್ರೀಯ ಮಟ್ಟದ ಸೌಂದರ್ಯ ಸ್ಪರ್ಧೆಯಲ್ಲಿ ‘ಮಿಸ್ ಟೀನ್ ಯೂನಿವರ್ಸಲ್–2023‘ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿರುವ ಹದಿನೆಂಟರ ಹರೆಯದ ಸ್ವೀಝಲ್ ಪುಟಾರ್ಡೊ ಉಡುಪಿಯ ಬಾರ್ಕೂರಿನ ಬೆಣ್ಣೆಕುದ್ರು ಮೂಲದವರು. ಫ್ಯಾಷನ್ ಲೋಕದಲ್ಲಿ ದೃಢವಾದ ಹೆಜ್ಜೆಗಳನ್ನು ಇಡಲು ಮುಂದಾಗಿರುವ ಅವರು ‘ಭೂಮಿಕಾ’ದ ಜತೆ ಮನಸ್ಸಿನ ಮಾತುಗಳನ್ನು ಹಂಚಿಕೊಂಡಿದ್ದಾರೆ.
* ‘ಮಿಸ್ ಟೀನ್ ಇಂಟರ್‌ನ್ಯಾಷನಲ್’ ಪ್ರಿನ್ಸೆಸ್ ಕಿರೀಟ ಸಿಕ್ಕ ಕ್ಷಣದ ಬಗ್ಗೆ ಹೇಳಿ?
ಜೀವನದಲ್ಲಿ ಮರೆಯಲಾಗದ ಒಂದು ಕ್ಷಣ. ಹಲವು ದೇಶಗಳ ಸ್ಪರ್ಧಿಗಳ ನಡುವೆ ಈ ಕಿರೀಟ ಗೆದ್ದಿರುವುದಕ್ಕೆ ತುಂಬಾ ಖುಷಿ ಇದೆ. ಇದೇ ಮೊದಲ ಬಾರಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸಿ, ಟೀನ್ ವಿಭಾಗದಲ್ಲಿ ಮೊದಲ ಬಾರಿಗೆ ಪ್ರಶಸ್ತಿ ಗೆದ್ದಿರುವುದಕ್ಕೆ ಹೆಮ್ಮೆ ಎನಿಸಿದೆ. ಕುಟುಂಬದವರೆಲ್ಲ ಈ ಕಾರ್ಯಕ್ರಮವನ್ನು ಲೈವ್ ಆಗಿ ನೋಡ್ತಿದ್ದರು ಅದೂ ನನ್ನ ಸಂತೋಷನ್ನು ಇಮ್ಮಡಿಗೊಳಿಸಿತ್ತು/
* ಅಂತರರಾಷ್ಟ್ರೀಯ ವೇದಿಕೆ ತಲುಪುವ ಮುನ್ನ ದಿನಗಳು ಹೇಗಿದ್ದವು?
ಫ್ರೆಶ್ ಫೇಸ್ ಆಫ್ ಇಗ್ನೈಟ್ ಇಂಡಿಯಾ 2021ರ ಪ್ರಶಸ್ತಿ ಸಿಕ್ಕಿತು. ನಂತರ ಮಿಸ್ ಸೂಪರ್ ಮಾಡೆಲ್ ಆಫ್ ಇಂಡಿಯಾ –2022 ರನ್ನರ್ ಅಪ್ ಆಗಿ ಸಾಧನೆ ಮಾಡಿದೆ. ಹಂತ ಹಂತವಾಗಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದರಿಂದ ಮಿಸ್ ಟೀನ್ ಇಂಟರ್‌ನ್ಯಾಷನಲ್‌ನಲ್ಲಿ ಭಾಗವಹಿಸಲು ಅನುಕೂಲವಾಯಿತು.
*ನಿಮ್ಮ ಪ್ರಕಾರ ಸೌಂದರ್ಯ ಅಂದರೆ?
ಸೌಂದರ್ಯ ಕೇವಲ ಬಾಹ್ಯವಾಗಿರುವ ಸಂಗತಿ ಎಂದು ಅನಿಸುವುದಿಲ್ಲ. ಜೀವನದಲ್ಲಿ ಯಾವುದೇ ಬಗೆಯ ಸಾಧನೆ ಮಾಡಲಿ; ಒಬ್ಬ ಮನುಷ್ಯ ಮತ್ತೊಬ್ಬ ಮನುಷ್ಯನನ್ನು ಎಷ್ಟು ಸೌಜನ್ಯಯುತವಾಗಿ ನಡೆಸಿಕೊಳ್ಳುತ್ತಾನೆ ಎಂಬ ನಡವಳಿಕೆಯೇ ನಿಜವಾದ ಸೌಂದರ್ಯ. ದಯೆ, ಕರುಣೆ, ಪ್ರೀತಿ ವಿಶ್ವಾಸ ಇವೆಲ್ಲವೂ ಅಡಕವಾಗಿರುವ ಮನುಷ್ಯ ಸಹಜವಾಗಿಯೇ ಸುಂದರವಾಗಿ ಕಾಣುತ್ತಾನೆ. ಬಾಹ್ಯ ಸೌಂದರ್ಯದಷ್ಟೆ ಇವೆಲ್ಲವೂ ಮುಖ್ಯವೆಂದು ಅನಿಸುತ್ತದೆ.
* ಫ್ಯಾಷನ್ ಲೋಕಕ್ಕೆ ಬರಲು ಕಾರಣ ಮತ್ತು ಪ್ರೇರಣೆ ಏನು?
ಚಿಕ್ಕವಳಿದ್ದಾಗಲೇ ಎಲ್ಲರಿಗೂ ಇರುವಂತೆ ಸಹಜವಾಗಿ ನನಗೂ ಫ್ಯಾಷನ್ ಲೋಕದಲ್ಲಿ ಮಿಂಚಬೇಕು ಎಂಬ ಆಸೆಯಿತ್ತು. ಆದರೆ ಅದರ ತೀವ್ರತೆ ಅರಿವಾಗಿದ್ದು 7ನೇ ತರಗತಿಯಲ್ಲಿದ್ದಾಗ. ಈ ಸಂದರ್ಭದಲ್ಲಿ ಮಕ್ಕಳ ವಿಭಾಗದಲ್ಲಿ ರ್‍ಯಾಂಪ್ ಮೇಲೆ ಹೆಜ್ಜೆ ಹಾಕಿದಾಗ ಆತ್ಮವಿಶ್ವಾಸ ಬಂತು. 10ನೇ ತರಗತಿ ಇರುವಾಗ ಇದೇ ಕ್ಷೇತ್ರದಲ್ಲಿ ಮುಂದುವರಿಯಬೇಕೆಂಬುದು ನಿಕ್ಕಿಯಾಯಿತು. ನನಗೆ ಸುಶ್ಮಿತಾ ಸೇನ್ ಬಹುದೊಡ್ಡ ಪ್ರೇರಣೆ.
* ನಿಮ್ಮ ಬಗ್ಗೆ ಹೇಳುವುದಾದರೆ..
ಕುಟುಂಬದ ಬೇರುಗಳೆಲ್ಲ ಬಾರ್ಕೂರಿನ ಬೆಣ್ಣೆಕುದ್ರುವಿನಲ್ಲಿದೆ. ನೆಲೆಸಿರುವುದು ಬೆಂಗಳೂರಿನಲ್ಲಿ. ಸೇಂಟ್ ಜೋಸೇಫ್ ವಾಣಿಜ್ಯ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿಬಿಎ ಓದುತ್ತಿದ್ದೇನೆ. ನನಗೆ ಓದುವುದರಲ್ಲಿಯೂ ಆಸಕ್ತಿ ಇದೆ. ನೃತ್ಯ ಹಾಗೂ ಚಿತ್ರಕಲೆ ನನ್ನಿಷ್ಟದ ಸಂಗತಿಗಳು.
* ಭವಿಷ್ಯದ ಯೋಜನೆಗಳು ಏನು?
ವಿದ್ಯಾಭ್ಯಾಸ ಮುಂದುವರಿಸ್ತೇನೆ. ಜತೆಗೆ ಈಗ ಟೀನ್ ಕೆಟಗರಿಯಲ್ಲಿ ಪ್ರಶಸ್ತಿ ಗೆದ್ದುಕೊಂಡಿದ್ದೇನೆ. ಮುಂದೆ ಇದೇ ರೀತಿ ಅಡಲ್ಟ್ ಕೆಟಗರಿಗೂ ಸ್ಪರ್ಧೆ ನೀಡುತ್ತೇನೆ. ಅದಕ್ಕಾಗಿ ನಿತ್ಯ ತಯಾರಿ ಮಾಡಿಕೊಳ್ಳುತ್ತಿದ್ದೇನೆ. ಜತೆಗೆ ಸಾರ್ಟ್ ಅಪ್ ಮಾಡುವ ಇರಾದೆಯಿದೆ.
* ಯಶಸ್ಸು ಸಿಗದೇ ಇರುವವರಿಗೆ ಏನು ಹೇಳ್ತೀರಾ?
ಯಶಸ್ಸು ಒಂದೇ ಬಾರಿಗೆ ಯಾರಿಗೂ ಸಿಗುವುದಿಲ್ಲ. ಅದು ಹಂತ ಹಂತವಾಗಿ ಸಾಗಬೇಕಾದ ಮೆಟ್ಟಿಲು.ಯಶಸ್ವಿಯಾಗಿಲ್ಲವೆಂದರೆ ಸಾಗಬೇಕಾದ ಮೆಟ್ಟಿಲು ಇನ್ನೂ ಇದೆ ಎಂದರ್ಥ ಅಷ್ಟೆ. ಯಾವುದೇ ಕ್ಷೇತ್ರವಿರಲಿ; ‘ನೆವರ್ ಗೀವ್ ಅಪ್’ ಮನೋಭಾವ ಬೆಳೆಸಿಕೊಳ್ಳಿ. ಎಲ್ಲ ಕ್ಷೇತ್ರಗಳಲ್ಲಿಯೂ ಕಷ್ಟವಿರುತ್ತದೆ. ನಮಗೆ ನಾವೇ ಪ್ರೇರಕರಾದರೆ ಸಾಧನೆಗೆ ಹುರಿದುಂಬಿಸಲು ಬೇರೆಯವರ ಅಗತ್ಯವಿರುವುದಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.